*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು*
*ಮಹಿಳಾ ದಿನಾಚರಣೆಯಂದು, ನಮ್ಮ ಮಹಿಳೆಯರೆಲ್ಲರಿಗೂ ಶುಭಾಷಯಗಳು*
ಪುರುಷ ಸಾಮಾಜವಾಗಿದ್ದರೂ, ಅತ್ಯುನ್ನತ ಸ್ಥಾನ ಪಡೆದದ್ದು ಮಹಿಳೆ. ಇದು ಇಂದಿನದು ಅಲ್ಲ ಇತಿಹಾಸ ಕಾಲದಿಂದಲೂ ನೋಡುತ್ತಿರುವದು. ರಾಮಚಂದ್ರ ಕೃಷ್ಣ ಪಾಂಡವರು ಮೊದಲಾದ ಮಹನೀಯರುಗಳು ರಾಜ್ಯವಾಳುತ್ತಿದ್ದರೂ ಸೀತೆ ಸತ್ಯಾ ದ್ರೌಪದಿ ಇವರುಗಳಿಗುರುವ ಸ್ಥಾನ ತುಂಬ ವಿಶಿಷ್ಟ ಸ್ಥಾನವೇ ಇತ್ತು. ಸ್ತ್ರೀ ತಾನು ಉನ್ನತಿಗೆ ಏರಲು ಪಟ್ಟ ಸಾಹಸ ಅಷ್ಟಿಷ್ಟಲ್ಲ. ಉನ್ನತಕ್ಕೆರುವ ಅಥವಾ, ತನ್ನವರನ್ನು ಉನ್ನತಕ್ಕೆ ಏರಿಸುವ ಏನೆಲ್ಲ ಗುಣಗಳಿವೆ ಆ ಎಲ್ಲ ಗುಣಗಳು ಸಹಜವಾಗಿಯೇ ಮಹಿಳೆಯಲ್ಲಿ ಹುಟ್ಟಿನಿಂದಲೇ ಅಡಗಿ ಕುಳಿತಿರುತ್ತವೆ.
*ಸಂಯಮ, ತಾಳ್ಮೆ, ಕ್ಷಮಾ, ಶೀಲ, ತ್ಯಾಗ, ಸೌಜನ್ಯ, ತಿಳುವಳಿಕೆ, ಕಷ್ಟ ಸಹಿಷ್ಣುತಾ, ಪರದುಃಖದುಃಖಿತಾ, ಸ್ನೇಹ, ಪ್ರೀತಿ, ಮಮತಾ, ನಿರ್ವ್ಯಾಜ್ಯತಾ, ಪಡೆದದ್ದರಲ್ಲೆ ಸುಖ ಕಾಣುವ ಕಲೆ, ಇರುವದರಲ್ಲಿಯೇ ಹೊಂದಿಸುವ ಸರಿಪಡಿಸುವ ಕೌಶಲ, ನಿರಂತರ ಪರಿಶ್ರಮ. ಎಷ್ಟೇ ದುಃಖವಿರಲಿ ನಗುವಿನ ಮುಖ ಹೊತ್ತಿರುವದು. ತನ್ನವರು ಸಮೃದ್ಧವಾಗಿರಲಿ ಎಂಬ ಔದಾರ್ಯ, ಧಾರ್ಮಿಕತಾ, ನಿರಂತರ ನಾಮಸ್ಮರಣೆ, ಕೋಶದ ಆಯವ್ಯದ ಕಡೆ ಸೂಕ್ಷ್ಮ ಗಮನ, ಮಕ್ಕಳ ಪಾಲನೆ ಪೋಷಣೆ ರಕ್ಷಣೆ, ಮನೆಯನ್ನು ನೋಡಿಕೊಳ್ಳುವ ಕಲೆ, ಮನೆಯ ಪರಿಪೂರ್ಣ ಜವಾಬ್ದಾರಿ, ಅತ್ತೆ ಮಾವ ಪತಿ ಮಕ್ಕಳ, ತಂದೆ, ತಾಯಿ, ಅಣ್ಣ ತಮ್ಮ ನಾದನಿ ಅತ್ತಿಗೆ ಭಾವ ಮೈದುನ ಮೊದಲಾದ ಬಂಧುಗಳ ನಿರ್ವಹಣೆ* ಮೊದಲಾದ ನೂರಾರು ಗುಣಗಳ ಗಣಿ. ಒಂದೊಂದು ಗುಣವೂ ಮಹೋನ್ನತಿಯನ್ನು ತಂದು ಕೊಡುವಂತಹ ಗುಣಗಳೇ.
ಮೇಲೆ ಹೇಳಿದ ಹೇಳಿದ ನೂರಾರು ಗುಣಗಳಿಗೂ ಆಶ್ರಯಳಾಗುವ ದೊಡ್ಡ ಗಣಿ ನಮ್ಮ ಭಾರತದ ಮಹಿಳೆ. ಈ ಭಾಗ್ಯ ಇನ್ಯಾವ ಮಹಿಳಿಗೆ ಸಿಗದು.
ಅನಂತಾನಂತ ಗುಣವಂತರಾದ ಸತ್ಯಾಭಾಮಾ, ರುಕ್ಮಿಣೀ, ಸೀತೆ. ಅನಂತ ಗುಣವಂತಳಾದ ದ್ರೌಪದಿ. ಕೋಟಿ ಕೋಟಿ ಗುಣವಂತರಾದ ಅಹಲ್ಯೆ, ಅರುಂಧತೀ, ಶಚೀ, ತಾರಾ, ಮಂಡೋದರಿ, ಕುಂತೀ, ದಮಯಂತಿ, ದೇವಕೀ, ಯಶೋದಾ ಇತ್ಯಾದಿಯಾದ ಮಹಿಳಾ ಮಣಿಗಳು ಇಂದಿನ ಮಹಿಳೆಯರಿಗೆ ಆದರ್ಶರು. ಈ ಎಲ್ಲ ಮಹನೀಯರುಗಳು ಹಾಕಿದ ಬುನಾದಿ, ನಡೆದ ಮಾರ್ಗ, ಸುಭದ್ರ ಮಂಗಳಪ್ರದವೂ.
ಒಬ್ಬೊಬ್ಬ ಮಹಿಳೆಯರ ಕಥೆಯೂ ಸ್ವಾರಸ್ಯಕರ. ಆದರ್ಶನೀಯ. ಹಿಂದಿನ ಕಾಲದ ಯಾವ ಮಹಿಳೆಯೂ ಹಣ ಧನ ಪದವಿ ಇವುಗಳಿಂದ ಮಾನ್ಯಳು ಎಂದಾಗಲೇ ಇಲ್ಲ, *ಅವರೆಲ್ಲರ ಮಾನ್ಯತೆ ಗುಣವಂತಿಕೆಯಲ್ಲಿಯೇ ಅಡಗಿತ್ತು.* ಆ ಗುಣವಂತಿಕೆಯಿಂದಲೇ ಸಂಪೂರ್ಣ ಸಾಮ್ರಾಜ್ಯವನ್ನೇ ತಮ್ಮಡಿಯಲ್ಲಿ ಇಟ್ಟುಕೊಂಡಿದ್ದರು.
ಹಣಘಳಿಸಲು ಮುಂದಾಗಲಿಲ್ಲ. ಆಯವ್ಯಯದ ಎಲ್ಲ ವ್ಯವಸ್ಥೆಯೂ ತಮ್ಮ ಬಳಿ ಇಟ್ಟು ಕೊಂಡಿದ್ದಳು ದ್ರೌಪದಿ, ಸೀತೆ. ಹದಿನಾಲಕು ಹಾಗೂ ಹನ್ನೆರಡು ವರ್ಷದ ಘೋರ ವನವಾಸದಲ್ಲಿಯೂ ಧರ್ಮದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಪತಿಗೆ ತಿರುಗಿ ಮನಸ್ಸಿನಲ್ಲಿಯೂ ನಿಂದಿಸಲಿಲ್ಲ. ಪತಿಯರಿಗೆ ಆಸರೆಯಾಗಿ ನಿಂತರು. ಅಂತೆಯೇ ವನದಲ್ಲಿಯೂ ಮಹಾರಾಣಿಯರಂತೆಯೇ ಮರೆದರು ಸೀತೆ ದ್ರೌಪದಿಯರು.
ಕಷ್ಟಗಳ ಸುರಿಮಳೆ ಅಂದರೆ ತಪ್ಪಾಗಬಹುದು, ಕಷ್ಟಗಳ ಅಲೆಗಳೇ ದಮಯಂತಿ ಕುಂತಿಯರಿಗೆ ಬೆನ್ನಟ್ಟಿದವು. ಇಷ್ಟಾದರೂ ಕೊನೆಗೆ ಪ್ರಾರ್ಥಿಸಿದಳು ಕುಂತಿ "ಎನಗೆ ಕಷ್ಟಗಳನ್ನೇ ಕೊಡು" ಎಂದು. ಕಷ್ಟಗಳಿದ್ದಲ್ಲಿ ನಿನ್ನ ನೆನಪು, ನಿನ್ನ ನೆನಪಾದಲ್ಲಿ ನಿನ್ನ ಸಾಕ್ಷಾತ್ಕಾರ. ನಿನ್ನ ಸಾಕ್ಷಾತ್ಕಾರ ಇರುವಲ್ಲಿ ಕಷ್ಟಗಳೇ ಇರದು. ಇದರಮೇಲೆ ಇನ್ನೇನು ಬೇಕು... ಇದು ಕುಂತಿಯ ಮಾರ್ಗದರ್ಶನ. ಸುಖ ಬೇಡ್ತೇವೆ ಎಂದರೆ *ದೇವರನ್ನು ಮರೆಯುವ ಉದ್ದೇಶ್ಯವೇ ಇದೆ* ಎಂದರ್ಥ.
ಅಂತೆಯೇ ನಮ್ಮ ಸಮಾಜದಲ್ಲಿ ಇತಿಹಾಸ ಮಹಾಭಾರತ ಭಾಗವತ ರಾಮಾಯಣ ಮೊದಲಾದ ಪುರಾಣಗಳನ್ನು ಉಪನ್ಯಾಸ ರೂಪದಲ್ಲಿ ಹೇಳುವ ಸಂಪ್ರದಾಯ ಬಂತು. ಈ ಕಥೆಗಳನ್ನು ಕೇಳಿಯೇ ನಮ್ಮ ಮಹಿಳೆಯರ ಪ್ರಗತಿ ಅತ್ಯಂತ ವೇದಗದಿಂದ ಸಾಗಲಿ, ಸ್ಪಷ್ಟಮಾರ್ಗ ದೊರೆತು ಬರಲಿ ಎಂದು. ಇತಿಹಾಸ ಪುಣಾಗಳಲಿ ಬಂದ ಎಲ್ಲ ಮಹಿಳೆಯರೂ ಸಕಾರಾತ್ಮಕ ವಿಚಾರಗಳ ಮೂರ್ತಸ್ವರೂಪರು ಆಗಿದ್ದರು.
ಇಪ್ಪತ್ತನೇಯ ಶತಮಾನದಲ್ಲಿ ಅತ್ಯಂತ ವೇಗದಿಂದ ಪ್ರಗತಿಪಥದಲ್ಲಿ ಸಾಗುತ್ತಿರುವವರು ಮಹಿಳೆಯರೇ ಎಂದರೆ ತಪ್ಪಾಗದು. ಮನಸ್ಸು ಮಾಡಿದರೆ ಅಸಾಧ್ಯ ಎಂಬುವದು ಯಾವದಿಲ್ಲ. ಸಾಧಿಸುವ ಛಲ ತುಂಬ. ಸಾಧಿಸಿ ತೀರುತ್ತಾರೆಯೂ ಸಹ.
*ಎಂಟು ಸೀರಿಯಲ್ ಜೊತೆಗೆ ಇತಿಹಾಸ ಪುರಾಣವೂ ಒಂದಿರಲಿ...*
ತಲೆ ಕೆಡೆಸುವ, ನಕಾರಾತ್ಮಕಭಾವ ಬೆಳಿಸುವ ಇಂದಿನ ಧಾರಾವಾಹಿಗಳ ಜೊತೆಗೆ ಪ್ರತಿನಿತ್ಯ ಅರ್ಧಗಂಟೆ ಮಹಾಭಾರತ ಭಾಗವತ ಮೊದಲಾದ ಉಪನ್ಯಾಸದ ಶ್ರವಣದಲ್ಲಿಯೂ ಒಂದು ಗಂಟೆ ತೊಡಗಿಸಿಕೊಂಡರೂ ಎಂದಾದರೆ ಮನೆಯ ವಾತಾವರಣವೇ ಧಾರ್ಮಿಕವಾಗಿ ಬೆಳೆದು ಬಿಡುತ್ತದೆ.
*ಶಕ್ತಿ ಸಾಮರ್ಥಗಳು ತುಂಬ ಇವೆ. ಉಪಯೋಗಕ್ಕೆ ಬಂದರೆ .....*
ಮಾವ, ಪತಿ, ಮಗ, ಇವರಿಂದ ಸಂಧ್ಯಾವಂದನ ಪೂಜೆ ಮಾಡಿಸುವ ಸಾಮರ್ಥ್ಯ ಇಂದಿನ ಮಹಿಳೆಗೆ ಇದೆ. ಹಣ ಸಂಪಾದಿಸಿ ಮನೆ ನಡೆಸುವ ಶಕ್ತಿ ಇದೆ. ಇರುವ ಹಣದಲ್ಲಿ ಹೊಂದಿಸುವ ಕೌಶಲವೂ ಇದೆ. ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುವ ಧೈರ್ಯ ಇದೆ. ನಿಜವಾಗಿ ಹೇಳುವದಾದರೆ *ನಿತ್ಯವೂ ಮಹಿಳಾ ದಿನಾಚರಣೆ ಆಗಲುಬೇಕಾದ ಎಲ್ಲ ಕೌಶಲಗಳೂ ಇವೆ..*
ಗುಣವಂತ ಮಹಿಳೆಯರು ಇರುವ ಅಂದಿನ ಕಾಲಗಳು ವೈಭವದಿಂದ ಕೂಡಿದ್ದವು. ಇಂದೂ ಗುಣವಂತರೇ ಆದವರು ನಮ್ಮ ಹಿಂದು ಮುಂದು ಇರುವದರಿಂದಲೇ ಆ ವೈಭವ ಇಂದಿಗೂ ಇದೆ. ಈ ಗುಣವಂತಿಕೆ ಇನ್ನೂ ಮುಂದು ಹೋದರೇ ಮಹೋನ್ನತ ವೈಭವ ನಮ್ಮೆಲ್ಲರದೂ ಆಗುತ್ತದೆ. *ನಮ್ಮ ಸುತ್ತಮುತ್ತಲಿರುವ ಎಲ್ಲ ಮಹಿಳೆಯರಲ್ಲಿ ಇರುವ ನಾನಾವಿಧವಾದ ಪ್ರತ್ಯೇಕ ಪ್ರತ್ಯೇಕವಾದ ನೂರಾರು ಗುಣಗಳನ್ನು ಜಗತ್ತು ಕಾಣಬೇಕು.*
ಒಂದೇ ಗುಣ, ಒಂದು ಕಡೆ ಮೆಚ್ಚಿದರೂ ಸಾಕು ಗುಣವಂತಿಕೆಯ ಛಾಪು ಎಲ್ಲಡೆ ಮೂಡುವದು ನಿಶ್ಚಿತ. ಗುಣಗಳನ್ನು ಕಂಡು ಮೆಚ್ಚಿದಷ್ಟು ಗುಣಗಳ ಶಕ್ತಿ ಪ್ರಜ್ವಲಿಸುತ್ತದೆ. ಗುಣಗಳು ಪ್ರಜ್ವಲಿಸಿದವೋ ಸಮಾಜದಲ್ಲಿ ಗುಣವಂತಿಕೆ ತಾನಾಗಿಯೇ ಪಸರಿಸುತ್ತದೆ. ಇದು ಜಗತ್ತಿನ ಸಾಮಾನ್ಯ ನಿಯಮ. ಗುಣಗಳನ್ನೇ ಕಾಣುವದು ದೊಡ್ಡ ಸವಾಲು challenge ನಮ್ಮೆದುರಿಗೆ ಇದೆ.
ಈ ಪುಟ್ಟ ಲೇಖನ ನನ್ನ ತಾಯಿ, ಗುರುಮಾತೆ, ನನ್ನ ತಂಗಿ, ನನ್ನ (ಅಕ್ಕರೆಯ ಶ್ರಿಮತಿ ಮಹಾಲಕ್ಷ್ಮಿ) ಮಡದಿ, ಸೊಸೆಯರಾದ ಸನ್ನಿಧಿ ಸಮೃದ್ಧಿ, ಆತ್ಮೀರಾದ ಅಕ್ಕ ತಂಗಿಯರಿಗೆ, ಸ್ನೇಹಿತೆಯರಿಗೆ, ಹಾಗೂ ಆತ್ಮೀಯ ಎಲ್ಲ ಮಹಿಳೆಯರಿಗೆ ಸಮರ್ಪಿಸುತ್ತ ಒಂದು ಶುಭ ಹಾರೈಕೆಗಳನ್ನು ಅರ್ಪಿಸುವೆ.
ಮಹಿಳೆ ಒಂದು ಮಹಾಶಕ್ತಿ..
ಮಹಿಳೆ ಒಂದು ಮಹಾಯುಕ್ತಿ..
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
ಮಹೋನ್ನತ .ಓದಿ ಬಹಳ ಸಂತೋಷವಾಯಿತು.__ಸುಮತಿ