*"ನೀನು ಕತ್ತೆ" ಎಂದು ಬಯ್ದಾಗ ಕತ್ತೆಯೇ ಆಗಿಬಿಡುತ್ತೇನೆಯಾ....??*
*"ನೀನು ಕತ್ತೆ" ಎಂದು ಬಯ್ದಾಗ ಕತ್ತೆಯೇ ಆಗಿಬಿಡುತ್ತೇನೆಯಾ....??*
ಯಾವುದೇ ವಸ್ತುವಿನ ಸ್ವೀಕಾರವಾಗುವುದು ಯಾವಾಗ ಅಂದರೆ ಆ ವಸ್ತುವಿನಲ್ಲಿ "ನನ್ನದು" ಎಂಬ ಭಾವನೆ ಇದ್ದಲ್ಲಿ ಮಾತ್ರ. "ನನ್ನದು" ಎನ್ನವದು ಇಲ್ಲವೆಂದಾದಾಗ ಯಾವದನ್ನೂ ನಾನು ಸ್ವೀಕರಿಸುವದಿಲ್ಲ. ಹೀಗಿರುವಾಗ "ನನ್ನದು" ಎಂದು ಸ್ವೀಕರಿಸುವಾಗ ಮಾತ್ರ ಸ್ವಲ್ಪ ಏಕಾಗ್ರತೆವಹಿಸಿ ಯೋಚನಾಪೂರ್ಣವಾಗಿ ಸ್ವೀಕರಿಸುವದು ಅನಿವಾರ್ಯ.
"ಪ್ರತಿಶತಃ ಅನೇಕಬಾರಿ ಯಾವದನ್ನು ನಾನು ನನ್ನದು ಎಂದು ಸ್ವೀಕರಿಸುತ್ತೇನೆ, ಅದು ನಾನೇ ಆಗಿರುತ್ತೇನೆ". ಏಕೆಂದರೆ ಅದರಲ್ಲಿ "ನನ್ನದು" ಎಂಬ ಭಾವನೆ ಇದೆ ಆದ್ದರಿಂದ. ಈ ಶರೀರವನ್ನು ನಾನು "ನನ್ನದು" ಎಂದು ತಿಳಿದಿದ್ದೇನೆ ಆದ್ದರಿಂದ ಈ ಶರೀರಕ್ಕೆ ಏನು ಆದರೂ "ನನಗೇ ಆಯಿತೋ ಎಂಬಂತೆ ಫೀಲ್ ಆಗುತ್ತೇನೆ." ಇದು ಉದಾಹರಣೆ ಮಾತ್ರ. ಹಾಗೆಯೇ ಪ್ರತಿಯೊಂದರಲ್ಲಿಯೂ ....
ಇಂದು ಒಂದು ಉಪನ್ಯಾಸ ಕೇಳುತ್ತಿದ್ದೆ. ಅಲ್ಲಿ ತುಂಬ ಸುಂದರವಾಗಿ ಒಂದು ಕಥೆ ಹೇಳುತ್ತಿದ್ದರು. *ನೀನು ಕತ್ತೆ* ಎಂದು ಬಯ್ದರೆ ಅವನು ಕತ್ತೆ ಯಾಗುತ್ತಾನೆಯಾ... ?? ಸರ್ವಥಾ ಇಲ್ಲ ತಾನೆ....
*ನೀನು ಕತ್ತೆ* ಎಂದು ಬಯ್ದಾಗ ಅವನು ಕತ್ತೆಯಾಗುವ ಎಂದೇ ನಾನು ಉತ್ತರಿಸುತ್ತೇನೆ. ಅದು ಹೇಗೇ ಸ್ವಾಮಿ...... ???? ಯಾರೋ ಏನೋ ಬಯ್ದ ಮಾತ್ರಕ್ಕೆ ಅದು ಅವನೇ ಆಗುವದು ಹೇಗೆ... ??
*ನೀನು ಕತ್ತೆ* ಎಂದು ಬಯ್ದ ಕ್ಷಣದಲ್ಲಿ... *ಕತ್ತೇ ಮಗನೆ ನನಗೆ "ಕತ್ತಿ " ಎಂದು ಬಯ್ತೀಯಾ... ತಡಿ ನಿನಗೆ ಒಂದು ಕೈ ತೋರಿಸಿಯೇ ಬಿಡ್ತೀನಿ, ಒದ್ದ ಬಿಡ್ತೀನಿ...* ಎಂದು ಯಾರು ಝಗಳಕ್ಕೇ ಹೋಗ್ತಾರೆ ಅಲ್ವಾ.. *ಅವನು ಕತ್ತೆಯೇ ಆದ.*
ಹಿಂದಿನ ಕ್ಷಣದಲ್ಲಿ ಮಾನವನಾದ ಮನುಷ್ಯ ಮುಂದಿನ ಕ್ಷಣಕ್ಕೆ ಕತ್ತೆ ಹೇಗೇ ಆದ.. ?? *ನೀನು ಕತ್ತೆ* ಎಂಬ ಮಾತನ್ನು ತಾನು *ತನ್ನದೇ* ಎಂದು ಸ್ವೀಕರಿಸಿಬಿಟ್ಟ. ಯಾವ ಕ್ಷಣದಲ್ಲಿ "ಆ ಮಾತು" ತನ್ನದು ಆಯಿತೋ ಆ ಕ್ಷಣಕ್ಕೆ ಅವನು ಕತ್ತೆ ಆದ. ತಾನು ಕತ್ತೆ ಆಗಿದ್ದಕ್ಕೆ ಅವನಲ್ಲಿ ಅಷ್ಟು ಬೇಗ ಬದಲಾವಣೆಗಳು ಆರಂಭಿಸಿದವು.
ಕತ್ತೆಗೆ ಕತ್ತೆ ಎಂದು ಕರೆದರೆ ಸಿಟ್ಟು ಬರುತ್ತದೆಯೋ .. ?? ಅಥವಾ ಮನುಷ್ಯನಿಗೆ ಕತ್ತೆ ಎಂದು ಕರೆದರೆ ಸಿಟ್ಟು ಬರುತ್ತದೆಯಾ.. ??
ಯಾರಿಗೆ ತನ್ನ ಸ್ವರೂಪ ಸರಿತಾಗಿ ಗೊತ್ತಿದೆ ಅವನು ಎಂದಿಗೂ ಸಿಟ್ಟು ಮಾಡಿಕೊಳ್ಳಲಾರ. ಯಾರು ತನ್ನ ಸ್ವಭಾವವನ್ನು ಮುಚ್ಚಿ ಹಾಕಿಕೊಂಡಿದ್ದಾನೆ ಅವನೇ ಸಿಟ್ಟು ಮಾಡಿಕೊಳ್ಳುವವ. ಹಾಗಾಗಿ ಕತ್ತೆಗೆ "ಕತ್ತೆ " ಎಂದರೆ ಸಿಟ್ಟು ಬಾರದು. ಮಾನವನಿಗೆ "ಕತ್ತೆ" ಎಂದರೆ ಸಿಟ್ಟು ಸಹಜ.
ಹಾಗಾಗಿ ನಮಗೆ "ನಮ್ಮದೇ ಆದದ್ದು ಯಾವದಿದೆ, ಅದನ್ನೇ ನಾವು ನಮ್ಮದು ಎಂದು ಸ್ವೀಕರಿಸಿದರೆ" ನಮಗೆ ಸಿಟ್ಟು ಅಸಮಾಧಾನ ಯಾವದೂ ಬರುವದಿಲ್ಲ. ಖುಶಿಯೇ ಆಗುವದು. ನಮ್ಮದಲ್ಲದ್ದನ್ನು ನಾವು ನಮ್ಮದು ಎಂದು ಸ್ವೀಕರಿಸಿದರೆ ಸಿಟ್ಟು ಅಸಮಾಧಾನ ಅಶಾಂತಿ ನಿಶ್ಚಿತ. ನಾವು ಸ್ವೀಕರಿಸುವ ಕ್ರಮದಲ್ಲಿ ಎಲ್ಲವೂ ಅಡಗಿದೆ.
ಸ್ವೀಕರಿಸುವಾಗ ಎಚ್ಚರ ಮಾತ್ರ ಅನಿವಾರ್ಯ. ದೇಹ ನನ್ನದಲ್ಲ. ಅದನ್ನು ನಾನು ನನ್ನದು ಎಂದು ಸ್ವೀಕರಿಸಿದೆ. ಅದಕ್ಕಾಗಿ ಹಗಲಿರಳೂ ದುಡಿದೆ. ಪೋಷಿಸಿದೆ, ಪಾಲಿಸಿದೆ. ಆದರೆ ಅದು ನನ್ನ ಬಿಟ್ಟು ಹೋಯಿತು. ಆತ್ಮ ನನ್ನವ. ಆತ್ಮನನ್ನು ನಾನು ಎಂದೂ ನನ್ಮವ ಎಂದು ಸ್ವೀಕರಿಸಲೇ ಇಲ್ಲ. ಹಾಗಾಗಿ *ಆತ್ಮತೃಪ್ತಿ* ಎಂದಿಗೂ ದೊರಕಲೇ ಇಲ್ಲ. ಹಾಗಾಗದೇ ಆತ್ಮನನ್ನೇ ನನ್ನವ, ನಾನೇ ಆತ್ಮ ಎಂದೇ ಸ್ವೀಕರಿಸೋಣ. *ಆತ್ಮತೃಪ್ತಿ* ಪಡೆಯೋಣ. ಹಾಗೆಯೇ ಈ ಜಗದಲ್ಲಿಯೂ ನಿಜವಾಗಿಯೂ ಯಾವದು ನನ್ನದಲ್ಲ ಅಲ್ಲಿ ನನ್ನತನ ಸರ್ವಥಾ ಬೇಡ. ಯಾವದು ನನ್ನದೇ ಆಗಿದೆ ಅದನ್ನೇ *ನನ್ನದು* ಎಂದು ಸ್ವೀಕರಿಸೋಣ. ನನ್ನದೇ ಆದ ತೃಪ್ತಿಯನ್ನು ಪಡೆಯೋಣ.
ಯಾರೋ ಏನೋ ಬಯ್ದರು ಅಂದಾಗಲಿ, ಹೊಗಳಿದರು ಎಂದಾಗಲಿ ನೀನು ಅದು ಆಗುವದಿಲ್ಲ. ಹಿಗ್ಗಲೂ ಬೇಡ. ಕುಗ್ಗಲೂ ಬೇಡ.
*✍🏽✍🏽✍ನ್ಯಾಸ......*
ಗೋಪಾಲ ದಾಸ.
ವಿಜಯಾಶ್ರಮ ಸಿರವಾರ.
Comments