*ಪುರಂದರ ದಾಸರ ಆರಾಧನಾ ಮಹೋತ್ಸವ - "ದಾಸರ ಒಂದು ದಿವ್ಯ ಸಂದೇಶ..."*
*ಪುರಂದರ ದಾಸರ ಆರಾಧನಾ ಮಹೋತ್ಸವ - "ದಾಸರ ಒಂದು ದಿವ್ಯ ಸಂದೇಶ..."*
ನಮಗೆಲ್ಲರಿಗೂ ಇಂದು ದಾಸ ಶ್ರೇಷ್ಠ *ಪುರಂದರ ದಾಸರ* ಆರಾಧನಾ ಮಹೋತ್ಸವ ಎಂದು ತಿಳಿದಿದೆ. ದಾಸರಾಯರ ದಿವ್ಯವಾದ ಸಂದೇಶಗಳು ನಾಲ್ಕು ಲಕ್ಷ ಇಪ್ಪತ್ತೈದು (ಅಥವಾ ಎಪ್ಪತ್ತೈದು) ಸಾವಿರ. ಅದರಲ್ಲಿಯ ಒಂದು ಉತ್ತಮ ಸಂದೇಶ ಇಂದಿನ ಅತ್ಯಂತ ಘೋರವಾದ ಈ ದಿನಗಳಿಗೆ ಒಪ್ಪುವ ಮಾತು.
*ನರಸಿಂಹ ಮಂತ್ರ ಒಂದೇ ಸಾಕು ಮಹಾ - | ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ||*
ಇಂದು ಕ್ಷಣ ಕ್ಷಣಕೆ ಕೋಟಿ ಕೋಟಿ ದುರಿತಗಳು. ಅನಾಹುತಗಳು. ಅಪಜಯಗಳು. ಮನಸ್ಸಿಗೆ ಸಮಾಧಾನವಿಲ್ಲ. ದುಗುಡ ಹೆಚ್ಚಾಗಿದೆ. ಪಾಪಗಳಿಗೆ ಮಿತಿಯಿಲ್ಲ. ವ್ಯತಿರಿಕ್ತ ವಿದ್ಯಮಾನಗಳೇ ಎಲ್ಲೆಡೆ. ಅದರಲ್ಲೂ ಪ್ರಕೃತ ಈ ದಿನಗಳು ಅತಿ ಘೋರ. ಈ ಎಲ್ಲದನ್ನು ತಡೆಯುವ ದಿವ್ಯ ಮಂತ್ರ, ಭಾಗ್ಯವನ್ನು ಕೊಡುವದೂ ಎಂದರೆ ನರಸಿಂಹ ಮಂತ್ರ. ಇದನ್ನು ಬಿಟ್ಟು ಮತ್ತೆ ಯಾವದೂ ಇಲ್ಲವೇ ಇಲ್ಕ. ಈ ನರಸಿಂಹ ಮಂತ್ರವನ್ನು ಎಷ್ಟೇ ಆಪತ್ತುಗಳು ಬರಲಿ, ಎಷ್ಟೇ ಬ್ಯುಸಿ ಆಗಿರಲಿ, ರೋಗ ರುಜಿನಗಳಿಗೆ ತುತ್ತಾಗಿರಲಿ ಏನಾದರೂ ಆಗಿರಲಿ ನಿತ್ಯ ಬಿಡದೆ ಜಪಿಸೋಣ. ಪಠಿಸೋಣ. ಸ್ತುತಿಸೋಣ. ಚಿಂತಿಸೊಣ. ಎಂದು ತಿಳಿಸುವ ಸುಂದರ ಸಂದೇಶ ದಾಸರಾಯರದ್ದು. ಪಾಲಿಸುವದು ಬಿಡುವದು ನಮಗೆ ಬಿಟ್ಟಿರುವದು.
*ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ | ಅಸುರನೊಡಲ ಬಗೆದ ದಿವ್ಯ ಮಂತ್ರ || ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |ಪಶುಪತಿಗೆ ಪ್ರಿಯವಾದ ಮೂಲ ಮಂತ್ರ ||*
ದುಷ್ಟರ ಮಡುವಿನಲ್ಲೇ ಇದ್ದ ಪ್ರಲ್ಹಾದನನ್ನು ಕಾಯ್ತು ಈ ಮಂತ್ರ. ಭಕ್ತನನ್ನು ರಕ್ಷಿಸುವದು ಮಾತ್ರವಲ್ಲ ದುಷ್ಟ ಹಿರಣ್ಯಕನನ್ನು ಕೊಂದು ಹಾಕಿತು ಈ ಮಂತ್ರ. ಹಿರಣ್ಯಕನ್ನನ್ನು ಮಾತ್ರವಲ್ಲ ಎಲ್ಲ ದುಷ್ಟರನ್ನೂ ಸಂಹರಿಸಿತು ಈ ಮಂತ್ರ. ಅಂತೆಯೇ ರುದ್ರದೇವರು ವಾಯುದೇವರು ನಿರಂತರ ಜಪಿಸುವದು ಈ ಮಂತ್ರ. ಸ್ವಯಂ ದೇವರಿಗೆ ಅತೀವ ಪ್ರಿಯವಾದದ್ದು ಈ ಮಂತ್ರ. ನಾವ್ಯಾಕೆ ಜಪಿಸ ಬಾರದು...??
*ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ | ಶಿಷ್ಟ ವಿಭೀಷಣನ ಪೊರೆದ ಮಂತ್ರ || ತುಟ್ಟತುದಿಯೊಳು ಅಜಾಮಿಳನ ಸಲಹಿದ ಮಂತ್ರ | ಮುಟ್ಟಿ ಭಜಿಪರಿಗಿದು ಮೋಕ್ಷಮಂತ್ರ ||*
ಮನೆಬಿಟ್ಟು ಅಲೆಮಾರಿಯಾದ ಧೃವನನ್ನು ಪಟ್ಟಕಟ್ಟಿದ್ದೂ ಈ ಮಂತ್ರವೇ. ಶಿಷ್ಟನಾದ ವಿಭೀಷಣನಿಗೆ ರಾಜ್ಯ ಕೊಟ್ಟದ್ದು ಮಂತ್ರ ಇದುವೇ. ಅತ್ಯಂತ ಪಾಪಿಷ್ಠನಾದ ಅಜಾಮಿಳನಿಗೆ ಕೊನೆಕಾಲದಲ್ಲಿ ಮುಕ್ತಿ ಕೊಟ್ಟದ್ದೂ ಇದೇ ಮಂತ್ರ. *ನಿತ್ಯದಲ್ಲಿಯೂ ಪ್ರೀತಿಯಿಂದ ಭಜಿಪರಿಗೆ ಜಪಿಸುವವರಿಗೆ ಮುಕ್ತಿಕೊಡುವದು ಈ ಮಂತ್ರ.* ನಿಃಶ್ಶೇಶ ಸಕಲ ಆಪುತ್ತಗಳು ಪರಿಹಾರವೀಯುವ ಮಂತ್ರ. ನಾವ್ಯಾಕೆ ಜಪಿಸಬಾರದು...??
*ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ | ಕೊಂಡಾಡೆ ಲೋಕಕುದ್ದಂಡ ಮಂತ್ರ || ಗಂಡುಗಲಿ ಪ್ರಚಂಡ ಹಿಂಡು ದಾನವರ | ಗಂಡ ಪುರಂದರವಿಠಲನ ಮಹಾ ಮಂತ್ರ*
ನಮ್ಮ ಬೆನ್ನಟ್ಟಿದ ಭೂತ - ಪ್ರೇತ - ಪಿಶಾಚ - ಅಭಿಚಾರ - ಪಾಪ ಇವುಗಳಲ್ಲೆವನ್ನು ಮೆಟ್ಟಿ ನಿಲ್ಲುವ ದಿವ್ಯ ಶಕ್ತಿ ಈ ಮಂತ್ರಕ್ಕೇ ಇದೆ. ಈ ಮಂತ್ರವನ್ನು ಕೊಂಡಾಡಿದವಗೆ ಸರ್ವಸ್ವವನ್ನೂ ಈಯುವ ಮಂತ್ರ. ಕಲಿ ಕಾಲನೇಮಿ ಮೊದಲಾದ ಭೂತ ಪ್ರೇತ ಪಿಶಾಚ ಅಭಿಚಾರ ಅಪಮೃತ್ಯು ದುಃಖ ಪೀಡೆ ಹತಾಶೆ ಈ ಎಲ್ಲದಕ್ಕೂ ಅಂತ್ಯಕಾಣಿಸುವ ಉದ್ದಂಡ ಮಂತ್ರ *ಪುರಂದರ ವಿಠ್ಠಲನಿಂದ ಪ್ರತಿಪಾದ್ಯವಾದ ಶ್ರೀ ನರಸಿಂಹ ಮಂತ್ರ.* ಎಂದು ದಾಸರಾಯುರು ಕೊಂಡಾಡುತ್ತಾ ನಮಗೆ ಸಂದೇಶ ಕೊಡುತ್ತಿದ್ದಾರೆ.
ಹೀಗಿರುವಾಗ ಮೇಲಿನ ಎಲ್ಲದರ ಬಲೆಯಲ್ಲಿ ಸಿಕ್ಕುಬಿದ್ದ ನಾವೆಲ್ಲರೂ ನಿತ್ಯವೂ *ಪುರುಷರು 14 ಬಾರಿ "ಮನ್ಯುಸೂಕ್ತ", 108 ಸಲ "ನಖಸ್ತುತಿ" - ಸ್ತ್ರೀಯರೆಲ್ಲರೂ 14 ಬಾರಿ "ನರಸಿಂಹ - ದುರ್ಗಾ" ಸುಳಾದಿ ಇತ್ಯಾದಿಗಳನ್ನು ಪಾರಾಯಣ ಯಾಕೆ ಮಾಡಬಾರದು....??*
ನಾಳೆಯದಿನ ಉತ್ತಮ ಮುಹೂರ್ತವಿದೆ. ನಮಗಾಗಿ ನಮ್ಮ ಕುಟುಂಬಕ್ಕಾಗಿ, ನಮ್ಮ ಸಮಾಜಕ್ಕಾಗಿ, ನಮ್ಮ ದೇಶಕ್ಕಾಗಿ *ಶ್ರೀ ದುರ್ಗಾಪತಿ ನರಸಿಂಹದೇವರ* ಆರಾಧನೆ ಜಪ ಪಾರಾಯಣ ಆರಂಭಮಾಡಿಯೇ ಬಿಡೋಣ. ಏನಾದರೂ ಬಿಡುವದು ಬೇಡ. ಈ ಮಂತ್ರಗಳ ಜಪ ಪಾರಯಣ ಒಂದು ದಿನವಲ್ಲ ವರ್ಷವರ್ಷಗಳಿಗೆ ಬಿಡದೆ ಆಗಲೇ ಬೇಕಾದ ಮಂತ್ರ.....
*ಒಂದಂತೂ ನಿಶ್ಚಿತ " ಸ್ವಯಂ ದೇವರೇ ಕೈ ತೊಳೆದು, ಟೊಂಕ ಕೈಕಟ್ಟಿ, ಸಿದ್ಧ ಹಸ್ತನಾಗಿ ಕ್ಷಣ ಬಿಡದೆ ಕಾಯುವದು ಈ ಮಂತ್ರವೇ...*
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments