*ಶ್ರೀಮದ್ವೇಂಕಟ ಭೂಧರೇಂದ್ರರಮಣಃ ಕುರ್ಯಾತ್ಸದಾ ಮಂಗಲಮ್*
*ಶ್ರೀಮದ್ವೇಂಕಟ ಭೂಧರೇಂದ್ರರಮಣಃ ಕುರ್ಯಾತ್ಸದಾ ಮಂಗಲಮ್*
ಜಗದೊಡೆಯನಾದ ನಮ್ಮ ಕುಲಸ್ವಾಮಿಯೂ ಆದ ಶ್ರೀಶ್ರೀನಿವಾಸನ ಕಲ್ಯಾಣ ಮಂಗಲಮಹೋತ್ಸವ ಇಂದಿನದಿನವೇ ಜರುಗಿರುವಂತಹದ್ದು. ನಾರಾಯಣನ ನಾನಾವತಾರಗಳ ಜಯಂತೀ ಹಾಗೂ ಕಲ್ಯಾಣೋತ್ಸವಗಳನ್ನು ಕ್ಷೇಮಾಭಿವೃದ್ಧಿಯ ಅಪೇಕ್ಷೆ ಇರುವವರು ಶ್ರೀಶ್ರೀನಿವಾಸನ ಪ್ರೀತಿಯನ್ನು ಬಯಸುವವರು ಎಲ್ಲರೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಇಂದು ವೈಭವಾಚರಣೆ ಅಸಾಧ್ಯವಾದದ್ದರಿಂದ ಒಂದೆರಡು ಮಹಿಮೆಯನ್ನು ಗುಣಗಳನ್ನು ತಿಳಿಯುವ ಪ್ರಯತ್ನ ಮಾಡೋಣ.
*ಶ್ರೀಮನ್ನಾರಾಯಣನ ಉತ್ಸವಗಳು ಏತಕ್ಕೇ...*
ಶ್ರೀಮನ್ನಾರಾಯಣನ ನಾನಾ ಅವತಾರಗಳು, ವಿವಾಹಗಳು ಇತ್ಯಾದಿಗಳೆಲ್ಲವೂ ನಮ್ಮ ವೈಭವಕ್ಕಾಗಿ. ಜನ್ಮಗಳ ನಾಶಕ್ಕಾಗಿ ಜಯಂತೀ ಆಚರಿಸಿದರೆ, ವಿವಾಹಾದಿ ಸಕಲ ಸೌಭಾಗ್ಯಕ್ಕಾಗಿ ದೇವರ ಕಲ್ಯಾಣವನ್ನು ಯಥಾಶಕ್ತಿ ಆಚರಿಸುವದು. ಮತ್ತು ಶ್ರೀಮನ್ನಾರಾಯಣನ ಸಂತೃಪ್ತಿ. ಜೊತೆಗೆ ಮನೆಯಲ್ಲಿ ಸದ್ಭಾವನ, ಉತ್ತಮ ವಾತಾವರಣ, ಮಕ್ಕಳಿಗೆ ಆಸ್ತಿಕತೆಯ ಸಂಸ್ಕಾರ, ವೃದ್ಧರಿಗೆ ಮನಸ್ಸಿಗೆ ನೆಮ್ಮದಿ, ಬ್ರಾಹ್ಮಣ ಭೋಜನ, ಅನ್ನಸಂತರ್ಪಣ, ದಾನ ಇತ್ಯಾದಿ ಇತ್ಯಾದಿ ನಾನಾಕಾರಣಗಳಿಂದ ಉತ್ಸವಗಳ ಆಚರಣೆ ನಮ್ಮಲ್ಲಿ ಬಂದಿರುವದು.
ಸಂಕ್ಷಿಪ್ತ ಕಥಾ
ಶ್ರೀರಾಮಾವತಾರದಲ್ಲಿ ಸೀತೆ ವನದಲ್ಲಿ ಇರುವಾಗ ರಾವಣ ಅಪಹಾರ ಮಾಡುವ ಪ್ರಯತ್ನಮಾಡುತ್ತಾನೆ. ಆ ಕಾಲದಲ್ಲಿ ಶ್ರೀಸೀತಾದೇವಿಯು ತನ್ನ ಸುಂದರ ಪ್ರತಿಕೃತಿಯನ್ನು ನಿರ್ಮಿಸಿ, ಆ ಪ್ರತಿಕೃತಿಯಲ್ಲಿ ಅಗ್ನಿಯ ಮಗಳಾದ ವೇದವತಿಯನ್ನು ಇರಿಸಿ ತಾನು ಕೈಸಾಲಕ್ಕೆ ತೆರಳುತ್ತಾಳೆ. ರಾವಣನ ಕಷ್ಟವನ್ನೆಲ್ಲ ಸಹಿಸಿದ ವೆದವತಿಯನ್ನು ಸೀತಾದೆವಿಯೆ ಮದುವೆಯಾಗು ಎಂದು ನಿವೇದಿಸಿದಾಗ ಶ್ರೀರಾಮಚಂದ್ರದೇವರು ಕಲಿಯುಗದಲ್ಲಿ ಮದುವೆಯಾಗುವೆ ಎಂದು ತಿಳಿಸುತ್ತಾರೆ ಅದರಂತೆಯೇ ಕಲಿಯುಗದಲ್ಲಿ ಶ್ರೀನಿವಾಸ ಎಂಬ ರೂಪದಿಂದ ಭುವಿಗಿಳಿದು ಬಂದು, ಪದ್ಮಾವತಿಯನ್ನು ವಿವಾಹ ಮಾಡಿಕೊಂಡ ಪರಮಾದ್ಭುತ ದಿನ ಇಂದು.
ಆಕಾಶರಾಜ ಮಗಳಾಗಿ ಹುಟ್ಟಿದ ಪದ್ಮಾವತಿಯನ್ನು ಶ್ರೀನಿವಾಸನಿಗೆ ಕೊಟ್ಟು ವಿವಾಹದ ನಿಶ್ಚಯ. ಗೋಧೂಳಿ ಮುಹೂರ್ತದ ಶುಭ ಸಂದರ್ಭದಲ್ಲಿ, ಬ್ರಹ್ಮ ರುದ್ರಾದಿ ಸಕಲ ದೇವತೆಗಳು, ವಸಿಷ್ಠ ವಾಮದೇವಾದಿ ಸಕಲ ಋಷಿಗಳು ಮುನಿಗಳು, ಅರುಂಧತೀ ಮೊದಲಾದ ಏಲ್ಲ ಋಶಿಪತ್ನಿಯರು, ಗಂಧರ್ವರು ಸಿದ್ಧರು ಸಾಧ್ಯರು, ಮನುಷ್ಯರು ಹೀಗೆ ಎಲ್ಲರಿಂದಲೂ ಒಳಗೊಂಡ, ಈ ಎಲ್ಲರಿಗೂ ಅನುಗ್ರಹಿಸುವ ದೊಡ್ಡ ವಿವಾಹ ಶ್ರೀಶ್ರೀನಿವಾಸನ ಕಲದಯಾಣ ಮಹೋತ್ಸವ. ಆ ಉತ್ಸವ ಇಂದೇ ಆಗಿರುವಂತಹದ್ದು. ಉಳಿದ ಕಥೆ ನೆನಪಿರತ್ತೆ. ನೆನಿಸಿಕೊಳ್ಳೋಣ.
*ಶ್ರೀದಃ - ಶ್ರೀಶಃ - ಶ್ರೀನಿವಾಸಃ*
*ಶ್ರೀದಃ* - ಶ್ರೀಶ್ರೀನಿವಾಸನು ನಿತ್ಯಮುಕ್ತಳಾದ ಶ್ರೀಲಕ್ಷ್ಮೀದೇವಿಗೂ ಅನಂತ ಸುಖಪ್ರದ, ಅನಂತ ಅಕ್ಷೀಣ ಆನಂದಪ್ರದ. ಅನಂತ ಮುಕ್ತರಿಗೆ ಆನಂದಪ್ರದ. ಮುಂದೆ ಮುಕ್ತಿ ಪಡೆಯುವ ಅನಂತ ಜೀವರಾಶಿಗಳಿಗೆ ಆನಂದ ಪ್ರದ. ಅನಂತಾನಂತ ಜೀವರಾಶಿಗಳಿಗೆ ಸಂಸಾರದಲ್ಲಿ ಸುಖ ಕೊಡುವ "ಶ್ರೀದ"ನಿಗೆ ನಮಗೆ ಸುಖ ಕೊಡುವದು ಭಾರವೇ.....?? ಹೀಗಿರುವಾಗ *ಶ್ರೀದಃ* ಎಂದು ಚಿಂತಿಸೋಣ.
*ಶ್ರೀಶಃ* - ಅನಾದಿ ಕಾಲದಿಂದ ಅನಂತಕಾಲದವರೆಗೆ ಲಕ್ಷ್ಮೀಪತಿಯಾದ "ಶ್ರೀಶ"ನು ನಮ್ಮ ಸ್ವಾಮಿಯೂ ಹೌದು. ನಮ್ಮ ಸ್ವಾಮಿ ಶ್ರೀಶನಾದಾಗ, ನಾವು ಶ್ರೀಶನ ದಾಸನಾದಾಗ ನಮಗೆ ಕೊರತೆಗಳಿವೆ ಎಂದಾಗಲು ಸಾಧ್ಯವೇ....??? "ಲಕ್ಷ್ಮೀ ಬ್ರಹ್ಮ ಮೊದಲಾದವರಿಗೂ ಸ್ವಾಮಿಯಾಗಿದ್ದಿ ಅಪೇಕ್ಷಿತ ಪ್ರದಾತಾ" ನಮ್ಮ ಸ್ವಾಮಿ ಶ್ರೀಶ ಶ್ರೀನಿವಾಸ. ಶ್ರೀನಿವಾಸನನ್ನು *ಶ್ರೀಶಃ* ಎಂದೂ ತಿಳಿಯೋಣ.
*ಶ್ರೀನಿವಾಸಃ* - ಲಕ್ಷ್ಮೀದೇವಿಯಿಂದಾರಂಭಿಸಿ ಎಲ್ಲರಿಗೂ ಆಶ್ರಯ ಶ್ರೀನಿವಾಸ. ಹೀಗಿರುವಾಗ ನಾವು ನಿರಾಶ್ರಿತರಾಗಲು ಸಾಧ್ಯವೇ....??? ಅನಂತ ದೇಶಕಾಲಗಳಲ್ಲಿ ವ್ಯಾಪ್ತಳಾದ ಲಕ್ಷ್ಮೀ, ಅನಂತರೂಪಳಿಂದ ನಿರಂತರ ಆರಾಧಿಸುವ ಬ್ರಹ್ಮ ವಾಯು, ರುದ್ರೇಂದ್ರಾದಿ ಸಕಲ ಜೀವರಾಶಿಗಳಿಗೆ ಆಶ್ರಯವನ್ನು ಒದಗಿಸಿದ ಶ್ರೀನಿವಾಸನಿಗೆ ಮಿಣಕು ಜೀವನಾದ ನನಗೆ ಆಶ್ರಯ ಕೊಡಲಾರ ಎಂದಾಗಲು ಸಾಧ್ಯವೇ....???
ಅನಂತ ಆನಂದರೂಪ, ಆನಂದಪ್ರದ ದೇವ ಶ್ರೀನಿವಾಸ - *ಶ್ರೀದಃ.* ಅನಂತಜೀವ ನಿಯಾಮಕ ಸ್ವಾಮಿಯೇ ನಮ್ಮ ಸ್ವಾಮಿ *ಶ್ರೀಶಃ.* ಅನಂತಜೀವರಿಗೆ ಆಶ್ರಯನಾದ ಶ್ರೀನಿವಾಸನೇ ಎಮಗೆ ಆಶ್ರಯ. ಅಂತೆಯೇ *ಶ್ರೀನಿವಾಸ*.
ಶ್ರೀಶ್ರೀನಿವಾಸನಕಲ್ಯಾಣೋತ್ಸವ ಶುಭ ಸಂದರ್ಭದಲ್ಲಿ ಇಂದಿನಿಂದ ಈ ಮೂರುಗುಣಗಳನ್ನು ಚಿಂತಿಸೋಣ ಧ್ಯಾನಿಸೋಣ. ಶ್ರೀನಿವಾಸನಿಗೆ ಅತ್ಯಂತಪ್ರಿಯರಾಗಿ ಬಾಳುವ ಸೌಭಾಗ್ಯವನ್ನು ಇಂದಿನಿಂದ ಪಡೆಯಲು ಪ್ರಯತ್ನಿಸೋಣ. ಈ ಸೌಭಾಗ್ಯ ದೊರಕುವದೇ ದೇವರು ನಮಗೆ ಮಾಡುವ ದೊಡ್ಡ ಮಂಗಳ.
ಹರೇ ಶ್ರೀನಿವಾಸ ಜೈ ಶ್ರೀರಾಮ
*✍🏽✍🏽ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments