*ದೇವರ ಸೇವೆ ಹೇಗೆ ಇರಬೇಕು........*
*ದೇವರ ಸೇವೆ ಹೇಗೆ ಇರಬೇಕು........*
ದೇವರು ಎಂಬ ಪದವೇ ಕೆಲವೊಮ್ಮೆ ಆಶ್ಚರ್ಯವನ್ನು ತಂದುಕೊಡುತ್ತದೆ. ಎಲ್ಲೆಲ್ಲಿ ಯಾರಲ್ಲಿ ಹೇಗೆ ವ್ಯಾಪಿಸಿದೆ ಎನ್ನುವದೇ ಗೊತ್ತಾಗುವದಿಲ್ಲ. ಎಂಥ ಪರಮ ನಾಸ್ತಿಕನೂ ಮಂಡುತನದಿಂದ ಮಾತಲ್ಲಿ ದೇವರನ್ನು ಒಪ್ಪದಿದ್ದರೂ, ಮನಸ್ಸಿನ ಒಂದು ಸುಪ್ತ ಮೂಲೆಯಲ್ಲಿ ದೇವರ ಇರುವಿಕೆ ಒಪ್ಪಿಬಿಟ್ಟಿರುತ್ತಾರೆ. ಇದು ದೇವರು ಎಂಬ ಶಬ್ದದ ಮಹಿಮೆ. ಇನ್ನು ದೇವರ ಮಹಿಮೆ ಹೇಳತೀರದು. ಆವಿಪಾಲ ಗೋಪಾಲನಿಂದ ಆರಂಭಿಸಿ ಬ್ರಹ್ಮದೇವರ ಪರ್ಯಂತ ಎಲ್ಲರಿಗೂ ಎಲ್ಲ ಕಾರ್ಯಗಳಿಗೂ ದೇವ ಬೇಕು.
*ದೇವರನ್ನು ಹೇಗೆ ಸ್ತುತಿಸಬೇಕು..??*
ದೇವರನ್ನು ಸ್ತುತಿಸುವಾಗ, ದೇವರ ಮಹಿಮೆ ಕೊಂಡಾಡುವಾಗ, ಗುಣ ತಿಳಿಯುವಾಗ, ಸೇವೆ ಮಾಡುವಾಗ, ಧರ್ಮ ಪಾಲಿಸುವಾಗ "ಮನಃಪೂರ್ವಕ ಪ್ರೇಮಭರಿತ ಆನಂದದಿಂದ ತನ್ಮಯರಾಗಿ ಆಚರಿಸುವದು ಅತ್ಯಂತ ಸೂಕ್ತ" ಅದುವೇ ಶ್ರೇಷ್ಠ. ಭಾಗವತದ ಮತವೂ ಹೀಗೆಯೇ...
*ತಂ ನಿರ್ವೃತಃ* ಎಂಬ ಭಾಗವತದ ಪ್ರಮೇಯದಲ್ಲಿ ವ್ಯಾಖ್ಯಾನಿಸುತ್ತಾರೆ. *ತಾನು ಮಾಡುವ ಕಾರ್ಯ ತನಗೇ ಆನಂದವನ್ನು ತಂದು ಕೊಡದಿರೆ, ಶ್ರೀಹರಿಗೆ ಎಲ್ಲಿಂದ ಆನಂದವನ್ನು ತಂದು ಕೊಟ್ಟೀತು..?? ಹಾಗಾಗಿ ವಿಷ್ಣುಪ್ರೀತಿಗೋಸ್ಕರ ಮಾಡುವ ಯಾವುದೇ ಕಾರ್ಯ ಮೊದಲಿಗೆ ತನಗೆ ತೃಪ್ತಿಯಾಗುವ ಹಾಗೆ ಮಾಡುಬೇಕು* ಎಂದು. ತನಗೆ ತೃಪ್ತಿಯಾಗಬೇಕು ಎಂದಾದರೆ ಆ ಕಾರ್ಯದಲ್ಲಿ ಪೂರ್ಣ ಮನಸ್ಸಿರಬೇಕು. ಸ್ನೇಹ ಭರಿತವಾಗಿರಬೇಕು. ವಿಷ್ಣು ಪ್ರಿತಿಯೇ ಬಲವಾದ ಉದ್ಯೇಶ್ಯವಾಗಿರಬೇಕು.
*ಇಂದಿನ ದೇವರ ಪೂಜೆ ಮೊದಲಾದವುಗಳು...*
ಸಾಮಾನ್ಯವಾಗಿ ಇಂದು ನಡೆಯುವ ದೇವರ ಪೂಜೆ, ಜಪ, ಪಾರಾಯಣ, ಯಜ್ಙ, ಯಾಗ, ಧರ್ಮ, ಕರ್ಮ, ದಾನ, ಪರೋಪಕಾರ, ಇವೆಲ್ಲವೂ ಯಾಂತ್ರಿಕ ಕ್ರಿಯೆಯಾಗಿರುತ್ತದೆ. ಮನಃಪೂರ್ವಕ ಆಗಿರುವದಿಲ್ಲ.
ಹೇಗೆಂದರೆ *ಖಜಾನೆಯ ನೌಕರ ಪ್ರತಿನಿತ್ಯ ಲಕ್ಷ ಲಕ್ಷ ಹಣ ಎಣಿಸುತ್ತಾನೆ, ಅದರಲ್ಲಿ ಅನುರಾಗ ಪ್ರೀತಿ ಇರುವದಿಲ್ಲ. ಅಂತೆಯೇ ಬರೆ ಜೇಬಿನಲ್ಲಿ ಮನೆಗೆ ತಿರುಗಿ ಬರುತ್ತಾನೆ* ಹೇಗೋ ಹಾಗೆಯೇ ಮಹಾ ಮಹಾ ದೇವರಪೂಜೆ ಜಪ ಪಾರಾಯಣ ಯಜ್ಙ ಯಾಗ ಇತ್ಯಾದಿಗಳನ್ನು ಮಾಡಿದಾಗಲೂ *ನನ್ನ ಜೋಬು ನೋಡಿದರೆ ಖಾಲಿ ಖಾಲಿ, ಮನೆಗೆ ಬರುವಾಗ ಬರಿಗೈ* .......
ಅಲೌಕಿಕ ಲಾಭಗಳು ಎಂದಾಗುತ್ತೋ ತಿಳಿಯುದು, ಲೌಕಿಕ ಲಾಭಗಳಿಗೆ ದೇವರು ಬೇಡವೆ...?? ಸರ್ವಥಾ ಬೇಡವೆನ್ನುತ್ತಾರೆ ಎಕಾಂತಿಗಳು.
ಲೌಕಿಕ ಲಾಭವಿಲ್ಲದ ದೆವರು ಬೇಕು ಯಾಕೆ ?? ಎಂದು ನಾವು ಗೊಗೆರದರೆ, ನಮ್ಮ ಗುರುಗಳು ಕೊಟ್ಟ ಉತ್ತರ *"ಲೌಕಿಕ ಲಾಭಕ್ಕಾಗಿ ದೇವರು ಬೇಕಾ.. ??" ವಿಚಾರಿಸು* ಎಂದು.
ದೇವರಲ್ಲಿ ಭರವಸೆ ಇರಲಿ, ಮಾಡುವ ಕಾರ್ಯ ಪ್ರೀತಿಯಿಂದ ಮನಃಪೂರ್ವಕ ಭಕ್ತಿಯಿಂದ ಮಾಡು. ಅದರಲ್ಲಿ ಯಶಸ್ಸು ನೂರು ಪ್ರತಿಶತ ಸಿದ್ಧ. ಸಿದ್ಧಿಪಡೆದವರು ಅಂದಿನಿಂದ ಲೆಕ್ಖ ಹಾಕಿ ನೋಡಿದರೆ ಲೆಕ್ಖವೇ ಸಿಗದು. ಅನಂತ ಬ್ರಹ್ಮ ರುದ್ರ ಇಂದ್ರ ಮೊದಲಾದ ದೇವತೆ ಋಷಿ ಮಾನವರು ಇದ್ದಾರೆ.
*ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ* ಪ್ರೇಮ ಸ್ನೇಹ ಭಕ್ತಿ ವಿಲ್ಲದ ಕಾರ್ಯ ಕೇಳುವದಿಲ್ಲ, ನೋಡವದೂ ಇಲ್ಲ, ಅದನ್ನು ಸಹಿಸಿಕೊಳ್ಳುವದೂ ಇಲ್ಲ. ಆದ್ದರಿಂದ ಮಾಡುವ ನೂರಾರು ಧರ್ಮಗಳನ್ನೂ ಪ್ರೀತಿಯಿಂದ ಪೂರ್ಣ ಭರವಸೆಯಿಂದ ಮಾಡೋಣ. ಪರಿಪೂರ್ಣ ಫಲಪಡೆಯೋಣ....
*✍🏻✍🏻✍🏻 ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
Comments