*ಬ್ರಹ್ಮಾತ್ಮ ದಾಸರು .... ೬* "ಧೀರಸಿಂಹ ಗುರುಂ ಭಜೇ..."

*ಬ್ರಹ್ಮಾತ್ಮ ದಾಸರು .... ೬*
"ಧೀರಸಿಂಹ ಗುರುಂ ಭಜೇ"

ಅನೇಕ ಗುಣಗಳಲ್ಲಿ 'ಧೈರ್ಯ' ಒಂದು ದೊಡ್ಡ ಗುಣ. ಸಣ್ಣ ಸಣ್ಣ ಕಾರಣಕ್ಕೆ ಅಧೀರರು ಆಗುವ ಪ್ರಸಂಗವೇ ಹೆಚ್ಚು. ಯಾರು "ಧೀರ"ರೋ ಅವರಿಗೆ ಒಲಿದು ಬರುವದೂ ಹೆಚ್ಚು. 

ಕ್ಷುದ್ರ ವಿಷಯಗಳಿಗೂ ಕುಗ್ಗುವ ವ್ಯಕ್ತಿ " ಧೀರ" ಎಂದೆನಿಸಿಕೊಳ್ಳಲಾರ. ಸರಿಯಾದ ಸ್ಪಷ್ಟ ತಿಳುವಳಿಕೆ ಇಲ್ಲದೆ ಮುನ್ಮುಗ್ಗುವ ವ್ಯಕ್ತಿಗೆ "ಭಂಡ ಧೈರ್ಯ"ನು ಇವನು ಎಂದೆನಿಸಿಕೊಳ್ಳಬೇಕಾಗತ್ತೆ.

ಧೈರ್ಯ ಅಧೈರ್ಯಗಳು ಇರುವದು ಮನಸ್ಸಿನಲ್ಲಿ. ಮನಸ್ಸಿನ ವಿಕಾರಗಳು. ಅಧೈರ್ಯಕಾಡುವ ವ್ಯಕ್ತಿ ಮಹತ್ತಾದದ್ದನ್ನು ಸಾಧಿಸಲಾರ. ಕೇವಲ ಮಹತ್ತಾದದ್ದು ಅಲ್ಲ, ಏನನ್ನು ಸಾಧಿಸಬೇಕಾದರೂ "ಧೈರ್ಯ" ಅವಶ್ಯವಾಗಿ ಬೇಕು. 

*ವಿಕಾರ ಹೇತೌ ಸತಿ ವಿಕ್ರಿಯಂತೇ ಏಷಾಂ ನ ಚೇತಾಂಸಿ ತ ಏವ ಧೀರಾಃ*

ಮನುಷ್ಯನನ್ನು ವಿಕಾರಗೊಳಿಸುವ ಅಧೀರರನ್ನಾಗಿಸುವ ಮಹತ್ತರವಾದ ನೂರಾರು ಕಾರಣಗಳಿದ್ದರೂ "ವಿಕೃತಗೊಳ್ಳದ ಅಧೀರನಾಗದ"  ವ್ಯಕ್ತಿ ಯಾರೋ ಅವರು *ಧೀರ* ಎಂದೆನಿಸಿಕೊಳ್ಳುತ್ತಾನೆ. 

ಎರಡನೇಯ ಸಂತಾನವನ್ನು ಪಡೆಯಲು ಧೈರ್ಯ ಮಾಡದ ಸಮಾಜ ಇಂದಿರುವಾಗ, ನೂರೈವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿ ನಿರಂತರ ಇಟ್ಟುಕೊಳ್ಳುವದೇನಿದೆ ಇದು "ಧೀರ" ನ ಒಂದು ದೊಡ್ಡ ಲಕ್ಷಣ.

ಮಠ ಮಾನ್ಯವಿಲ್ಲ, ಸರಕಾರದ ಸವಲತ್ತುಗಳಿಲ್ಲ, ಜೊತೆಗೆ ಮಹಾ ಶ್ರೀಮಂತಿಕೆಯೂ ಇಲ್ಲದ, ಕೇವಲ ಒಬ್ಬ ಸಾಮಾನ್ಯ ಗ್ರಹಸ್ಥ ಕೇವಲ ತನ್ನ ಪ್ರತಿಭೆ, ಜ್ಙಾನ ಸಂಪತ್ತು, ಗುರು ಭಕ್ತಿ, ವಿಷ್ಣುಭಕ್ತಿ,  ಸಮಾಜ ಇವುಗಳ ಬಲದ ಬೆಂಬಲದ  ಮೇಲೆಯೇ ಈ ದೊಡ್ಡ ಗುರುಕುಲ ಸ್ಥಾಪಿಸಿ‌ ಮುನ್ನಡೆಯಬೇಕು ಎಂದರೆ ಆ ಧೈರ್ಯ ಎಷ್ಟರ ಮಟ್ಟಿಗೆ ಇರಬಹುದು ಎಂದು ಯೋಚಿಸಲೂ ಆಗದು. ಇದರಮುಂದಿನ ಧೈರ್ಯದ ಕಾರ್ಯಗಳು ಸಾವಿರಾರು ಇವೆ. 

 ಗುಣ ಗುಣವಂತನಲ್ಲಿ ಇರುವದಲ್ಲದೇ,  ತನ್ನ ಪ್ರಭಾವಳಿಯನ್ನು ತನ್ನ ಸುತ್ತಮುತ್ತಲಿನ ಸಮಾಜದ ಮೇಲೂ ಬೀರಲು ಸಮರ್ಥವಾಗುತ್ತವೆ. 

ಪೂ ಆಚಾರ್ಯರ ಈ ಧೈರ್ಯವೆಂಬ ಗುಣ ತಮ್ಮಲ್ಲಿ ಇರುವದಲ್ಲದೇ ಸಮಾಜದಲ್ಲಿಯೂ ಸಹ ಎಷ್ಟು ಹರಡಿತ್ತು ಎಂದರೆ  "ಆಚಾರ್ಯರ ಉಡಿಯಲ್ಲಿ ನನ್ನ ಮಗನನ್ನು ಹಾಕಿದರೆ,  ಇವನ ಸಾಧನೆ ವಿಷ್ಣು ಪ್ರಿಯವು ಆಗುತ್ತದೆ.  ಮಗನ ಜೀವನವೂ ವೈಭವದಿಂದ ಆಗುತ್ತದೆ. ಜೀವನಕ್ಕೆ ಬೇಕಾದ ಸಕಲ ಕಲೆಗಳೂ ಇವನ ಪಾಲಾಗುತ್ತದೆ. ಯಾವ ಕೊರತೆಯೂ ಇಲ್ಲದೆ ವೈಭವದ ಜೀವನ ಇವನದು ಆಗುತ್ತದೆ"  ಎಂಬ ಧೈರ್ಯ, ಇಂದಿನವರೆಗೂ  ಅಪರಿಚಿತರಾದ  ವಿದ್ಯಾರ್ಥಿಗಳ ಪಾಲಕರಲ್ಲಿಯೂ ಬರಬೇಕು ಎಂದರೆ ಪೂಜ್ಯ ಆಚಾರ್ಯರ ಧೈರ್ಯದ ಪ್ರಭಾವಳಿ ಈ ಜಗದಲ್ಲಿ ಎಷ್ಟು ಹಾಸುಹೊಕ್ಕಿರಬೇಕು ಎಂದು ಊಹಿಸಲೂ ಸಾಧ್ಯವಾಗದು.

 ಪೂ ಆಚಾರ್ಯರೂ ಸಹ ಉಡಿಯಲ್ಲಿ ಬಂದ ಎಲ್ಲ ಕೂಸುಗಳನ್ನೂ ಒಡಲಲ್ಲಿ ಇಟ್ಟುಕೊಂಡೇ ಸಾಕಿದರು. ಇದು ಪೂಜ್ಯ ಆಚಾರ್ಯರ ಧೈರ್ಯ.

*ಪ್ರಚಂಡಕ್ಕೆ ಏನು ಕಾರಣ ??*

ಪ್ರಚಂಡವಾದ ಈ ಧೈರ್ಯಕ್ಕೆ ಏನು ಕಾರಣ. ಎಷ್ಟೇ ಎಂಥವೇ ಸಮಸ್ಯೆಗಳು ಎದುರಾದರೂ ಪಲಾಯನ ಮಾಡದೇ ಎದುರಿಸಿ ಗೆಲ್ಲುವ ಭೀಮ ಬಲ ಎಲ್ಲಿಂದ ಬರುವದು ಎಂದು ಪೂಜ್ಯರ ಬಳಿ ಕೇಳಿದರೆ .... *ಮಹಾಪ್ರಯತ್ನವರ್ಜಿತಾಃ ಜನಾ ನ ಜಗ್ಮುರುನ್ನತಿಮ್*  ಉನ್ನತಿಯ ಗುರಿ ಇರುವಾಗ ಮಹಾ ಪ್ರಯತ್ನ ಅವಶ್ಯವಾಗಿ ಬೇಕು. ಪ್ರಯತ್ನಶೀಲನಿಗೆ ಧೈರ್ಯ ದೇವರು ಕೊಟ್ಟ ಉತ್ಕೃಷ್ಟವಾದ ಉಪಾಯನ (gift) ಎಂದು ಹೇಳುತ್ತದೆ ಶಾಸ್ತ್ರ ಎಂಬ ಉತ್ತರ ಒಂದಾದರೆ.....

ಪರಮಪೂಜ್ಯ ಪರಮಾಚಾರ್ಯರ ಧೈರ್ಯದ ಮಾರ್ಗದ ಆದರ್ಶವೇ ಎಲ್ಲಕ್ಕೂ ಮೂಲ. ಮತ್ತು  *ಗುರುಗಳ ದೇವರ ಅನುಗ್ರಹ ಇದೆ* ಎಂಬ ಪೂರ್ಣ ನಂಬಿಕೆಯೇ ಎಂಬ ಸುಲಭದ, ಸಾಧಿಸಿಕೊಳ್ಳಲು ದುರ್ಲಭವಾದ ಉತ್ತರವಾಗಿರುತ್ತಿತ್ತು. ಈ ದೊಡ್ಡ ಆದರ್ಶವನ್ನು ನಾವೂ ಸ್ವೀಕರಿಸಿದರೆ ಸಾಧನೆಯ ಮಾರ್ಗದಲ್ಲಿ ಮುಂದೋಡಬಹುದು ಎಂದನಿಸತ್ತೆ. ಗುರು ದೇವತೆಗಳು ಕರುಣಿಸಬೇಕಷ್ಟೆ..

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*