*ಧಾರ್ಮಿಕ ವಾತಾವರಣ ಬೆಳಿಸದಿದ್ದರೆ, ಮುಂದೊಂದು ದಿನ ಸುಖ ಶಾಂತಿಯಿಂದ ವಂಚಿತರಾಗುವದು ನಿಶ್ಚಿತ*
*ಧಾರ್ಮಿಕ ವಾತಾವರಣ ಬೆಳಿಸದಿದ್ದರೆ, ಮುಂದೊಂದು ದಿನ ಸುಖ ಶಾಂತಿಯಿಂದ ವಂಚಿತರಾಗುವದು ನಿಶ್ಚಿತ*
ಆತ್ಮ ಮತ್ತು ದೇಹ. ಆತ್ಮಾ ಒಂದೆಡೆ ಸೆಳದರೆ, ದೇಹ ಮತ್ತೊಂದೆಡೆ ಸೆಳೆಯುತ್ತದೆ. ಆತ್ಮಕ್ಕೆ ಶಾಶ್ವತವಾದದ್ಧೇ ಬೇಕು. ದೇಹಕ್ಕೆ ಏನು ಸಿಕ್ಕರೂ ಸರಿ.
*ದೇಹದ ಸ್ಥಿತಿ ತುಂಬ ವಿಚಿತ್ರ...*
ದೇಹಕ್ಕೆ ಹತ್ತು ಇಂದ್ರಿಯಗಳು. ಒಂದೊಂದು ಇಂದ್ರಿಯಗಳೂ ಒಂದರ ನಂತರ ಒಂದೊಂದು ಬಯಸುವುದೇ. ಬಯಸುವದು ಇಂದ್ರಿಯ ಕೆಲಸವಾದರೆ, ಒದಗಿಸುವದು ದೇಹದ ಕೆಲಸ. ಬಯಸಯವವರು ಹತ್ತು ಜನರಾದರೆ, ಒದಗಿಸುವವ ಒಬ್ಬನೇ. ಅಂತೆಯೇ ಜೀರ್ವಾಗಿ ಪುಪ್ಪರಡಿ ಮುದಿಯಾಗುವದು ದೇಹವೇ ಹೊರತು ಇಂದ್ರಿಯಗಳಲ್ಲ. ಒಂದು ದಿನ ಕಳಚಿ ಬೀಳುತ್ತದೆಯೂ ಸಹ. ಇದು ಈ ದೇಹದ ದುರವಸ್ಥೆ.
*ಆತ್ಮನ ಅವಸ್ಥೆ...*
ದೇಹ ಅಂಗಿ ಇದ್ದ ಹಾಗೆ. ಅಂಗಿಯ ಕಡೆ ಹೆಚ್ಚು ಗಮನ ಕೊಟ್ಟು, ತಾನು ಉಪವಾಸ ಬೀಳುವ ಮನುಷ್ಯನ ಹಾಗೆ ನಮ್ಮ ಪರಿಪೂರ್ಣ ಗಮನ ದೇಹದೆಡೆ. ಉಪವಾಸ ವನವಾಸದಲ್ಲಿ ಆತ್ಮಾ. ಈ ಅವಸ್ಥೆ ಆತ್ಮನದು. ದೇಹದ ಸಂದರ್ಯ ಸೌಷ್ಠವದ ಕಡೆ ಗಮನ ಕೊಡುವದರಲ್ಲಿಯೇ ಆತ್ಮನನ್ನು ಸೊರಗಿಸುತ್ತಾ ಇದ್ದೇವೆ. ಆತ್ಮನ ಗುಣಗಳಾದ ಸೌಖ್ಯ ಸಮೃದ್ಧಿ ಶಾಂತಿ ಇತ್ಯಾದಿಗಳು ಅಭಿವ್ಯಕ್ತಿಗೇ ಬಾರದ ಸ್ಥಿತಿಗೆ ತಂದು ಇಟ್ಟಿದ್ದೇವೆ.
*ಆತ್ಮಾ - ದೇಹ*
ದೇಹದ ಸುಖ ಬೆಳೆಸಲು, ದೇಹದ ಕಷ್ಟಗಳನ್ನು ದೂರೋಡಿಸಲು ಮೋಸ, ವಂಚನೆ, ಸುಲಿಗೆ, ಹಿಂಸೆ, ಅಮಲು ಸೇವನೆ, ಆಲಸ್ಯ, ಸುಳ್ಳು, ಇವೆಲ್ಲವೂ ಅವಶ್ಯವಾಗಿ ಬೇಕಾಗುತ್ತದೆ. ಹೇಗಬೇಕೋ ಹಾಗೆ ಇದ್ದರೂ ದೇಹದ ಸೌಖ್ಯ ಸಿಗುವದು. ಆದರೆ ....
ಆತ್ಮಸೌಖ್ಯ ಸಿಗುವದು *ದೇವರ ಭಯ ಬೆಳಿಸಿದವನಿಗೆ ಮಾತ್ರ.* ದೇವರ ಶಾಸ್ತ್ರದ ಭಯ ಆತ್ಮನನ್ನು ನಿರಂತರವಾಗಿ ಎಚ್ಚರಿಸುತ್ತದೆ , ದೇಹದ ಸೆಳೆತವನ್ನು ತಡೆಗಟ್ಟುವ ಅಮೋಘಶಕ್ತಿಯನ್ನು ದಯಪಾಲಿಸುತ್ತದೆ. ಸನ್ಮಾರ್ಗದಲ್ಲಿ ಇರಿಸುತ್ತದೆ. ಇದುವೇ ದೇಹವನ್ನು ದಂಡಿಸಿ ಆತ್ಮನನ್ನು ಗೆಲ್ಲಿಸುವ ಉಪಾಯ. ಈ ಉಪಾಯಗಳನ್ನು ರೂಢಿಸಿದವ ದೇಹದ ಪಶುಭಾಗವನ್ನು ಗೆಲ್ಲತ್ತಾ ಬರುವ. ಆಗ ಆತ್ಮನ ಕಡೆ ಗಮನ ಹೆಚ್ಚಾಗುತ್ತಾ ಸಾಗುತ್ತದೆ.
ಆತ್ಮನ ಕಡೆ ಒಂದು ಬಾರಿ ಗಮನ ಹರಿಯಿತು ಎಂದಾದರೆ ಆತ್ಮನ ಗುಣಗಳಾದ ಸತ್ಯ, ಅಹಿಂಸ, ದಯೆ, ಕರುಣೆ, ಉದಾರತೆ, ದಾನ, ಪರೋಪಕಾರ ಜ್ಙಾನ, ತೃಪ್ತಿ, ಶಾಂತಿ ಇವುಗಳು ಬೆಳೆಯುತ್ತಾ ಸಾಗುತ್ತವೆ. ಆತ್ಮನಿಗೆ ಆಹಾರ ದೊರೆಯಿತು ಆತ್ಮಾ ದೃಢನಾಗುವ, ದಷ್ಟಪುಷ್ಟನಾಗುವ.
*ದೈವೀ ಭಯ*
ದೇವ ಸರ್ವಸ್ವಾಮಿ. ಎಲ್ಲವೂ ಅವನ ಅಧೀನ. ಎಲ್ಲವನ್ನೂ ಅವನೇ ದಯಪಾಲಿಸುವವ. ಅವನ ಕರುಣೆ ಹಾಗೂ ಗುಣವಂತಿಕೆ ನಮ್ಮ ಜೀವನದಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತದೆ. ಅವನ ಪ್ರೇರಣೆಯಿಂದ ಗುಣವಂತನಾಗುವದೇ ಆತ್ಮನ ಪೋಷಣೆ.
ಆತ್ಮನ ಗುಣಗಳ ಅಭಿವ್ಯಕ್ತಿಗೆ (ಗುಣವಂತನಾಗುವದಕ್ಕೆ) *ದೈವೀ ಭಯ* ಅನಿವಾರ್ಯ. ದೈವ ಭಯ ಹುಟ್ಟಿಸಿ ಧರ್ಮ ಧರ್ಮ ಬೆಳಿಸುವ ಮುಖಾಂತರ ಆತ್ಮ ಪೋಷಣೆಯ ಜವಾಬ್ದಾರಿ ಹಿರಿಯರಾದ ತಂದೆ ತಾಯಿ ಗುರುಗಳದ್ದೇ.
*ಧಾರ್ಮಿಕ ವಾತಾವರಣದಿಂದ ಸಿಗುವ ಲಾಭಗಳು*
ಸಹನೆ, ನೆಮ್ಮೆದಿ, ತೃಪ್ತಿ, ಸಮಾಧಾನ, ಸಮೃದ್ಧಿ, ಧೈರ್ಯ, ಸೋಲು ಎದುರಾದಾಗಲೂ ಗೆಲುವು ಮುಂದೂಡಿದೆ ಎಂಬ ಭಾವ, ದುಃಖದಲ್ಲಿ ಸಿಕ್ಜುಬಿದ್ದಾಗಲೂ ಅಲ್ಪದರಲ್ಲೇ ಪಾರಾದೆ ಎಂಬ ಭಾವ, ದೇವರೇ ರಕ್ಷಿಸುವ ಎಂಬ ಭರವಸೆ, ಆನುಭಾವಿಕರ ಮಾತು ಕೇಳುವದರಲ್ಲಿ ಆದರ, ಹೀಗೆ ನೂರಾರು ಲಾಭಗಳು. ಈ ಎಲ್ಲ ಲಾಭಗಳೂ ಶಾಂತಿ ಸಮೃದ್ಧಿಯೆಡೆಗೇಯೇ.
ದೈವ ಭಯ ಬೆಳಿಸಿಕೊಂಡು, ದೈವೀಭಯ ಬೆಳಿಸಿ, ಧಾರ್ಮಿಕತೆಯಲ್ಲಿ ಮುಳುಗಿ, ಧಾರ್ಮಿಕತೆಯನ್ನು ಬೆಳಿಸಿ, ಆತ್ಮನಿಗೆ ಆಹಾರವಾದ ಗುಣಗಳನ್ನು ಅಭಿವೃದ್ಧಿಸುವದ ಅತ್ಯಂತ ಅನಿವಾರ್ಯ. ಇಲ್ಲವೇ ಶಾಂತಿ ಸುಖ ಸಮೃದ್ಧಿ ಹಗಲುಗನಸೇ ಆಗಿ ಉಳಿಯಬಹುದು....... ಅಂತೆಯೇ ಮನೆಯಲ್ಲಿ ಸಣ್ಣದಾಗಿ ಇಂದಿನಿಂದಲೇ ಬೆಳೆಸುವದು ಅನಿವಾರ್ಯ.
*✍🏻✍🏻✍🏻ನ್ಯಾಸ.*
ಗೋಪಾಲ ದಾಸ
ವಿಜಯಾಶ್ರಮ ಸಿರವಾರ
Comments