*ಬ್ರಹ್ಮಾತ್ಮ ದಾಸರು....೨* ಭಕ್ತೈವ ತುಷ್ಯತಿ.........*
*ಬ್ರಹ್ಮಾತ್ಮ ದಾಸರು....೨*
*ಭಕ್ತೈವ ತುಷ್ಯತಿ.........*
ಶ್ರಿಹರಿಯಲ್ಲಿಯ ಪ್ರಣತೆಯ ಮುಖಾಂತರ ಭಕ್ತಿಯ ಅಭಿವ್ಯಕ್ತಿ ಇಂದಲೇ ಶ್ರೀಹರಿಯ ಸಂತೃಪ್ತಿ. ಜಗದಲ್ಲಿ ಏನೆಲ್ಲ ಸಂಪಾದಿಸ ಬಹುದು ಆದರೆ *ದೇವರಲ್ಲಿ ಭಕ್ತಿ ಹಾಗೂ ವಿಶ್ವಾಸ* ಗಳನ್ನು ಸಂಪಾದಿಸಿಕೊಳ್ಳುವದು, ಉಳಿಸಿಕೊಳ್ಳುವದು, ತಮ್ಮವರಲ್ಲಿ ಬಿತ್ತುವದು ತುಂಬ ಕಠಿಣ.
ಕೈ ಮುಗಿಯುವದು ಭಕ್ತಿಯಲ್ಲ. ಜ್ಙಾನಪೂರ್ವಕ ಬೆಳೆಯುವ ಅತ್ಯಂತ ಸುದೃಢವಾದ ಸ್ನೇಹವೇ ಭಕ್ತಿ. ದೇವರು ಎದರು ಬಂದಾಗ ಕೈ ಮುಗಿಯುವದು ತಾತ್ಕಾಲಿಕವಾದರೆ, ದೇವರಿಲ್ಲದಿರುವಾಗಲೂ ಮನಸ್ಸು ದೇವರಲ್ಲೇ ರತವಾಗಿರುವದು "ದೃಢ ಭಕ್ತಿ" ಎಂದೆನಿಸಿಕೊಳ್ಳುತ್ತದೆ. ಪೂಜೆಗೆ ಕುಳಿತಾಗ ಮಾಡುವ ಭಕ್ತಿ ಊಟಕ್ಕೆ ಕುಳಿತಾಗಲೂ ಇದ್ದರೆ ದೃಢಭಕ್ತಿ ಎಂದೆನಿಸಿಕೊಳ್ಳುತ್ತದೆ. ಹಾಗೆಯೇ "ವಿಶ್ವಾಸ" ವೂ ಸಹ.
ಕಷ್ಟ ಬಂದಾಗಿನ ವಿಶ್ವಾಸ ಭರವಸೆಗಳು ಸುಖದ ಸುಪ್ಪರಿಗೆಯಲ್ಲಿ ಇದ್ದಾಗಲೂ ವಿಶ್ವಾಸ ಭರವಸೆ ಕೃತಜ್ಙತೆಗಳು ಇವೆ ಎಂದಾದರೆ ಆ ವಿಶ್ವಾಸ ಭರರವಸೆಗಳು ದೃಢವಾಗಿ ತಳವೂರಿವೆ ಎಂದೇ ಅರ್ಥ.
*ಪೂಜ್ಯ. ಮಾಹುಲೀ ಆಚಾರ್ಯರು*
ಭಕ್ತಿ ಸ್ವಾಭಾವಿಕ. ಜ್ಙಾನ ಬೆಳೆದ ಹಾಗೆ ಭಕ್ತಿಯ ಅಭಿವ್ಯಕ್ತಿ ಆಗುತ್ತದೆ. ಜ್ಙಾನದ ಗಣಿ ಪೂಜ್ಯ ಆಚಾರ್ಯರು. ಪೂಜ್ಯ ಆಚಾರ್ಯರರಲ್ಲಿ ಭಕ್ತಿಗೆ ತುಂಬಾ ಸ್ಥಳಾವಕಾಶ ಇದೆ. "ಸ್ವಾತ್ಮಾತ್ಮೀಯ ಸಮಸ್ತವಸ್ತುಗಳಲ್ಲಿ ಮಾಡುವ ಸ್ನೇಹಕ್ಕಿಂತಲೂ ಅಧಿಕ ಸ್ನೇಹ ದೇವರಲ್ಲಿ" ಎಂದಾದರೆ ಅದು ನೈಜ ಭಕ್ತಿ ಎಂದು ಶಾಸ್ತ್ರ. ಪೂಜ್ಯ ಆಚಾರ್ಯರ ದಿನದ ಇಪ್ಪತ್ತುನಾಲ್ಕು ಗಂಟೆಗಳಲ್ಲಿ *ಎಂಟು ಗಂಟೆ ಪಾಠಕ್ಕೆ. ಎಂಟುಗಂಟೆ ಶಾಸ್ತ್ರಾವಮರ್ಷೆಗೆ. ಮೂರು ಗಂಟೆ ಪೂಜೆ ಜಪಗಳಿಕೆ* ಮೀಸಲು ಎಂದಾದರೆ ತಮಗಿಂತಲೂ ಅತೀ ಹೆಚ್ಚಿನ ಮಟ್ಟದಲ್ಲಿ ದೇವರು ಶಾಸ್ತ್ರವನ್ನು ಪ್ರೀತಿಸುತ್ತಾರೆ ಎಂದೇ ಆಗುತ್ತದೆ. ಈ ಪ್ರೀತಿ ಸುಮಾರು ಐವತ್ತು ವರ್ಷಗಳಿಂದ ಬೆಳೀತಾನೇ ಇದೆ. ಇದು ಭಕ್ತಿ ಒಂದು ಭವ್ಯ ಸೂಚಕ ಎಂದೇ ತಿಳಿಯಬಹುದು.
ಒಂದು ಸಣ್ಣ ನಿದರ್ಶನ... ಕಳೆದ ತಿಂಗಳು ಪರ್ಯಾಯ ಪೀಠಾಧಿಪತಿಗಳ ಅಪೇಕ್ಷೆಯಂತೆ ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ *ವಾಯು ಮಹಿಮಾ* ಉಪನ್ಯಾಸ ಇತ್ತು. ಈ ಸಮಯವನ್ನು ಪೂರ್ಣ ಸದುಪಯೋಗ ತೆಗೆದುಕೊಳ್ಳಲು ಬಯಸಿದ ಪೂಜ್ಯ ಆಚಾರ್ಯರು *ಗೀತಾಭಾಷ್ಯ ಪಾಠ* ಎಂಟು ದಿನಗಳಕಾಲ ಎಂಟುಗಂಟೆಗಳಂತೆ ಹೇಳಿದರು. ಕೆಲ ದಿನ ಹತ್ತುಗಂಟೆಯೂ ಸಾಕಾಗಲಿಲ್ಲ.
ಕೆಲ ದಿನಗಳನಂತರ ನನಗೆ ಒಬ್ಬ ಉತ್ತಮ ಪ್ರೊಫೇಸರ್ ಒಬ್ಬರು ಸಿಕ್ಕರು, ಮಾತಾಡ್ತಾ ಉಡುಪಿಯ ಈ ವಿಷಯ ತಿಳಿಸಿದೆ. ಅವರು ಹೀಗೆ ಉದ್ಗಾರ ತೆಗೆದರು... "ಗೋಪಾಲಾಚಾರ್ !! ನಾವು ವರ್ಷಕ್ಕೆ ಸರಿಯಾಗಿ ನೂರು ಗಂಟೆ ಪಾಠ ಮಾಡ್ತೇವೆ, ಹನ್ನೆರಡು ಲಕ್ಷ ಸಂಪಾದನೆ ನಮ್ಮದಿದೆ. ಆದರೆ *ನಿಮ್ಮ ಆಚಾರ್ಯರು ಕೇವಲ ಎಂಟು ದಿನದಲ್ಲಿ ಎಂಭತ್ತು ಗಂಟೆ ಪಾಠ ಮಾಡಿದ್ದಾರೆ - ಅದೂ ಕೇವಲ ಕೃಷ್ಣ ಪ್ರೀತಿಗೋಸ್ಕರ* ಎಂದರೆ ನಿಜವಾಗಿಯೂ ಆಶ್ಚರ್ವಾಗುತ್ತದೆ" ಹೀಗೆ ಉದ್ಗಾರ ತಗೆದರು. ಈ ತರಹದ ಜ್ಙಾನಸತ್ರ ವಿದ್ಯಾರ್ಥಿಗಳಿಗೆ ಪಂಡತರಿಗೋಸ್ಕರ ಪ್ರತೀವರ್ಷ ಕನಿಷ್ಠ ಎರಡುಬಾರಿಯಾದರೂ ಪೂಜ್ಯ ಆಚಾರ್ಯರು ಮಾಡುತ್ತಾರೆ. ಅದರ ಉದ್ಯೇಶ್ಯ ಸ್ಪಷ್ಟ ಕೇವಲ ವಿಷ್ಣುಪ್ರೀತಿ. ವಿದ್ಯಾರ್ಥಿಗಳಿಗೆ ವಿದ್ವಾಂಸರಿಗೆ ಜ್ಙಾನಾಭಿವೃದ್ಧಿಯಾಗಲಿ ಎಂಬ ಕಳಕಳಿ ಮಾತ್ರ. ಉಳಿದ ಯಾವ ಅಂಶಕ್ಕೂ ಅಲ್ಲಿ ಆಸ್ಪದ ಇರುವದಿಲ್ಲ.
ಇದರಿಂದ ನಮಗೆ ಅನಿಸುತ್ತದೆ ಪೂಜ್ಯ ಆಚಾರ್ಯರಲ್ಲಿ ಶಾಸ್ತ್ರ ಪಾಠ ಪ್ರವಚನಗಳಲ್ಲಿಯ ಪ್ರೇಮ, ಶ್ರೀಕೃಷ್ಣನಲ್ಕಿಯ ಭಕ್ತಿ, ಇದುವೇ ಸಾಧನೆ ಎಂಬ ದೃಢ ವಿಶ್ವಾಸ ಯಾವ ಮಟ್ಟದಲ್ಲಿ ಇರಬಹುದು ಎಂದು.
*ಪ್ರತೀ ಕಾರ್ಯದಲ್ಲಿಯೂ ಭಕ್ತಿ ಹಾಸುಹೊಕ್ಕಿದೆ ಪೂಜ್ಯ ಆಚಾರ್ಯರಲ್ಲಿ.*
ಪೂಜ್ಯ ಆಚಾರ್ಯರು ಯಾವಾಗಲೂ ಹೇಳುವ ಒಂದು ಮಾತು *ಭಕ್ತಿಯಿಲ್ಲದ ಯಾವ ಕಾರ್ಯವೂ ವಿಷ್ಣು ಪ್ರಿಯವಾಗಲಾರದು* ಎಂದು. ನಾವು ಮಾಡುವ (ಪಾಠ, ಊಟ, ನಿದ್ರೆ, ಜಪ, ಪೂಜೆ, ಉಪನ್ಯಾಸ, ಭಜನೆ, ಹರಟೆ, ಸಮಾಜ ಸೇವೆ, ಲೌಕಿಕಕಾರ್ಯ, ಭವ್ಯ ಭವನ ಕಟ್ಟುವದು, ಜ್ಙಾನಸತ್ರ ಹೀಗೆ ) ಯಾವ ಕಾರ್ಯವೂ ವಿಷ್ಣು ಪ್ರಿಯವೇ ಆಗಬೇಕು ಎಂಬ ಭಾವ ಇದ್ದರೆ ಆ ಎಲ್ಲ ಕಾರ್ಯಗಳಲ್ಲಿಯೂ ಭಕ್ತಿ ಬೆರೆತಿರಲೇಬೇಕು. ನಮ್ಮ ಸ್ವಾಮಿ *ಭಕ್ತೈವ ತುಷ್ಯತಿ* ಎಂದು ಸದಾ ಹೇಳಬೇಕು.
ಯಾವುದೇ ಕೆಲಸ ಮಾಡುವಾಗಲೂ ಒಂದು ಹತ್ತು ಸೆಕೆಂದು ದೇವರನ್ನು ಧೇನಿಸುವ ಪರಿಪಾಕ ರೂಡಿಸಿಕೊಳ್ಳಬೇಕು ಎಂಬುವದು ಪೂಜ್ಯ ಆಚಾರ್ಯರ ಆಶಯವಾಗಿದೆ. ಅದನ್ನು ರೂಢಿಸಿಕೊಳ್ಳುವದು ನಮ್ಮದಾಗಬೇಕು.
ಆ ತರಹದ ಭಕ್ತಿಯ ತುಣುಕು ನಮಗೂ ಅನುಗ್ರಹಿಸಲಿ, ನಮ್ಮ ಪ್ರತೀ ಕಾರ್ಯಗಳಲ್ಲಿಯೂ ಭಕ್ತಿ ಬೆರೆಯುವಂತೆ ನನ್ನ ಗುರುಗಳಾದ ಪೂಜ್ಯ ಆಚಾರ್ಯರು ಎನಗೆ ಅನುಗ್ರಹಿಸಲಿ.....
*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments