*ಬ್ರಹ್ಮಾತ್ಮ ದಾಸರು.....೩* *ಜ್ಙಾನೋಪದೇಷ್ಟ್ರೇ ನಮಃ*

*ಬ್ರಹ್ಮಾತ್ಮ ದಾಸರು.....೩*

*ಜ್ಙಾನೋಪದೇಷ್ಟ್ರೇ ನಮಃ*

ಜ್ಙಾನವೆಂಬುವದು ಮಹತ್ವದ ಅಂಶ. ಜ್ಙಾನವಿರುವಲ್ಲಿಯೇ ಮಹತ್ವ ಸಿಗುವದು. ಜ್ಙಾನವಿರುವಲ್ಲಿಯೇ ಭವಿಷ್ಯ ನಿರ್ಮಾಣವಾಗುವದು. ಜ್ಙಾನವಿರುವಲ್ಲಿಯೇ ದೇವ ತಾ ಒಲಿವ.  ಅಂತೆಯೇ ಜ್ಙಾನ ಸರ್ವಶ್ರೇಷ್ಠ ಹಾಗೂ ಅನಿವಾರ್ಯ.

ಜ್ಙಾನದ ಪ್ರತಿ ತುಣುಕೂ ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ, ನಿರ್ಮಿಸುವಂತಾಗುತ್ತದೆ.
"ನಮ್ಮ ಭವಿಷ್ಯ ಭೂತ ಹಾಗೂ ವರ್ತಮಾನಗಳಿಗೆ ಸಮವಲ್ಲ, ತುಂಬ ಉತ್ತಮ" ಅದನ್ನು ನಿರ್ಮಾಣ ಮಾಡುವದೇ ಜ್ಙಾನ.

ಭೂತವನ್ನು ನೆನಿಸಿ ಕಣ್ಣೀರು ಹಾಕುವವರು ಕೆಲವರಾದರೆ, ವರ್ತಮಾನವನ್ನೇ ಅವಲಂಬಿಸಿರುವವರು ಮತ್ತೆ ಕೆಲವರು. ಇವರೀರ್ವರ ಬೆಳವಣಿಗೆ ಕುಂಠಿತವೇ ಸರಿ. ಮುಂದೆ ಬರುವ ಅಗಾಧವಾದ ಭವಿಷ್ಯವನ್ನು ನೆನೆದು ಮುನ್ನುಗ್ಗುವವರು ನೈಜ "ಜ್ಙಾನವಂತರು" ಅವರು ಮಹಾನ್ ಆಗುವವರು. ಜ್ಙಾನವಂತರಿಗೇ ಭವಿಷ್ಯ ಕಾಣುವದು. ಅಂತೆಯೇ ನಿಜವಾದ ಜ್ಙಾನಿಗಳು ಅವರು. ಆ ಕಾರಣವೇ ದೂರದೃಷ್ಟಿಗಳು ಎಂದು ಜ್ಙಾನಿಗಳನ್ನು ಕರಿಯುವದು.  "ಭವಿಷ್ಯದ ನಿರ್ಮಾಣವೇ ಜ್ಙಾನದ ಕಾಯಕ" ಇದನ್ನರಿತು ಮುನ್ನುಗ್ಗುವವನೇ ಜ್ಙಾನಿ...

*ಪೂಜ್ಯ ಆಚಾರ್ಯರು.....*

ಪೂಜ್ಯ ಆಚಾರ್ಯರರಲ್ಲಿ ಜ್ಙಾನ ದಾಹ ನಿಂತಿಲ್ಲ. ನಿಲ್ಲುವದೂ ಇಲ್ಲ. ಅವರ ಜ್ಙಾನ ನಿಲ್ಲದ ಗಂಗೆ. ಅವರ ಜ್ಙಾನದ ಹರಿವಿನಲ್ಲಿ ಶಿಷ್ಯರಾದ ನಮ್ಮೆಲ್ಕರಿಗೂ ಜ್ಙಾನ ಹರಿಯುವಂತೆ ಪ್ರೇರಿಸಿ,  ಜ್ಙಾನ ದಯಪಾಲಿಸಿ, ತಮ್ಮಂತೆಯೇ ಮುಂದೆ ಹೊಗುವಂತೆ ಮಾಡುತ್ತಾರೆ. ಮುಂದೆ ಎನ್ನುವದೇ ಭವಿಷ್ಯ. 

ವರ್ತಮಾನದಲ್ಲಿಯೇ ಇರುವದು ಸಲ್ಲ. ಭವಿಷ್ಯವನ್ನು ಹುಡುಕು. ಭಿಷ್ಯತ್ಕಾಲದ ಪೂರ್ಣ ಫಲ ಮುಕ್ತಿ. ಭವಿಷ್ಯದಲ್ಲಿಯ ಮುಕ್ತಿ  ಇರುವದು ಶಾಸ್ತ್ರಜ್ಙಾನದಲ್ಲಿ. ಅಂತೆಯೇ "ಜ್ಙೆನೇನೈವ ಪರಮ್ ಪದಮ್" ಎಂದಿತು ಶಾಸ್ತ್ರ. "ಜ್ಙಾನವಿಲ್ಲದೇ ಮೋಕ್ಷವಿಲ್ಲ" ಎಂದು ಹೇಳಿದರು ದಾಸರು. 

*ಜ್ಙಾನ ಉಣಿಸುವವರು ಜ್ಙಾನನಿಧಿಗಳೇ ಆಗಿರುತ್ತಾರೆ..*

ಪೂ ಆಚಾರ್ಯರ ಜ್ಙಾನ ಹಾಗೂ ಜ್ಙಾನದ ಪ್ರಭಾವ ಇಂದಿನ ಜಗತ್ತು ಅನುಭವಿಸುತ್ತಾ ಇದೆ. ಜಗತ್ತಿನ ಮೂಲೆಮೂಲೆಯಲ್ಲಿಯ ಸಿದ್ಧಾಂತಗಳನ್ನು, ಸಂಪ್ರದಾಯಗಳನ್ನು, ಫಿಲಾಸಫಿಗಳನ್ನು, ಆಂಗ್ಲಭಾಷೆಯ ಸಾವಿರ ಸಾವಿರ ಪುಸ್ಕಗಳ ಜ್ಙಾನ ಇವರ ಮಸದತಕದಲ್ಲಿ ಇದೆ. ಅದ್ವೈತ ವಿಶಿಷ್ಟಾದ್ವೈತ ಮೀಮಾಂಸಾ ತರ್ಕ ವ್ಯಾಕರಣ ಬೌದ್ಧ ಜೈನ ಮೊದಲಾದ ಎಲ್ಲ ದಾರ್ಶನಿಕರ ಸಿದ್ಧಾಂತಗಳ ಜ್ಙಾನದ ಆಗರ ನಮ್ಮ ಗುರುಗಳು. ನಮ್ಮ ಸಿದ್ಧಾಂತದ ಸೂತ್ರ,  ಮೂಲ,  ಭಾಷ್ಯ,  ಟೀಕಾ,  ಟಿಪ್ಪಣೀ, ಆ ಟಿಪ್ಪಣಿಗಳು ಅನೇಕ,  ಹಾಡುಗಳು, ಸುಳಾದಿಗಳು ಇವೆಲ್ಲವನ್ನೂ ನೂರಾರು (ಕೆಲವು ನಾಲ್ಕಾರು ಬಾರಿ, ಮತ್ತೆ ಹಲವು ಹತ್ತಾರು ಬಾರಿ, ಇನ್ನೂ ಕೆಲವು ನೂರಾರು ಬಾರಿ) ಓದಿರಬಹುದು.  ಹೀಗೆ  ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಓದಿರಬಹುದು. ಆ ಎಲ್ಲ ಜ್ಙಾನವನ್ನೂ ಕಾಲಕಾಲಕ್ಕೆ ಜಗತ್ತು ಅನುಭವಿಸಿದೆ. ನಾನು ಹೇಳುವದು ಏನೂ ಇಲ್ಲ. 

ನಮ್ಮಲ್ಲಿಯ ಜ್ಙಾನ ವ್ಯವಹಾರಕ್ಕಾಗಿ ಬಳಿಸಿದಾಗ ಆ ಜ್ಙಾನ ವರ್ತಮಾನೋಪಯೋಗಿ ಜ್ಙಾನ. ಡೊನೇಶನ್ ತೆಗೆದುಕೊಂಡು ಕೊಡುವ ಜ್ಙಾನ ಇಂದಿನ ವೈಭವದ ಜೀವನೋಪಯೋಗಕ್ಕೆ ಬೇಕಾದ ಬರಬಹುದೇನೋ. ಆದರೆ ನಿರ್ವ್ಯಾಜವಾಗಿ ಜ್ಙಾನವನ್ನು ಉಣಿಸಿದರೆ ಆ ಜ್ಙಾನ ಭವಿಷ್ಯತ್ ಕಾಲೀನವಾದ, ಅನಂತ ಕಾಲೀನ ಮುಕ್ತಿಯೋಗ್ಯ ಜ್ಙಾನ ಎಂದೆನಿಸಿಕೊಳ್ಳುತ್ತದೆ. ವರ್ತಮಾನಕ್ಕೂ ಹಿತಕಾರಿ ಆಗಿರುತ್ತದೆ. ಭೂತದಲ್ಲಿಯ ಅನಿಷ್ಟಗಳನ್ನೂ ಅಪಹರಿಸುತ್ತದೆ. ಅತೀ ಮುಖ್ಯವಾಗಿ ವಿಷ್ಣು ಪ್ರಿಯವೂ ಆಗಿರುತ್ತದೆ. ಒಬ್ಬ ಶಿಷ್ಯನಿಗೆ ಮಾಡಿದ ಪಾಠ ನಿರಂತರ ಧ್ಯಾನಮಾಡಿದ ಸಾಧನೆಗಿಂತಲೂ ನೂರ್ಪಟ್ಟು ಮಿಗಲಾದ ಸಾಧನೆ ಎಂದು ಸ್ವಯಂ ಶ್ರೀಮದಾಚಾರ್ಯರು ತಿಳುಹಿಸಿಕೊಡುತ್ತಾರೆ. 

*ನಮ್ಮ ಪೂಜ್ಯ ಆಚಾರ್ಯರು*

ತಮ್ಮ ಅಪಾರ ಜ್ಙಾನದ ಒಂದು ತುಣುಕೂ ವ್ಯವಹಾರಕ್ಕೆ ಬಳಿಸಿಕೊಳ್ಳದೇ, "ನಂಬಿ ಬಂದ ಈ ಶಿಷ್ಯರಿಗೆ ಈ ಶುದ್ಧವಾದ ಜ್ಙಾನ ಸಿಗಲಿ, ಜ್ಙಾನ ಗಂಗೆ ಹರಿಯಲಿ ಎಂಬ ಶುದ್ಧ ಉದ್ಯೇಶ್ಯದೊಂದಿಗೆ ತಮ್ಮ  ಅಪಾರ ಜ್ಙಾನವ ಬಳಿಸಿಕೊಳ್ಳಲು ಬಯಸಿದರು" ಅಂತೆಯೇ ಅನ್ನ ವಸ್ತ್ರ ವಸತಿ ಕೊಟ್ಟು, ಉಚಿತವಾಗಿ ಇಟ್ಟುಕೊಂಡು, ಎಲ್ಲ ವೈಭವಗಳನ್ನೂ ಒದಗಿಸಿಕೊಟ್ಟು ಪರಿಶುದ್ಧ ಜ್ಙಾನವನ್ನು, ಭವಿಷ್ಯವನ್ನು ಊರ್ಜಿತಗೊಳಿಸುವ  ಮುಕ್ತಿಯೋಗ್ಯ ಜ್ಙಾನವನ್ನು ನಂಬಿದ ಶಿಷ್ಯರಿಗೆ ಉಪದೇಶಿಸಿದರು. ಸಾತ್ವಿಕ ಆಸ್ತಿಕ ಸಮಾಜಕ್ಕೆ ಪಸರಿಸಿದರು. ಆ ಶಿಷ್ಯ ವರ್ಗದಲ್ಲಿ ನಾನೂ ಒಬ್ಬನಾಗಿದ್ದೇನೆ ಇದೇ ನನ್ನ ಸೌಭಾಗ್ಯ. ಆ ಗುರುಗಳಿಗೆ ಅನಂತ ನಮನಗಳನ್ನು ಸಲ್ಲಿಸುತ್ತಾ ನಿಮ್ಮ ಶುದ್ಧ  ಜ್ಙಾನದ ಪ್ರತಿಬಿಂಬ ಜ್ಙಾನ ಎನ್ನಲ್ಲಿಯೂ ಅಭಿವ್ಯಕ್ತಗೊಳ್ಳಲಿ ಎಂದು ಪ್ರಾರ್ಥಿಸುವೆ.

*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*