*ಓ ಸಿಟ್ಟು ಕೊಲ್ಲುವ ದೇವ ನಿನಗೆ ನಮಸ್ಕಾರ*

*ಓ ಸಿಟ್ಟು  ಕೊಲ್ಲುವ ದೇವ ನಿನಗೆ ನಮಸ್ಕಾರ*

"ಕ್ರೋಧಘ್ನೇ ನಮಃ" ಎಂದು ವಿಷ್ಣುಸಹಸ್ರ ನಾಮದಲ್ಕಿ ಬಂದ ಒಂದು ಅತ್ಯುತ್ತಮ ರೂಪ. ಕ್ರೋಧವನ್ನು ಸಿಟ್ಟನ್ನು ನಾಶ ಮಾಡುವ ದೇವರ ರೂಪ. ನಿತ್ಯ ಚಿಂತನೆಗೆ ಯೋಗ್ಯವೂ ಆದ ರೂಪ. 

*ಸಿಟ್ಟು ಯಾಕೆ ಬರತ್ತೆ......??*

ಸಿಟ್ಟು ಯಾಕೆ ಬರತ್ತೆ..?? ಎಂದು ಕೇಳಿದರೆ ನಿರ್ದಿಷ್ಟ ನಿಖರ ಕಾರಣಗಳನ್ನು ಹೇಳುವದು ಕಷ್ಟ ಎಂದು ಅನೇಕರು ಹೇಳುವದಿದೆ. ಆದರೆ ಶ್ರೀಕೃಷ್ಣ ಪರಮಾತ್ಮ *ಕಾಮಾತ್ ಕ್ರೋಧೋಭಿಜಾಯತೇ* ಎಂದು ಗೀತೆಯಲ್ಲಿ ತಿಳಿಸಿದಂತೆ "ತನ್ನ ಇಚ್ಛೆಗಳು ಈಡೇರದಿರುವಾಗ ಸಿಟ್ಟು ಬರುವದು" ಎಂದು ತಿಳಿಸಿಕೊಡುತ್ತಾನೆ. 

ಹಸಿದವನಿಗೆ ಸಿಟ್ಟು ಬರತ್ತೆ ಇಲ್ಲೆಲ್ಲಿ ಅವನ ಇಚ್ಛೆ ವಿಫಲವಾಗಿದೆ ?? ಎಂದು ಪ್ರಶ್ನೆ ಬರಬಹುದು. ತಾನೊಂದು ಇರಿಸಿಕೊಂಡ ಸಮಯಕ್ಕೆ ಊಟವಾಗಿಲ್ಲ. ಹಾಗಾಗಿ ಸಿಟ್ಟೇ ಹೊರತು. ಹಸಿವೆ ಸಿಟ್ಟಿಗೆ ಕಾರಣವಲ್ಲ. ಏಕಾದಶಿ ಕೃಷ್ಣಾಷ್ಟಮಿ ಸಿಟ್ಟಿನಲ್ಲೇ ಕೊಳೆಯಬೇಕಾಗುತ್ತಿತ್ತು. 

*ಕ್ರೋಧಘ್ನೇ ನಮಃ*

ನನ್ನ ಮಾತು ಕೇಳಿಲ್ಲ ಹಾಗಾಗಿ ನಮ್ಮವರ ಮೇಲೆ ಸಿಟ್ಟು.  ಧರ್ಮ ತಾನು ನಾನು ಬಯಸಿದ ಫಲ ಕೊಟ್ಟಿಲ್ಲ ಹಾಗಾಗಿ ಧರ್ಮದಮೇಲೆ ಸಿಟ್ಟು. ದೇವರ ವಿಷಯಕವೂ ಹೀಗೆಯೇ. ಎದ್ದರೆ ಸಿಟ್ಟು, ಕೂಡೆಂದರೆ ಸಿಟ್ಟು, ಮಲಗಿದರೆ ಸಿಟ್ಟು, ಊಟವಾದರೆ ಸಿಟ್ಟು, ಮಾತಾಡಿದರೆ ಸಿಟ್ಟು, ಹೀಗೆ ಎಲ್ಲದರ ಮೇಲೇ ಸಿಟ್ಟು ಮಾಡಿಕೊಳ್ಳಲಿಕ್ಕೆ ಸಿಟ್ಟನ್ನೇನು ನಾವು ಖರೀದಿ ಮಾಡಿಲ್ಲ. ಸಿಟ್ಟು ಇದು ನಮ್ಮ ಮೊನಾಪಲ್ಲಿನೂ ಅಲ್ಲ. "ನನ್ನದಲ್ಲದ, ನನಗೆ ಬೇಡವಾದ ಸಿಟ್ಟನ್ನು ಕೊಂದು ಹಾಕು" ಎಂದು ಪ್ರಾರ್ಥನೆಯೇ *ಕ್ರೋಧಘ್ನೇ ನಮಃ.*

*ಕ್ಷಣಿಕ ಸಿಟ್ಟು - ಜೀವನದ ಪರ್ಯಂತ ಅದರ ಪ್ರಭಾವ*

ಸಿಟ್ಟು ಕ್ಷಣಿಕ. ಒಂದೇ ಕ್ಷಣದಲ್ಕಿ ತಾನು ಸತ್ತು ಹೋಗುತ್ತದೆ. ಆದರೆ ಸತ್ತು ಹೋಗುವಾಗ ತನ್ನ ಅನೇಕತರಹದ  ಪ್ರಭಾವಗಳನ್ನು ಮಾತ್ರ ತುಂಬ ಬೀರಿರುತ್ತದೆ. 

ಸಿಟ್ಟು ಮೊದಲು ಅಹಂಕಾರವನ್ನು ಬೆಳಿಸುತ್ತದೆ. ಶತ್ರುತ್ವವನ್ನು ದೀರ್ಘಸೂತ್ರವನ್ನು (ಕೊನೆ ಉಸಿರುರುವ ವರೆಗೂ) ಪೋಶಿಸುತ್ತದೆ. ಅತೀಹೆಚ್ಚು ಆತ್ಮೀಯತೆಯನ್ನೂ ಕೆಲವೊಮ್ಮೆ ಬೆಳಿಸಿಬಿಡುತ್ತದೆ. ಗಾಢವಾದ ಸ್ನೇಹವನ್ನು ಇನ್ನಿಲ್ಲದಂತೆ ನುಚ್ಚು ನೂರು ಮಾಡಿಸುತ್ತದೆ. ನಮ್ಮವರೇ ಆಗಿ, ನಮ್ಮವರ ಮುಂದೆ ನಮ್ಮ ಬಗ್ಗೆನೇ ಕೆಟ್ಟದಾಗಿ ಪ್ರಚಾರ ಮಾಡಿಸುತ್ತದೆ. ಗೂಢದ್ವೇಶ ಬೆಳಿಸುತ್ತದೆ. ನಮ್ಮನ್ನು ಅತೀ ಸಣ್ಣವನನ್ನಾಗಿಸುತ್ತದೆ. ನಾಚಿಕೆ ಕೆಡಿಸಿಬಿಡುತ್ತದೆ. ನಾಲ್ಕುಜನರ ಬಾಯಿಗೆ ತುತ್ತಾಗಿಸುತ್ತದೆ. ಹೀಗೆ ತನ್ನ ನೂರಾರು ಪ್ರಭಾವಗಳನ್ನು ಬೀರಿಯೇ ತಾನು ಸಾಯುತ್ತದೆ. 

*ಸಿಟ್ಟು ಯೋಗ್ಯವೇ - ಸಿಟ್ಟಿನ ಪ್ರಭಾವಳಿಯಲ್ಲಿ ಬೀಳುವದು ಬೇಡ*

ಸಿಟ್ಟು ಯೋಗ್ಯವೇ. ಸಿಟ್ಟಿನಿಂದ ವೇಗಸಿಗತ್ತೆ. ನಿಂತ ಕೆಲಸಗಳು ಆಗುತ್ತವೆ. ಸರಿ ದಾರಿಯಲ್ಲಿರಿಸುತ್ತದೆ. ಆದರೆ ಸಿಟ್ಟಿನ ಪ್ರಭೆಯಲ್ಲಿ ಒಳಗಾಗುವದು ಬೇಡವಷ್ಟೆ. 

ಸಿಟ್ಟು ಬಂದು ಹೋಗತ್ತೆ. ಸಿಟ್ಟಿನಿಂದ ಹುಟ್ಟಿದ ದ್ವೇಶ ಉಳಿಯುತ್ತದೆ. ದ್ವೇಶವನ್ನು ತುಂಬ ಮಾಡುವದು ಬೇಡ. ಜಗತ್ತು ಗುಂಡಾಗಿದೆ. ಹಾಗಾಗಿ  ಮುಂದೊಂದು ದಿನ ಅವನೇ ಪ್ರಿಯನಾಗಬಹುದು. 

ಹೇ ಸಿಟ್ಟು ಕೊಲ್ಲುವ ದೇವ !! ನನ್ಬದಲ್ಲದ ಸಿಟ್ಟನ್ನು ನನ್ನಲ್ಲಿರಿಸಬೇಡ. ಸಿಟ್ಟ ಬಂದ ಕ್ಷಣದಲ್ಲಿ ಕೊಂದು ಹಾಕು. ಸಿಟ್ಟಿನ ಪ್ರಭೆಗೆ ಸಿಕ್ಕುಬೀಳಿಸಬೇಡ. ಸಿಟ್ಟಿನ ಮಕ್ಕಳ ದಾಸನನ್ನಾಗಿಸ ಬೇಡ. ನಿನಗೆ ನಮೋನಮಃ. ಕೋಟಿ ಕೋಟಿ ವಂದನೆಗಳು. ಅನಂತ ನಮನಗಳು. 

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*