*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ*
*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ*
ಕಾಮ - ಇಚ್ಛೆ. ಕಾಮಗಳು ಇಚ್ಛೆಗಳು ಮನಸ್ಸಿನ ವಿಕಾರಗಳೆ. ಸತ್ಕಾಮಗಳು ಹಾಗೂ ಸದಿಚ್ಛೆಗಳು ಬರಲು ಬೇಕು ಮನೋಭಿಮಾನಿಗಳ ಅನುಗ್ರಹ. ಮನೋಭಿಮಾನಿ ದೇವತೆಗಳನೇಕರಲ್ಲಿ ಇಂದ್ರಾವತಾರಿಗಳಾದ, ಶೇಶದೇವರಿಂದ ಆವಿಷ್ಟರಾದ, ಮಲಖೇಡ ನಿವಾಸಿಗಳೂ ಆದ, ನಾಳೆಯಿಂದ ಮೂರುದಿನಗಳ ನಮ್ಮೆಲ್ಲರ *ಆರಾಧ್ಯ ಗುರುಗಳಾದ ಶ್ರೀಮಟ್ಟೀಕಾಕೃತ್ಪಾದರೂ* ಒಬ್ಬರು.
ಎಲ್ಲರಿಗೂ ಸಮಯ ಇರುವದು ಇಪ್ಪತ್ತು ನಾಲ್ಕು ಗಂಟೆ ಮಾತ್ರ. ಆ ಇಪ್ಪತ್ತು ನಾಲ್ಕು ಗಂಟೆ ವ್ಯರ್ಥಕಾಮನೆ ವ್ಯರ್ಥ ಇಚ್ಚವೆಗಳಲ್ಲೇ ತೊಡಗಿದರೆ ದೇವರ ನೆನಪೇ ಆಗದು.
ಆ ವ್ಯರ್ಥ ಕಾಮನೆಗಳನ್ನು ವ್ಯರ್ಥ ಇಚ್ಛೆಗಳನ್ನು ಎಷ್ಟೆಲ್ಲ ಸಾಧ್ಯವೋ ಅಷ್ಟು ಯಾರು ಮೆಟ್ಟಿನಿಂತಿದಾರೆ ಅವರೇ *ಕಾಮ ಗೆದ್ದವರು.* ಅಂತಹವರಿಗೇ ದೇವರ ಧರ್ಮದ ಶಾಸ್ತ್ರದ ನೆನಪು. ಯಾರು ದೇವರನ್ನು ತಿಳಿತಾರೆ, ಶಾಸ್ತ್ರ ಓದುತ್ತಾರೆ ಧರ್ಮ ಮಾಡುತ್ತಾರೆ ಅವರೇ ನಿಜವಾಗಿಯೂ *ದೇವರ ಪ್ರೇಮ ಪ್ರಿಯರು.*
ದುಷ್ಟಕಾಮನೆಗಳನ್ನು ಗೆಲ್ಲುವದು ಒಂದಾದರೆ. ಸತ್ಕಾಮನೆಗಳನ್ನು ಮಾಡುವದೂ ಒಂದು ದೊಡ್ಡ ಧರ್ಮ. ಯಾರು ಸತ್ಕಾಮಿಗಳೋ ಅವರು ವಿಷ್ಣು ಪ್ರಿಯರೇ.
*ನೇಮ ನಿಷ್ಠರಾ ನಿಷ್ಕಾಮನಾ ಪರಾ*
ಸತ್ಕಾಮನೆಗಳು ಬಂದಾಗ ನೇಮಗಳು ಆರಂಭವಾಗುತ್ತವೆ. ನೇಮ ನಿತ್ಯಗಳು ಬೇಡಾದವರಿಗೆ ದುಷ್ಟಕಾಮನೆಗಳ ಬೆಳೆಯುವದು. ಸತ್ಕಾಮನೆಗಳ ಅಭಿವೃದ್ಧಿ ಧರ್ಮದ ನಾಂದಿ. ಧರ್ಮ ಬೆಳಿಯಿತೋ, ಜ್ಙಾನ ಅಭಿವೃದ್ಧಿಸಿತೋ ಬೇಡಲು ಆರಂಭಿಸಿಬಿಡುತ್ತೇವೆ. ಬೇಡುವದು ಹೇಗೆ ಅನ್ನುವದನ್ನು ಸ್ವಯಂ ವಿಜಯದಾಸರೇ ತಿಳಿಸುತ್ತಾರೆ.
*..... ನಿಷ್ಕಾಮನಾ ಪರಾ*
ಜೀವರೇ ಇದ್ದೇವೆ ಎಂದಾದಮೇಲೆ ಬೇಡದೇ ಇರಲು ಸಾಧ್ಯವಿಲ್ಲ. ಬೇಡದೇ ಇರುವವ ಪರಾಮಾತ್ಮ ಮಾತ್ರ. ಹಾಗಾಗಿ ಬೇಡುವದೇ ನಮ್ಮ ಕಸುಬು. ನಮ್ಮ ಧರ್ಮ.
ಬೇಡುವದರಲ್ಲಿ ಒಂದು ತರೀಕೇ ಇದೆ. ಮನಬಂದಂತೆ ಬೇಡಬೇಡ. ಬೇಡುವದೇ ಅದರೆ "ನನಗೆ ಯೋಗ್ಯವಾದದ್ದು ಬೇಡುವೆ, ಬೇಡುವದೇ ಆದರೆ ವಿಷ್ಣು ಇಚ್ಛೆಗೆ ಅನುಗುಣವಾಗಿಯೇ ಬೇಡುವೆ" ಹೀಗೆ ಬೇಡಿದರೆ ಬೇಡಿದ್ದೆಲ್ಲ ಸಿಗಬಹುದು.
ನಮ್ಮ ಯೋಗ್ಯತೆಯೂ ನಮಗೆ ತಿಳಿದಿಲ್ಲ. ದೇವರಿಚ್ಛೆ ಏನಿದೆ ಗೊತ್ತಿಲ್ಲ. "ಬೇಡಿದ್ದೊಂದೇ ನಿಜವಾಗತ್ತೆ, ಪಡೆದದ್ದು ಮಾತ್ರ ಪರಟೆ" ಆಗಿರತ್ತೆ.
ದುಷ್ಟಕಾಮನೆಗಳನ್ನು ಗೆದ್ದು. ಸತ್ಕಾಮನೆಗಳನ್ನು ಬೆಳಿಸಿಕೊಂಡು. ನೇಮ - ನಿಷ್ಠೆಗಳನ್ನು ಪಾಲಿಸಿ ಕ್ಷುದ್ರ ಹಾಗೂ ಕ್ಷಣಿಕವಾದದ್ದು ಬೇಡದೇ *ಜಯರಾಯರ ಪ್ರೀತಿಯನ್ನು ಬೇಡು* ಈ ಬೇಡುವಿಕೆ *ನಿಷ್ಕಾಮ* ಎಂದೆನಿಸಿಕೊಳ್ಳುತ್ತದೆ.
*ಬೇಡವೆಂದರೆ ನೀಡುವ ದೊರೆ*
ಹೋಳಿಗೆ ಬೇಡ ಎಂದರೆ ಒಂದು ಹೆಚ್ಚಿನ ಹೋಳಿಗೆ ಎಲೆಯಲ್ಲಿ ಬೀಳತ್ತೆ. ಹಾಗೆಯೇ ಬೇಡ ಎಂದರೆ ಸರ್ವಸ್ವವನ್ನೂ ಕೊಡುವ ದೊರೆ ನಮ್ಮ ಶ್ರೀಮಟ್ಟೀಕಾಕೃತ್ಪಾದರು. ಶ್ರೀಮಟ್ಟೀಕಾಕೃತ್ಪಾದರ ಸ್ಪಷ್ಟ ಜ್ಙಾನ ನಮಗಿರಬೇಕು. ಮಾಡಿದ ಕರ್ಮ ಶ್ರೀಮಟ್ಟೀಕಾಕೃತ್ಪಾದರ ತುಷ್ಟಿಗೆ ಕಾರಣವಾಗಿರಬೇಕು.
*ಮನಸ್ಸಿನಲ್ಲಿಯೇ ಇದ್ದು ಮನಸ್ಸನ್ನೇ ಪರಿವರ್ತಿಸುವ ಹೆದ್ದೊರೆ*
ಇಂದ್ರಾವತಾರಿಗಳಾದ, ಶೇಷದೇವರಿಂದ ಆವಿಷ್ಟರಾದ ಶ್ರೀಮಟ್ಟೀಕಾಕೃತ್ಪಾದರು ಸ್ವಯಂ ಅನಂತ ಜೀವರಾಶಿಗಳ ಮನೋ ನಿಯಾಮಕರು. ಅನಂತ ಜೀವರ ಮನೋ ನಿಯಮಕರಾದ ಶ್ರೀಜಯತೀರ್ಥರು *ನಮಗೆ ಏನು ಮಾಡಿದರೆ ಜಯ ದೊರಕೀತೋ ಅದನ್ನೇ ಪ್ರೇರಿಸುತ್ತಾರೆ. ಹಾಗೆಯೇ ಮನಸ್ಸನ್ನು ಪರಿವರ್ತಿಸುತ್ತಾರೆ.*
ಸ್ವಯಂ ಎಲ್ಲ ದುಷ್ಕಾನೆಗಳನ್ನು ಗೆದ್ದ, ಶ್ರೀಹರಿಗೆ ಶ್ರೀಮದಾಚಾರ್ಯರಿಗೆ ಅತ್ಯಂತ ಪ್ರೋಮಭರಿತರೂ ಪ್ರೇಮಪೂರ್ಣರೂ ಆದ ಶ್ರೀಮಟ್ಟೀಕಾಕೃತ್ಪಾದರ ಆರಾಧನೆ, ವಿಜಯದಾಸರು ತಿಳಿಸಿದಂತೆ ಕಾಗಿಣೀ ತಟವಾದ, ಮೇಘನಾಥ ಪುರ ಮಲಖೇಡದಲ್ಲಿ, ಅತ್ಯಂತ ವೈಭವದಿಂದ ನಡೆಯತ್ತೆ. ಪ್ರತಿ ಊರು ಗ್ರಾಮಗಳಲ್ಲಿಯೂ ನಡೆಯತ್ತೆ. ಭಾಗವಹಿಸೋಣ. ನಮ್ಮಮನಸ್ಸನ್ನು ಸನ್ಮಾರ್ಗದಲ್ಲಿ ಪ್ರೇರಿಸಿ ಪ್ರಚೋದಿಸಿ ಎಂದು ಪ್ರಾರ್ಥಿಸೋಣ. ದುಷ್ಟ ಕಾಮನೆಗಳನ್ನು ಗೆಲ್ಲೋಣ. ಶ್ರೀಹರಿಗೆ ಪ್ರೇಮಪಾತ್ರರೂ ಆಗೋಣ.
*✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments