*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......*
*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......*
ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ, ನಾನು ಗೆಲ್ಲುವದು ಎಂದು ?? ಅಥವಾ ನನ್ನ ಗೆಲುವು ಇನ್ನೊಬ್ಬರು ಎಂದು ನೋಡಿಯಾರು...??
ಸೋಲು ಗೆಲುವು, ಏಳು ಬೀಳುಗಳು ಸಹಜ. *ನನ್ನ ಗೆಲುವೇ ಆಗಬೇಕು, ಪರರ ಸೋಲುಗಳನ್ನೇ ಕಣ್ಣು ತುಂಬಿಸಿಕೊಳ್ಳಬೇಕು* ಎಂಬ ಹಠವೇನಿದೆ ತುಂಬ ಹಾಸ್ಯಾಸ್ಪದವೆನಿಸುತ್ತದೆ.
ಇನ್ನೊಬ್ಬರನ್ನು ಸೋಲಿಸುವ ವಿಚಾರ ನಕಾರಾತ್ಮಕ ವಿಚಾರವೆನಿಸಿದರೆ, ನಮ್ಮ ಗೆಲುವಿನ ವಿಚಾರ ಸಕಾರಾತ್ಮಕವೆಂದನಿಸುತ್ತದೆ. ಸಕಾರಾತ್ಮಕ ವಿಚಾರ ಆರೋಗ್ಯದಾಯಕ ವಿಚಾರವೂ ಆಗಿದೆ.
ಗೆಲುವಿನ ರುಚಿಯ ಮದವೇರಿದಾಗ, "ಪರರ ಸೋಲನ್ನೇ ಕಾಣಬೇಕು" ಎಂಬ ಭಾವ ಬರುತ್ತದೆ. ಇನ್ನೊಬ್ಬರ ಸೋಲನ್ನು ಕಾಣುವದರಲ್ಲೇ ಕಾಲ ಕಳೆದರೆ, ತಾನು ಗೆಲ್ಲುವದಕ್ಕೆ ಆಗುವದೇ ಇಲ್ಲ. ತನ್ನ ಗೆಲುವನ್ನು ಇನ್ನೊಬ್ಬರು ನೋಡಲೂ ಆಗುವದಿಲ್ಲ. ಇವೆರಡೂ ಅಷ್ಟೇ ನಿಶ್ಚಿತ.
ದುರ್ಯೋಧನ ಪಾಂಡವರು ಹಸ್ತಿನಾವತಿ ಗೆ ಬಂದ ಕ್ಷಣದಿಂದ ಪಾಂಡವರ ಸೋಲನ್ನೇ ಬಯಸಿದ. ಅವರನ್ನು ಸೋಲಿಸುವದೇ ಗುರಿ ಮಾಡಿಕೊಂಡ. ಅವರನ್ನು ಸೋಲಿಸಲು ಪ್ರತಿಕ್ಷಣವೂ ಹೆಣಗಾಡಿದ. ಸೋಲಿಸಲಾಗಲಿಲ್ಲ. ಆದರೆ ತಾನು ಎಂದಿಗೂ ಗೆಲ್ಲಲಿಲ್ಲ. ತನ್ನ ಗೆಲುವನ್ನು ಜಗತ್ತು ಕಾಣಲೇ ಇಲ್ಲ.
ಪಾಂಡವರನ್ನು ಸೋಲಿಸಲು ಮೀಸಲು ಇಟ್ಟ ತನ್ನ ಶಕ್ತಿಯನ್ನು ಬೆರೆಡೆ ಏನಾದರೂ ಬಳಿಸಿದ್ದರೆ ಕದಾಚಿತ್ ಕೆಲವು ಕಡೆಯಾದರೂ ಗೆಲ್ಲುತ್ತಿದ್ದನೋ ಏನೋ....
ಪರರ ಸೋಲಿನ ರುಚಿಯನ್ನೇ ಬಯಸುವ ಅಥವಾ ಅನುಭವಸಿದವನಿಗೆ ತೃಪ್ತಿಯೇ ಇರಲಾರದು. ಏಕೆಂದರೆ ತೃಪ್ತಿಯನ್ನು ಅನುಭವಿಸಲು ಅವನಿಂದಾಗದು. ಯೋಚಿಸಲೂ ಸಮಯವಿರದು. ಸೋತವರು ಎಂದು ನನ್ನನ್ನು ಸೋಲಿಸುವವರು ಎಂದೇ ಯೋಚಿಸ್ತಾ ಇರುವವನು ಅವನು.
ತನ್ನ ಸೋಲಿನ ರುಚಿಯನ್ನು ಅನುಭವಿಸಿದವನಿಗೆ ಮಾತ್ರ ಗೆಲುವಿನ ಛಲ, ಗೆದ್ದ ತೃಪ್ತಿ ಎರಡೂ ಸಿಗುತ್ತದೆ. ಗೆಲುವಿನಲ್ಲಿ ತೋರಿಸಿದ ಪರಾಕ್ರಮ ಹಾಗೂ ಗೆಲವು ಇವಗಳನ್ನು ಜಗತ್ತೂ ಕಾಣುತ್ತದೆ ಹಾಗೂ ಮೆಚ್ಚುತ್ತದೆ. ಗೆದ್ದವರಿಗೆ ಅನುವಾಗೇ ಇರುತ್ತದೆ....
ಇನ್ನೊಬ್ಬರ ಸೋಲು ನೋಡುವ ಅಭಿರುಚಿಯಲ್ಲಿಯೇ ಸ್ವಂತ ಗೆಲುವಿನ ವಿಚಾರ ಮಣ್ಣು ಮುಕ್ಕಿರುತ್ತದೆ. ಇನ್ನೊಬ್ಬರ ಸೋಲಿನ ಕಡೆ ಗಮನ ಕೊಡದೆ, ಗಮನ ನನ್ನ ಸೋಲಿನ ಕಡೆಯಾದರೆ, ನನ್ನ ಗೆಲುವಿನ ವಿಚಾರ ನೆತ್ತಿಗೇರತ್ತೆ. ಆಗ ಇರುವದು ಗೆಲುವು ಒಂದೇ. ನಾನೇ ವಿಜಯಶಾಲಿಯಾಗುತ್ತಾ ಹೋದಾಗ ಸೋಲು ಎಲ್ಲರದ್ದೂ ಆಗಿರುತ್ತದೆ.
ಪಾಂಡವರು ಗೆಲುವಿನ ಮದಕ್ಕಿಂತ ಸೋಲಿನ ರುಚಿಯನ್ನೇ ಸವಿದರು. ಪಾಂಡವರ ಸೋಲಿನ ರುಚಿಯ ಮದ ಹತ್ತಿಸಿಕೊಂಡ ದುರ್ಯೋಧನ ಮತ್ತೆ ಮತ್ತೆ ಸೋಲಿಸಲು ತೊಡಗಿದೆ. ತನ್ನ ಗೆಲುವಿನ ಗುರಿ ಬಿಟ್ಟ. ಅಂತೆಯೇ ಒಂದೆಡೆಯೂ ಗೆದ್ದ ಉದಾಹರಣೆಯೇ ಸಿಗದು. ಕೊನೆಗೆ ಸೋತು ಸತ್ತು ಹೋದ.
ಸೋಲಿನ ರುಚಿಯನ್ನೇ ಸವಿದ ಪಾಂಡವರು ಗೆಲವು ಹೇಗೆ ಬಂದೀತು ಎಂದು ವಿಚಾರಿಸಿದರು, ಗೆಲುವಿನ ಗುರಿ ಇಟ್ಟುಕೊಂಡರು. ಗೆದ್ದರೂ ಸಹ. ಗೆಲವನ್ನು ಜಗತ್ತೂ ಕಂಡಿತು. ಆ ಜಗತ್ತು ಇಂದಿಗೂ ಕೊಂಡಾಡುತ್ತದೆಯೂ ಸಹ. ಆದ್ದರಿಂದ *ಇನ್ನೊಬ್ಬರನ್ನು ಸೋಲಿಸುವ ವಿಚಾರಕ್ಕಿಂತಲೂ, ನಮ್ಮ ಗೆಲುವಿನ ವಿಚಾರ* ಸಾರ್ಥಕ ವಿಚಾರ ಎಂದೆನಿಸುತ್ತದೆ. "ಒಬ್ಬ ಶತ್ರುವನ್ನು ಸೋಲಿಸುವ ಕ್ಷುದ್ರ ವಿಚಾರಕ್ಕಿಂತಲೂ ನಮ್ಮ ಗೆಲುವಿನ ವಿಚಾರದಲ್ಲಿ ನಿಶ್ಶೆಷ ಶತ್ರುಗಳ ಪರಾಭವವಿದೆ." ವಿಚಾರ ನಮ್ಮದು....
*✍🏻✍🏻✍ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments