*ಕಸ... ರಸ*

*ಕಸ... ರಸ*

ಕಸ ಮತ್ತು ರಸಗಳು ಕೂಡಿ ಕೂಡಿ ಇರುವಂತಹವುಗಳು. ರಸವಿದ್ದಲ್ಲಿ ಕಸವಿದೆ, ಕಸವಿರುವಲ್ಲಿ ರಸವಿದೆ. ಕಸ ಬಳಿಸಿದಾಗಲೇ ರಸ. ರಸ ಬಳಿಸಿ ಆದಮೇಲೆಯೆ ಕಸ. ಹೀಗೆ ಕಸ ರಸಗಳು ಒಂದಕ್ಕೆ ಒಂದು ಪೂರಕ. 

*ಕೈ ಕೆಸರಾದರೆ ಬಾಯಿ ಮೊಸರು.*

 ಕನ್ನಡ ಪ್ರಸಿದ್ಧ ನಾಣ್ಣುಡಿ. ಕೈ ಕೆಸರಾಗಬೇಕು ಎಂದರೆ ಕಸ ಇರಬೇಕು. ಕಸವಿದ್ದಲ್ಲೇ ಕೆಸರು. ರಸ ಪಡೆಯಬೇಕು ಎಂದಾದರೆ ಕಸದಲ್ಲಿ ಶ್ರಮಿಸಿ, ಕೆಸರಿನಲ್ಲಿ ದುಡಿದಾಗ ಮುಂದೆ ಬಾಯಿಗೆ ಮೊಸರೆಂಬ ರಸ ಸಿದ್ಧ. 

*ತುಂಬ ವಿಚಿತ್ರ ಕೆಲವೊಮ್ಮೆ ರಸಕಾರಣರು ಕಸವಾಗಿಬಿಡುತ್ತಾರೆ..*

ಕಷ್ಡದ ದಿನಗಳೆ ಸುನಾಮಿಯಂತೆ ಅಪ್ಪಳಿಸುತ್ತಿರುವಾಗ, ರಸ ತುಂಬ ದೂರದ ಮಾತು. ಕನಸ್ಸಿನ ಕುದುರೆ, ಅಥವಾ ಹಗಲ್ಗನಸು  ಆಗಿರುತ್ತದೆ ರಸ. ಈ ಥರದ ಅವಸ್ಥೇಯಲ್ಲಿ ಮುಣುಗಿದಾಗ, ಕಸದಲ್ಲೇ ನಿಂತು ಕ್ಷಣ ಕ್ಷಣಕ್ಕೆ ಬೆಂಬಲವಾಗಿ ಇದ್ದು, ಉತ್ಸಾಹ ತುಂಬಿ, ಭಯ ಹತಾಶೆಗಳನ್ನು ತೊಡಗಿಸಿ, ಕಾನ್ಫಿಡೆಂಟ್ ತುಂಬಿ, ಅನೇಕ ಉಪಾಯಗಳನ್ನು ತೋರಿ, ವಿಘ್ನಗಳನ್ನು ಪರಿಹರಿಸಿ, ದೈವ ಬಲವನ್ನು ಹೆಚ್ಚಿಸಿ, *ನಮಗೆ ರಸ ಸಿಗಲು, ತಮ್ಮ ಕೈ ಕೆಸರು ಮಾಡಿಕೊಂಡಿರುತ್ತಾರೆ ಕೆಲವರು.* ಆದರೆ ಅಪರೂಪದ, ತುಂಬ ದಿನಗಳಿಂದ ತಡಕಾಡಿದ  ರಸ ನಮಗೆ ಸಿಕ್ಕ ಕ್ಷಣಕ್ಕೆ,  ಆ ಕಸಗಳಲ್ಲಿ ಕೈ ಆಡಿಸಿದ ಎಲ್ಲ ಪರಮ ಹಿತೈಷಿಗಳಾದ, ದೇವರು, ವಾಯು ದೇವರು, ದೇವತೆಗಳು, ಗುರುಗಳು, ತಂದೆ ತಾಯಿಗಳು, ಹಿತೈಷಿ, ಮಿತ್ರ, ಸ್ನೇಹಿತ ಮೊದಲು ಮಾಡಿ ಎಲ್ಲರೂ ರಸಸಿಕ್ಕವನಿಗೆ ಕಸವೇ ಆಗಿಬಿಟ್ಟಿರುತ್ತಾರೆ. ಇದುವೇ ತುಂಬ ವಿಚಿತ್ರ. 

ಇನ್ನೂ ವಿಚಿತ್ರ ಎಂದರೆ "ದೊರೆತ ರಸ ಬಹಳದಿನ ಉಳಿಯದು, ಉಳಿಸಿಕೊಳ್ಳಲು ಮತ್ತೆ ಕಸದ ಅನಿವಾರ್ಯತೆ ಬಂದೆ ಬರುತ್ತದೆ, ಬರಬೇಕು ತಾನೆ. ಇದುವೇ ಪ್ರಕೃತಿಯ ನಿಯಮ."

*ಹಾಲಿಗೋಸ್ಕರ ಹುಲ್ಲು ಬೇಕು... ಉಂಡನಂತರ ಎಲ್ಲವೂ ಕಸವೇ*

ಹಾಲಿಗೋಸ್ಕರ ಹುಲ್ಲು ಹುಡುಕುತ್ತೇವೆ, ನಮ್ಮ ಆಹಾರಕ್ಕಾಗಿ ಪಲ್ಯೆ ಹಣ್ಣು ಕಸದಲ್ಲೇ ಹುಡುಕಿ  ತರುತ್ತೇವೆ. ರಸ ಸಿಕ್ಕು ಹೊಟ್ಟೆ ತುಂಬಿದ ಕ್ಷಣದಲ್ಲಿ ಉಳಿದ ಹುಲ್ಲು ಪಲ್ಯೆ ಹಣ್ಣು  ತಿಪ್ಪೆಗೆ ಎಸೆಯುತ್ತೆವೆ. ಆದರೆ ಆ ತಿಪ್ಪೆಯೇ ಮುಂದೆ ಗೊಬ್ಬರವಾಗಿ ಅಕ್ಕಿ ಬೇಳೆ ಗೋಧಿ ಎಂಬ ಮಹಾರಸ ತುಂಬಿ ತುಳುಕಿ ಬರಲು ಕಾರಣವಾಗುತ್ತದೆ ಎಂಬ ಎಚ್ಚರ ಇರಬೇಕು ಅಷ್ಟೇ...

ಆ ಕಸ ಗೊಬ್ಬರ ಇಲ್ಲದಿದ್ದರೂ ಇವತ್ತು ನಾವು ರಸವನ್ನು ಪಡೆಯುತ್ತೇವೆ ಎಂದರೆ, ನಿಜ... ಆದರೆ ಹಾಗೆ ಪಡೆದ ರಸರೂಪದ ಅಕ್ಕಿ, ಬೇಳೆ, ತೊಪ್ಪಲು, ಪಲ್ಯೆ, ಹಣ್ಣು ಮುಂತಾದ ಯಾವದರಲ್ಲೂ ನೈಜ ರಸ ಕಳಕೊಂಡ ನೀರಸ ಪದಾರ್ಥಗಳೇ ಪಡೆದದ್ದು.

ಹಾಗೆಯೇ .....
ರಸ ಪಡೆಯಲು ಪುಣ್ಯವೇ ಇಲ್ಲ. ಇದರಮೇಲೆ ವಿಘ್ನಗಳ ಸರಮಾಲೆ. ಎಲ್ಲವನ್ನೂ ಮೆಟ್ಟಿನಿಂತು ನಾನೇ ಪಡೆಯುವೇ  ಎಂದರೆ ಕೆಟ್ಟ ಆಲಸಿ. ಕಸದಲ್ಲಿ ಕೈಆಡಿಸಿ ಕೆಸರು ಮಾಡಿಕೊಳ್ಳಲು ಹೇಸಿಗೆ. ಇವೆಲ್ಲದರ ಮೇಲೆ ಹತಾಶೆಯ ಅಲೆಗಳು.  ಅಂತಹ ಪ್ರಸಂಗದಲ್ಲಿ ನಮ್ಮ ಜೊತೆಗೆ ಬೆನ್ನೆಲಬು ಆಗಿ  ಇದ್ದು, ಪುಣ್ಯಕೊಟ್ಟು,  ವಿಘ್ನಕಳೆದು, ಪರಿಶ್ರಮಿಸಿ, ಹತಾಶೆಗಳನ್ನು ಓಡಿಸಿ, ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿ, ರಸ ಪಡೆಯುವಲ್ಲಿ ಯಶಸ್ವಿಯನ್ನಾಗಿಸಿದ, ಪರಮಹಿತೈಷಿಗಳಾದ ದೇವರು... ವಾಯುದೇವರು... ಗುರುಗಳು... ತಂದೆ ತಾಯಿಗಳು... ಮಿತ್ರ ಸಖ ಸ್ನೇಹಿತರುಗಳು ಇವರೆಲ್ಲರೂ ರಸ ಪಡೆಯಲು ಕಾರಣ. ಅವರನ್ನೇ ಮರೆತರೇ.....

ಈ ಮಹಾನ್ ರಸಕ್ಕೆ ಕಾರಣರಾದವರುಗಳ ಅನಿವಾರ್ಯತೆ ಇಲ್ಕದೇ ಮುಂದೆ ನಾವು ರಸವನ್ನು ಪಡೆಯುತ್ತೇವೆ ಎಂದರೆ, ಖಂಡಿತ ಪಡೆಯಬಹುದು. ಆದರೆ ಇಂದು ಕಸವಿಲ್ಲದ, ಅಂತೆಯೇ ನೀರಸವಾದ ಹಣ್ಣು ಧಾನ್ಯ ಪಡೆಯುವಂತೆ ಪುಣ್ಯವಿಲ್ಲದ, ವಿಘ್ನಗಳೇ ಭೂಯಿಷ್ಠವಾದ ರಸಪಡೆಯುವದು ನಿಶ್ಚಿತ.

ಆ ಕಾರಣದಿಂದ ರಸವನ್ನೋ ರಸ ಕಾರಣವಾದ ಕಸವನ್ನೋ ಎಂದಿಗೂ ನಿರ್ಲಕ್ಷ್ಯ ಮಾಡುವದು ಬೇಡ. ಬೆಂಬಲ ಪಡೆಯದೇ ಇರುವದಂತೂ ಸರ್ವಥಾ ಬೇಡ. *ಆಪತ್ತಿಗೊದಗುವದು ನಮ್ಮ ಈ ರಸ ಕಾರಣವಾದ,  ಕಸವೆಂಬ ಮುದ್ದು ಅರಗಿಣಿಗಳೆ* ಎಂದು ದೃಢವಾಗಿ ನಂಬಿ ಇರೋಣ.

*✍🏽✍🏽✍🏽ನ್ಯಾಸ.*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*