*ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ.....*
- *ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ.....*
ದೇವರ ಮೆಚ್ಚಿಸುವಿಕೆ ನಮ್ಮ ಜೀವನದ ಧ್ಯೇಯ. ದೇವರ ಮೆಚ್ಚಿಗೆಯೇ ನಮಗೆ ಸಕಲ ವೈಭವ. ಆದರೆ ಮೆಚ್ಚಿಸುವ ಬಗೆ ಮಾತ್ರ ತಿಳಿಯದು. ಮೆಚ್ಚಿಸುವದು ಅಸಾಧ್ಯವೂ ಹೌದು. ದೇವ ಲಕ್ಷ್ಮೀಪತಿ. ವಾಯು ಪಿತಾ. ಜಗದೊಡೆಯ. ಜಗಜ್ಜನ್ಮದಿಕರ್ತಾ. ನಾನೋ ಅತ್ಯಲ್ಪ. ಮಂದಮತಿ. ವಿಕ್ಷಿಪ್ತ. ಅಜ್ಙಾನಿ. ಚಂಚಲ. ನಿನ್ನ ಮೆಚ್ಚಿಸುವದು ನನ್ನಿಂದ ಸಾಧ್ಯವೇ.... ... ???
*ಲಕ್ಷ್ಮೀಪತಿ ಶ್ರೀಹರಿ*
"ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಕಿ" ನಿಂತು ನಾನಾ ರೂಪಗಳನ್ನು ತಾಳಿ ನಿರಂತರ ಲಕ್ಷ್ಮೀದೇವಿಯಿಂದ ಪೂಜಿತನಾದ ದೇವನಿಗೆ ನಾವು ನಾವು ಪೂಜಿಸಿ ಸಂತುಷ್ಟನನ್ನಾಗಿ ಮಾಡಿ ಮೆಚ್ಚಿಸುವದು ಎನ್ನುವದು ಎಷ್ಟರ ಮಟ್ಟಿಗೆ ಹಾಸ್ಯಕ್ಕೆ ಕಾರಣವಾಗಬಹುದು ಅಲ್ಲವೇ. ಅಸಾಧ್ಯದ ಕೆಲಸ ಹೌದು. ಎಂದು ನಿರಂತರ ನಮಗೆ ಅನಿಸುವದು ಸಹಜ. ಆದರೆ...
ಶಾಸ್ತ್ರ ಬಹು ಸುಂದರವಾಗಿ ತಿಳಿಸುತ್ತದೆ "ಯದೀಂದಿರಾರಾಧ್ಯಪದೋ ಮುಕುಂದಃ ದುರ್ವಾಂಕುರೈಃ ಮಂದಜನೈರಪೂಜ್ಯಃ" "ಲಕ್ಷ್ಮೀದೇವಿಯಿಂದ ನಿರಂತರ ಪೂಜಿತನಾಗಿದ್ದರೂ, ನಾವು ಅರ್ಪಿಸುವ ದೂರ್ವಾ ತುಳಸಿಯನ್ನು ಸಮರ್ಪಿಸಿದರೂ, ಪ್ರೀತಿಯಿಂದ ಸ್ವೀಕರಿಸಿ ಸಂತುಷ್ಟನಾಗುವ" ಎಂದು. ಗೀತೆಯಲ್ಲಿ "ಪತ್ರಂ ಪುಷ್ಪಂ ಫಲಂ ತೋಯಂ ಯೇ ಮೇ ಭಕ್ತ್ಯಾ ಪ್ರಯಚ್ಛತಿ" ಎಂದು ತಿಳಿಸಿದಂತೆ ಏನು ಕೊಟ್ಟರೂ ಸ್ವೀಕರಿಸುವವ ದೇವ. ಅದು ಭಕ್ತಿ ಇದ್ದರೆ ಮಾತ್ರ.
*ಪುರಂದರ ದಾಸರ ದೃಷ್ಟಿಯಲ್ಲಿ ದೇವರನ್ನು ಮೆಚ್ಚಿಸುವ ಬಗೆ.....*
ಶುದ್ಧ ನೀರಿನಿಂದ ಅಭಿಷೇಕಮಾಡಿ ಮೆಚ್ಚಿಸುವ ವಿಚಾರ ನಮ್ಮದಾದರೆ, ತನ್ನ ಪಾದಾಂಗುಷ್ಠದಿಂದಲೇ "ಪರಮ ಮಂಗಳೆಯಾದ ಗಂಗೆಯನ್ನು ಪಡೆದವ ದೇವ."
ಸ್ತೋತ್ರ ಮಾಡಿ ಹಾಡು ಹಾಡಿ ಮೆಚ್ಚಿಸೋಣ ಎಂದರೆ ತುಂಬರು ನಾರದ ವಾಯುಗಳಿಂದ ನಿರಂತರ ಸ್ತುತ್ಯ ಅಖಂಡ ಸ್ತೋತ್ರ ನಾಡಿಸಿಕೊಳ್ಳುವವನು ನೀನು. "ಹೂ" ಅರ್ಚನೆ ಮಾಡಿ ನಿನ್ನ ಮೆಚ್ಚಿಸೋಣ ಎಂದರೆ "ನಿನ್ನ ಹೊಕ್ಕಳುವಿನಿಂದಲೇ ಕಮಲವನ್ನು ಪಡೆದವ ನೀ." "ನೈವೇದ್ಯ" ಮಾಡಿ ಮೆಚ್ಚಿಸೋಣ ಎಂದರೆ ಮುವತ್ತುಮೂರು ಕೋಟಿ ದೇವತಾ ಸಮೂಹವೇ ನಿನಗೆ ನೈವೆದ್ಯ ಮಾಡುತ್ತದೆ.
"ದೀಪ" ಬೆಳಗಿಸಿ ನಿನ್ನ ತೃಪ್ತಿಪಡಿಸೋಣ ಎಂದರೆ ಅನಂತ ಸೂರ್ಯರ ಪ್ರಕಾಶ ನಿನಗಿದೆ. ಹೇಗೋ ನಿನ್ನ ಮೆಚ್ಚಿಸಲಿ....????
"ಭಂಗಾರ ಬೆಳ್ಲಿ" ಇವುಗಳಿಂದ ಮೆಚ್ಚಿಸೋಣ ಎಂದರೆ ಸ್ವಯಂ ಲಕ್ಷ್ಮೀ ದೇವಿ ನಿನ್ನ ಎದೆಯಲ್ಲಿಯೇ ವಾಸವಾಗಿರುವವಳು. "ಹಾಸಿಗೆ" ತಂದು ಹಾಸಿ ಮೆಚ್ಚಿಸೋಣ ಎಂದರೆ ಸ್ವಯಂ ಶೇಷಶಾಯಿ ಆಗಿರುವಿ. "ಬೀಸಣಿಕೆ" ತಂದು ಬೀಸೋಣ ಎಂದರೆ, ಛಂದೋಮಯನಾದ ಗರುಡ ತನ್ನ ರೆಕ್ಕೆಯಿಂದ ನಿರಂತರವಾಗಿ ಬೀಸ್ತಾ ಇದಾನೆ. ಹೀಗಾಗಿ ಹೇಗಯ್ಯ ನಿನ್ನ ಮೆಚ್ಚಿಸಲಿ...?? ನಿನ್ನ ಮೆಚ್ಚಿಸುವ ಮೇಲಿನ ಯಾವ ಸಾಧನೆಯೂ ನನ್ನಲ್ಲಿ ಅತ್ಯಲ್ಪ ಕ್ಷುದ್ರವೇ ಆಗಿದೆ...
*ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ....??*
ಹೀಗೆ ತಲೆ ಕೆಡಿಸಿಕೊಂಡರೆ ದಾಸರಾಯರು ತಿಳಿಸುತ್ತಾರೆ "ಅನಂತ ಗುಣಪೂರ್ಣನು ನೀನು, ಸ್ವಯಂ ಸಚ್ಚಿದಾನಂದ ಸ್ವರೂಪಿಯು ನೀನು, ಸನಕಾದಿ ವಾಯು ಪರ್ಯಂತ ಅನಂತ ಜೀವರಾಶಿಗಳಿಂದ ವಂದ್ಯನು ನೀನು. ಕರುಣಾ ಸಾಗರ. ದಯಾ ಮೂರುತಿಯು ನೀನು. ಭಕ್ತಾಪರಾಧ ಸಹಿಷ್ಣುವೂ ನೀನಾಗಿರುವಿ. ಭಕ್ತರು ಕೊಟ್ಟಿದ್ದು ಅತ್ಯಲ್ಪವಾಗಿದ್ದರೂ ಬಹುವಾಗಿ ಸ್ವೀಕರಿಸಿ ಮೆಚ್ಚುವಿ. ಅನಂತಜೀವರಿಗೆ ಮುಕ್ತಿ ಪ್ರದಾತಾ. ಇತ್ಯಾದಿ ಅನಂತ ಗುಣಪೂರ್ಣನಾದ ಹೇ ಶ್ರೀಹರಿ !! *ಭಕ್ತಿದಾಯಕ - ಭಕ್ತಿ ದಯಪಾಲಿಸುವವ* ಎಂದು ನಿರಂತರ ಕೊಂಡಾಡುವದೇ ನಿನ್ನ ಮೆಚ್ಚಿಸುವ ಸುಲಭ ಉಪಾಯ ಎಂದು ಪುರಂದರ ದಾಸರು ಸುಂದರವಾಗಿ ಪ್ರಾರ್ಥಿಸುತ್ತಾರೆ....
ನಿತ್ಯದಲ್ಲಿಯೂ ನಾವು ಹತ್ತು ಹತ್ತು ಸೆಕೆಂದು ಆದರೂ ದೇವರನ್ನು ಮೆಚ್ಚಿಸುವ ಈ ಬಗೆಯನ್ನು ರೂಢಿಸಿಕೊಳ್ಳೋಣ..
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments