*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ??*
*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ..??*
"ಭಕ್ತಪ್ರಿಯಂ" ಭಕ್ತರಿಗೆ ಅತ್ಯಂತ ಪ್ರಿಯ ಎಂದು ಶ್ರೀಮದ್ಬಾಗವತ ದೇವರನ್ನು ಕರೆಯುತ್ತದೆ. ಭಕ್ತರಮೇಲೆ ಅಷ್ಟು ಪ್ರೀತಿಸುವ ದೇವ ಭಕ್ತರಾದ ನಾವು ಕರೆದರೆ ಓ ಎನ್ನುವದಿಲ್ಲವೇಕೆ.. ?? ಬರುವದಂತೂ ದೂರದ ಮಾತು ಅಲ್ಲವೆ... ?? ಎಂದು ಅನೇಕ ಬಾರಿ ಅನಿಸಿದ್ದು ಇದೆ.
ಕರದರೆ ಬಾರದಷ್ಟು ದುಷ್ಟನು ದೇವನಲ್ಲ. ಹೇಗೆ ಕರಿಯಬೇಕೋ ಹಾಗೆ ಕರೆದರೆ, ಹೆಂಡತಿಯನ್ನೂ ಪಕ್ಕಕ್ಕಿರಿಸಿ ಓಡಿ ಬರುವಷ್ಟು ಕರುಣಿಯಾಗಿದ್ದಾನೆ ದೇವ. ಕರಿಯುವ ಪ್ರಕಾರದಲ್ಲಿ ಕರಿಯಬೇಕಷ್ಟೆ...
"ನಾರಾಯಣ ಅಖಿಲ ಗುರೋ ಭಗವನ್ನಮಸ್ತೆ" ಎಂದು ಗಜೇಂದ್ರ ಕರೆದ, ಓಡಿಬಂದ ದೇವ. ಪ್ರಹ್ಲಾದ ಕರೆದ ಓಡಿಬಂದ ದೇವ. ದ್ರೌಪದಿ ಕರೆದಳು ಓಡಿಬಂದ ದೇವ. ಇವರೆಲ್ಲರು ಹೇಗೆ ಕರೆದರೋ ಹಾಗೆ ನಾವು ಕರೆದರೆ ಓಡಿಬರದೇ ಇರಲಾರ.
*ದ್ರೌಪದೀ ಗಜೇಂದ್ರ ಪ್ರಲ್ಹಾದ ಇವರು ಹೇಗೆ ಕರೆದರು....*
ದ್ರೌಪದೀ ಗಜೇಂದ್ರ ಪ್ರಲ್ಹಾದ ಈ ಎಲ್ಲ ಭಕ್ತರು ದೆವನನ್ನು ಕರೆಯುವದಕ್ಕೂ ಪೂರ್ವದಲ್ಲಿ ದೇವರಿಗೋಸ್ಕರ ತನ್ನನ್ನು ತಾವು ಪರಿಪೂರ್ಣ ಸಮರ್ಪಿಸಿಕೊಂಡವರು. ತಮ್ಮ ಸಮಯವನ್ನು ದೇವರಿಗೋಸ್ಕರ ಮೀಸಲು ಇಟ್ಟವರು. ತಮ್ಮ ದೇಹ ಇಂದ್ರಿಯ ಮನಸ್ಸು ಕುಟುಂಬ ಹಣ ಧನ ಕನಕ ಮನೆ ಎಲ್ಲವನ್ನೂ ದೇವರಿಗೆ ಸಮರ್ಪಿಸಿದವರು ಇವರು. ದೇವರಾಜ್ಙಾ ರೂಪ ಧರ್ಮಪಾಲನೆಯಲ್ಲಿ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳದವರು ಇವರು. ಅಂತೆಯೇ ದೇವರು ಓಡಿಬಂದ.
*ಪ್ರಾರ್ಥನೆ ಹೇಗಿರಬೇಕು....*
ದ್ರೌಪದಿಯ ಪ್ರಾರ್ಥನೆಯಲ್ಲಿ ತನಗೆ ಘೋರ ಅವಮಾನ ಆಗ್ತಾ ಇದ್ದರೂ ದೇವರೇ ಕೇಂದ್ರನಾಗಿದ್ದ ಜೊತೆಗೆ ಪತಿಯರು ಕೇಂದ್ರರಾಗಿದ್ದರು. ಧರ್ಮ ಕೇಂದ್ರವಾಗಿತ್ತು. ಇದು ಒಂದೆಡೆ ಆದರೆ ಗಜೇಂದ್ರ ಪ್ರಾರ್ಥಿಸಿದ ಪ್ರಾರ್ಥನೆ ಇಷ್ಟದ್ಭುತವಾಗಿತ್ತ ಎಂದರೆ ಗಜೇಂದ್ರನನ್ನು ಉದ್ಧರಿಸುವದಕ್ಕೂ ಪೂರ್ವದಲ್ಲಿ ಗಜೆಂದ್ರನ ಶತ್ರುವಾದ ಮೊಸಳೆಯನ್ನು ಉದ್ಧರಿಸಿದ ಪರಮಾತ್ಮ. ನಂತರ ಗಜೇಂದ್ರನ ಉದ್ಧಾರ ಮಾಡಿದ. "ನಮ್ಮ ಪ್ರಾರ್ಥನೆಯಲ್ಲಿ ನಾವು ಕೇಂದ್ರರಾಗಿ ಇರಬಾರದು" ಇದು ಈ ಎಲ್ಲರ ಪ್ರಾರ್ಥನೆಯಲ್ಲಿ ಅಡಗಿದೆ.
*ನಮ್ಮ ಪ್ರಾರ್ಥನೆ ಕೂಗು ಹೇಗಿರತ್ತೆ....*
ನಮ್ಮ ಪ್ರಾರ್ಥನೆ ನಮ್ಮ ಕೂಗಿನಲ್ಲಿ ದೇವರು ಕೇಂದ್ರನಾಗಿ ಇರುವದೇ ಇಲ್ಲ. ಕೇವಲ ನಾನು ಕೇಂದ್ರನಾಗಿ ಇರುತ್ತೇನೆ. "ಸಂಕಟಬಂದಾಗ ವೆಂಕಟ ರಮಣ" ಅಂದಂತೆ ಕಷ್ಟ ಬಂದಾಗಲೇ ದೇವರ ನೆನಪು ಆಗಿರತ್ತೆ. ಸುಖದಲ್ಲಿ ಇದ್ದಾಗ ದೇವರ ಇರುವಿಕೆಯ ನೆನಪೇ ಆಗದು. "ಪೂಜೆ ತೀರ್ಥಕ್ಕಾಗಿ, ಸಂಧ್ಯಾವಂದನೆ ಬ್ರಾಹ್ಮಣ್ಯಕ್ಕಾಗಿ, ಜಪ ತಪ ಇಷ್ಟಾರ್ಥಗಳ ಈಡೇರುವಿಕೆಗಾಗಿ, ದಾನ ಹೆಸರಿಗಾಗಿ, ಧರ್ಮ ಕೀರ್ತಿಗಾಗಿ, ಯಜ್ಙ ಪ್ರತಿಷ್ಠೆಗಾಗಿ, ದೇಹೇಂದ್ರಿಯ ಮನಸ್ಸು ಕುಟುಂಬಕ್ಕಾಗಿ" ಹೀಗೆ ಒಂದು ಸಾಗ್ತಾ ಇರುತ್ತವೆ. ಯಾವದರಲ್ಲಿಯೂ ವಿಷ್ಣುಪ್ರೀತಿ ಇರುವದಿಲ್ಲ. ವಿಷ್ಣುವಿನಲ್ಲಿ ಸಮರ್ಪಣಾಭಾವ ಇರುವದೇ ಇಲ್ಲ. ಹೀಗಾದಲ್ಲಿ ನಾವು ಕರೆದಾಗ ದೇವರು ಓಗೊಡಬೇಕು ಏಕೆ... ?? ದೇವ ತಾ ಬರಬೇಕು ಏಕೆ..... ???
*ನಮ್ಮ ಕೂಗಿಗೆ ಬೆಲೆ ಇಲ್ಲವೇ.. ?? ಬರುವದೇ ಇಲ್ಲವೇ... ??*
ಅನಂತ ಕರುಣಾಪೂರ್ಣ ಶ್ರೀಹರಿ ನಮ್ಮ ಕೂಗಿಗೆ ಓಗುಡುತ್ತಾನೆ. ಬರುತ್ತಾನೆ. ಅಂತೆಯೆ ದಾಸರು "ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ" ಎಂದರು. "ದೇವರು ಬಂದ ನಾಲ್ಕು ಆಪತ್ತುಗಳನ್ನು ಪರಿಹರಿಸದಿದ್ದರೂ, ಬರುವ ಕೋಟಿ ಕೋಟಿ ಆಪತ್ತುಗಳನ್ನು ತಾನು ಬರದೇ ಪರಿಹರಿಸಿದ್ದಾನೆ ಅಂತೆಯೇ ನಾವಿಷ್ಟು ಸುಖವಾಗಿ ಇದ್ದೇವೆ" ಇದುವೆ ದೇವರ ಮಹಾ ಕಾರುಣ್ಯ.
*"ಮಹಾ ಕಾರುಣಿಕೋ ವಿಷ್ಣುಃ" ಎಂದರು ಆಚಾರ್ಯರು.*
ದೇವರು ನಾವು ಕೂಗುವದಕ್ಕೂ ಮುಂಚೆಯೇ ನಮ್ಮ ಕೂಗು ಏನಿರಬಹುದೆಂದು ಯೋಚಿಸಿ, ಆಪತ್ತು ಪರಿಹರಿಸಿ ಕೂಗದಿರುವಂತೆ ಮಾಡಿದ್ದಾನೆ ಅಲ್ವೆ ಇದೇ ದೇವರ ಅಪಾರ ಕರುಣೆ. ಈ ಕರುಣೆ ಇಲ್ಲದಿದ್ದರೆ ನಮ್ಮ ಕರ್ಮಾನುಸಾರ ಇಡೀ ಜೀವನ ಕೂಗ್ತಾ ನೇ ಇರಬೇಕಾಗಿತ್ತು. ನಮ್ಮ ಕೂಗು ಕೇಳಿಸಿದೆ. ನಮ್ಮಬಳಿ ಓಡಿಂಬಂದಿದ್ದಾನೆ. ನಮ್ಮ ಬಳಿ ಇದ್ದಾನೆ. ನಾವು ಕಂಡಿಲ್ಲ ನೋಡಿಲ್ಲವಷ್ಟೆ.
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments