*ಅವಶ್ಯಕತೆಗಿಂತಲೂ ಹೆಚ್ಚಿನದೇನಿದೆ, ಅವಶ್ಯಕತೆ ಇರುವವರಿಗೆ ವಿನಿಯೋಗವಾಗಲಿ...*

*ಅವಶ್ಯಕತೆಗಿಂತಲೂ ಹೆಚ್ಚಿನದೇನಿದೆ, ಅವಶ್ಯಕತೆ ಇರುವವರಿಗೆ ವಿನಿಯೋಗವಾಗಲಿ...*

"ಕಡಿಮೆ ಮಾಡಿಕೊಳ್ಳುವದು ಬೇಡ, ಉಕ್ಕಿ ಹರಿಸಿ ಮಣ್ಣುಪಾಲು ಮಾಡುವದೂ ಬೇಡ, ಇಟ್ಟು ಕೊಳೆಸುವದೂ ಬೇಡ" ಇದು ಮೇಲಿನ ಮಾತಿನ ಧಾಟಿ. 

ಹಿಂದಿನ ಒಂದು ಕಾಲವಿತ್ತು, ಅಂದು ಎಲ್ಲವೂ ಅವಶ್ಯಕತೆಯನ್ನು ಮೀರಿಸುವಂತಹದ್ದೇ ಇತ್ತು. ನಮ್ಮ ಅವಶ್ಯಕತೆಗಳಿಗೆ ಪರಿಧಿ ಇತ್ತು.  ಅಂತೆಯೇ ಬಂಧು ಬಾಂಧವರಿಗೆ - ಗುರು ಹಿರಿಯರಿಗೆ - ಬ್ರಾಹ್ಮಣ ಅತಿಥಿಗಳಿಗೆ - ಭಿಕ್ಷುಕರಿಗೆ ಬಡವರಿಗೆ ಹೆಚ್ಚಿನದು ವಿನಿಯೋಗ ಆಗುತ್ತಿತ್ತು. ಹೆಚ್ಚಿನದು ಏನಿದೆ ಅವರಿಗೆ ಸೇರುತ್ತಿತ್ತು. 

ಇಂದು ಹಾಗಿಲ್ಲ. ಅವಶ್ಯಕತೆಗೆ ಪರಿಧಿಯೇ ಇಲ್ಲ.  ನೋಡಿದ್ದು ಕೇಳಿದ್ದು ಎಂದೇನಿದೆ ಅದೆಲ್ಲ ಬೇಕು. ಅಂತೆಯೇ lone ಕೊಡುವವರು, ದುಪ್ಪಟ್ಟು ಮಾಡಿಕೊಡುವವರು  ಸಿರಿವಂತರಾಗಿದ್ದಾರೆ. ಅವಶ್ಯಕತೆಗೆ ಫುಲ್ ಸ್ಟಾಪ್ ಇಲ್ಲ. ಪರಿಧಿಯಿಲ್ಲ. ಅಂತ ಕೊನೆಗಾಣದ ಅನಂತವಾಗಿದೆ ಅವಶ್ಯಕತೆ.  

"ನಮ್ಮ ಅವಶ್ಯಕತೆಗಿಂತ ಹೆಚ್ಚಿನದು ಮಕ್ಕಳ ಸೋಮಾರಿತನಕ್ಕೂ ಕಾರಣವಾಗುತ್ತದೆ" ಅದು ವಿದ್ಯೆ ಧನ‌ ಪ್ರತಿಷ್ಠೆ ಯಾವುದೇ ಮಾರ್ಗವಿರಬಹುದು. 

ನಮ್ಮ ಪರಮ ಗುರುಗಳ ಒಂದು ಕಥೆ.

ಒಂದು ಬಾರಿ ರಾಯಚೂರಿಗೆ ಬಂದರಂತೆ. ಅಲ್ಲಿ ಅನೇಕ ಗಣ್ಯರ ಭೇಟಿಯೂ ಆಯ್ತು. ವೃದ್ಧ ಹಿರಿಯ ಸ್ಥಳೀಯ ವಿದ್ವಾಂಸರ ಭೇಟಿಯೂ ಆಯ್ತು. ಅದ್ಭುತ, ಪ್ರಾಚೀನ ಪರಂಪರೆಯ ದ್ಯೋತಕವಾದ ವಿದ್ಯಾಪೀಠಕ್ಕೆ ದೇಣಿಗೆ ರೂಪದಲ್ಲಿ ಒಬ್ಬರು  ೨೦೧ ರೂ ಗಳನ್ನು ಕೊಟ್ಟರು. ಉಳಿದ ಬಂದ ಗಣ್ಯರು ಪರಮಪೂಜ್ಯ ಆಚಾರ್ಯರಿಗೆ ಕಾಣಿಕೆಯನ್ನೂ ಸಮರ್ಪಿಸಿದರು. ಆಗಿನ ಕಾಲದಲ್ಲಿ ೬೦೦ ರೂಗಳು ಬಂದಿತ್ತಂತೆ. 

ವಿದ್ಯಾಪೀಠಕ್ಕೆ ಕೊಟ್ಟ ಹಣವನ್ನು, ವಿದ್ಯಾಪೀಠಕ್ಕಾಗಿ ತಾವಿರಿಸಿಕೊಂಡು, ತಮಗೆ ಬಂದ ಉಳಿದ ಹಣವನ್ನು ಅಲ್ಲಿ ಬಂದ ಅನೇಕ ಹಿರಿಯ ವೃದ್ಧ ವಿದ್ವಾಂಸರಿಗೆ ದಾನವಾಗಿ ದಕ್ಷಿಣೆ ರೂಪದಲ್ಲಿ ೪೦೦ ರೂ ಗಳನ್ನು ಕೊಟ್ಟರು ಅಂತೆ. 

ವೃದ್ದರೊಬ್ಬರು ಕೇಳಿದರಂತೆ "ಅಷ್ಟು ದಕ್ಷಿಣೆಗೆ ಒಂದೆಡೆ ಸಂತೋಷ, ಇನ್ನೊಂದೆಡೆ ಆಶ್ಚರ್ಯ" ಇವುಗಳಿಂದ ಒಳಗೊಂಡು  ನಿಮಗೆ ಬಂದ ಹಣವನ್ನು ನಮಗೆ ಕೊಟ್ಟರೆ ಹೇಗೆ ಎಂದು...‌ಆಗ ಪರಮಪೂಜ್ಯ ಆಚಾರ್ಯರ ಉತ್ತರ *ಅವಶ್ಯಕತೆಗಿಂತಲೂ ಹೆಚ್ಚಿನದೇನಿದೆ, ಅವಶ್ಯಕತೆ ಇರುವವರಿಗೆ ವಿನಿಯೋಗ ಆಗಲಿ...*  ಎಂದು ಹೇಳಿ ಅಲ್ಲಿರುವ ಒಂದು ಸಣ್ಣಂಚಿನ ಕಾಟನ್ ಧೋತ್ರ ಮಾತ್ರ ಸ್ವೀಕರಿಸಿ ಮುಂಬಯಿ ತೆರಳಿದರು ಎಂದು ಹಿರಿಯರಿಂದ ಕೇಳುತ್ತೇವೆ. ಆ ಜನ ಇಂದಿಗೂ ನೆನೆಸುತ್ತಾರೆ.

ಅವಶ್ಯಕತೆಗೆ ಚೌಕಟ್ಟು ಹಾಕಿಕೊಂಡು, ಹೆಚ್ಚಿನದನ್ನು ಹಂಚಿದರೆ ಅನೇಕರು ಸಂತೋಷದಿಂದರಲು ಆಗುತ್ತದೆ.  ನಾವಿಲ್ಲದಾಗಲೂ ನಮ್ಮನ್ನು ನೆನೆಸುತ್ತಾರೆ...

ಈ ಕಾರಣದಿಂದಲೋ ಏನೋ ಸಿರಿವಂತರ ಮನೆಗೆ ಆಗಾಗ ಯತಿಗಳು, ಭಿಕ್ಷುಗಳು, ವಿದ್ವಾಂಸರುಗಳು, ಬಂಧು ಬಾಂಧವರು ಬರುತ್ತಾನೆ ಇರುತ್ತಿದ್ದರು. ತಾವು ಊಟ ಮಾಡುವ ಭಕ್ರಿ ಚಟ್ನಿಯನ್ನೇ ಆಗಲಿ ಅವರಿಗೂ ನೀಡಿ ತಾವೂ ಊಟ ಮಾಡುತ್ತಿದ್ದರು. ಆದರೆ ಕೂಡಿಟ್ಟು ಕಳೆದುಕೊಳ್ಳುತ್ತಿದ್ದಿಲ್ಲ. 

ಕೂಡಿಟ್ಟವರು ಕೋಟಿ ಕೋಟಿ ಹಣ ಕಳೆದುಕೊಂಡವರಿದ್ದಾರೆ. ಜೈಲುಪಾಲಾದವರಿದ್ದಾರೆ. ಜೈಲು ಪಾಲಾಗುವವರೂ ಇದ್ದಾರೆ. ತನಗಿಷ್ಟು ಇಟ್ಟುಕೊಂಡು ಉಳಿದದ್ದನ್ನು ಅವಶ್ಯಕತೆ ಇರುವವರಿಗೆ ಕೊಟ್ಟವ ಸಮೃದ್ಧವಾಗಿಯೇ ಇದ್ದಾನೆ. 

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Có thể dùng sữa như 1 nhiên liệu làm bánh, thực hiện kem.
Anonymous said…
Vào sữa sở hữu chứa chấp dung lượng IgG đặc biệt cao.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*