*ಹೊಟ್ಟೆ ತುಂಬಿದರೂ, ಭಿಕ್ಷೆ ಬೇಡುವದು ಬಿಡಲ್ಲ.......*


*ಹೊಟ್ಟೆ ತುಂಬಿದರೂ, ಭಿಕ್ಷೆ ಬೇಡುವದು ಬಿಡಲ್ಲ.......*

ಭಿಕ್ಷೆ ಬೇಡುವದು ಏತಕೆ ಹೊಟ್ಟೆಗೋಸ್ಕರ. ಹೊಟ್ಟೆ ತುಂಬಿದಮೇಲೂ ಭಿಕ್ಷೆ ಬೇಡುತ್ತೇವೆ ಎಂದರೆ ಭಿಕ್ಷೆ ಬೇಡುವದು ನಮ್ಮ ಸ್ವಭಾವವಾಗಿದೆ ಎಂದೇ ಅರ್ಥ. ನಾವು  ಭಿಕ್ಷೇ ಬೇಡುವವರೆ. ಖಂಡಿತವಾಗಿಯೂ ಬೇಡೋಣ. ಅದು ಬೇಕು ಇದು ಬೇಕು, ಅದು ಸಿಕ್ಕಾದ ಮೇಲೆ ಮತ್ತೊಂದು , ಅದೂ ದೊರೆತಾದಮೇಲೆ ಮುಗದೊಂದು ಹೀಗೆ ಬೇಡ್ತಾನೆ ಕೂತರೆ ಅದು ಮಾತ್ರ ಅತೀದೊಡ್ಡ ತಪ್ಪು ಎಂದಾಗಬಹುದು.  

ಹೊಟ್ಟೆ ತುಂಬಿಸಿಕೊಳ್ಳವುದು ತೃಪ್ತಿಗೋಸ್ಕರ. ಹೊಟ್ಟೆ ತುಂಬಿದಾಗ ಯಾರಿಗೆ ತೃಪ್ತಿ ಆಗುವದಿಲ್ಲವೋ ಆ ವ್ಯಕ್ತಿ ಹದಿನಾಲ್ಕು ಲೋಕದಲ್ಲಿಯ ಸಕಲ ವೈಭೋಗಗಳನ್ನು ಒಂದೊಂದಾಗಿ ಒದಗಿಸಿದಾಗಲೂ ತೃಪ್ತಿ ಆಗುವದೇ ಇಲ್ಲ. "ದೊರೆತದ್ದರಲ್ಲಿ ಸಂತೃಪ್ತನಾಗಿರು" ಈ ನೀತಿಯನ್ನು ವಾಮನರೂಪಿ ಭಗವಾನ್ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾನೆ. 

ವಾಮನ ತನಗಾಗಿ ಬಂದವನಲ್ಲ. ನಮಗೋಸ್ಕರ ಭಕ್ತರಿಗೋಸ್ಕರವೇ ಬಂದವನು. ತನ್ನ ಅನೇಕ ನಡೆ ನುಡಿಗಳಿಂದ ಭಕ್ತರಿಗೆ ನೂರಾರು ಮಾರ್ಗದರ್ಶನ ಮಾಡುವ.  ದೇವರೇ ನಿಜವಾಗಿಯೂ ಭಕ್ತರ ಗೆಳೆಯ. ದೇವರ ಗೆಳತನದ ವೈಭವ ಅತ್ಯದ್ಭುತ. 

ನಮಗೂ ನೂರಾರು ಗೆಳೆಯರು ಇರುತ್ತಾರೆ. ನಾವೂ ನೂರಾರು ಮಂದಿಗೆ ಗೆಳೆಯರಾಗಿರುತ್ತೇವೆ. ಆ ಗೆಳೆಯತನ ಕೇವಲ ಸ್ವಾರ್ಥಕ್ಕಾಗಿಯೇ. ಇದ್ದರೂ ಕೆಲ ದಿನ. ಕೆಲ ವರ್ಷ. ಅಥವಾ ಅಬ್ಬಬ್ಬಾ ಅಂದರೆ ಈ ಒಂದು ಜೀವನ ಮಾತ್ರ. ಅಂತಹ ಗೆಳೆತನದ ಮೇಲೆ ಪೂರ್ಣ ಭರವಸೆ ಇರಲೇಬೇಕು. ಇದ್ದೇ ಇದೆ. ಆ ಗೆಳೆಯನಿಗೆ "ನೀನು ಅನ್ನ ಅತ್ಯಂತ ಆತ್ಮೀಯ ಮಿತ್ರ, ಇಂದೊಂದು ದಿನ ನನಗೋಸ್ಕರ ಭಿಕ್ಷೆ ಬೇಡು" ಎಂದರೆ ಬೇಡಬಹುದೆ ?? ಅಸಾಧ್ಯದ ಮಾತು. ಆದರೆ...

ದೇವರು ಹಾಗಲ್ಲ ನಮಗೋಸ್ಕರ ಭಕ್ತರಿಗೋಸ್ಕರ ಭಿಕ್ಷೆ ಬೇಡಲು ಸಿದ್ಧ. ಹೆಣ್ಣಿನ ವೇಷ ಹಾಕಲೂ ಸಿದ್ಧ. ಹೆಣ್ಣಾಗಲೂ ಸಿದ್ಧ. ಬೆತ್ತಲೆ ನಿಲ್ಲಲೂ ಸಿದ್ಧ. ನಾ ಯಾವ ಮೋರೆಯಲ್ಲಿ ಹೊಲಸು ಹುಳ ಆಗಿ ಹುಟ್ಟಿ ಬಂದರೂ ಆ ನನ್ನ ದೇಹವನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡು ನನ್ನ ಜೊತೆಗೇ ಇರುವ ಮಿತ್ರ ಅಂತೆಯೇ  ಇವ ನಿಜ ಗೆಳೆಯ. 

ಆ ಎಲ್ಲ ಸಾವಿರಾರೂ ರೂಪಗಳಲ್ಲಿ ವಾಮನ ರೂಪವೂ ಒಂದು. ಭಕ್ತರಾದ ದೆವತೆಗಳಿಗೋಸ್ಕರ ಬಲಿ ಚಕ್ರವರ್ತಿ ಬಳಿ ಭಿಕ್ಷೆ ಬೇಡಲು ತೆರಳಿದ. ಮೂರು ಪಾದ ಭಿಕ್ಷೆಯನ್ನೂ ಬೇಡಿದ. 

ಇಂದು ಮನೆಯಲ್ಲಿ ಅನ್ನವೆಷ್ಟು ಇದೆ ಎಂದರೆ ಅಜೀರ್ಣವಾಗುವಷ್ಟು ಇದೆ,  ತಿಂದು ಎಲೆಯಲ್ಲಿ ಚೆಲ್ಲುವಷ್ಟೂ ಇದೆ, ಯಾಕೋ ಸರಿ ಅನಸ್ತಿಲ್ಲ ಅಮ್ಮ ದುಡ್ಡು ಕೊಡು ಎಂದು ಬೇಡಿ, ಹೊರಗೆ ಹೋಗಿ ಪಾನೀಪುರಿ ತಿಂದು ಬರುವಷ್ಟು ಇದೆ. ಆದರೆ ಸಂತೃಪ್ತಿ ಇಲ್ಲ......  ಬೀರುಗಳ ತುಂಬಾ ಡ್ರೆಸ್ ಗಳು ಇವೆ. ಅದು ಮೀರಿ ನಾಲ್ಕಾರು ಸೂಟ್ ಕೇಸ್ ತುಂಬಿವೆ. ಮೊನ್ನೆ ಭಾನುವಾರ ಮತ್ತೆ ಆರು ಡ್ರೆಸ್ ತೊಗೊಂಡೆ ಆದರೂ ಸಂತೃಪ್ತಿ ಇಲ್ಲ.... ಯಾಕೆ..?? 

ಒಂದು ತುತ್ತು ಉಂಡಾಗ ತೃಪ್ತಿ ಪಡದ, ಒಂದೆರಡು ಡ್ರೆಸ್ ಗಳು ಇರುವಾಗ ತೃಪ್ತಿ ಪಡದವನಿಗೆ ಎಷ್ಟು ಸುರಿದರೂ ಸಂತೃಪ್ತನಾಗಲಾರ. ಮತ್ತೆ ಭಾನುವಾರ ಬಂದರೆ  ಭಿಕ್ಷೆ ಬೇಡುವದು ನಿಲ್ಲಿಸಲಾರ. *ಅತೀ ಸಣ್ಣದನ್ನು ಪಡೆದಾಗ ಸಂತೃಪ್ತ ಪಡುವ ಮಾನವ ಎಂದಿಗೂ ಮತ್ತೆ ಭಿಕ್ಷೆ ಬೇಡಲಾರ...*

ಒಂದು ವಾಮನನ ನಿದರ್ಶನ... ಬಲಿ ಹೇಳುವ "ಬ್ರಾಹ್ಮಣ !! ಧನ, ಕನಕ, ಭೂಮಿ, ಬ್ರಾಹ್ಮಣ ಕ್ನೆಯರು ಏನು ಬೇಕೋ ಕೇಳು. ಅದೆಲ್ಲ ನಾ ಕೊಡುವೆ. " ಏನು ಹುಚ್ಚರ ಹಾಗೆ  ಮೂರುಪಾದ ಭೂಮಿ ಬೇಡುವೆ" ಅಲಾ... 

ವಾಮನ ಹೇಳುವ "ಬಲಿ !! ಮೂರು ಪಾದ ಭೂಮಿಯಿಂದ ಯಾರಿಗೆ ತೃಪ್ತಿ ಆಗುವದಿಲ್ಲವೋ, ಅವರಿಗೆ ಹದಿನಾಲ್ಕು ಲೋಕಗಳನ್ನು ಕೊಟ್ಟರೂ ಆಸೆ ಕಡಿಮೆಯಾಗುವದಿಲ್ಲ. ಇನ್ನೆರಡು ಲೋಕ‌ಗಳನ್ನು ಕೊಟ್ಟರೆ ಒಳ್ಳೆದಾಗ್ತಿತ್ತು" ಎಂದೇ ಯೋಚಿಸುವ.  ಆದ್ದರಿಂದ ನನಗೆ ಇಷ್ಟು ಭೂಮಿ ಸಾಕು. ಇದರಲ್ಲೇ ನಾ ಸಂತೃಪ್ತ. 

ಹೀಗೆ ಮಹಾಭಾರತ ಭಾಗವತ ಸಣ್ಣ ಸಣ್ಣ ನಿದರ್ಶನಗಳಿಂದ ನಮಗೆ ಮಾರ್ಗದರ್ಶನಗಳನ್ನು ಮಾಡುತ್ತಾ ಸಾಗುತ್ತದೆ. ಅಂತೆಯೇ ನಮ್ಮಲ್ಲಿ ಒಂದು ಉತಗಕೃಷ್ಟ ಪಥ. *ನಿತ್ಯದಲ್ಲಿಯೂ ಕೆಲ ಹೊತ್ತಾದರೂ ಭಾಗವತ ಮಹಾಭಾರತ ರಾಮಾಯಣ ಇವುಗಳನ್ನು ಆಲಿಸಿಯೇ ದಿನ ಕಳೆಯುವದು* ಆ ಪಥ ಬಿಡುವದು ಬೇಡ. ಮುಂದೊರಿಸೋಣ. ಅಲ್ಲಿ ಬರುವ ನೂರಾರು ಮಾರ್ಗದರ್ಶನಗಳನ್ನು‌ ಪಡೆದು ಪದೆ ಪದೆ ಭೀಕ್ಷೆ ಬೇಡದೇ, ಇದ್ದರಲ್ಲಿ ಅತ್ಯಂತ ವೈಭವದಿಂದ ಜೀವನ ನಡೆಸೋಣ... 

*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*