*ಈ ದುರಿತಗಳ ನಿವಾರಿಸುವರಾರೋ.....*
*ಈ ದುರಿತಗಳ ನಿವಾರಿಸುವರಾರೋ.....*
ದಾಸಶ್ರೇಷ್ಠರಾದ ಜಗನ್ನಾಥ ದಾಸರು ಯತಿಪುಂಗವರಾದ *ಶ್ರೀಶ್ರೀವಾದಿರಾಜರನ್ನು* ಕೊಂಡಾಡುವಾಗ "ವಾದಿರಾಜ ಗುರು ನೀ ದಯ ಮಾಡದೇ ಈ ದುರಿತಗಳ ನಿವಾರಿರಾರೋ" ಎಂದು ಮನಬಿಚ್ಚಿ ಭಕ್ತಿ ಇಂದ ಸ್ತುತಿಸುತ್ತಾರೆ.
*ಶ್ರೀವಾದಿರಾಜ ಗುರು ನೀ ದಯಮಾಡದೇ..*
ದುರಿತಗಳು ಸಾವಿರಾರು. ಸಾವಿರಾರು ತಹದ್ದು. ಊಟ ನಿದ್ರೆ ಇಂದಾರಂಭಿಸಿ ಎಲ್ಲ ವೈಭವಗಳಿಗೂ ಮೊದಲು ಅಡ್ಡಬರುವವು ದುರಿತಗಳು. ಅಂತೆಯೇ ಅಪೇಕ್ಷೆಪಟ್ಟಿದ್ದೆಲ್ಲ ತಿನ್ನಲು ಆಗಲ್ಲ. ದೇವರ ನೈವೆದ್ಯವನ್ನೇ ತಿನ್ನಲು ಆಗುವದೇ ಇಲ್ಲ. ಸಂತೃಪ್ತಿಯ ನಿದ್ರೆಕಾಣದೆ ಇರುವ ಜನರೇ ಎಲ್ಕರು. ಇದೆಲ್ಲದಕ್ಕೂ ಮೂಲ ದುರಿತಗಳು.
*ದುರಿತದೂರರೇ ದುರಿತಗಳನ್ನು ಪರಿಹರಿಸಲು ಸಮರ್ಥರು*
ಶ್ರೀವಾದಿರಾಜರಿಗೆ ದುರಿಗಳು ತುಂಬ ಕಡಿಮೆ. ಅಂತೆಯೇ ನೂರಿಪ್ಪತ್ತು ವರ್ಷಗಳ ಸಂಪೂರ್ಣ ಆಯುಷ್ಯ ಒದಗಿಬಂತು. ಸಂಪೂರ್ಣ ಸುದೃಢ ಆರೋಗ್ಯವೂ ಲಭಿಸಿತ್ತು. ಉಸಿರುವವರೆಗೂ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ, ಮಧ್ವವಾಙ್ಮಯದ ಸಿದ್ಧಾಂತದ ನಿರಂತರ ಸೇವಾ ಸೌಭಾಗ್ಯವೂ ಪೂರ್ಣ ಒದಗಿಬಂತು. (ವೃಂದಾವನಪ್ರವೇಶದ ಮತರೂ ಕೋಟಿಕೋಟಿ ಜನರಿಗೆ ಈ ಸೇವಾ ಸೌಭಾಗ್ಯ ನಿಮ್ಮ ಅನುಗ್ರಹದಿಂದಲೇ ಸಿಕ್ಕಿದೆ.) ಒಂದು ಕ್ಷಣವೂ ಕೃಷ್ಣನ ಹಯಗ್ರೀವರ ಆರಾಧನೆ ತಪ್ಪಿತೂ ಎಂದಾಗಲಿಲ್ಲ. "ಆಡು ಮುಟ್ಟದ ತೊಪ್ಪಲು ಸಿಗಬಹುದು, ಆದರೆ ಶ್ರೀವಾದಿರಾಜರು ಟ್ಟಿಪ್ಪಣಿ ಬರೆಯದ / ಅಧ್ಯಯನ ಮಾಡದ ಗ್ರಂಥಗಳು ಸಿಕ್ಕಿಲ್ಲ" ಎಂದರೆ ತಪ್ಪಾಗದು. ಈ ಎಲ್ಲ ವೈಭವಗಳು ಸಿಕ್ಕಿದ್ದು "ದುರಿತ ದೂರರು ಆಗಿದ್ದಕ್ಕೆ." ಅಂತೆಯೇ "ದುರಿತ ದೂರರಾದ ನಿಮ್ಮ ದಯೆಯೇ ನಮ್ಮ ದುರಿತಗಳ ಪರಿಹಾರಕ್ಕೆ ಪೂರಕ" ಎಂಬ ಭಾವದಲ್ಲಿ ದಾಸರು ಪ್ರಾರ್ಥಿಸುತ್ತಿದ್ದಾರೆ.
*ಅಶೇಷಾಘಹರರು - ವಾದಿರಾಜರು*
ಶ್ರೀವಾದಿರಾಜರಿಗೆ ಯಾರೆಲ್ಲ ಶರಣು ಬಂದಿದ್ದಾರೆಯೋ, ಶ್ರೀವಾದಿರಾಜರನ್ನು ಸರಿಯಾಗಿ ಯಾರು ಅರ್ಥ ಮಾಡಿಕೊಂಡಿದ್ದಾರೆಯೋ ಅಂತಹ ನೈಜ ಭಕ್ತರ ದುರಿತಗಳನ್ನು ನಿವಾರಿಸುವದು ಮಾತ್ರವಲ್ಲ, ದುರಿತಗಳಿಂದುಂಟಾದ ಎಲ್ಲ ವಿಧದ ಪಾಪಗಳನ್ನೂ ಪರಿಹಾರಿಸುತ್ತಾರೆ.
*ಶ್ರೀ ವಾದಿರಾಜರಿಗೆ ರೋಗ ರುಜಿನಗಳೂ ಬಾಧಿಸಲಿಲ್ಲ*
ನಾಡದ್ದು ಜ್ವರ ಬರುತ್ತವೆ ಎಂದಾದರೆ ಇಂದಿನಿಂದಲೇ ಸಂಧ್ಯಾವಂದನೆ ಪೂಜೆ ಇವುವಗಳನ್ನು ಮಾಡುವವರು, ಹೇಗೆ ತಪ್ಪಿಸಬೇಕು ಎಂಬ ಸಿದ್ದತೆಯನ್ನು ಇಂದೇ ಆರಂಭಿಸಿರುತ್ತಾರೆ. ಇಂಥ ಕಾಲದಲ್ಲಿಯೂ ಘೋರವಾದ ಜ್ವರ ಆವರಿಸಿದರೆ, ಆ ಜ್ವರವನ್ನು ದಂಡದಲ್ಲಿ ಆವಾಹಿಸಿ ಪಾಠ ಪೂಜೆಗಳನ್ನು ಮಾಡುವ ಮಹಾತ್ಮರು ಶ್ರೀ ವಾದಿರಾಜರು. ಇಂಥ ಮಹನೀಯರುಗಳೇ ನಮಗೆ ಸೂಕ್ತ ಕನ್ನಡಿ ದಾರಿದೀಪ.
ನೂರಿಪ್ಪತ್ತು ವರ್ಷದ ವೃದ್ಧಾಪ್ಯದ ಮುದಿ ವಯಸ್ಸಿನಲ್ಲಿ ಕಣ್ಣಿನ ರೆಪ್ಪೆ ಕೆಳಬಿದ್ದು , ಕಣ್ಣು ಕಾಣದಾದರೆ, ರೆಪ್ಪೆಗೆ ದಾರ ಕಟ್ಟಿ ಮೇಲೆ ಎತ್ತಿ, ಕಣ್ಣು ಕಾಣುವ ಹಾಗೆ ಮಾಡಿಕೊಂಡು, ವ್ಯಾಖ್ಯಾನ ಬರೆದು, ಪೂಜೆ ಮಾಡಿ, ವಾಕ್ಯಾರ್ಥ ಮಾಡುವ ಪ್ರಚಂಡ ವ್ಯಕ್ತಿತ್ವ ಶ್ರೀವಾದಿರಾಜರದ್ದು. ಇವರ ಈ ದೀಕ್ಷೆಯೇ ಪಲಾಯನವಾದಿಗಳಾದ ನಮಗೆ ಒಂದು ಆದರ್ಶ.
*ನಿನ್ನೊಶನಾದ ಜಗನ್ನಾಥ ವಿಠಲನ....*
ಈ ತರಹದ ವಿಚಿತ್ರವಾದ ಅತ್ಯದ್ಭುತವಾದ ಮಾನವಕೋಟಿಗೆ ನಿಲುಕದ ವ್ಯಕ್ತಿತ್ವ ಇರುವದರಿಂದಲೇ *ದೇವರೇ ಶ್ರೀವಾದಿರಾಜರ ವಶನಾಗಿ ಬಂದಿದ್ದ* ಎನ್ನುತ್ತಾರೆ ದಾಸರು. ತ್ರಿವಿಕ್ರಮ, ಹಯಗ್ರೀವ, ಶ್ರೀಕೃಷ್ಣ ಹೀಗೆ ನಾನಾರೂಪಗಳನ್ನು ಭಕ್ತಿಪಾಶದಿಂದ ತಮ್ಮ ವಶದಲ್ಲಿ ಇರಿಸಿಕೊಂಡ ಮಹಾತ್ಮಾ ಶ್ರೀವಾದಿರಾಜರು. ಇವರ ಈ ಮಹಿಮೆಗೆ ನಮೋ ನಮೋ.
ಇಂತಹ ನೂರಾರು ಸಾವಿರಾರು ಗುಣಭರಿತರಾದ ನಿಮಗೆ ಕೋಟಿ ಕೋಟಿ ವಂದನೆಗಳು. ನಿಮ್ಮ ದಾಸನು ನಾನಲ್ಲವೇ.... ನಿಮ್ಮ ದಾಸನು ನಾನಾಗಿದ್ದೇನೆ ಎಂದಾದರೆ...
*ಇನ್ನಾದರೂ ತೋರೆನ್ನ ಮನದಲಿ...*
ನಿಮ್ಮ ದಾಸನೇ ನಾನಾಗಿದ್ದರೆ "ಭಗವಂತನ ಆಜ್ಙೆಯಾದ *ಸಂಧ್ಯಾವಂದನೆ ಪೂಜೆ* ಇವುಗಳು ನಿರಂತರ ನನ್ನಿಂದ ಸಾಗುವಂತಾಗಲಿ. ಯಾವ ಶಾಸ್ತ್ರ, ಯಾವ ಟೀಕೆ ಇವುಗಳಿಗೋಸ್ಕರ ನಿಮಮ್ಮನ್ನು ನಿಕವು ಸಮರ್ಪಿಕೊಂಡಿದ್ದರೋ ಅಂತಹ ಶಾಸ್ತ್ರ "ಸರ್ವಮೂಲ". ಅಂತಹ ಟೀಕೆ "ತತ್ವಪ್ರಕಾಶಿಕಾ - ಸುಧಾ" ಇವುಗಳ ನಿರಂತರ ಅಧ್ಯಯನ ನನ್ನಿಂದ ಸಾಗುವಂತಾಗಲಿ. ಮಹಾಭಾರತ ಲಕ್ಷಲಂಕಾರ ರಚಿಸಿದ ತಮ್ಮ ಅನುಗ್ರಹದಿಂದ ನಿತ್ಯ "ಮಹಾಭಾರತ - ಭಾಗವತ" ಹೇಳುವ ಕೇಳುವ ಸೌಭಾಗ್ಯ ಒದಗಿ ಬರಲಿ. ಇವುಗಳೇ ಮಹೋನ್ನತ ಮಟ್ಟದಲ್ಲಿ ಸಾಗಿದಾಗ ನಿಮ್ಮ ಒಡೆಯ ಎನ್ನ ಮನದಲಿತೋರಲಿ" ಎಂದು ಜಗನ್ನಾಥದಾಸರು ಸ್ತುಸುತ್ತಾರೆ ಕೊಂಡಾಡುತ್ತಾರೆ. ನಾವೂ ಇಂದು ಸಾಧ್ಯವಿದ್ದಷ್ಟು ಸೇವೆ ಮಾಡೋಣ. ಆರಾಧನೆ ಮಾಡೋಣ.
*ಕಾಮಧೇನು ಯಥಾ ಪೂರ್ವಂ ಸರ್ವಾಭೀಷ್ಟಫಲಪ್ರದಾ. ತಥಾ ಕಲೌ ವಾದಿರಾಜಃ ಶ್ರೀಪಾದೋಭೀಷ್ಟದಸ್ಸತಾಮ್* ಎಂಬ ಶ್ಲೋಕವನ್ನು ಕನಿಷ್ಠ ನೂರೆಂಟು ಬಾರಿಯಾದರೂ ಪಠಿಸಿ ಸ್ತುತಿಸಿ ಮೆಚ್ಚಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ.
*✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments