*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್*

*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್*

ಜ್ಙಾನಿಕುಲಚಕ್ರವರ್ತಿಗಳಾದ ಶ್ರೀಶ್ರೀ ೧೦೦೮ ಶ್ರೀ ಸತ್ಯಸಂಧತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. 

ಶಾಪಾನುಗ್ರಹ ಶಕ್ತರು, ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೊರೆ, ಅಯೋಗ್ಯನಾದ ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಂತೆ ಮಾಡಿದ ಕರುಣಾಳು, ಇಂದಿಗೂ ಲಕ್ಷ ಲಕ್ಷ ಭಕ್ತರಿಗೆ ಅನುಗ್ರಹ ಮಾಡುತ್ತಿರುವ ಕಾಮಧೇನು. ಕುನ್ನಿಯಾದ ಎನ್ನ ಮೆಲೆಯೂ ನಿರಂತರ ಅನುಗ್ರಹಿಸಿ ಹರಿಸುತ್ತಿರುವ ಮಹಾಗುರು *ಶ್ರೀಶ್ರೀ ಸತ್ಯಸಂಧ ತೀರ್ಥ ಶ್ರೀಪಾದಂಗಳವರು.*  ಕಳೆದ ಅನೇಕ ವರ್ಷಗಳಿಂದ ತಪ್ಪದೇ ಕರೆಸಿಕೊಳ್ಳುತ್ತಿದ್ದರು. ಈ ಬಾರಿ ಹೋಗುವದು ನನ್ನಿಂದ ಆಗಲಿಲ್ಲ ಎಂಬ ದುಃಖವಂತೂ ಇದ್ದೇ ಇದೆ. ಮನೆಯಲ್ಲಿಯೇ ವಿಶೇಷವಾಗಿ ಆರಾಧನೆ ಮಾಡುವ ಪ್ರಯತ್ನ ನಾವೆಲ್ಲರೂ ಮಾಡೋಣ. 

*ಸತ್ಯಭೋಧರ ಅಂತರಂಗರು...*

ಶ್ರೀಸತ್ಯಬೋಧತೀರ್ಥ ಶ್ರೀಪಾದಂಗಳವರಿಂದ ಇಪ್ಪತ್ತು ವರ್ಷ ಆಯುಷ್ಯವನ್ನು ಪಡೆದರು. ಭಗವತ್ಪ್ರೀತಿ ಸಾಧನ ಮಹಾ ವಿದ್ಯೆಯನ್ನು ಪಡೆದರು. ಮಹಾ  ಸಂಸ್ಥಾನವನ್ನೂ ಕರುಣಿಸಿದರು. ಮುಂದೇ ಸರ್ವಸ್ವವನ್ನೂ ಪಡೆದುಕೊಂದರು. ನಮ್ಮ ಇಂದಿನ ಆರಾಧ್ಯ ಮುನಿಗಳಾದ   *ಮಹಿಷಿ ಸ್ವಾಮಿಗಳು.* 

*ಅಷ್ಟೈಶ್ವರ್ಯಂ ಸತ್ಯಸಂಧಂ ನಮಾಮಿ*

ಪಂಢರ ಪುರಕ್ಕೆ ಹೋಗುವ ಮಾರ್ಗಮಧ್ಯದಿ ಪಂಢರಪುರೀಶನಿಗೆ ಮುದ್ರೆ ಕೊಟ್ಟ ಧೀರವಿಠ್ಠಲರಿವರು. ಉತ್ತರದ ಸಂಚಾರದಲ್ಲಿರುವಾಗ ಗಯಾ ಕ್ಷೇತ್ರದಲ್ಲಿ ವಿಷ್ಣುಪಾದವನ್ನೇ ಒಲಿಸಿಕೊಂಡ ಭಕ್ತಪುರೀಶರಿವರು. ಪ್ರಯಾಗ ಕ್ಷೇತ್ರದಲ್ಲಿ ಸ್ವಯಂ ಮೂರ್ತಿಮಂತಳಾಗಿ ಬಂದ ಗಂಗೆಗೆ ಬಾಗಿನ ಸಮರ್ಪಿಸಿದ ಗಂಗಾಪುತ್ರರಿವರು. ವ್ಯಾಖ್ಯಾ ಕೌಶಲಕ್ಕೆ ನಿಯಾಮಕರಾದ ಶೇಷದೇವರ ದರ್ಶನ ಪಡೆದ ವ್ಯಾಖ್ಯಾವಿಶಾರದರಿವರು. ಶ್ರೀಮದಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಕೃಷ್ಣನ ಸ್ಪರ್ಶಭಾಗ್ಯ ಪಡೆದ ಕಾರ್ಷ್ಣೇಯರಿವರು. ಹೀಗೆ ಅನೇಕ ಮಹಿಮೆಗಳನ್ನು ಹೊಂದಿದ, ಇಂದಿಗೂ  ಮಹಿಷೀ ಕ್ಷೇತ್ರದಲ್ಲಿ ವಿರಾಜ ಮಾನರಾದ ಮಹಾನ್ ಗುರುಗಳಿವರು. 


ವಿಜಯವಾಡಾ ಪ್ರಾಂತದಲ್ಲಿ ದುರ್ವಾದಿಗಳನ್ನು ಖಂಡಿಸಿ, ವಿಜಯ ಸ್ಥಂಭದಂತೆ  ನೂರಾರು ಪ್ರಾಣ ದೇವರನ್ನು ಸ್ಥಾಪಿಸಿ, ಆ ಭಕ್ತರಿಗೆ ಶುದ್ಧ ಜ್ಙಾನವನ್ನು ಕರುಣಿಸಿ ಉಣಿಸಿ ತಣಿಸಿದ ಚಂದಿರನಂತೆ ವಿರಾಜಮಾನರಾದ ಮಹಾಪ್ರಭುಗಳಿವರು. 

ಇಂದಿಗೂ ಕೋಟಿ ಕೋಟಿ ಮಹಾ ಭಕ್ತರೆಲ್ಲರಿಗೂ ಕರುಣೆ ಮಾಡಿ, ಪಾಪ ಪರಿಹರಿಸಿ, ವಿಘ್ನ ನಿವಾರಿಸಿ, ಇಷ್ಟಾರ್ಥಗಳನ್ನು ಪೂರೈಸುವ ಮಹಾ ಗುರುಗಳಗೆ ಕೋಟಿ ಕೋಟಿ ಪ್ರಣಾಮಗಳು. ಜೊತೆಗೆ ನನ್ನಂತಹ ನನ್ನನ್ನೂ ಮಗುವಿನಂತೆ ಸಾಕಿ, ಸಲಹಿ, ವಿದ್ಯಾಭ್ಯಾಸ ಪೂರ್ಣವಾಗುವಂತೆ ಮಾಡಿ, ಗುರುಗಳಿಂದ ಕಲೆತ ನಾಲಕು ಅಕ್ಷರ ಸ್ಥಿರವಾಗಿ ಉಳಿಯುವಂತೆ ನೋಡಿಕೊಂಡು, ಪ್ರತಿದಿನದ ಆಗುಹೋಗುಗಳಿಗೆ ಸಾಕ್ಷಿಗಳಾಗಿ ನಿಂತು, ತಿದ್ದಿ ಪ್ರೇರಿಸುವ, ಅಸಹಾಯಕನಾದಾಗ ದಾರಿತೋರುವ, ಕೈ ಚೆಲ್ಲಿ ನಿಂತಾಗ ಕೈ ಕೊಟ್ಟು ಎತ್ತುವ, ಹತಾಶನಾದಾಗ ಸಮಾಧಾನಿಸುವ,  ಅವಿಜ್ಙಾತ ಗುರುವಿನಂತೆ ಎನ್ನನು ಹಿಂಬಾಲಿಸಿ ಕರುಣಿಸುತ್ತಿರುವ ಆ ಮಹಾ ಗುರುಗಳಿಗೆ ಎಷ್ಟು ನಮಸ್ಕಾರ ಹೇಳಿದರೂ ಕಡಿಮೆಯೇ.  ಆದರೆ ಎಮ್ಮ ಕೈಲಿ ನಮಸ್ಕಾರ ಬಿಟ್ಟರೆ ಇನ್ನೇನಿಲ್ಲ. ಆ ನಮಸ್ಕಾರವನ್ನೇ  ಸ್ವೀಕರಿಸಿ ಗುರು ದೇವತಾ ದೇವರಡಗೆ ಎಮ್ಮನು ಕರೆದೊಯ್ಯಲಿ ಉದ್ಧರಿಸಲಿ ಎಂದು ಪ್ರಾರ್ಥಿಸುತ್ತೇನೆ......

*ಜ್ಙಾನದಿಂದ ಭಾರ. ದೆಹದಿಂದ ಅತ್ಯಂತ ಹಗುರ*

ಅಪಾರವಾದ ಜ್ಙಾನದ ಗಣಿ ಶ್ರೀಗಳವರು. ಜಗತ್ತಿನಲ್ಲಿಯೇ ಭಾರವಾದ ಮಹಾಭಾರತದಲ್ಲಿ ಅತೀ ಸಾರವಾದ *ವಿಷ್ಣುಸಹಸ್ರನಾಮಕ್ಕೆ* ಅತ್ಯದ್ಭುತ ವ್ಯಾಖ್ಯಾನ ಬರೆದ ಮಹಾಜ್ಙಾನಿಗಳು ಇಂದಿನ ಕಥಾನಾಯಕರು. ಜ್ಙಾನದಿಂದ ಭಾರರಾದ ಮಹಾಮಹಿಮರು ಕೊನೆ ಕಾಲದಲ್ಲಿ ಉಡುಪಿಯಿಂದ ಮಹಿಷಿಯವರೆ ದೇಹವನ್ನು ಹೊತ್ತ ಶಿಷ್ಯರಿಗೆ ಅತ್ಯಂತ ಹಗುರಾಗಿದ್ದರು ಎಂದು ಕೇಳುತ್ತೇವೆ. ಇದೇ ಶ್ರೀಗಳವರ ದಿವ್ಯತೆ. 


ಶ್ರೀಸತ್ಯಸಂಧತೀರ್ಥರ ಮಹಾನ್ ಭಕ್ತರಾದ, ಅವರನುಗ್ರಹಾಕಾಂಕ್ಷಿಗಳಾದ, ನಾವೆಲ್ಲರೂ *ವಿಷ್ಣೋಃಪದಶ್ರಿತ್ ಗೋವ್ರಾತೈಃ ಸ್ವಾಂತಧ್ವಾಂತ ನಿವಾರಕಃ | ಶ್ರೀಸತ್ಯಸಂಧ ಸೂರ್ಯೋಯಂ ಭಾಸತಾಂ ನೋ ಹೃದಂಬರೆ ||* ಎಂಬ ಈ ಶ್ಲೋಕವನ್ನು  ಕನಿಷ್ಠ ನೂರೆಂಟು ಸಲವಾದರೂ ಜಪಿಸೋಣ.... ಆ ಮಹಾಗುಗಳ ಮಹಾನ್ ಅನುಗ್ರಹಕ್ಕೆ ನಿರಂತರ ಭಾಗಿಯಾಗೋಣ....

ಅಜ್ಙಾನಾಂಧಕಾರಕ್ಕೆ ಜ್ಙಾನಾರ್ಕನಂತೆ ಪ್ರಜ್ವಲಿಸುವ, ಸಂಸಾರ ಸಾಗರದ ಉಪ್ಪುನೀರನುಂಡವರಿಗೆ ತುಂಗೆಯಂತೆ ತಿಳಿಯಾದ ಸಿಹಿಯಾದ ಜ್ನಾನ ಪಾನೀಯನ್ನು ಉಣಿಸುವ ಆ ಗುರುವಿಗೆ *ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೆಮ* ಎನ್ನುವದುಳಿದು ಅಲ್ಪನಾದ ಎನ್ನಲ್ಲಿ ಇನ್ನೇನಿಲ್ಲ...

*✍🏽✍🏽✍🏽✍ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Exlent.

Gurugala mahime atyadbhuta

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*