*ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ*

*ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ*

ಇಂದು ಧನುರ್ಮಾಸದ ಶುಕ್ಲ ಏಕಾದಶೀ *ವೈಕುಂಠ ಏಕಾದಶೀ.* ಇಂದು ಮಾಡುವ ಉಪವಾಸ ಮಹಾನ್ ಫಲಕಾರಿ‌. ಇಂದು ಮಾಡುವ ಸಾಧನೆ ವಿಷ್ಣುಪ್ರೀತಿಯೇ. ಅಂತೆಯೇ ಇಂದಿನ ಏಕಾದಶೀ ಉಪವಾಸಕ್ಕೆ ಮಹಾನ್ ಫಲರೂಪವಾಗಿ ವೈಕುಂಠವೇ ದೊರೆಯುತ್ತದೆ ಎಂದು ಹೇಳುತ್ತದೆ ಶಾಸ್ತ್ರ. 

*ಏಕೇ ಏಕಾದಶೀ ಉಪವಾಸ...*

ದೇವರು ಕೊಟ್ಟದ್ದು ಭೋಗಕ್ಕಾಗಿ ತಿಂದು ಉಂಡು ಸುಖವಾಗಿ ಇರುವ ಬದಲು ಉಪವಾಸವೇ ಏಕೆ... ?? ದೇವರು ತನಗಾಗಿ ಇಟ್ಟುಕೊಂಡ ದಿನ. "ಕೊಡುವ ದೇವನ ಪ್ರೀತಿಗಾಗಿ ಉಪವಾಸ ಇರಬೇಕು" ಎಂದು ಕೊಡುವ ದೇವನೇ ಆಜ್ಙಾಪಿಸಿದ ದಿನ. ತೆಗೆದು ಕೊಂಡ ಎಲ್ಲ ವಸ್ತುಗಳಿಗೂ GST ಕೊಡುವಂತೆ ದೇವರಿಂದ ಪಡೆದ ಅಥವಾ ತೆಗೆದುಕೊಂಡ  ಎಲ್ಲದಕ್ಕೂ GST ಎಂದರೆ ಅದು ಏಕಾದಶೀ ಉಪವಾಸವೇ. 

ಮಾಡಿದ ಪಾಪ ಲೆಕ್ಖವಿಲ್ಲ. ಮಾಡುತ್ತಿರುವ ಪಾಪಗಳಿಗೆ ಮಿತಿಯಿಲ್ಲ. ಮುಂದೆ ಮಾಡುವ  ಪಾಪವೂ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಅವುಗಳನ್ನು ಕಳೆದು ಕೊಳ್ಳಲು ಏಕಾದಶೀ ಉಪವಾಸ ಅತ್ಯಂತ ಸೂಕ್ತ. 

*ಇಂದೆ ವೈಕುಂಠ ಏಕಾದಶಿ*

ವೈಕುಂಠ ಏಕಾದಶಿಯ ದಿನದಂದು, ವೈಕುಂಠಪತಿಯಾದ, ವೈಕುಂಠಕೊಡುವ, ಭೂ ವೈಕುಂಠಾಧೀಶನಾದ  *ಶ್ರೀಶ್ರೀನಿವಾಸನ ದರ್ಶನಕ್ಕೆ* ಮಹಾಫಲವಿದೆ. ಅಂತೆಯೇ ಕೋಟಿ ಕೋಟಿ ಜನ ಓಡೋಡಿ ಬಂದು ದರ್ಶನ ಮಾಡಿಕೊಳ್ಳುತ್ತಾರೆ.  ಸಾಧ್ಯವಾದರೆ ನಾವೂ ಶ್ರೀನಿವಾಸನ ದರ್ಶನ ಪಡೆಯೋಣ. 

*ಭಾಗವತ ಶ್ರವಣ*

"ಜ್ಙಾನ ವಿಲ್ಲದೇ ಮೋಕ್ಷವಿಲ್ಲ- ಏನಾದರೇನು ಮೋಕ್ಷವಿಲ್ಲ" ವೈಕುಂಠ ಹಣದಿಂದ ಸಿಗುವಂತಹದ್ದು ಅಲ್ಲ. ವೈಕುಂಠ ಪಡೆಯಲು ಜ್ಙಾನ ಬೇಕು. ಜ್ಙಾನ ದೇವರ ಜ್ಙಾನವೇ ಆಗಿರಬೇಕು.  ಶ್ರೀನಿವಾಸನ ಮತ್ತೊಂದು ರೂಪ *ಕೃಷ್ಣ ರೂಪ.* ಆ ಕೃಷ್ಣನನನ್ನು ಕೊಂಡಾಡುವದು ಭಾಗವತ. ಭಾಗವತ ಜ್ಙಾನವೇ ಮುಕ್ತಿಗೆ ಸೋಪಾನ. ಆ ಭಾಗವತ ಗ್ರಂಥವನ್ನು ಇಂದು ಅಖಂಡವಾಗಿ ಕೇಳುವ ಸಂಪ್ರದಾಯವೂ ಹರಡಿ ಬಂದಿದೆ. ನಾವೂ ಕೇಳೋಣ.

*ದಿನಗಳಲ್ಲಿ ಏಕಾದಶೀ ಉತ್ತಮ. ದೇವಗಳಲ್ಲಿ ಶ್ರೀನಿವಾಸ ಸರ್ವೋತ್ತಮ. ಗ್ರಂಥಗಳಲ್ಲಿ ಭಾಗವತ ಅತ್ಯುತ್ತಮ.* ಈ ಮೂರನ್ನೂ ಇಂದು ಪಾಲಿಸಿದವರಿಗೆ ಮೋಕ್ಷವೇ ಫಲ.

*ಮುಕ್ಕೋಟಿ ದ್ವಾದಶೀ*

"ಧನುರ್ಮಾಸೆ ಸಿತೇ ಪಕ್ಷೆ ದ್ವಾದಶ್ಯಾಂ ಅರುಣೋದಯೇ.
ಕಾಂಕ್ಷಂತಿ ದೇವತಾಸ್ಸರ್ವೇ  ಮಜ್ಜನಂ ತಜ್ಜಲೇ ಶುಭೇ" ಎಂಬ ಪ್ರಮಾಣದಲ್ಲಿ ಇಂದು ದೆವರ ದರ್ಶನಕ್ಕೆ ಹಾಗೂ ನಾಳೆ ಸ್ವಾಮಿಪುಷ್ಕರಣಿಯಲ್ಲಿ ಸ್ನಾನ ಮಾಡುವದಕ್ಕೆ ಸ್ವರ್ಗದಿಂದ  ಮುಕ್ಕೋಟಿ ದೇವತೆಗಳು ಬರುತ್ತಾರೆ ಎಂದು ಹೇಳುತ್ತಾರೆ. ಅಷ್ಟು ಉತ್ತಮವಾದ  ಇವೆರಡು ದಿನಗಳು ಎಂದು ತಿಳಿಸುತ್ತಾರೆ. 

ನಾವೂ ಸಹ ಇಂದು ಶ್ರದ್ಧೆಯಿಂದ ಉಪವಾಸ ಮಾಡೋಣ. ಅಖಂಡವಾಗಿ ಸಂಪೂರ್ಣ ಭಾಗವತ ಭಕ್ತಿಯಿಂದ ಕೇಳೋಣ. ಶ್ರೀಶ್ರೀನಿವಾಸನ ದರ್ಶನ ಪಡೆಯೋಣ. ಸಾಧ್ಯವಾದರೆ ಸ್ವಾಮಿಪುಷ್ಕರಣೀ ಸ್ನಾನ ಮಾಡೋಣ. ಅಲ್ಲೇ ವಾಸ ಮಾಡಿರುವ ತಿರುಮಲಾಧೀಶನನ್ನು ಕಂಡು ಸಕಲ ಪಾಪಗಳನ್ನೂ ಪರಿಹರಿಸಿಕೊಳ್ಲೋಣ. ಮಹಾನ್ ಪುಣ್ಯವನ್ನು ಸಂಪಾದಿಸಿಕೊಳ್ಳೋಣ. 

ಇಂದಿನ‌ ಈ ಶುಭ ದಿನ  *ತಿನ್ನುವದು ಬೇಡವೇ ಬೇಡ. ತಿನ್ನುವದು ಎಂದರೆ ಪಾಪಗಳನ್ನೇ ತಿಂದ ಹಾಗೆ. ಉಪವಾಸ ಇರುವದು ಎಂದರೆ ಪುಣ್ಯವನ್ನೇ ಪಡೆದ ಹಾಗೆ.* ಪುಣ್ಯವಂತರಾಗುವದು ನಮ್ಮ ಆಸೆ. ಪಾಪಗಳನ್ನೇ ತಿನ್ನುವದು ನಮ್ಮ ಹಣೆ ಬರಹವಾಗಿದ್ದರೆ ಹಠದಿಂದ ಬದಲಾಯಿಸಿಕೊಳ್ಳೋಣ. ಹಣೆ ಬರಹವನ್ನು ಬದಲಾಯಿಸುವ ಶಕ್ತಿ ಶ್ರೀನಿವಾಸನಿಗೆ ಖಂಡಿತಾ ಇದೆ....

*✍✍ನ್ಯಾಸ.*
ಗೋಪಾಲದಾಸ. 
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*