ಆರವತ್ತರ ಜನ್ಮದಿನದಂದು - "ನನ್ನ ಗುರುಗಳಿಗೆ" ಅನಂತ ವಂದನೆಗಳು....*

*ಆರವತ್ತರ ಜನ್ಮದಿನದಂದು -  "ನನ್ನ ಗುರುಗಳಿಗೆ" ಅನಂತ ವಂದನೆಗಳು....*

ತತ್ವಜ್ಙಾನವನ್ನು ಜಗದಸುತ್ತೆಲ್ಲ ಪಸರಿಸಲೇ ಹುಟ್ಟಿ ಬಂದವರು. ನಮ್ಮಂತಹವರನ್ನು ಉದ್ಧರಿಸಲೇ ಬಂದವರು ನಮ್ಮ  ಗುರುಗಳು ಪರಮ ಪೂಜ್ಯ ಮಾಹುಲೀ (ಪೂಜ್ಯ ವಿದ್ಯಾಸಿಂಹಾಚಾರ್ಯರು) ಆಚಾರ್ಯರು. ಅವರ ಆರವತ್ತನೆಯ ಜನ್ಮದಿನದಂದು ಅನಂತ ವಂದನೆಗಳು. 

 ತತ್ವಜ್ಙಾನಕ್ಕಾಗಿಯೇ ಅವರ ಜೀವನ. ಅಂತೆಯೇ "ಅತಿ ಕಠಿಣ ಜಟಿಲ ಸಾವಿರ ಸಾವಿರ ವಿಷಯಗಳ ಚಿಂತನೆಯಲ್ಲಿ ತೊಡಗಿ, ನಿದ್ರೆ ಊಟ ವಿಲ್ಲದೆ ಎಷ್ಟು ದಿನಗಳನ್ನು ಕಳೆದಿದ್ದಾರೆ" ಎನ್ನುವದು ಅವರೇ ತಿಳಿಸಬೇಕು. ಅಷ್ಟು ತತ್ವಜ್ಙಾನದ ಹಪಹಪಿ. ಅಂತೆಯೇ  ಜ್ಙಾನದ ಮೇರು. ತತ್ವಜ್ಙಾನದ ಗಣಿ. ನಿರಂತರ ಹರಿಯುವ ಜ್ಙಾನ ಗಂಗೆ  ನನ್ನ ಗುರುಗಳು. 

 *ಜ್ಙಾನ ಯೋಗ -  ಕರ್ಮ ಯೋಗ - ಭಕ್ತಿಯೋಗ* ಇವುಗಳನ್ನು ರೂಢಿಸಿಕೊಂಡೆ ಅವರ ನಡೆ ನುಡಿಗಳು ಇದ್ದವು ಇಂದಿಗೂ ಇವೆ. ಇವುಗಳ ಹೊರತಾಗಿ ಒಂದು ಮಾತೂ ಇರಲಿಲ್ಲ. ಒಂದು ಕ್ರಿಯೆಯೂ ಇರಲಿಲ್ಲ. ಅತೀ ಸಣ್ಣ ಜ್ಙಾನವೂ ಇವುಗಳ ಹೊರತಾಗಿ ಹೊರತಾಗಿ ಇಂದಿಗೂ ಇಲ್ಲ‌. ಅಂತೆಯೇ ಅವರೊಬ್ಬರು *ಮುನಿಗಳಿಗೂ ಮಾನ್ಯರಾದ ಮಹಾಮುನಿಗಳು.*  

*ಉಪನ್ಯಾಸ ವಾಣಿ*

ವಾಣಿಯಲ್ಲಿ  ಸ್ಪಷ್ಟತೆ ಇರುತ್ತದೆ.  ಜ್ಙಾನ ಹರಿಸುವಾಗ ಶುದ್ಧತೆ ಹಾಸುಹೊಕ್ಕಾಗಿರುತ್ತದೆ. ನಿಖರತೆ ತುಂಬ. ಧರ್ಮ ದೇವರು ತಾರತಮ್ಯ ಇತ್ಯಾದಿ ವಿಷಯಗಳಲ್ಲಿ ನಿಷ್ಠುರತೆ ಇದೆ.   ನನ್ನವರಿಗೆ ಶುದ್ಧ ಜ್ಙಾನ ಬರಕೇಬೇಕು ಎಂಬ ಆತ್ಮೀಯತೆಯ ಕಳಕಳಿ ತುಳುಕುತ್ತಿರುತ್ತದೆ. ಅಂತೆಯೇ  ಉಪನ್ಯಾಸ ತುಂಬ ಪ್ರಭಾವಕಾರಿ, ಜೊತೆಗೆ ಪರಿಣಾಮಕಾರಿಯೂ ಆಗಿರುತ್ತದೆ. *ಪೂಜ್ಯ ಆಚಾರ್ಯರ ಉಪನ್ಯಾಸ ಎಂದರೆ ಆಸ್ತಿಕರಿಗೆ  ಭಕ್ತಿಯ ರಸದೌತಣ. ಶುದ್ಧ ಜ್ಙಾನಮೃತದ ಸವಿ.*  ಅಂತೆಯೇ ಇಂದಿಗೆ ಕನಿಷ್ಠ ಲಕ್ಷ ಲಕ್ಷ ಜನರ ಮನೆಯಲ್ಲಿ ಉಪನ್ಯಾಸ ರಿಂಗಣಿಸುತ್ತಿರುತ್ತದೆ. ಅನೇಕರ ಕೈಯಡಿಯಲ್ಲೇ (ಮೋಬೈಲಲ್ಲಿ, ಕಾರುಗಳಲ್ಲಿ)  ಉಪನ್ಯಾಸಗಳು ಸಿಕ್ಕು ಬರುತ್ತವೆ. ಅಂತಹವರೇ ನನ್ನ ಗುರುಗಳು...

*ಆಧ್ಯಾತ್ಮಿಕ ಶಕ್ತಿ ಅಗಾಧ....*

 ಏನೆಲ್ಲ ಆಪತ್ತುಗಳು ಎದುರಾದರೂ ಅಧ್ಯಾತ್ಮಿಕ ಬಲದ ಮುಂದೆ ಸೋತು ನಿರಾಶವಾಗಿ ಹೊಗುತ್ತವೆ. ಇದು ದೃಢವಾದ ನಂಬುಗೆ. ಆ ಆಪತ್ತುಗಳೆಲ್ಲ ನಿರಾಶವಾಗಿ ಪಲಾಯನ ಮಾಡಿ  ಹೋಗಿದ್ದು ನಾನು ನೋಡಿದ್ದೇನೆ.  ಅಂತೆಯೇ ಇವರ ಸಂಪರ್ಕದಲ್ಲಿ, ಪ್ರಭಾವಲಯದಲ್ಲಿ  ಯಾರು ಬರುತ್ತಾರೆಯೋ ಅವರು ಉದಾತ್ತ ಜೀವನ ನಡೆಸಲು, ಅತ್ಯುತ್ತಮ ಕಾರ್ಯವೆಸಗಲು ಬೇಕಾದ ಆಧ್ಯಾತ್ಮಿಕ ಬಲವನ್ನು ಪಡೆಯುತ್ತಾರೆ. ಇದು ನನ್ನ ಗುರುಗಳ ಕೌಶಲ. 

*ಹಸಿವು ನೀಗಿಸುವ ಅಕ್ಷಯ ಪಾತ್ರೆ..*

ಜ್ಙಾನದ ಹಸಿವು, ಅನ್ನದ ಹಸಿವು, ಭಕ್ತಿಯ ಹಸಿವು, ಧರ್ಮದ ಹಸಿವು, ಧನದ ಹಸಿವು ಹೀಗೆ ನಾನಾ ತರಹದ ಹಸಿವು ನೀಗಿಸಲು ಇರುವ *ಅಕ್ಷಯ ಪಾತ್ರೆ - ನಮ್ಮ ಗುರುಗಳು.*  ಅಂತೆಯೇ ನಂಬಿ ಬಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಅನುಗ್ರಹಿಸಬೇಕು ಎಂಬ ಹಂಬಲ ಪ್ರತಿಕ್ಷವೂ ಕಾಣುತ್ತದೆ.  ಈ ತುಮುಲ ಹಂಬಲ ಹತ್ತಿಕ್ಕಲು ನಿಗ್ರಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುವದು ನನಗಲ್ಲ ಅವರ ಪ್ರಭಾವಳಿಯಲ್ಲಿ ಬಂದ ಎಲ್ಲರಿಗೂ ಮನವರಿಕೆ ಆದ ವಿಚಾರವೇ.  ವೈಷ್ಣವ ವಿಷ್ಣು ಭಕ್ತ ಗುರುಭಕ್ತರಲ್ಲಿ  ನೋವು ದಾರಿದ್ರ್ಯ ಕಂಡ ಕ್ಷಣಕ್ಕೆ ಆಚಾರ್ಯರ ಬತ್ತದ ಔದಾರ್ಯ ಅನುಕಂಪೆ ಅಡೆತಡೆಗಳಿಲ್ಲದೇ ಇಂದಿಗೂ ಹರಿಯುತ್ತಿವೆ. ಅದು ಇಂದಿಗೂ ಆಶ್ಚರ್ಯವೇ.

*ಭಕ್ತಿಯ ವಿಶ್ವಾಸಗಳ ಸಾಕಾರ ಮೂರ್ತಿ...*

ಪರಮಗಾಢವಾದ ಭಕ್ತಿಭಾವಗಳಿಂದ, ದೇವರಿಗೆ ಸಮರ್ಪಿತವಾದುದರಿಂದ,  ಅವರ ಮನಸ್ಸು  ಮಾನಸ ಸರೋವರದಂತೆ ಅತಿ ಪ್ರಸನ್ನ, ನಿರಾಕುಲ.  ಅಂತೆಯೇ ನಿತ್ಯ  ಪಾಠ ಉಪನ್ಯಾಸ ಪರೀಕ್ಷೆ ಪೂಜೆ ಜಪ ಅಧ್ಯಯನ ಇವುಗಳಲ್ಲಿ ಹದಿನಾರು ಗಂಟೆ ಕಳೆದರೂ ಕುಂದದ ಉತ್ಸಾಹದ ಚಿಲುಮೆ ಇಂದ ಕೂಡಿರುತ್ತದೆ ಅವರ ಮನಸ್ಸು.  ಎಂಥ ಭೀಕರ ಆಪತ್ತುಗಳ ಅಲೆಗಳು ಅಪ್ಪಳಿಸಿದರೂ ಕ್ಷುಬ್ಧವಾಗಲಿಲ್ಲ. ಪಾಠಪ್ರವಚನಕ್ಕೆ ಕುಂದು ಬರಲಿಲ್ಲ.  ಈ ಪಾಠ ಪ್ರವಚನದಿಂದಲೇ ಎಲ್ಲ ವೈಭವ ಎಂಬ ವಿಶ್ವಾಸವೂ ಅಷ್ಟೇ ಅಚಲ. 

*ನನಗೆ ಅನುಗ್ರಹಿದ್ದು ಅನಂತ* 

ನನಗೆ ಮೋಕ್ಷ ಕೊಡುವ, ಅಪರೋಕ್ಷ ಜ್ಙಾನಕ್ಜೆ ನೇರ ಕಾರಣವಾದ  ತತ್ವಜ್ಙಾನವನ್ನು ಕೊಟ್ಟಿದ್ದಾರೆ, ಇಂದಿಗೂ ಕೊಡುತ್ತಿದ್ದಾರೆ. ಅಮೂಲ್ಯವಾದ ಅಪರೂಪದ  ಮಂತ್ರಗಳ ಉಪದೇಶ ಕೊಟ್ಟರು. ಇಂದಿಗೂ ಜಪ ಹಾಗೂ ಅಧ್ಯಯನ ಬಿಡುವ ಹಾಗಿಲ್ಲ ಎಂಬ ಎಚ್ಚರಿಕೆಯನ್ನೂ ಕೊಡುತ್ತಾರೆ . ಶುದ್ಧ ಸದಾಚಾರ ತಿಳಿಸಿದರು. ನಡೆ ನುಡಿ ಬೋಧಿಸಿದರು. ತಪ್ಪಿದಲ್ಲಿ ಶಿಕ್ಷಿಸಿದರು. ಇಂದಿಗೂ ಕನಸನಲ್ಲಿ ಬಂದಾದರೂ ಶಿಕ್ಷೆ ಕೊಡುತ್ತಾರೆ.  ಗುರು ಭಕ್ತಿ ವಿಷ್ಣು ಭಕ್ತಿ ಅಚಲವಾಗಿ ಸ್ಥಿರವಾಗಿ ಇರುವಂತೆ ನೋಡಿ ಬೆಳಯುವಂತೆಯೂ ಮಾಡಿದರು. ಇಂದಿಗೂ ಬೆಳಿಸುತ್ತಿದ್ದಾರೆ.  ನನ್ನ ಹಾಗೂ ನನ್ನ ಕುಟುಂಬದ  ಆರೋಗ್ಯ -  ಭಾಗ್ಯವನ್ನೂ ನೋಡಿದರು‌. ನೋಡುತ್ತಿದ್ದಾರೆ. ಈ ಗುರುಗಳ ಕರುಣೆಗೆ ಕೊನೆಯಿಲ್ಲ. ನನಗೊಬ್ಬನಿಗಲ್ಲ ನನ್ನಂತಹ ನೂರಾರು ಸಾವಿರಾರು ಜನರಿಗೆ ಕರುಣೆ ಅನುಗ್ರಹ ದಯೆ ಸದಾ ಇದೆ ಎಂದರೆ  *ಇವರಲ್ಲಿರುವ ಕರುಣೆ ದಯೆ ಅನುಗ್ರಹ ಸಾಗರೋಪಾಯ* ಎಂಬುವದರಲ್ಲಿ ಸಂಶಯ ಅವರ ಸಂಪರ್ಕದಲ್ಲಿ ಬಂದ ಯಾರಿಗೂ ಇಲ್ಲ.  *ನಾ ಎಂದಿಗೂ ಮರೆಯೆ ನೀವು ಮಾಡಿದುಪಕಾರ.*

ಇಂತಹ ಪರಮ ಪೂಜ್ಯ ಗುರುಗಳು ನನ್ನ ಗುರುಗಳು.  ಆಚಾರ್ಯರ ಆದರ್ಶಗಳ ಮಾರ್ಗದರ್ಶನದಲ್ಲಿ ನನ್ನ ಮನಸ್ಸಿನ ಚೌಕಟ್ಟುಗಳು ಬಲಗೊಳ್ಳಬೇಕು. ಸರಿಯಾದ ಉತ್ತಮವಾದ ದೃಷ್ಟಿಕೋನ ಲಭಿಸಬೇಕು. ನನ್ನ ವ್ಯಕ್ತಿತ್ವವೇ ಬದಲಾಗಬೇಕು. ಆಗ ನನ್ನ ಗುರುಗಳ ಪ್ರಭಾವಯದಲ್ಲಿ ಬಂದದ್ದು, ಇಲ್ಲಿಯ ವರೆಗೆ ಬದುಕಿದ್ದು ಸಾರ್ಥಕವಾಗುತ್ತದೆ...

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಅದ್ಭುತವಾದ ಅತಿ ಸುಂದರವಾದ ಭಕ್ತಿಯುಕ್ತವಾದ ಗುರುಗಳ ಮಹಿಮೋಪೇತವಾದ ಗುರುನಮನ‌....
NYASADAS said…
ಧನ್ಯವಾದ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*