*ಗ್ರಹಗಳೆಲ್ಲವೂ ಇವರಿಗೆ ಸಹಾಯ ಮಾಡುತಾ, ಅಹೋ ರಾತ್ರಿಲಿ ಸುಖದ ನಿವಹ ಕೊಡುವವು

*ಗ್ರಹಗಳೆಲ್ಲವೂ ಇವರಿಗೆ ಸಹಾಯ ಮಾಡುತಾ, ಅಹೋ ರಾತ್ರಿಲಿ ಸುಖದ ನಿವಹ ಕೊಡುವವು*

ದಾಸಶ್ರೇಷ್ಠರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ. ಅವರ ವೈಭವೋಪೇತವಾದ ಜೀವನದಿಂದ ಕೆಲ ಗುಣಗಳನ್ನು ಆದರ್ಶರೂಪದಲ್ಲಿ ಪಡೆದುಕೊಂಡೆವು ಎಂದಾದರೆ ನಮ್ಮ ಜೀವನವೂ ವೈಭವದಿಂದ ಸಾಗಬಹುದು. 

ನಮ್ಮ ಜೀವನದ ಉದ್ಯೇಶ ಪೀಡೆಗಳಿಂದ ದೂರಾಗಿರಬೇಕು. ಸುಖ ಸಮೃದ್ಧವಾಗಿರಬೇಕು. ಪೀಡೆಗಳು ಇರುವಲ್ಲಿ ಸುಖವಿರುವದಿಲ್ಲ. ಸುಖದ ಸಮೃದ್ಧಿ ಇರುವಲ್ಲಿ ಪೀಡೆಗಳು ಇರುವದಿಲ್ಲ. ನೂರಾರು ಪೀಡೆಗಳನ್ನು ಹೊತ್ತುಕೊಂಡೇ ಹುಟ್ಟಿದ ನಮಗೆ ಸುಖ ದೂರದ ಮಾತು. 

ಸುಖ ಇರುವದು ನಮ್ಮಲ್ಲಿ. ಆ ಸುಖ ಅಭಿವ್ಯಕ್ತ ಆಗದ ಹಾಗೆ ಮುಚ್ಚಿ ಹಾಕಿರುವದು ಪೀಡೆಗಳು. ಪೀಡೆಗಳಿಂದ ಹುಟ್ಟಿದ ಉತ್ಪಾತಗಳು. ಈ ಪೀಡೆಗಳನ್ನು ತೊಳೆದು ಹಾಕಿದಾಗ ಸುಖ ತಾನೇ ಅಭಿವ್ಯಕ್ತವಾಗುತ್ತದೆ. 

*ಶ್ರೀ ವಿಜಯದಾಸರು....*

ಪ್ರಕೃತ ವಿಜಯದಾಸರನ್ನು ಸ್ವಲ್ಪ ಅವಲೋಕಿಸಬಹುದು. ಅವರಿಗಿರುವ ದಾರಿದ್ರ್ಯ ಅತೀ ಘೋರ. ಹೊತ್ತಿಗೆ ತುತ್ತಿಲ್ಲದ ವ್ಯಕ್ತಿ ವಿಜಯದಾಸರು ಆದರೆ, ತುತ್ತು ಹೇಗೆ ಚೆಲ್ಲಲಿ ಎಂದು ಯೋಚಿಸುವವರು ನಾವು. ತುತ್ತಿಗೋಸ್ಕರ ಘೋರ ಅವಮಾನ ಸಹಿಸಿಕೊಂಡವರು ವಿಜಯ ದಾಸರು ಆದರೆ, ಈ ತುತ್ತನ್ನು ಹೇಗೆ ಅವಮಾನಿಸಲೀ ಎಂದೂ ಯೋಚಿಸುವವರು ನಾವು. ಇದು ಇಂದಿನ ನಮ್ಮ ಸ್ಥಿತಿ.

*ವಿಜಯದಾಸರಿಗೆ ಪೀಡೆಗಳು ಇರಲಿಲ್ಲವೆ... ???*

ಎಲ್ಲ ಗ್ರಹಗಳ ಪೀಡೆಯೂ ಹೊತ್ತೇ ಹುಟ್ಟಿಬಂದವರು. ಅಂತೆಯೇ ಕೂಸಿಮಗ ದಾಸ ಎಂದೇ ಪ್ರಸಿದ್ಧ. ಅತೀ ಕೆಟ್ಟ ದಾರಿದ್ರ್ಯ. ಅದರ ಮೇಲೆ ಬರೆ ಎಳೆದಂತೆ ಬಂಧು ಬಾಂಧವರಿಂದಾದ ಅವಮಾನ. ನಿಜವಾಗಿ ದರಿದ್ರರಿಗೆ ಸ್ವಾಭಿಮಾನ ಹೆಚ್ಚು. ಆದರೆ ನಿರಭಿಮಾನಿ ವಿಜಯದಾಸರು. ಅಂತೆಯೇ ಸದಾ ಸುಖಿಗಳು. ಅವರಿಗಿಂತಲೂ ಅತೀ ಹೆಚ್ಚಿನ ಶ್ರೀಮಂತರು ನಾವು. ಆದರೆ ದುಃಖವೇ ತುಂಬಿದ  ಶಾಂತಿ ಸಮಾಧಾನ ಸಮೃದ್ಧಿ ಇಲ್ಲದ ಬದಕು ನಮ್ಮದು. 

*ದಾಸರಾಯರು ಪೀಡೆಗಳನ್ನು ಕಳೆದುಕೊಂಡರಾ... ??*

ಪೀಡೆಯ ಅಂತಿಮ ಫಲ ದುಃಖ. ಆ ದುಃಖ ಎಂದಿಗೂ ದಾಸರನ್ನು ಕಾಡಲೇ ಇಲ್ಲ. ಗಂಜಿಕಾಣದ ಮನುಷ್ಯ ನೂರಾರು ಜನರಿಗೆ ಭಿಕ್ಷೇ ಬೇಡಿ ಊಟಕ್ಕೇ ಹಾಕುವ ಸಾಮರ್ಥ್ಯ ಪಡೆದುಕೊಂಡವರು ಆದರು. ಪೆದ್ದು ಮನುಷ್ಯ ಇಂದಿಗೂ ಜ್ಙಾನ ಸುರಿಸುವ ಜ್ಙಾನ ಸರಿತ್ ಆದರು ದಾಸರು. ಬರಡು ಭೂಮಿಯಾದ ನಮ್ಮ‌ಮನದಲ್ಲಿ ಭಕ್ತಿ ಬಿತ್ತುವ ಊಳಿಗರಾದರು ದಾಸರು. ಅಂತೆಯೇ ಸುಖಿಗಳು. 

*ಎಲ್ಲೂ ಭಯಗಳು ಹರಿಯ ಭಕುತರಿಗೆ ಉಂಟೆ... ಇಲ್ಲವೋ ಕಾಣೋ, ಎಂದಿಗಾದರೂ ಮರುಳೆ*

ಭಗವಂತನ‌ ಭಕ್ತಿಯನ್ನು ಬಿತ್ತುವ ಈ ಊಳಿಗನಲ್ಲಿ ಭಕ್ತಿ ಯಾವ ಮಟ್ಟದಲ್ಲಿ ಇರಬಹುದೆಂದು ಊಹಿಸಲು ಅಸಾಧ್ಯವೆಂದೇನಲ್ಲ. ಊಹಿಸಬಹುದು. ಅದು ಹೇಗೆ ... ??

*ಬಾರವೋ ಭಯಗಳು ಬಂದರೋ ನಿಲ್ಲವು ಹಾರಿ ಹೋಗುವವು ದಶದಿಕ್ಕುಗಳಿಗೆ* "ಪೀಡೆಗಳು ಪೀಗಳಿಂದುಂಟಾದ ಭಯಗಳು ವಿಜಯದಾಸರಿಗೆ ಬರಲೇ ಇಲ್ಲ. ಆಗಾಗ ಬಂದರೂ ಅವುಗಳು ಕ್ಷಕಾಲ ನಿಲ್ಲಲಿಲ್ಲ. ನಿಂತು ಪೀಡೆ ಕೊಡೋಣ ಎಂದು ಯೋಚಿಸಿ ನಿಂತರೆ ಹತ್ತು ದಿಕ್ಕಿಗೆ ದಿಕ್ಕಪಾಲಾಗಿ ಚೆಲ್ಲಾಪಿಲ್ಲಿಯಾಗಿ ಚದುರಿ ಹೋದವು" ಎಂದು ತಾವೇ ಹೇಳಿಕೊಳ್ಳಬೇಕು ಎಂದರೆ ಭಕ್ತಿ ಯಾವ ಮಟ್ಟದಲ್ಲಿ ಇತ್ತು ಎಂದು ಯೋಚಿಸ ಬಹುದು. ಈ ಭಕ್ತಿಯ ಪ್ರವಾಹದಿಂದಲೇ ಯಾವ ಪೀಡೆಗಳೂ ಆಗಲಿಲ್ಲ. ಗ್ರಹಗಳು ಪೀಡೆ ಕೊಡಲಿಲ್ಲ. ದಾರಿದ್ರ್ಯದಲ್ಲಿಯೂ ಸುಖದ ನಿವಹ ಸಮೃದ್ಧಿಯನ್ನೇ ನೀಡಿದವು. ಅಷ್ಟೇ ಅಲ್ಲದೇ ಆ ಎಲ್ಲ ಗ್ರಹಗಳೂ ವಿಜಯದಾಸರ ಭಕ್ತರಿಗೂ ಅನುಕೂಲವಾದವು. ಅಂತೆಯೇ ಅತೀ ಸಣ್ಣ ಸ್ಯಾಲರಿಯಲ್ಲಿ ಇದ್ದರೂ ದಾಸರ ಭಕ್ತರು ಸಮೃದ್ಧರೆ. ಗ್ರಹಗಳು ದಾಸರಿಗೆ ಸಹಾಯ ಮಾಡುವದಲ್ಲದೇ, ದಾಸರ ಭಕ್ತರಿಗೂ ಅನುಕೂಲರಾದರು. 

ಇಂದು ಸ್ವತಃ ನಾವೇ ದಾದರ ಅನುಗ್ರಹದಿಂದ, ದಾಸರ ಈ ಆದರ್ಶವನ್ನು ಪಡೆದು  ದೇವರ ಭಕ್ತರೂ ಎಂದಾಗಿಬಿಟ್ಟರೆ, ನಮಗೂ ಗ್ರಹಗಳು ಅನುವಾಗುತ್ತವೆ. ಸುಖದ ಸಮೃದ್ಧಿಯನ್ನೂ ಕೊಡುತ್ತವೆ. ನಮ್ಮವರಿಗೂ ಗ್ರಹಗಳೆಲ್ಲವೂ ಅನುಕೂಲವಾಗುತ್ತವೆ. 

ನಮ್ಮ ದೇಹ ಇಂದ್ರಿಯ ಮನಸ್ಸು ಮಾತು ಸಮಯ ಬುದ್ಧಿ ಧನ‌ ಮನೆ ಕನಕ ಎಲ್ಲವನ್ನೂ ದೇವರಿಗೋಸ್ಕರ ಮೀಸಲು ಇಟ್ಟು ಭಕ್ತಿ ಮಾಡಬಾರದು ಯಾಕೆ.....???????

*✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*