*ದುಡ್ಡೇ ದೊಡ್ಡಪ್ಪನಾ ? ಅಥವಾ ದುಡ್ಡಿಗೂ ದೊಡ್ಡಪ್ಪನಿದ್ದಾನೆಯಾ ?*
*ದುಡ್ಡೇ ದೊಡ್ಡಪ್ಪನಾ ? ಅಥವಾ ದುಡ್ಡಿಗೂ ದೊಡ್ಡಪ್ಪನಿದ್ದಾನೆಯಾ ?*
*ದುಡ್ಡೇ ದೊಡ್ಡಪ್ಪ, ಹಣವಂತನೇ ಗುಣವಂತ* ಇಂದಿನ ಸ್ಥಿತಿಯೂ ಹೀಗೆಯೇ ಇದೆ. "ಒಬ್ಬ ಸನ್ಯಾಸಿಗೆ ಹೊಡೆದವರು ಒಳ್ಳೆಯ ಗುಣವಂತರಾಗುತ್ತಾರೆ. ಊರಿಗೆ ದಂಗೆ ಎಬ್ಬಿಸುವವರ ವಿರುದ್ಧ ಮಾತಾಡಿದವರು ದೋಷಿಗಳು ಆಗುತ್ತಾರೆ. ಈ ಸ್ಥಿತಿಗೆ ಕಾರಣ *ಹಣವಂತನೇ ಗುಣವಂತ.*
*ದುಡ್ಡೇ ದೊಡ್ಡಪ್ಪ*
" ದುಡ್ಡೇ ದೊಡ್ಡಪ್ಪ" ಇದು ನಿಜ. ದುಡ್ಡಿನಿಂದಲೇ ಎಲ್ಲವೂ ಇದೆ. ದುಡ್ಡು ಇದ್ದವ ಗುಣವಂತನ ಮುಖವಾಡ ಧರಿಸಿ, ನೀರು ಚೆಲ್ಲಿದ ಹಾಗೆ ಚೆಲ್ಲುವ ವ್ಯಕ್ತಿಗಳಿಗೂ ಅನುಭವಕ್ಕೆ ಬಂದಿದೆ. ದುಡ್ಡನ್ನು ಯಥೇಚ್ಛವಾಗಿ ಖರ್ಚು ಮಾಡುವವರಿಗೆ ಇಂದು ಪಾಠವೂ ಆಗಿದೆ. ದುಡ್ಡನ್ನು ನೀರಿನಂತೆ ಚೆಲ್ಲ ಬಾರದು ಎಂದು. ದುಡ್ಡು ಉಳಿಸಿಕೊಳ್ಳಬೇಕು ಎನ್ನುವದು ಪೂರ್ಣ ಮನವರಿಕೆ ಆಗಿದೆ.
*ದುಡ್ಡಿಗೂ ದೊಡ್ಡಪನಿದ್ದಾನೆ...*
ಇಷ್ಟು ದಿನ ದುಡ್ಡೇ ದೊಡ್ಡಪ್ಪ ಎಂದು ತಿಳಿದಿದ್ದೆವು. ಆದರೆ ಇಂದು ದುಡ್ಡಿದ್ದರೆ ನಡಿಯುವದಿಲ್ಲ. ದುಡ್ಡಿಗೂ ದೊಡ್ಡಪ್ಪನಾದ ದೇವರು ಧರ್ಮ ಅತ್ಯವಶ್ಯಕ. ದುಡ್ಡಿಗೂ ದೊಡ್ಡಪ್ಪಂದಿರು ಇದ್ದಾರೆ ಎಂದು ಕ್ಷಣ ಕ್ಷಣಕ್ಕೆ ಎಲ್ಲರ ಅನುಭವಕ್ಕೂ ಬರ್ತಾ ಇದೆ.
*ದುಡ್ಡಿಗೂ ದೊಡ್ಡಪ್ಪಂದಿರಿವರು...*
*ಧರ್ಮೇಣ ಜಯತೆ ಲೋಕಾನ್
ಧರ್ಮೇಣ ನಶ್ಯತೇ ರೋಗಾಃ.
ಧರ್ಮೇಣ ಚ ನಿರ್ಮಲಾ ಕೀರ್ತೀಃ
ಅತೋ ಧರ್ಮ ಪ್ರಶಸ್ಯತೇ* ಎಂದು.
ಧರ್ಮದಿಂದಲೇ ಸ್ವರ್ಗವೇ ಮೊದಲಾದ ಮೇಲಿನ ಲೋಕಗಳನ್ನು ಗೆಲ್ಲುವನಾಗುತ್ತಾನೆ. ಅತ್ಯತ್ತಮ ಸಂತಾನಗಳು ಧರ್ಮದಿಂದಲೇ. ಧರ್ಮದಿಂದಲೇ ಎಲ್ಲವಿಧದ ರೋಗಗಳೂ ಪರಿಹರಿಯುತ್ತವೆ. ಇಹ ಪರದಲ್ಲಿ ಪರಿಶುದ್ಧ ಕೀರ್ತಿ ಧರ್ಮದಿಂದಲೇ. ಆದ್ದರಿಂದ ಧರ್ಮವೇ ಶ್ರೇಷ್ಠ. ಧರ್ಮವೇ ದೊಡ್ಡಪ್ಪ.
ಧನ ತುಂಬ ಮುಖ್ಯ. ಧನವಿದ್ದರೆ ಎಲ್ಲ. ಪಡೆದ ಎಲ್ಲ ಧನ ಸಾರ್ಥಕವಾಗಬೇಕಾದರೆ ಧರ್ಮ ಅತ್ಯವಷ್ಯಕ. ಧನದಿಂದ ಸೌಖ್ಯ ಶಾಂತಿ ನೆಮ್ಮದಿ ಸಮೃದ್ಧಿ ಸಿಗಬೇಕಾದರೆ ಧರ್ಮ ಜೊತೆಗಿರಬೇಕು. ರೋಗ ರುಜಿನಗಳಿಗೆ ಹಣ ನೀರಿನಂತೆ ಖರ್ಚಾಗಬಾರದು ಆಗಿದ್ದರೆ ಧರ್ಮವಿರಲೇ ಬೇಕು.
ಕೇವಲ ಧನ ದಾನವರನ್ನಾಗಿ ಮಾಡುತ್ತದೆ. ದಾನವ ದೈತ್ಯರನ್ನೇ ಮೇಲೇರಿಸುತ್ತದೆ. ಅವರ ಉನ್ನತಿಯನ್ನು ಕಂಡು ಪ್ರಭಾವಿತ ಮಾನವ ಆ ಧನದ ಸುತ್ತೇ ಸಾಗುವ. ಸ್ವಲ್ಪ ಪಡೆಯುತ್ತಾನೆ. ಆದರೆ ತೃಪ್ತಿ ಮಾತ್ರ ಯಾರೂ ಪಡೆಯಲಾರರು. ಅಂತೆಯೇ ಪುರಂದರ ದಾಸರ ಮುಂದಿನ ಸಾಲು *ಹಣವಂತ ಇವ ಹೆಣಕೆ ಸರಿಯೆ* ಎಂದು.
*ಧನವಂತನ ಕೀರ್ತಿ ಪ್ರತಿಷ್ಠೆ ಧನವಿರುವವರೆಗೆ ಮಾತ್ರ, ಧರ್ಮವಂತನ ಕೀರ್ತಿ ಇದ್ದಾಗಲೂ, ಸತ್ತಮೇಲೆಯೂ, ಯುಗಯುಗಗಳು ಉರಳಿದರೂ ಕೀರ್ತಿ ಅಜರಾಮರ. "ಆಪತ್ತಿಗೆ ಇರುವದೇ ಧರ್ಮ."*
ಧರ್ಮವಂತರು...
ಪಾಂಡವರು, ಸುಧಾಮ, ಶಬರಿ, ರಾಮ, ಲಕ್ಷ್ಮಣ, ಹೀಗೆ ಇತಿಹಾಸದಲ್ಲಿ ಅನೇಕರು ಕಾಣುತ್ತಾರೆ. ಶ್ರೀಮಟ್ಟೀಕಾಕೃತ್ಪಾದರು, ರಾಯರು, ಯಾದವಾರ್ಯರು, ಪುರಂದರ ವಿಜಯದಾಸರುಗಳು, ನಮ್ಮ ಪರಮಗುರುಗಳ ವರೆಗೆ ನೋಡುತ್ತೇವೆ ಧರ್ಮವಂತರ ಕೀರ್ತಿ ಶಾಶ್ವತ ಎಂದು. ಧರ್ಮವಂತರನ್ನು ಅವಲಂಬಿಸಿದವರ ಕೀರ್ತಿಯೂ ಬಹುಕಾಲೀನ ಎನ್ನುವದನ್ನೂ ಕಾಣುತ್ತೇವೆ. ಇದಕ್ಕೆ ವಿಪರೀತ ರಾವಣ ಕುಂಭಕರ್ಣ ದುರ್ಯೋಧನಾದಿಗಳ ವಿನಾಶ ಅಪಕೀರ್ತಿ ಪರಾಜಯ ಕಾಣುತ್ತೇವೆ.
*ಧನ ಅಪೇಕ್ಷಿತ ಪದಾರ್ಥಗಳನ್ನು ಒದಗಿಸಲು ಮಹಾಸಮರ್ಥ. ಕೀರ್ತಿ ಜಯ ತೃಪ್ತಿಗಳನ್ನು ಒದಗಿಸಲಾರದು*
ಆದ್ದರಿಂದ ಧರ್ಮವೇ ದೊಡ್ಡಪ್ಪ. ಧರ್ಮ ಪರಮ ಶ್ರೇಷ್ಠ. ಧನ ಧರ್ಮವಿದ್ದರೆ ಮಾತ್ರ ದೊರೆಯುತ್ತದೆ. ರಾವಣಾದಿಗಳೂ ಕಿಂಚಿತ್ ಧರ್ಮದಿಂದಲೇ ಹಣವಂತರಾಗಿರುವದು.
ಧರ್ಮದಿಂದ ತೃಪ್ತಿ,
ಧರ್ಮದಿಂದ ಧನ,
ಧರ್ಮದಿಂದ ಜ್ನಾನ.
ಧರ್ಮದಿಂದ ಕೀರ್ತಿ.
ಧರ್ಮದಿಂದಲೇ ತೋಷ.
ಧರ್ಮದಿಂದಲೇ ದೇವರಿಗೆ ಸಂತೃಪ್ತಿ.
ದುಡ್ಡೇ ದೊಡ್ಡಪನು ಅಲ್ಲ. ದುಡ್ಡಿಗೂ ದೊಡ್ಡಪ್ಪನೊಬ್ಬನು ಇದ್ದಾನೆ ಎನ್ನುವದು ಕ್ಷಕ್ಷಣಕ್ಕೂ ದೃಢವಾಗುತ್ತದೆ.
*✍🏼✍🏼ನ್ಯಾಸ....*
ಗೋಪಾಲ ದಾಸ
ವಿಜಯಾಶ್ರಮ, ಸಿರವಾರ.
Comments