ಓ ಆಪದ್ಬಾಂಧವ...... ನಿನಗೆ ಎಷ್ಟು ನಮನಗಳು ಸಲ್ಲಿಸಿದರೂ ಕಡಿಮೆಯೇ.. ಅನಂತ ನಮಗಳು*
*ಓ ಆಪದ್ಬಾಂಧವ...... ನಿನಗೆ ಎಷ್ಟು ನಮನಗಳು ಸಲ್ಲಿಸಿದರೂ ಕಡಿಮೆಯೇ.. ಅನಂತ ನಮಗಳು*
ಆಪತ್ತುಗಳು ಕಷ್ಟಗಳು ಬಂದಾಗೆಲ್ಲ ಬಾಂಧವನಾಗಿ ಬೆನ್ನಿಗೆ ನಿಲ್ಲುವವ ಶ್ರೀಹರಿ. ಇಂದಿನ ಈ ನಾಲ್ವತ್ತು ದಿನಗಳ ಘೋರ ಆಪತ್ತಿನಲ್ಲಿಯೂ ನನ್ನನ್ನು ಹಾಗೂ ನನ್ನ ಅಣ್ಣನಂತಿರುವ ಪಂ ರಾಘವೇಂದ್ರಾಚಾರ್ಯರನ್ನೂ ಹಾಗೂ ಅಸಂಖ್ಯ ನನ್ನವರನ್ನು ಕಾಯ್ದವನೂ ನೀನೆ.
*ಆಪತ್ತುಗಳು ಕಷ್ಟಗಳು ಸ್ವಾಭಾವಿಕವಾಗಿ ಸುಖಕ್ಕಿಂತಲೂ ತುಂಬ ಒಳ್ಳೆಯದು.*
ಕಳೆದು ಹೋದ ಸುಖ ನೆನೆಸಿಕೊಂಡಾಗ ನೆನಪಾದಾಗಲೊಮ್ಮೆ ಕಣ್ಣೀರು ಉದರತ್ತೆ. ಕಸಿವಿಸಿಯಾಗತ್ತೆ. ಕರುಳಿನಾಳದಲ್ಲಿ ನರಳಿಕೆ ಹುಟ್ಟತ್ತೆ..... ಅದೆ ಕಳೆದು ಹೋದ ಒಂದು ಕಷ್ಟ ನೆನಿಸಿಕೊಂಡು ನೋಡಿ...??? ತುಟಿಯಂಚಿನಲ್ಲಿ ಸಣ್ಣ ನಗುವಿನ ಮಂದಹಾಸದ ಮುತ್ತುಗಳು ಉದುರುತ್ತವೆ.
ಕಷ್ಣವನ್ನು ಅನುಭವಿಸುವಾಗ "ಸಾಕಪ್ಪ ಈ ಜನುಮ" ಎಂದೆನಿಸರಬಹುದು. ನೆನಪು ಮಾಡಿಕೊಂಡರೆ ಮುಖ ಕಮಲ ಅರಳುವದಂತೂ ಸಹಜ. *ಸುಖದ ನೆನೆಪು ಕಣ್ಣೀರನ್ನು, ಆಪತ್ತುಗಳ ನೆನಪು ನಗುವನ್ನು ಉಂಟು ಮಾಡುವದು ಎಷ್ಟು ಸೋಜಿಗ ಅನಿಸುವದಿಲ್ಲವೆ....* ನಗು ತರಿಸುವ ವ್ಯಕ್ತಿಯೇ ಬಾಂಧವ. ಅವನೇ ಸಖ. ಹಿತೈಶಿ.
ಕಷ್ಟವೆಂಬುವದು ಸ್ವಭಾವತಃ ಸುಖಕ್ಕಿಂತ ಒಳ್ಳೆಯದೇ ನಗು ತರಿಸುತ್ತದೆ ಆದ್ದರಿಂದ. ತಾನು ಎದುರಿದ್ದಾಗ ಮಾತ್ರ ಕಾಡುತ್ತದೆ ಆದ್ದರಿಂದಲೂ ಒಳ್ಳೆಯದೆ.
ಸುಖ ಹಾಗಲ್ಲ...... ಕೈಗೆ ಸಿಗುವ ತನಕ ಕಷ್ಟ, ಸಿಕ್ಕನಂತರ ಉಳಿಸಿಕೊಳ್ಳುವ ಕಷ್ಟ, ಸುಖ ಅನುಭವಿಸುತ್ತಿರುವಾಗ ಯಾರಕಣ್ಣು ಎಲ್ಲಿ ರಾಚತ್ತೋ ಎಂಬ ಸಂಕಟ, ಕರಗಿಹೋಗುವ ಕಷ್ಟ, ಕರಗಿ ಹೋಯ್ತಲ್ಲ ಎಂಬ ಚಿಂತೆ, ಇಷ್ಟಾಗಿ ಕೊನೆವರೆಗೆ ನಮ್ಮೊಟ್ಟಿಗೆ ಇರುತ್ತದೆಯಾ.. ?? ಕೊನೆಗೊಂದು ದಿನ ಬೇಸರ, ಹಳೆದು ಆಗುತ್ತದೆ, ಹಳಿಸಿ ಹೋಗುತ್ತದೆ, ಇಷ್ಟೇನಾ ಎಂಬ ವೈರಾಗ್ಯ. ಕೊನೆಗೆ ಕೈ ತಪ್ಪಿ ಹೋಗುತ್ತದೆ. ಪದೆ ಪದೇ ನೆನಪಾಗಿ ಕಣ್ಣೀರಿಡಿಸಿ ನರಳಿಸುತ್ತದೆ. ಅದು ಬರುವದು ಮತ್ತಿನ್ನೆಂದೋ..... ಪ್ರತೀಕ್ಷೇ ಮಾಡುತ್ತಾ ಕೂಡಬೇಕು.... "ತಾನೆದುರಿದ್ದಾಗ ಮಾತ್ರ ನಗು ತರಿಸಿ, ನಂತರ ಪ್ರತಿಕ್ಷಣಕ್ಕೂ ನರಳುವಂತೆ ಮಾಡುತ್ತದೆ ಸುಖ. ಹಾಗಾಗಿ ಸುಖಕ್ಕಿಂತಲೂ........
ಕಷ್ಟ ಆಪತ್ತು ದುಃಖಗಳು ಹಾಗಲ್ಲ ಎದುರಿದ್ದಾಗಷ್ಟೇ ಕಾಡಿ, ನಂತರ ತನ್ನ ನೆನೆಪಿನ ಖಣಿಯನ್ನೇ ಇಟ್ಟು ಹೋಗುತ್ತದೆ, ಮನುಷ್ಯನನ್ನು ಘಟ್ಟಿ ಮಾಡುತ್ತದೆ. ಮತ್ತೊಮ್ಮೆ ತಾ ಬರುವಷ್ಟರಲ್ಲೇ ಇನ್ನೂ ಬಿರಿಸು ಆಗಿ, ತನ್ನನ್ನು ಎದುರಿಸುವ ಸಾಮರ್ಥ್ಯ ತಂದು ಕೊಟ್ಟಿರುತ್ತದೆ. ಎಂಥ ಕಷ್ಟ ಬಂದರೂ ಸ್ಥಿರವಾಗಿ ನಿಲ್ಲುವಂತೆ ಮಾಡಿರುತ್ತದೆ. ಅನುಭವದ ಗಣಿಯನ್ನಾಗಿ ಮಾಡುತ್ತದೆ.
*ಸುಖ ಒಂದೆರಡು ಅಕ್ಷರಗಳನ್ನು ಕಲಿಸಿದರೆ. ಕಷ್ಟ ಹತ್ತು ಪುಸ್ತಕಗಳನ್ನು ಬರೆಯಲು ಬೇಕಾದ ಅನುಭವವನ್ನೀಯುತ್ತದೆ.*
*ಕಷ್ಟ ಎಂದಿಗೂ ನಿಂತ ನೀರಾಗಿಸುವದಿಲ್ಲ, ಸಂತತ ಹರಿಯುವ ಜೀವನದಿ ಯಾಗಿಸುತ್ತದೆ*
*ಸುಖ ದೇವರನ್ನೇ ಮೊದಲು ಮಾಡಿ ಎಲ್ಲವನ್ನೂ ಮರಿಸುತ್ತದೆ, ಕಷ್ಟ ದೇವರನ್ನು, ದೇವತೆಗಳನ್ನು, ಗುರುಗಳನ್ನು, ಹಿತೈಷಿಗಳನ್ನು ಎಲ್ಲರನ್ನೂ ನಿರಂತರ ನೆನೆಸುವಂತೆ ಮಾಡುತ್ತದೆ.* ಅಂತೆಯೇ ಕುಂತಿ ಮೊದಲಾದ ಹಿರಿಯರು ಆಪತ್ತುಗಳನ್ನೇ ಬೇಡಿ ಬಯಸಿ ಬಂದರು. ನಮ್ಮ ಎಲ್ಲ ಹಿರಿಯರೂ ಆಪತ್ತುಗಳಲ್ಲೇ ಮುಳುಗಿ ತೃಪ್ತಿಯಿಂದ ಮಿಂದೆದ್ದರು.
ಹೀಗಿದ್ದಾಗ ನಿಜವಾಗಿಯೂ ಒಳ್ಳೆಯದು ಹಿತವಾದದ್ದು ಯಾವದು ... ?? ಸುಖವೋ..?? ಕಷ್ಟಗಳೋ...?? ಹೀಗಿದ್ದಮೇಲೆ ನಮ್ಮ ಹಿತ ಬಯಸುವವನೇ ಹಿತೈಷಿ. ಹಿತೈಷಿಯೇ ನಿಜ ಬಂಧು. ಆಪತ್ತುಗಳೇ ಕಷ್ಟಗಳೇ ಹಿತವಾದದ್ದು. ಹಿತವಾದದ್ದನ್ನು ಕೊಡುವವನೇ ನಿಜ ಬಂಧು. ಅವನ ಹೆಸರೇ *ಆಪದ್ಬಾಂಧವ.*
ಇಂದು ನನ್ನ ಹಾಗೆ ಸಿಕ್ಕುಬಿದ್ದವರು ಲಕ್ಷ ಲಕ್ಷ ಜನ. ಯಾರಿಗೆ ಎಷ್ಟು ಅನ್ನಸಿಕ್ಕಿದೆ ಎನ್ನುವದು ತಿಳಿಯದು. ಆದರೆ ಈ ದೇವ ಸಮೃದ್ಧವಾಗಿ ಆಪತ್ತಿನಲ್ಲಿಯೂ ಅನ್ನ ಒದಗಿಸಿದ.
*ನಿಮ್ಮ ಆಪದ್ಭಾಂಧವ ತಾನಾಗಿಯೇ ಬಂದನೆ...??*
ಹೀಗೆ ಆಪತ್ತು ಬರಬಹುದು ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆ ಅವಸ್ಥೆ ನನ್ನದು. ನನ್ನ ಆಪತ್ತು ನೋಡಿದ ದೇವ ಆಪದ್ಬಾಂಧವ ತಾನಾಗಿ ಓಡಿಬಂದ. ತನ್ನವರಲ್ಲಿ ನಿಂತು ಕೈಚಾಚಿ ಬಿಗಿದಪ್ಪಿದ. *ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು* ಮಹಾ ಅನುಗ್ರಹ ದಯೆ ಮಾಡಿ ಮಹಾ ಆಶ್ರಯಮಾಡಿಕೊಟ್ಟು, ತಿಂಗಳುವರೆಗೂ ಅನ್ನ ವಸತಿ ಅಧ್ಯಯನ ಮೊದಲು ಮಾಡಿ ಎಲ್ಲದಕ್ಕೂ ಅನುಮಾಡಿಕೊಟ್ಟವರು ಮೊದಲು ಆಪದ್ಬಾಂಧವರಿವರು. ನನಗೆ ಮಾತ್ರವಲ್ಲ ದೇಶದ ಸಾವಿರಾರು ಜನರಿಗೆ ಆಶ್ರಯ, ಅನ್ನ, ಹಣ, ಎಲ್ಲವನ್ನೂ ಕೊಟ್ಟ ಮಹಾ ಆಪದ್ಬಾಂಧವರು. ಅನಂತ ಅನಂತ ನಮನಗಳು.
*ಪೂಜ್ಯ ಸತ್ಯಧ್ಯಸನಾಚಾರ್ಯ ಕಟ್ಟಿ* ನಿತ್ಯವೂ ಸಕೊಚವಿಲ್ಲದೇ ನಮ್ಮ ಮನೆಗೇ ಊಟಕ್ಕೆ ಬರಬೇಕು ಎಂದು ಪ್ರೀತಿಯಿಂದ ಕರೆದು, ಅಷ್ಟೇ ಪ್ರೀತಿಯಿಂದ ನಮ್ಮ ನೋಡಿಕೊಂಡು ಆಚಾರ್ಯರು ನಮ್ಮ ಆಪದ್ಭಾಂಧವರು.
*ಪೂಜ್ಯ ವಿದ್ಯಾಧೀಶಾಚಾರ್ಯ ಗುತ್ತಲ್* ಇವರು ನನ್ನ ಇಂದಿನ ಎಂದೆಂದಿನ ಹಿತೈಶಿ ಆಪ್ತ ಆಪದ್ಬಾಂಧವರು. ಶ್ರೀಮಠದ ವಿಶ್ವಮಧ್ವಮಹಾಪರಿಷತ್ ಅಲ್ಲಿ ಆಶ್ರಯಕೊಟ್ಟು ನಿತ್ಯವೂ ಊಟದ ವ್ಯವಸ್ಥೆ ಮಾಡಿಕೊಟ್ಟು ಆಪತ್ತಿಗೆ ಕೈಚಾಚಿದರು. ನಿತ್ಯವೂ ಪರಿಸ್ಥಿತಿಯನ್ನು ಅವಲೋಕಿಸಿದರು. *ನಾ ಎಂದಿಗೂ ಮರೆಯೆ ನೀವು ಮಾಡಿದುಪಕಾರ.*
ವಾರಾನ್ನದಂತೆ ನಿತ್ಯವೂ ಒಬ್ಬೊಬ್ವರು ಪ್ರೀತಿಯಿಂದ ಕರೆದು ಉಣಬಡಿಸಿದ ಆಪದ್ಬಾಂಧವರಿವರು. ಪಂ ನರಸಿಂಹಾಚಾರ್ ಕಟ್ಟಿ, ಪಂ ಶ್ರೀನಿವಾಸಾಚಾರ್ಯ ಆಲೂರು, ಪಂ ರಾಘವೇಂದ್ರಾಚಾರ್ ಜಯಮಂಗಲ್. ಪಂ ವಾದಿರಾಜಾಚಾರ್ ಕರಣಮ್. ಪಂ. ವಸಿಷ್ಠಾಚಾರ್. ಪಂ. ವಿಜಯ ವಿಠ್ಠಲಾಚಾರ್ಯ ಮುರುಗೋಡ, ಪಂ. ಚಿಮ್ಮಲಗೀ ಆಚಾರ್. ಪಂ. ಸರ್ವೋತ್ತಮಾಚಾರ್ಯ ಇವರೆಲ್ಲರೂ ವಾರಾನ್ನದಂತೆ ನಿತ್ಯವೂ ಅನ್ನ ಒದಗಿಸಿದ *ಆಪದ್ಬಾಂಧವರು.* ಇವರೆಲ್ಲರೂ ತೋರಿದ ಆತ್ಮೀಯತೆ ಕ್ಷಣಕ್ಷಣಕ್ಕೂ "ನಾನು ಯಾವ ಜನುಮದ ಒಡಹುಟ್ಟಿದವನಾಗಿದ್ದನೇನೋ...." ಎಂಬಂತೆ ಅನಿಸುತ್ತಿತ್ತು.... ಅಷ್ಟು ಪ್ರೀತಿ ಅಭಿಮಾನ ಅಂತಃಕರಣ ತೋರಿದರು. ಈ ಎಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು.
ಬೆಂಗಳೂರಿನ ಅನೇಕ ಆತ್ಮೀಯ ವಿದ್ವಾಂಸರುಗಳು, ನನ್ನ ಆತ್ಮೀಯ ಗ್ರಹಸ್ಥರು, ಪರಿಚಿತರಾದ ನೂರಾರು ಜನ ಕರೆದರು, ಸ್ಪಂದಿಸಿದರು, ಅಸಹಾಯಕತೆಯನ್ನು ನೋಡಿ ಮರುಗಿದಿರು, ಪ್ರೀತಿಯಿಂದ ಕೂಗಿ ಕರೆದರು. ಕರೆಯಲು ಆಗದಿರುವದಕ್ಕೆ ತುಂಬ ಬೇಸರವನ್ನೂ ಮಾಡಿಕೊಂಡರು. ಅಕೌಂಟಿಗೆ ದಕ್ಷಿಣಾ ರೂಪದಲ್ಲಿ ಹಣ ಹಾಕುತ್ತವೇ ಆಚಾರ್ಯರೇ ಪ್ರೀತಿಯಿಂದ ಹೇಳಿದವರು ನೂರಾರು ಆತ್ಮೀಯರು. (ನಯವಾಗಿ ನಾನೇ ಬೇಡವೆಂದೆ. ಅನಿವಾರ್ಯತೆ ಬಂದಾಗ ನಿಮಗೇ ಮೊದಲು ಕೇಳುವೆ. ಎಂದು ಹೇಳಿದೆ.) ನನ್ನ ಅನುಭವಕ್ಕೆ ಬಂದ ಇಷ್ಟೆಲ್ಲ ಜನರು, ಅನುಭವಕ್ಕೆ ಬಾರದ ನೂರಾರು ಸಾವಿರಾರು ಲಕ್ಷಲಕ್ಷ ಜನರಲ್ಲಿ ನಿಂತು ಆಪದ್ಭಾಂಧವನಾಗಿ ಬಂದವನು *ನನ್ನ ಒಡೆಯ "ದಿಗ್ವಿಜಯ ಲಕ್ಷ್ಮೀನರಸಿಂಹ - ಕುಲಸ್ವಾಮಿ ಶ್ರೀ ಶ್ರೀನಿವಾಸ"* ಎಂದು ನೆನಿಸಿದಾಗಲೊಮ್ಮೆ ಕಣ್ಣು ಉಕ್ಕಿ ಬರುತ್ತದೆ. ಗದ್ಗದಿತವಾಗುತ್ತದೆ ಮನಸ್ಸು.
*ಇದೆಲ್ಲದಕ್ಕೂ ಮೂಲ - "ನಮ್ಮ ಗುರುಗಳು."*
ಪರಮಪೂಜ್ಯ ಆಚಾರ್ಯರ ಶಿಷ್ಯ ಆಗಿರುವದಕ್ಕೇನೇ ದೇವರು ದೇವತೆಗಳು ಶ್ರೀಶ್ರೀಗಳವರು ವಿದ್ಚಾಂಸರುಗಳು ಪರಿಚಿತರು ಆತ್ಮೀಯರು ಎಲ್ಲರೂ ದೊರೆತರು, ಎಲ್ಲರಲ್ಲಿಯೂ ದೇವರು ದೊರೆತ. ಪೂ ಆಚಾರ್ಯರ ಶಿಷ್ಯ ಎಂದಾಗದಿದ್ದರೆ ಹೇಗಿರುತ್ತಿತ್ತೋ ನನ್ನ ಅವಸ್ಥೆ ಎಂದು ಊಹಿಸಿದರೆ ಕೈ ನಡುಗತ್ತೆ. ಅಂತಹ ಪೂಜ್ಯ ಆಚಾರ್ಯರ ಮಹಾ ಕರುಣೆ ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಉಸಿರುರುವ ವರೆಗೂ ಇರುವಂತಹದ್ದೇ.
"ಭೂಯಿಷ್ಠಾಂತೇ ನಮ ಉಕ್ತಿಂ ವಿಧೆಮ"
*ಓ ಆಪದ್ಭಾಂಧವ !! ನಿನಗೆ ವಂದನೆಗಳು, ಕೋಟಿ ಕೋಟಿ ಪ್ರಣಾಮಗಳು, ಅನಂತಾನಂತ ನಮಸ್ಕಾರಗಳು...*
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
Sri gurubhyonamah
Sri gurubhyonamah