*ಶ್ರೀ ಶ್ರೀಸತ್ಯಬೋಧ ತೀರ್ಥರು*
(ಶ್ರೀಸತ್ಯಬೋಧ ತೀರ್ಥರಿಂದ ಪ್ರತಿಷ್ಠಾಪಿತ ಪ್ರಾಣದೇವರು @ಗುತ್ತಿ)
*ಶ್ರೀ ಶ್ರೀಸತ್ಯಬೋಧ ತೀರ್ಥರು*
ಇಂದಿನ ಆರಾಧ್ಯ ದೈವರಾದ ಶ್ರೀಶ್ರೀಸತ್ಯಬೋಧ ತೀರ್ಥ ಶ್ರೀಪಾದಂಗಳವರ ಸನ್ನಿಧಿಗೆ ದೌಡಾಯಿಸುವ ಭಕ್ತಸಮೂಹವನ್ನು ನೋಡುವದೇ ಒಂದು ಆಸಕ್ತಿದಾಯಕ ವಿಷಯ.
ಸವಣೂರು ವಾಸಸ್ಥಾನವಾದರೂ ಕರ್ನಾಟಕ ಆಂಧ್ರ ತಮಿಳುನಾಡು ಮುಂಬಯಿ ಹೀಗೇ ನಾನಾ ಊರು ರಾಜ್ಯಗಳಲ್ಲಿ ಮಹಾಮಹಿಮರ ಆರಾಧನೆ ಜರುಗುತ್ತದೆ. ಇದು ಮಹಾಮಹಿಮರ ಒಂದದ್ಭುತ ಶಕ್ತಿ.
ಶ್ರೀಶ್ರೀಸತ್ಯಬೋಧ ತೀರ್ಥಶ್ರೀಪಾದಂಗಳವರ ಅತ್ಯಂತ ಅಂತರಂಗದ ಶಿಷ್ಯರುಗಳಲ್ಕಿ ನಮ್ಮ ಮಾನವಿ ದಾಸರೆಂದೇ ಪ್ರಸಿದ್ಧರಾದ ಜಗನ್ನಾಥದಾಸರೂ ಒಬ್ಬರು. ಶ್ರೀ ಜಗನ್ನಾಥ ದಾಸರು ಶ್ರೀ ಸತ್ಯಬೋಧತೀರ್ಥರ ಶ್ರೀಪಾದಂಗಳವರ ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
*ಕಾಮಧೇನು ಸೂರ್ಯ ಬೆಂಕಿ - ಶ್ರೀಸತ್ಯಬೋಧರು*
ಜಗನ್ನಾಥ ದಾಸರು ಶ್ರೀಸತ್ಯಬೋಧರನ್ನು "ಕಾಮಧೇನು ಸೂರ್ಯ ಬೆಂಕಿ" ಇವುಗಳಿಗೆ ಹೋಲಿಸಿ ಇವರುಗಳನ್ನು ಮನೆ ಮನದಲ್ಲಿ ಸಾಕಿಟ್ಟುಕೊಳ್ಳಬೇಕು ಎಂದು ತಿಳಿಸುತ್ತಾರೆ. ಅದು ಹೇಗೇ ???
*ಕಾಮಧೇನು - ಶ್ರೀ ಸತ್ಯಬೋಧರು*
ಶ್ರೀಸತ್ಯಬೋಧತೀರ್ಥರು ಭಕ್ತರ ಸಕಲವಿಧ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಆದ್ದರಿಂದ ಶ್ರೀಸತ್ಯಬೋಧರೇ *ಕಾಮಧೇನು.* ಶ್ರೀ ಸತ್ಯಬೋಧರೆಂಬ ಕಾಮಧೇನು ನಿರಂತರ ಜ್ಙಾನವನ್ನೇ ಕೊಡುತ್ತದೆ ಆದ್ದರಿಂದ, ಇವರೇ *ನಿಜಕಾಮಧೇನು* ಎಂದು ದಾಸರಾಯರು ವರ್ಣಿಸುತ್ತಾರೆ.
*ಸೂರ್ಯ - ಶ್ರೀ ಸತ್ಯಬೋಧರು.*
ಹೊರಗಿನ ಸೂರ್ಯ ಕತ್ತಲನ್ನು ಮಾತ್ರ ನಾಶ ಮಾಡಲು ಸಮರ್ಥ. ಆದರೆ ಶ್ರೀ ಸತ್ಯಬೋಧರೆಂಬ ಸೂರ್ಯ ಅಜ್ಞಾನವೆಂಬ ಮಹಾ ಗಾಢಾಂಧಕಾರವನ್ನು ನಾಶಮಾಡುತ್ತದೆ ಆದರಿಂದ ಸತ್ಯಬೋಧರೆಂಬ ಸೂರ್ಯನನ್ನೂ ಸಾಕಬೇಕಂತೆ.
*ಅಗ್ನಿಯೇ - ಶ್ರೀಸತ್ಯಬೋಧರು*
ಅಗ್ನಿ ಬೆಂಕಿಯು ಒಣ ಪದಾರ್ಥಗಳನ್ನು ಸುಡಲು ಸಮರ್ಥ. ಆದರೆ ಶ್ರೀ ಸತ್ಯಬೋಧರೆಂಬ ಅಗ್ನಿಯು ಹಾಗಲ್ಲ ನಮ್ಮ ಗೂಢವಾದ, ಗುಪ್ತವಾದ, ಘೋರವಾದ ಪಾಪಗಳನ್ನೂ ನಾಶಮಾಡುತ್ತದೆ. ಅಂತೆಯೇ ಶ್ರೀ ಸತ್ಯಬೋಧರೆಂಬ ಅಗ್ನಿಯೂ ಅತ್ಯವಶ್ಯಕ ಎಂದು ದಾಸರಾಯರು ಕೊಂಡಾಡುತ್ತಾರೆ. ಹೀಗೆ ಇಷ್ಟಾರ್ಥಗಳನ್ನು ಕೊಡುವ ಕಾಮಧೇನು, ಅಜ್ಙಾನಾಂಧಕಾರವನ್ನು ಕತ್ತರಿಸುವ ಸೂರ್ಯ, ಪಾಪಗಳನ್ನು ಸುಟ್ಟುಬೀಸಡುವ ಅಗ್ನಿಗಳೆಂಬ *ಶ್ರೀ ಸತ್ಯಬೋಧ ತೀರ್ಥರು* ಸದಾ ನಮ್ಮ ಮನ ಮಂದಿರದಲ್ಲಿರಲಿ....
"ಶ್ರೀಸತ್ಯಬೋಧೋ ನಿಜಕಾಮಧೇನುಃ
ಮಯಾತಮಃಖಂಡನ ಚಂಡಭಾನುಃ.
ದುರಂತಪಾಪಕೃದಹೇ ಕೃಶಾನುಃ
ದೇಯಾನ್ಮಮೇಷ್ಟಂ ಗುರುರಾಜ ಸೂನುಃ" ಹೀಗೆ ಕೊಂಡಾಡುತ್ತಾರೆ. ನಾವೂ ಕಾಮಧೇನು ಸೂರ್ಯ ಬೆಂಕಿ ಇವುಗಳರೂಪರಾದ ಶ್ರೀಸತ್ಯಬೋಧರನ್ನೇ ಫಲರೂಪರಾಗಿ ಪ್ರಾರ್ಥಿಸೋಣ.
*ನಾ ಧನ್ಯನಾದೇನೆಂದು....*
ಇಂದು ನಾವೆಲ್ಲ ಆರಾಧನೆಗೆ ಭಾಗವಹಿಸಿದ್ದೇವೆ, ಇನ್ನುಮೇಲೆ ಉಪನ್ಯಾಸದಲ್ಕಿ ಭಾಗವಹಿಸುವವರು ಇದ್ದೇವೆ. ಆ ಮಹಾಹಿಮರ ಜೀವನ ಚರಿತ್ರೆಯನ್ನು ಕೇಳಿ *ನಾ ಧನ್ಯನಾದೇನೆಂದು ಶ್ರೀಸತ್ಯಬೋಧರ ದಿವ್ಯ ಪಾದಕಮಲಕಂಡು* ಎಂಬ ಭಾವ ನಮ್ನಲ್ಲಿಯೂ ಮೂಡುವಂತೆ ಶ್ರೀಗುರುಗಳನ್ನು ಆರಾಧಿಸೋಣ.....
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments