*ಬ್ರಹ್ಮಾತ್ಮ ದಾಸರು.....೪* ವಿದ್ಯಾರ್ಥಿ ವತ್ಸಲಂ ವಂದೇ*
*ಬ್ರಹ್ಮಾತ್ಮ ದಾಸರು.....೪*
ವಿದ್ಯಾರ್ಥಿ ವತ್ಸಲಂ ವಂದೇ*
ಸತ್ಯಧ್ಯಾನ ವಿದ್ಯಾಪೀಠ ಅತ್ಯಂತ ಪ್ರಾಚೀನ ವಿದ್ಯಾಪೀಠಗಳಲ್ಲೊಂದು. ಮಧ್ವಸಿದ್ಧಾಂತದಲ್ಲಿಯ, ಪ್ರಾಚೀನ ಪದ್ಧತಿಗಳನ್ನೊಳಗೊಂಡ university ಎಂದರೆ ಅದು ಸತ್ಯಧ್ಯಾನವಿದ್ಯಾಪೀಠ.
ವಿದ್ಯಾಪೀಠ ಎಂದ ಮೇಲೆ ವಿದ್ಯಾರ್ಥಿಗಳು ಬರುವವರೇ. ಜ್ಙಾನಾನ್ನವನ್ನು ಬಯಸುವ ವಿದ್ಯಾರ್ಥಿಗಳ ಹರಿವು ಸದಾ ಇರುವದೇ.
*ನ ಕಂಚನ ವಸತೌ ಪ್ರತ್ಯಾಚಕ್ಷೀತ*
ಬಂದ ವಿದ್ಯಾರ್ಥಿಗಳನ್ನು ಪೂ. ಆಚಾರ್ಯರು ಎಂದಿಗೂ ತಿರುಗಿ ಕಳುಹಿಸಲಿಲ್ಲ. ತಮಗೆ ಹಣದ ಕೊರತೆ, ಸ್ಥಳದ ಅಭಾವ, ಅನುಕೂಲತೆಗಳು ಕಡಿಮೆ ಇದ್ದರೂ ಎಂದಿಗೂ ತಿರುಗಿ ಕಳುಹಿಸುವ ಯೋಚನೆ ಮಾಡಲಿಲ್ಲ. "ನ ಕಂಚನ ವಸತೌ ಪ್ರತ್ಯಾಚಕ್ಷೀತ" ಈ ಶೃತಿಸಿದ್ಧಾಂತವನ್ನು ದೃಢವಾಗಿ ನಂಬಿದವರು ನಮ್ಮ ಆಚಾರ್ಯರು. "ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎಂಬ ಮಾತನ್ನು ನೆಚ್ಚಿದವರು.
ಯಾವ ವಕ್ತಿಯಲ್ಲಿ ಏನೂ ವಿಕಾಸವಾಗಬಹುದು. ಅವನಲ್ಲಿ ಜ್ಙಾನ ಭಕ್ತಿ ಧರ್ಮ ಗುರುಭಕ್ತಿ ವಿನಯಾದಿಗುಣಗಳು ಇವುಗಳನ್ನು ಬಿತ್ತುವದು ನನ್ನ ಧರ್ಮ. ಮುಂದೆ ಆ ವಿದ್ಯಾರ್ಥಿ ಸಮಾಜಕ್ಕೋ ದೇಶಕ್ಕೋ ಶ್ರೀಮಠಕ್ಕೋ ತನ್ನ ಮನೆಗೋ ಒಂದಿಲ್ಲ ಒಂದು ರೀತಿಯಿಂದ ತನ್ನದೇ ಆದ ಸೇವೆ ಸಲ್ಲಿಸುವವನು ಆಗುತ್ತಾನೆ. ಈ ದೂರದೃಷ್ಟಿಯೂ ಇದೆ. ಈ ಭರವಸೆ ಪೂಜ್ಯ ಆಚಾರ್ಯರರಲ್ಲಿ ತುಂಬಾ ಇದೆ. ಅಂತೆಯೇ ಬಂದ ಯಾವ ವಿದ್ಯಾರ್ಥಿಯನ್ನೂ ತಿರುಗಿ ಕಳುಹಿಸಲಿಲ್ಲ.
*ವಿದ್ಯಾದಾನ - ವ್ಯಕ್ಯಿತ್ವ ನಿರ್ಮಾಣ*
ವಿದ್ಯಾದಾನ ಮಾಡುವದು ಮಾಡಿಯೇ ಮಾಡುತ್ತಿದ್ದರು ಪೂ ಆಚಾರ್ಯರು. ಜೊತೆಗೆ ಆ ವಿದ್ಯಾರ್ಥಿಯ ವ್ಯಕ್ತಿತ್ವವನ್ನೂ ನಿರ್ಮಿಸಿ ಕಳುಹಿಸುತ್ತಾರೆ. ಆ ಕ್ರಮದಲ್ಲಿಯೇ ವಿದ್ಯಾರ್ಥಿಗಳ ಜೀವನದ ರೂಪರೇಖೇ ಸಿದ್ಧಪಡಿಸಿದ್ದಾರೆ ಪೂಜ್ಯ ಆಚಾರ್ಯರು.
*ವಿದ್ಯಾರ್ಥಿಗಳಲ್ಲಿ ತುಂಬ ವಾತ್ಸಲ್ಯ*
ಪೂಜ್ಯ ಆಚಾರ್ಯರ ಅಂತಃಕರಣ ತುಂಬ ಅಪರೂಪ. ಪರಮಾಚಾರ್ಯರ ಪ್ರತಿರೂಪ. ತಂದೆ ತಾಯಿಗಳನ್ನು ಬಿಟ್ಟು ಬಂದ ವಿದ್ಯಾರ್ಥಿ. ಎಲ್ಲವನ್ನೂ ಬಿಟ್ಟು ಬಂದ ವಿದ್ಯಾರ್ಥಿಗೆ ಇಲ್ಲಿ ಎಲ್ಲವನ್ನೂ ಕರುಣಿಸಿದ್ದರು. ಉಣಿಸಿದ್ದರು. ತಣಿಸಿದ್ದರು.
ಪೂಜ್ಯ ಆಚಾರ್ಯರಿಗೆ ವಿದ್ಯಾರ್ಥಿಗಳು ಎಂದರೆ ಬಹಿಪ್ರಾಣರೇ. ಅಂತೆಯೇ ಹೆಚ್ಚು ಕಾಲ ವಿದ್ಯಾರ್ಥಿಗಳಡನೆಯೆ ಕಳೆಯುತ್ತಾರೆ.
ವಿದ್ಯಾರ್ಥಿಗಳಿಗೆ ರೋಗ, ಕಷ್ಟ, ದಾರಿದ್ರ್ಯ, ಇದೆ ಎಂದಾದರೆ ಆಚಾರ್ಯರ ಮನಸ್ಸು ಕರಗಿಹೋಗುತ್ತದೆ. ಬಂದ ರೋಗಕ್ಕೆ ಮನೆಯಲ್ಲಿ ಎಷ್ಟು ಉಪಾಯಗಳು ಇರುತ್ತಿತ್ತೋ ತಿಳಿಯದು, ಅದಕ್ಕೂ ನೂರ್ಮಡಿ ಹೆಚ್ಚು ಉಪಾಯ ಉಪಚಾರಗಳನ್ನು ಇಂದಿಗೂ ಮಾಡುತ್ತಾರೆ. ವಿದ್ಯಾಪೀಠದಿಂದ ಹೊರಬಂದ ವಿದ್ವಾಂಸರಿಗೂ ಈ ಲಾಭವಿದೆ.
*ಮನೆಯ ನೆನಪು ಬಾರದಂತೆ ಸ್ವಾತಂತ್ರ್ಯ*
ಬಂದ ವಿದ್ಯಾರ್ಥಿಯನನ್ನು ಕಟ್ಟಿ ಹಾಕಿದರೆ ಮನೆಗೆ ಓಡಿ ಹೋಗುತ್ತಾನೆ, ವಿದ್ಯೆ ಪಡೆಯಲಾರ ಎಂದು ಯೋಚಿಸಿ ಸೂಕ್ತ ಸ್ವಾತಂತ್ರವನ್ನೂ ಕೊಟ್ಟಿದ್ದರು ಆಚಾರ್ಯರು.
*ವಿದ್ಯಾರ್ಥಿಗಳಕಡೆ ಪೂರ್ಣ ಗಮನವೂ ಇರುತ್ತದೆ*
ವಿದ್ಯಾರ್ಥಿಗೆ ಕೊಟ್ಟ ಪ್ರೀತಿ ಮತ್ತು ಸ್ವಾತಂತ್ರ್ಯ ಇವುಗಳ ದುರುಪಯೋಗ ಸರ್ವಥಾ ಆಗದ ಹಾಗೆ ಲಕ್ಷ್ಯವನ್ನು ಸ್ವಯಂ ಆಚಾರ್ಯರು ಇಟ್ಟಿದ್ದರು. ದುರುಪಯೋಗ ಪಡಿಸಿಕೊಂಡಾಗ ಶಿಕ್ಷೆಯನ್ನೂ ಕೊಡುತ್ತಿದ್ದರು. *ಅಪರಾಧಗಳನ್ನು ಮನ್ನಿಸಿದಾಗ ಸಜ್ಜನಿಕೆ, ಸಾಧು ಸ್ವಭಾವ, ವಿನಯಾದಿಗುಣವಂತಿಕೆ " ಇತ್ಯಾದಿಗಳಿಂದ ವಿದ್ಯಾರ್ಥಿ ದೂರಾಗಬಾರದು"* ಎಂಬ ಕಳಕಳಿಯೂ ಇತ್ತು. ಸ್ವಯಂ ನಾನೇ ಅನುಭವಸ್ಥ.
*ಇದೆಲ್ಲವನ್ನೂ ಇಂದಿಗೂ ಅನುಭವಿಸುತ್ತೇವೆ...*
ವಿದ್ಯಾಪೀಠ ಬಿಟ್ಟು ಕೆಲವರು ಇಪ್ಪತ್ತು ವರ್ಷವಾಯಿತು, ಹಲವರು ಹತ್ತು ವರ್ಷವಾಯಿತು, ಕೆಲವರದ್ದು ಐದಾರು ವರ್ಷಗಳೂ ಕಳೆಯಿತು ಆದರೆ ಆಚಾರ್ಯರು ಮಾತ್ರ ಇವರೆಲ್ಲರೂ ಇನ್ನೂ ವಿದ್ಯಾರ್ಥಿಗಳೇ ಎಂದೇ ಯೋಚಿಸಿ *ಪಾಠ ಏನೇನು ಆಗ್ತಾ ಇದೆ... ಅಧ್ಯಯನ ಎಲ್ಲಿಗೆ ಬಂತು... ಆರೋಗ್ಯ ಹೇಗಿದೆ... ಇವುಗಳಿಗೆ ಉಪಚಾರ ಉಪಾಯಗಳೇನೇನು.... ಸಮಾಜದ ಸೇವೆ ಹೇಗೆ ನಡೀತಾ ಇದೆ.... ಕುಟುಂಬದ ಸ್ಥಿತಿಗತಿ ಏನು...* ಈತರಹದ ನೂರಾರು ವಿಚಾರಗಳನ್ನು ಮಾಡುತ್ತಾ, ಸೂಕ್ತ ಉಪಾಯಗಳನ್ನೂ ತೋರುತ್ತಾ, ನಿತ್ಯ ದೇವರಲ್ಲಿ ಗುರುಗಳಲ್ಲಿ ಪ್ರಾರ್ಥಿಸುತ್ತಾರೆ ನಾವೆಲ್ಲರೂ ಇಂದಿಗೂ ಅನುಭವಿಸುತ್ತೇವೆ.
ಇಂತಹ *ಅಪಾರವಾದ ವಿದ್ಯಾರ್ಥಿ ವಾತ್ಸಲ್ಯ ತೋರುವ "ನಮ್ಮ ಗುರು"ಗಳಿಗೆ ಅನಂತ ವಂದನೆಗಳನ್ನು ಸಲ್ಲಿಸುವೆ.....*
*✍🏽✍🏽ನ್ಯಾಸ....*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments