*ಆಚಾರ್...!! ಏನರೆ ಹೇಳ್ರಿ ಉಪವಾಸ ಮಾಡ್ಲಿಕ್ಕಂತೂ ಆಗಲ್ಲ, ಎಂಬ ಮಾತು ಕೇಳ್ತಿದ್ವೆ.. ಆದರೆ "ಇಂದಿನ ಈ ಏಕಾದಶಿಯ ಉಪವಾಸ ನಮ್ಮದೇ.... Challenge*"

*ಆಚಾರ್...!! ಏನರೆ ಹೇಳ್ರಿ ಉಪವಾಸ ಮಾಡ್ಲಿಕ್ಕಂತೂ ಆಗಲ್ಲ,  ಎಂಬ ಮಾತು ಕೇಳ್ತಿದ್ವೆ.. ಆದರೆ "ಇಂದಿನ ಈ ಏಕಾದಶಿಯ ಉಪವಾಸ ನಮ್ಮದೇ.... Challenge*"

ಶಾರ್ವರೀ ಸಂವತ್ಸರದ  ಶುಕ್ಲಪಕ್ಷದ ಏಕಾದಶೀ  ಇಂದು. ಸಂಪಾದೆನೆಗೆ ಬಂದದ್ದು ನಾವು.  ಸಂಪಾದಿಸುವದರಲ್ಲಿ ಜ್ಯೇಷ್ಠವಾದದ್ದು, ಮೊಟ್ಟಮೊದಲನೇಯದ್ದು ಅಂದರೆ ಅದು "ವಿಷ್ಣುಪ್ರೀತಿ"ಯೇ. ನಂತರದ ಸ್ಥಾನ ಉಳಿದೆಲ್ಲ ಸಂಪಾದನೆಗಳದ್ದು.  ಆ ವಿಷ್ಣುಪ್ರೀತಿಗೋಸ್ಕರ  ನಾವೆಲ್ಲರೂ ಸೇರಿ ಇಂದು  ಉಪವಾಸದ challenge ತೆಗೆದುಕೊಳ್ಳೋಣ ಅಲ್ಲವೇ..... ??

*ಉಪವಾಸ ಏಕೆ...*

ಜಗತ್ತಿನಲ್ಲಿ ಇರುವ ಪಾಪಗಳೆಲ್ಲವೂ ಇಂದು ತಿನ್ನುವ ಪ್ರತೀ ಅಗಳಿನಲ್ಲಿ ಬಂದು ಸೇರಿರುತ್ತವೆ ಹಾಗಾಗಿ ಉಪವಾಸ. ಜೊತೆಗೆ ಇಂದು ಮಾಡಿದ ಉಪವಾಸದ ಪ್ರಭಾವದಿಂದ ಮಾಡಿದ ಸಕಲ ಪಾಪಗಳೂ ಪರಿಹಾರ ಆಗುತ್ತದೆ.. ಆದ್ದರಿಂದ ಉಪವಾಸ.

ಒಂದು ಕೋಟಿ ಜನರಿಗೂ ಹೆಚ್ಚಾದ ನಾವೆಲ್ಲರೂ ಸೇರಿ ಉಪವಾಸ ಮಾಡಿದರೆ ದೇಶದ ಐವತ್ತು ಲಕ್ಷ ಕೇಜಿ ಅಕ್ಕಿ ಉಳಿತಾಯ ಆಗುತ್ತದೆ. ಇನ್ನುಳಿದ ಆಹಾರದ ಉಳಿತಾಯ ಬೇರೆ. ಹಾಗಾಗಿಯೂ ಉಪವಾಸದ challenge ತೊಗೊಳ್ಳೋಣ.

ದಿನ ಕಳೆದರೆ ಇಂದ್ರಿಯ ದೇಹ ಮನಸ್ಸು ಇವುಗಳಿಗೆ ವಿಶ್ರಾಂತಿಬೇಕು ಅಂತೆಯೇ ಮಲಗ್ತೇವೆ. ವಾರ ಕಳೆದರೆ, ವಿಶ್ರಾಂತಿಬೇಕು. ಭಾನುವಾರ ಪೂರ್ಣದಿನ ರಜೆ ತೆಗೆದುಕೊಳ್ಳುತ್ತೇವೆ. ಜಡವಾದ ಮಶಿನ್ ಗಳಿಗೆ, ಕಂಪ್ಯುಟರ್ ಗಳಿಗೂ ವಿಶ್ರಾಂತಿ ಬೇಕು. ಹೀಗಿರುವಾಗ  ಹದಿನೈದು ದಿನ ನಿತ್ಯ ಊಟಮಾಡುವ ನಾವು, ಇಂದೊಂದು ದಿನ ಆಹಾರದಿಂದ ವಿಶ್ರಾಂತಿ ತೊಗೊಳ್ಳೋಣ.

ಉಪವಾಸ ಮಾಡಲು ಸಿದ್ಧನನ್ನಾಗಿ ಮಾಡಲು ಹೀಗೆ ನೂರು ತರಹದಿಂದ ಹೇಳಿದರೂ  ಕೇಳಿದರೂ ಉತ್ತರ ಮಾತ್ರ ಒಂದೆ.... *ನ್ಯಾಸಾಚಾರ್...!! ಏನರೆ ಹೇಳ್ರಿ, ಎಷ್ಟರೆ ಹೇಳ್ರಿ ಉಪವಾಸ ಮಾಡ್ಲಿಕ್ಕಂತೂ ಆಗಲ್ಲ......*

ಯಾಕ ಆಗಲ್ಲ.... ???? ಕೆಲವರ ಉತ್ತರ ತಲೆ ಏಳತ್ತೆ. ಕೆಲಸದ ಒತ್ತಡ ಅಂತ ಮತ್ತೆ ಕೆಲವರದು. ಇನ್ನ ಕೆಲವರ ಉತ್ತರ ಆಗಲ್ಲ ಅಂದ್ರೆ ಆಗಲ್ಲ.  "ಆಗತ್ತೆ ..... ಉಪವಾಸ ಮಾಡಿ ತೀರುವೆ ಎಂಬ ಉತ್ತರ ಬರುವದೇ ಇಲ್ಲ." ಬಂದರೂ ಅದು ಕೇವಲ‌ ಕೆಲವರದ್ದು ಮಾತ್ರ ಇರತ್ತೆ.

ಆಗಲ್ಲ ಎನ್ನುವದೇನಿದೆ ಯಾವದನ್ನೂ ಆಗಲು ಬಿಡುವದಿಲ್ಲ. ಮಾಡುತ್ತೇನೆ ಎನ್ನುವದೇನಿದೆ, ನಮಗೆ ಗೊತ್ತಾಗುವದರಲ್ಲಿಯೇ ಮಾಡಿ ತೋರಿಸಿಬಿಡುತ್ತದೆ. ಚಾಲೆಂಜ್ ತೆಗೆದು ಕೊಂಡರೆ ಆಗುವದಿಲ್ಲ ಅನ್ನುವದು ಇರುವದೆ ಇಲ್ಲ.


ಆಗಲ್ಲ ಎನ್ನಲು ಹಿಂದೆ ಆಫೀಸು ಕೆಲಸ ಅದು ಇದು ನೂರು ಕಾರಣಗಳು ಹೇಳಬಹುದಿತ್ತು. ಇಂದು lackdowne ಹಾಗಾಗಿ ಮನೆಯಲ್ಲಿಯೇ ಇದ್ದೇವೆ.  ಇಂದಿನ ಉಪವಾಸ ನಮ್ಮದೇ.

*ಉಪವಾಸ ಮಾಡಿದರೆ ಸಾಯ್ತೇವೆ ಎಂಬ ಹೆದುರಿಕೆಯೆ... ???*

ಏಕಾದಶಿ ಉಪವಾಸ ಇದ್ದಕಾರಣ  ಸತ್ತವರ ಸುದ್ದಿ ಇನ್ನು ವರೆಗೂ ಕೇಳಿಲ್ಲ. (ಕದಾಚಿತ್ ಸತ್ತರೂ ದೊಡ್ಡದಿನ ಸತ್ತು ಪುಣ್ಯಕಟ್ಕೊಂಡ ಎಂದೇ ನಾಲಕು ಆಡಿಕೊಳ್ತಾರೆ.)

ಒಂದು ದಿನದ ಉಪವಾಸಕ್ಕೇ ಏನೇನೂ ಆಗದು. ೨, ೩, ೫, ೭ ದಿನ ೧೦ ದಿನ ಉಪವಾಸ ಇದ್ದರೂ ಸಾಯರು. ಅಷ್ಟು ಶಕ್ತಿ ನಮ್ಮಲ್ಲಿ ಇದೆ. ಅಷ್ಟು ಆಹಾರವನ್ನು ನಮ್ಮ ದೇಹ ಸ್ಟೋರ್ ಮಾಡಿಟ್ಟುಕೊಂಡಿರತ್ತೆ.

ಅನ್ನಗತ ಪ್ರಾಣ ನಿಜ. ಆದರೆ ಅನ್ನವಿದ್ದರೇನೆ ಪ್ರಾಣ ಬದುಕು ಎಂದೇನಿಲ್ಲ. ಅನ್ನವಿಲ್ಲದೆ ಬದುಕುವ ಶಕ್ತಿ ನಮಗೆ ದೇವರು ಕೊಟ್ಟಿದ್ದಾನೆ. ಇಂದು ದೇವರ ಪ್ರೀತಿಕೊಸ್ಕರ ಉವಾಸ ಮಾಡಿದವನಿಗೆ ಎಷ್ಟು ದಿನ ಉಪವಾಸವಿದ್ದರೂ ದೃಢವಾಗಿ ಬದುಕಿನಿಲ್ಲುವ ಶಕ್ತಿ ಕೊಟ್ಟೇ ಕೊಡುತ್ತಾನೆ.

ಇಂದು ತಿಂಗಳಿಗೆ ಕೇವಲ ಎರಡೇ ಉಪವಾಸ. ಅದೆ ನಮ್ಮ ಪೂರ್ವಜರಿಗೆ ತಿಂಗಳಿಗೆ ಏಕಾದಶಿ ಅಲ್ಲದೆ  ಐದಾರು ಉವಾಸಗಳಿರುತ್ತಿದ್ದವು. ಹಿರಿಯರಿಗೆ ಕೇಳಿನೋಡೋಣ.

ಇಂದಿನ ಯುವಕರಿಗೆ ಉಪವಾಸ ವ್ರತಗಳಲ್ಲಿ ಆಸಕ್ತಿ. ಇಪ್ಪತ್ತು ವರ್ಷದ ಕೆಳಗಿನ ಯುವಕರಿಗಿಂತಲೂ ಇಂದಿನ ಯುವಕರು ಉಪವಾಸ, ವ್ರತ, ಪೂಜೆ ಸಂಧ್ಯಸವಂದನೆ, ಜಪ, ಪಾಠ, ಉಪನ್ಯಾಸ ಇವುಗಳಲ್ಲಿ ತುಂಬ ಮುಂದು. ಮುಂದು ಅಷ್ಟೇ ಅಲ್ಲ ವೇಗವೂ ತುಂಬ ಇದೆ.  ನಮ್ಮಿಂದಾಗದಿದ್ರೂ ಅವರಿಗೆ ಪ್ರೋತ್ಸಾಹ ಕೊಟ್ಟು, ಬೆನ್ನೆಲಬು ಆಗಿ ನಿಂತು, ಅನಕೂಲರೂ ಆಗಿ, ಅವರಿಂದಾದರೂ ಮಾಡಿಸೋಣ ಅಲ್ಲವೇ.....

*ಹರಿದಿನದಲಿ ಉಂಡ ನರರಿಗೆ ಘೋರ ನರಕ* ನಾವು ನರಕಕ್ಕೆ ಹೋಗುವದು ನಿಶ್ಚಿತ. ನಮ್ಮೊಟ್ಟಿಗೆ ನಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗುವದು ಬೇಡ. ಇದುವೇ ನನ್ನ ಇಂದಿನ ಕಳಕಳಿಯ ವಿನಂತಿ.

*ಇಂದಿನ ಉಪವಾಸ ನಮ್ಮದೇ.... ಚಾಲೆಂಜ್ ತೆಗೆದುಕೊಳ್ಳೋಣ*

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
ಜೈ ಏಕಾದಶೀ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*