*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*
*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*
ರಕ್ಷಕನಾದ ದೇವನೊಬ್ಬನು ಇದ್ದಾನೆ. ನಮ್ಮನ್ನು ಎಡಬಿಡದೇ ರಕ್ಷಿಸುತ್ತಾನೆ ಎಂಬ ಪೂರ್ಣ ಭರವಸೆ ಇರಲೇಬೇಕು. ಇಂದಿನ ದಿನಗಳಲ್ಲಿ "ಹಣವೇ ನಮ್ಮನ್ನು ರಕ್ಷಿಸುವದು" ಎಂಬ ಭ್ರಾಂತಿ ಹೋಗಿ, ದೇವರೇ ನಮ್ಮನ್ನು ರಕ್ಷಿಸುತ್ತಾನೆ ಎಂಬ ಭರವಸೆ ಮೂಡಿಸುವ ದಿನಗಳು.
*ನಾನೂ ಒಂದು ಸಾಕ್ಷಿ....*
ಬೆಂಗಳೂರಿನಲ್ಲಿ ಆರವತ್ತು ದಿನಗಳ ವರೆಗೆ ಸಿಕ್ಕು ಹಾಕಿಕೊಂಡೆ. ಹೇಗೆ ನನ್ನ ರಕ್ಷಣೆ ಎಂದು ಸ್ವಲ್ಪ ಗಲಿಬಿಲಿ ಇತ್ತು. ಆದಾಯ ಇಲ್ಲ. ಮನೆ ಇಲ್ಲ. ಏನೂ ಇಲ್ಲ ಎಂಬ ಟೆನ್ಶೆನ್ ಇತ್ತು. ಆದರೆ ದೇವ ಹೇಗೆ ರಕ್ಷಿಸಿದ ಎನ್ನುವದು ಗೊತ್ತೇ ಆಗಲಿಲ್ಲ. ಈ ರಕ್ಷಣೆಯಲ್ಲಿ ಕೈಚಾಚಿ ರಕ್ಷಿಸಿದ ಅನೇಕ (ಪಂ. ಕಟ್ಟಿ ಆಚಾರ್. ಪಂ ವಿದ್ಯಾಧೀಶಾಚಾರ್. ಪಂ ನರಸಿಂಹಾಚಾರ್. ಪಂ. ಆಲೂರು ಶ್ರೀನಿವಾಸಾಚಾರ್. ಪಂ ವಾದಿರಾಜಾಚಾರ್. ಪಂ. ವಸಿಷ್ಠಾಚಾರ್. ಪಂ ಸರ್ವೋತ್ತಮಾಚಾರ್. ಹಾಗೂ ಇನ್ನೂ ಅನೇಕ ಪಂಡಿತರುಗಳು, ಆತ್ಮೀಯರು, ಮಿತ್ರರು. ) ಮಹನೀಯರುಗಳು ಇದ್ದಾರೆ. ಈ ಎಲ್ಲ ಮಹನೀಯರುಗಳ ಮುಖಾಂತರ ರಕ್ಷಿಸಿದ. ಆಸ್ಚರ್ಯಮಾಡಿಕೊಳ್ಳಲೂ ಸಮಯಸಿಗದ ಹಾಗೆ, ತಿಳಿಯದ ಹಾಗೆ ಅತ್ಯಂತ ಸುಲಭ ರೀತಿಯಲ್ಲಿ ಆರವತ್ತು ದಿನಗಳನ್ನು ಕಳೆದು, ಸುಸೂತ್ರ ನನ್ನ ಮನೆಗೆ ಕಳುಹಿಸಿದ. ನಮ್ಮ ದೇವ. ಹೀಗೆ ನೆನೆಯಲು ಕೌಶಲ ಕೊಟ್ಟವರು ನಮ್ಮ ಹಿರಿಯರು ಹಾಗೂ ಗುರುಗಳು. ಈ ಸೌಅಗ್ಯ ಸಿಕ್ಕಿದ್ದು ಪೂಜ್ಯ ಆಚಾರ್ಯರು ನನ್ನ ಗುರುಗಳು ಎಂಬ ಕಾರಣಕ್ಕೇನೆ ಇದರಲ್ಲಿ ಇಷ್ಟು ಸಂಶಯವೂ ಇಲ್ಲ.
*ಸುಂದರ ಕಥೆ...*
ಒಬ್ಬ ಸಾಧು ತಪಸ್ಸು ಮಾಡುತ್ತಾ ಕುಳಿತಿರುತ್ತಾನೆ ವನದಲ್ಲಿ. ಆ ಸಮದಲ್ಲಿ ಒಬ್ಬ ದರಿದ್ರ ಅಗತಿಕ ತನ್ನ ಅನೇಕ ಮಕ್ಕಳು ಮರಿಗಳೊಂದಿಗೆ ಬಂದು ಸಾಧುವಿನ ಕಾಲಿಗೆರಗಿ ಬೇಡಿಕೊಳ್ಳುತ್ತಾನೆ ನನ್ನ ಈ ದಾರಿದ್ರ್ಯ ಪರಿಹರಿಸು ಎಂದು.
ಅವನ ಆ ಆರ್ತ ದನಿಗೆ ಓಗೊಟ್ಟ ಸಾಧು ತಿಳಿಸಿದ. ಎದುರಿಗೆ ಕಾಣುವ ನದಿಯ ದಂಡೆಯಲ್ಲಿ ಒಂದು ಗುಂಡಾದ ಕಲ್ಲಿದೆ, ಅದರ ಕೆಳಗೆ ಒಂದು ಚೀಲವಿದೆ. ಅಲ್ಲಿ ಒಂದು ಅನರ್ಘ್ಯವಾದ ಬೆಲೆಬಾಳುವ ರತ್ನವಿದೆ ಅದನ್ನು ಸ್ವೀಕರಿಸು. ಪೇಟೆಯಲ್ಲಿ ಮಾರಿಕೋ ಆ ಹಣದಿಂದ ನಿನ್ನ ಕುಟುಂಬವನ್ನು ಭರಿಸು ರಕ್ಷಿಸು.
ದರಿದ್ರ ಆದರೆ ವಿವೇಕಿ, ಮಹಾ ಬುದ್ಧಿವಂತ, ನೇರವಾಗಿ ನದಿಯ ದಡಕ್ಕೆ ಹೋಗಿ, ಗುಂಡಾದ ಬಂಡೆಯನ್ನು ಸರಿಸಿದ. ಕೆಳಗಿರುವ "ಅನರ್ಘ್ಯವಾದ ರತ್ನ" ವನ್ನು ನೋಡಿದ ಸಂತೋಷಯಾಯಿತು. ಅದನ್ನು ಕೈ ಇಂದ ಮುಟ್ಟಿದ ನಿಜವೆಂದು ತಿಳಿತು. ಇನ್ನೇನು ಸ್ವೀಕರಿಸಬೇಕು ಅಷ್ಟರಲ್ಲಿ ವಿವೇಕ ಎಚ್ಚರಿಸಿತು....
................ವಿಚಾರ ಮಾಡಿದ ಆ ರತ್ನವನ್ನು ಅಲ್ಲಿಯೇ ಬಿಟ್ಟು ಬಂದ. ಬರಿಗೈಲಿ ಬಂದ ಆ ದರಿದ್ರನನ್ನು ನೋಡಿದ ಸಾಧು ಕೇಳಿದ ಯಾಕೋ "ರತ್ನ ಸಿಗಲಿಲ್ಲವೇ..?? ಸಿಕ್ಕಿತು ಸ್ವಾಮಿ. ತೆಗೆದುಕೊಳ್ಳಲಿಲ್ಲವೇಕೆ...?? ಏನೋ ತಲೆಯಲ್ಲಿ ಬೇರೆ ವಿಚಾರ ಬಂತು ಬಿಟ್ಟು ಬಂದೆ. ಹಾಗಾದ್ರೆ ಏನದು ವಿಚಾರ... ??
ಈ ಸಾಧು *"ಈ ಸಾಧು ಇಂತಹ ಅಮೂಲ್ಯವಾದ ರತ್ನವನ್ನು ಕಣ್ಣೆತ್ತಿಯೂ ನೋಡದೆ ಉಪೇಕ್ಷೆ ಮಾಡಿದಾನೆ, ಅಷ್ಟೇ ಅಲ್ಲ ತನ್ನ ಕುಟುಂಬ ಭರಣೆ ಮಾಡುತ್ತಾ ತಾನೂ ಆನಂದದಿಂದ ಇದ್ದಾನೆ ಕುಟುಂಬವನ್ನೂ ಆನಂದದಿಂದ ಇರಿಸಿದ್ದಾನೆ* ಎಂದರೆ, ನನ್ನ ಹಾಗೂ ನನ್ನ ಕುಟುಂಬದ ಪೋಷಣೆಗೆ ಇದಕ್ಕೂ ಅಮೂಲ್ಯವಾದದ್ದು ಮತ್ತೊಂದು ಇರಬಹುದು ಅಲ್ಲವೇ.......??? ಎಂದು ತಲೆಯಲ್ಲಿ ಸಣ್ಣ ವಿಚಾರ ಬಂತು ಸ್ವಾಮಿ ಅದಕ್ಕೆ ಬಿಟ್ಟು ಬಂದೆ.
*ಸಾಧುಗಳೇ "ಆ ರತ್ನವನ್ನು ಯಾಕೆ ಉಪೇಕ್ಷೇ ಮಾಡಿದ್ದೀರಾ...??*
ಈ ಕೋಟಿ ಕೋಟಿ ಬೆಲೆಬಾಳುವ ರತ್ನಕ್ಕಿಂತಲೂ ಅಮೂಲ್ಯವಾದದ್ದು ಯಾವದು ? ? ದಯಮಾಡಿ ತಿಳಿಸುತ್ತೀರಾ..??
ಸಾಧುವಿಗೆ ಎಲ್ಲಿಲ್ಲದ ಖುಶಿ ಆಯ್ತು. ಸಂತೋಷದಿಂದ ಹೇಳಿದ *"ಇಂದಿನಿಂದ ದರಿದ್ರ ನೀನಲ್ಲ, ಆಗರ್ಭ ಶ್ರೀಮಂತನೇ ಸರಿ ..."* ಈ ತರಹದ ರತ್ನವನ್ನು ಪಡೆಯುವದೇನಿದೆ "ಖಡ್ಗವನ್ನು ಮೊನಚು ಮಾಡುಲು ತನ್ನ ಕತ್ತನ್ನೇ ಉಪಯೋಗಿಸಿದ ಹಾಗೆ"
ರತ್ನವಿಟ್ಟುಕೊಂಡರೆ ಪೋಷಣೆಯಾಗಲಾರದು, ಸಮಸ್ಯೆಗಳ ಸುರಿಮಳೆಯೇ ಆರಂಭಿಸುತ್ತದೆ. ನಿನ್ನನ್ನು ಗಲಬಂಧನದಲ್ಲಿ ಸಿಕ್ಕಿ ಹಾಕಿಸಲೂ ಹೇಸುವದಿಲ್ಲ ರತ್ನ. ಕುಟುಂಬದ ಭರಣೆ ಪೋಷಣೆ ಆ ರತ್ನ ಮಾಡುವದಿಲ್ಲ. ಅದರ ಪೋಷಣೆಯಲ್ಲಿಯೇ ಜೀವನ ಸವೆದು ಹೋಗುತ್ತದೆ ಅದಕ್ಕಾಗಿ ಆ ರತ್ನವನ್ನು ಉಪೇಕ್ಷಿಸಿದೆ.
ನನ್ನನ್ನು ರಕ್ಷಿಸುವ, ಪೋಷಿಸುವ, ಮಹಾದುಃಖದಿಂದ ಪಾರುಮಾಡುವ , ಅನಂತ ಸಮ್ಮೋದವನ್ನು ಸುರಿಸುವ, ಅರೆಘಳಿಗೆ ಬಿಡದೆ ನಿರಂತರ ನನ್ನೋಟ್ಟಿಗೆ ಇರುವ, ನಾ ಮರೆತರೂ ನನ್ನನ್ನು ಮರೆಯದ, ದರಿದ್ರರಾದ ನಮ್ಮಲ್ಲಿ ತಾನು ಎಲ್ಲಿದ್ದರೂ ನಮ್ಮನ್ನು ರಕ್ಷಿಸುವ ಪೋಶಿಸುವ ಅಪೂರ್ವ ಅದ್ಭುತವಾದ *"ಕೃಷ್ಣ"* ನೆಂಬ ಮಹಾರತ್ನವೊಂದಿದೆ ಅದರ ಬೆನ್ನು ಬಿದ್ದಿದ್ದೇನೆ.
ಆ "ಕೃಷ್ಣ"ವೆಂಬ ರತ್ನವನ್ನು ಪಡೆಯಲು "ರಕ್ಷತೀತ್ಯೇವ ವಿಶ್ವಾಸಃ " ಭರವಸೆ ವಿಶ್ವಾಸ ಭಕ್ತಿ ಗಳೆಂಬ ಅಡಿಗಲ್ಲಿನ ಮೇಲೆ "ತಪಸ್ಸಿಗೆ" ಕುಳಿತಿದ್ದೇನೆ. ನಿನಗೂ ಆ ರತ್ನಪಡೆಯುವದಿದ್ದರೆ ನನ್ನ ಪಕ್ಕದಲ್ಲಿ ಕುಳಿತುಕೋ. ಎಲ್ಲವನ್ನು ಸಮರ್ಪಿಸಿ ಕುಳಿತುಕೊ. ನಿನ್ನ ರಕ್ಷಣೆಯ ಜವಬ್ದಾರಿ ಅವನದು.....
ಜೈ ಶ್ರೀಕೃಷ್ಣ.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments