*"ನಡೀತದ ಬಿಡು" ಪಾತಾಳಕ್ಕೆ ಒಯ್ದುಬಿಡು*
*"ನಡೀತದ ಬಿಡು" ಪಾತಾಳಕ್ಕೆ ಒಯ್ದುಬಿಡು*
ನಾವು ತಲತಲಾಂತರದಿಂದಲೂ ಧಾರ್ಮಿಕರು. ವಿಷ್ಣು ಭಕ್ತರು. ಭಗವಂತನವರು. ಸಜ್ಜನರು. ಧರ್ಮದಲ್ಲೇ ರತರು. ಅಂತೆಯೇ ಸಾಧನೆಯ ಮೆಟ್ಟಲುಗಳನ್ನು ಮೇಲೇರಿ ಬಂದಿದ್ದೇವೆ. ಮೇಲೇರಿದ ನಮ್ಮನ್ನು ಸರಳವಾಗಿ ಕೆಳಬೀಳಿಸುವದೇನಿದೆ ಅದು *ನಡೀತದ ಬಿಡು* ಎಂಬ ಧೋರಣೆ. ಕಟ್ಟುನಿಟ್ಟಾಗಿ ಪಾಲಿಸುವನನ್ನು ಸರಳವಾಗಿ ಜಾರಿಸಿಬಿಡುತ್ತದೆ "ನಡೀತದ ಬಿಡು" ಎಂಬುವದೇ.
ಏನಿದು *ನಡೀತದ ಬಿಡು...*
ಕಟ್ಟುನಿಟ್ಟಾದ ಯಾವದೇ ಧರ್ಮವನ್ನು ತನ್ನ ಮೂಗಿನ ನೇರ ತರುತ್ತಾ, ಹಂತಹಂತವಾಗಿ ನಮನ್ನು ಪಾತಾಳಕ್ಕೆ ಒಯ್ಯುವದೇ *ನಡೀತದ ಬಿಡು.*
ಬೆಳಗಿನ ಝಾವ ಆರಕ್ಕೆ ಅರ್ಘ್ಯ ಕೊಡುವದು ಕರ್ತವ್ಯ. ನೂರೆಂಟು ಗಾಯತ್ರಿಯೂ ಅನಿವಾರ್ಯ. ಅದನ್ನು ಕಟ್ಟುನಿಟ್ಟಾಗಿ ಸಾಧಿಸಿಕೊಳ್ಳುತ್ತಾ ಬರುತ್ತಿರುತ್ತಾನೆ. ಒಂದು ದಿನ "ಆರಕ್ಕೇ ಮಾಡುವದೇನಿದೆ ಒಂಭತ್ತಕ್ಕೇ ಮಾಡಿದರೂ *ನಡೀತದ ಬಿಡು* ಎಂದು ಯೋಚಿಸಿ, ನಾಲಕನೇಯ ಅರ್ಘ್ಯಕೊಟ್ರಾಯ್ತು" ಎಂದು ಯೋಚಿಸುತ್ತಾನೆ. ಮುಂದೆ ಕೆಲದಿನಗಳ ನಂತರ ಇವತ್ತೊಂದು ದಿನ ಸಂಧ್ಯಾವಂದನ ಬಿಟ್ಟರೆ ನಡೀತದ ಎಂದು ಬಿಡುವ. ನಂತರ ಸಂಧ್ಯಾವಂದನೆ ಬಿಡುವದೇ ಹವ್ಯಾಸವಾಗುತ್ತದೆ.
ಸಂಧ್ಯಾವಂದನೆ ಕೇವಲ ಒಂದು ಉದಾಹರಣೆ ಮಾತ್ರ. ಹೀಗೆ ಪೂಜೆ ಜಪ ಅಧ್ಯಯನ ಪ್ರದಕ್ಷಿಣೆ ನಮಸ್ಕಾರ ಮೊದಲು ಮಾಡಿ ಎಲ್ಲ ಸಾಧನಗಳಲ್ಲಿಯೂ ಹೀಗೆಯೆ ಆಗುತ್ತದೆ.
ಸಾಧನೆಯ ಮಾರ್ಗದಲ್ಲಿ ಕಷ್ಟಪಟ್ಟು ಮೇಲೇರಿದ ವ್ಯಕ್ತಿ "ಎರಡೇ ಮೆಟ್ಟಲು ಕೆಳಗೆ ಜಾರಿದೆ, ನಡೀತದ ಬಿಡು. ಎರಡೇ ಮೆಟ್ಟಲು ಜಾರಿದೆ ನಡೀತದ ಬಿಡು" ಎಂದು ಉಸುರಿಸುತ್ತಾ ಸಾಧನಯ ಮಾರ್ಗದಿಂದಲೇ ದೂರ ಹೋಗಿ ಬಿಡುತ್ತಾನೆ.
ಇವತ್ತೊಂದು ದಿನ street food ಪಾನೀಪುರಿ ತಿಂದರೇ ಏನಾಗತ್ತೆ ನಡೀತದ ಬಿಡು. ಅಂತ ಶುರು ಆಗಿ, ಸಣ್ಣ ಹುಡುಗ ಇದ್ದಾಗ ತಿಂದರೇ ಏನಾಗತ್ತೆ ನಡೀತದ ಬಿಡು ಸಾಗಿ ಕೊನೆಗೆ ಜೀವಂತನಿರುವಾಗ ದೇವರ ನೈವೇದ್ಯ ತನ್ನ ಮದುವೆ ದೇವರ ಸಮಾರಾಧನೆಯಂದು, ನಂತರ ವೈಶ್ವದೇವದ ಅನ್ನ ಸಿಗುವದು ಪಿತೃ ಆರಾಧನೆಯ ದಿನದಂದೇ ಈ ಮಟ್ಟದಲ್ಲಿ *ನಡೀತದ ಬಿಡು* ನಮ್ಮನ್ನು ಒಯ್ದು ನಿಲ್ಲಿಸುತ್ತದೆ.
*ನಡಿತದ ಬಿಡು* ಅತ್ಯಂತ ಅಯೋಗ್ಯವೇ.....
"ನಡೀತದ ಬಿಡು" ಎಂಬ ಭಾವ ಅನಿವಾರ್ಯ ಪರಿಸ್ಥಿಯಲ್ಲಿ ಕೇವಲ ಒಂದೇ ದಿನಕ್ಕೆ ಅತ್ಯಂತ ಯೋಗ್ಯ. ಆ ಭಾವವೇ ಹವ್ಯಾಸವಾದರೆ ಮಹಾ ಮಹಾ ಪಾಪಗಳನ್ನೂ ಅತ್ಯಂತ ಸಲೀಸಾಗಿ ಮಾಡಿಸಿ ಹಾಕುತ್ತದೆ. ಆದ್ದರಿಂದ "ನಡೀತದ ಬಿಡು" ಎಂಬ ಹವ್ಯಾಸಕ್ಕೆ ಬಲಿಯಾಗದೇ ಇರುವದು ಸೂಕ್ತ.
ತಂಬಾಕು ಸಿಗರೇಟು ಶೆರೆ ಮೋಬೈಲು ಇತ್ಯಾದಿಗಳ ಚಟಕ್ಕಿಂತಲೂ ಘೋರವಾದ ಚಟ ಅಂದರೆ ತಪ್ಪಾಗಲಿಕ್ಕಿಲ್ಲೇನೋ......
ಒಂದಂತೂ ನಿಶ್ಚಿತ *ನಡೀತದ ಬಿಡು* ಬಿಟ್ಟುಬಿಡೋಣ. ಮೇಲೆ ಹೋಗದಿದ್ದರೂ ಕೆಳಗಂತೂ ಬೀಳಲ್ಲ.....
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments