*ಪ್ರಪತ್ತಿಯೇ ಮಾಯಾ ತಾರಣಕ್ಕೆ ಸುಲಭೋಪಾಯ....*

*ಪ್ರಪತ್ತಿಯೇ ಮಾಯಾ ತಾರಣಕ್ಕೆ ಸುಲಭೋಪಾಯ....*

ಜೀವನನ್ನು ಅನಾದಿಯಿಂದ ಸಂಸಾರದಲ್ಲಿ ಇಡುವದು ಸತ್ವ ರಜ ತಮೋ ಗುಣಾತ್ಮಕ ಮಾಯಾ. ಅನಂತ ಕರ್ಮಗಳ ಸುಳಿಯೇ ಸಂಸಾರ. ಈ ಮಾಯಾ ತರಣವೇ ಸಂಸಾರದ ಕೊನೆ. ಸಂಸಾರದ ಕೊನೆಯಾದ ಮೇಲೆ ಮತ್ತೊಂದು ಮಾಯಾ. ಈ ಮಾಯಾ ಭಗವದಿಚ್ಛೆ.  ಆ ಮಾಯಾ ಸರಿದ ಮೇಲೆ ಮುಂದೆ ಬರುವದೇ ಅನಂತ ಆನಂದದ ಗಣಿ.  

*ಈ ಎರಡು ಮಾಯೆಗಳನ್ನು ದಾಟುವದು ಹೇಗೆ... ?? ಇದು ಅರ್ಜುನನ ಪ್ರಶ್ನೆ.*

"ದೈವೀ ಹ್ಯೇಷಾ ಗುಣಮಯೀ
ಮಮ ಮಾಯಾ ದುರತ್ಯಯಾ
ಮಾಮೇವ ಯೇ ಪ್ರಪದ್ಯಂತೇ
ಮಾಯಾಮೇಷಾಂ ತರಂತಿ ತೇ"

ತ್ರಿಗುಣಾತ್ಮಕ ಮಾಯಾ ಪ್ರಕೃತಿ ಒಂದು. ಈ ಪ್ರಕೃತಿ ಜೀವನಿಗೆ ನಾನಾ ವಿಧದಿಂದ ೧) ಜೀವಾಚ್ಛಾದಿಕಾ. ೨) ಪರಮಾಚ್ಛಾದಿಕಾ. ೩) ಕಾಮ. ೪) ಕರ್ಮ. ೫) ಲಿಂಗದೆಹ. ೬ ಪ್ರಕೃತಿ ಹೀಗೆ ಆರು ವಿಧದಿಂದ ಆವರಿಸಿದೆ. ಕೊನೆಯ ಆವರಣ ಭಗವದಿಚ್ಛಾ. ಒಂದೊಂದು ಮಾಯೆಯೂ ಅಚ್ಛೇದ್ಯ. ಅಭೇದ್ಯ. ಇವುಗಳನ್ನು ಭೇಧಿಸಲು ದೇವನಲ್ಲದೇ ಯಾರಿಂದಲೂ ಅಸಾಧ್ಯ.

*ಒಂದೊಂದನ್ನೂ ಕ್ರಮವಾಗಿ ಗೆಲ್ಲುವದು.... ಗೆಲ್ಲುವದು ಹೇಗೆ...*

ಎಲ್ಲ ಮಾಯೆಗಳನ್ನೂ ಗೆಲ್ಲಲು ಸುಲಭೋಪಾಯ ಎಂದರೆ *ಮಾಮೇವ ಯೇ ಪ್ರಪದ್ಯಂತೇ* ಯಾರು ನನಗೆ ಶರಣು ಬರುತ್ತಾರೆಯೋ, ಅವರು *ಮಾಯಾಮೇಷಾಂ ತರಂತಿ ತೇ* ಅವರೇ ಈ ಎಲ್ಲ ವಿಧದ ಮಾಯೆಗಳನ್ನೂ ಗೆಲ್ಲತ್ತಾರೆ. ಕೊನೆಗೆ ನನ್ನ ಇಚ್ಛೆಯನ್ನೂ ಪಾರು ಮಾಡಿ ಅನಂತ ಆನಂದವನ್ನು ಪಡೆಯುತ್ತಾರೆ. 

ಅನಾದಿಯಿಂದ ನಿರಂತರ ಅಧ್ಯಯನ , ಸತ್ಕರ್ಮ, ಸಚ್ಚಾರಿತ್ರ್ಯ, ಧರ್ಮ, ದಾನ, ತೀರ್ಥಯಾತ್ರಾ, ಶ್ರವಣ ಮನನ ನಿಧಿಧ್ಯಾಸನ, ಭಕ್ತಿ, ಧ್ಯಾನ, ಪರಿಪಕ್ವಭಕ್ತಿ, ಪರೋಕ್ಷ ಜ್ಙಾನ ಇವುಗಳ ಫಲವಾಗಿ ಶಾಸ್ತ್ರಾಪರೋಕ್ಷ ಮಾಡಿಕೊಂಡು ಪರಿಪಕ್ವ ಭಕ್ತಿ ಬರುವದು.  ಆಗ "ಕಾಮ" ಕ್ಷೀಣಿಸುತ್ತಾ ಬರುವದು. "ಅಪರೋಕ್ಷ ಜ್ಙಾನ"ದ ನಂತರ ಸಂಚಿತ ಆಗಾಮಿ ಸಕಲ ಕರ್ಮಗಳ ನಾಶ. ಭೋಗಿಸಿದ ನಂತರ ಪ್ರಾರಬ್ಧಕರ್ಮಗಳ ನಾಶ. ಹೀಗಿರುವಾಗ ಶರಣಾಗತ ವತ್ಸಲ ಸ್ವಾಮಿ ಸ್ವಯಂ ತಾನು ಬಂದು " ಜೀವಾಚ್ಛಾದಿಕಾ" ಎಂಬ ಪ್ರಕೃತಿಯನ್ನು ಕೊಂದು ಹಾಕುತ್ತಾನೆ. ನಂತರ "ಪರಮಾಚ್ಛಾದಿಕಾ" ಎಂಬ ಮತ್ತೊಂದು ಆವರಕವನ್ನು  ಕುಟ್ಟಿ ದೂರ ಸರಿಸಿಬಿಡುತ್ತಾನೆ. ನಂತರ ವಿರಜಾನದಿ ಸ್ನಾನಮಾಡಿಸುವ ಮುಖಾಂತರ "ಲಿಂಗದೇಹ" ವೆಂಬ ಆವರಕವನ್ನೂ ನಾಶಪಡಿಸಿ ಬಿಡುವ. ಕೊನೆಗೆ ಆರನೆಯದಾದ ಲಕ್ಷ್ಮೀದೇವಿಯಿಂದ  ಅಭಿಮನ್ಯವಾದ, ಎಲ್ಲದಕ್ಕೂ ಮೂಲವಾದ "ಮೂಲಪ್ರಕೃತಿ" ಯನ್ನು ಸರಿಸಿ, ಈ ಜೀವನನ್ನು ತನ್ನ ಉದರದಲ್ಲಿ ಇರಿಸಿಕೊಂಡು, "ಬಹುತರವಾದ ಆನಂದವನ್ನು" ಅಭಿವ್ಯಕ್ತಗೊಳಿಸಿ ಪ್ರಲಯ ಜಲಧಿಯಲ್ಲಿ ತಾನು ಪರಿಪೂರ್ಣ ಆನಂದದಿಂದ ವಟಪತ್ರಶಾಯಿಯಾಗಿ ವಿರಮಿಸುವ. 

ಬ್ರಹ್ಮಮಾನದ ಪ್ರಕಾರ ಎಂಭತ್ತೇಳು ವರ್ಷಗಳಕಾಲ ಪ್ರಲಯಜಲಧಿಯಲ್ಲಿ ಮಲಗಿದ ದೇವನನ್ನು *ಜಯ ಜಯ* ದುರ್ಗಾದೇವಿ ಪ್ರಾರ್ಥಿಸಿ ಸ್ತುತಿಸಿ ಎಬ್ಬಿಸುತ್ತಾಳೆ. ಎದ್ದ ದೇವ ತನ್ನ ಉದರದಲ್ಲಿರುವ ಈ ಜೀವನನ್ನು ಹೊರ ತೆಗೆದು, ಶ್ವೇತದ್ವೀಪ ಪತಿ ವಾಸುದೇವನ ದರ್ಶನ ಮಾಡಿಸಿ, ಕೊನೆಯದಾದ ಆವರಕ "ತನ್ನ ಇಚ್ಛೆ" ಯನ್ನು ಸರಿಸಿ ಅನಂತ ಆನಂದವನ್ನು ಅನುಭವಿಸುತ್ತಾನೆ ಎಂದು ಶ್ರೀಕೃಷ್ಣ ಪರಮಾತ್ಮ ಮೇಲಿನ ಶ್ಲೋಕವನ್ನು ಉಪದೇಶಿಸುತ್ತಾ ಅರ್ಜುನನಿಗೆ ಉತ್ತರ ಕೊಡುತ್ತಾನೆ....

ದೇವನಿಗೆ ಶರಣು ಬಂದವರಿಗೆ ದೇವ ತಾ ಶರಣು ಕೊಡುವ. ಯಾರು ದೇವರ ಶರಣು ಇದ್ದಾರೆ ಅವರಿಗೆ ಅಸಾಧ್ಯ ಎಂಬುವದು ಇರುವದೇ ಇಲ್ಲ. ಎಲ್ಲದರಿಂದಲೂ ದೇವರು ಪಾರು ಮಾಡುತ್ತಾನೆ...

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Exlent
Suhas Kulkarni said…
🙏🙏

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*