*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....*
*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....*
ಪಾಪಗಳು ಜೀವನ ಬೆಂಬಿಡದ ಭುತಗಳು. ಪಾಪ ಹೆಸರಿಗೆ ಒಂದೆ ಇದೆ. ಆದರೆ ಆ ಪಾಪದ ರೂಪಗಳು ಕೋಟಿ ಕೋಟಿ. ಪ್ರತಿಯೊಂದಕ್ಕೂ ನೂರಾರು ಪಾಪಗಳು.
ಒಂದು ಸುಖ ನೂರುಪಾಪಗಳನ್ನು ಹೊತ್ತೇ ಬಂದಿರತ್ತೆ. ಆ ಒಂದೊಂದು ಪಾಪವೂ ನಮ್ಮನ್ನು ದಿಕ್ಕುಗೆಡಿಸುತ್ತದೆ. ಕಂಗಾಲ್ ಆಗಿ ಮಾಡಿಬಿಡುತ್ತದೆ. *ಏಲ್ಲ ಇದ್ದರೂ ಏನಿಲ್ಲದವನಂತೆ ಮಾಡುತ್ತವೆ* ಪಾಪಗಳು.
ಉದಾಹರಣೆಗೆ "ಒಂದು ನಿದ್ರೆ ಇದೆ. ಆ ಒಂದು ನಿದ್ರೆ ಸುಖಮಯವೇ. ಸುಖಕ್ಕಾಗಿಯೇ ನಿದ್ರೆ. ಆದರೆ ಆನಿದ್ರೆಗೆ ಪಾಪಗಳು ಮೆತ್ತಿಕೊಂಡು ಇವೆ. ನಿದ್ರೆ ಬರ್ತಾ ಇದೆ ಮಲಗಲು ಸ್ಥಳ ಸಿಗಲಿಲ್ಲ - ಪಾಪ ಇದೆ. ಸ್ಥಳ ಸಿಕ್ಕಿತು ಘಾಳಿ ಇಲ್ಲ - ಪಾಪವಿದೆ. ದೊಡ್ಡ ದೊಡ್ಡ ವಿದ್ಯುದ್ದೀಪಗಳಿವೆ - ಪಾಪವಿದೆ. ತುಂಬ ಶಕಿ ಆಗ್ತಿದೆ - ಪಾಪವಿದೆ. ಹುಳ ಕಚ್ತಿವೆ - ಪಾಪವಿದೆ. ಚಳಿ ಆಗ್ತಿದೆ - ಪಾಪವಿದೆ. ಪಕ್ಕದವರು ಜೋರಾಗಿ ಘುರಿಕೆ ಹೊಡಿತಿದಾರೆ - ಪಾಪವಿದೆ. ಕೆಟ್ಟ ಕನಸ್ಸು ಬಿದ್ದಿತು - ಪಾಪವಿದೆ. ಕರೆಂಟ್ ಹೋಯ್ತು - ಪಾಪವಿದೆ. ಫ್ಯಾನ್ ಕಟಕಟ ಶಬ್ದ ಮಾಡ್ತಿದೆ - ಪಾಪವಿದೆ. ಐದೇ ಐದು ನಿಮಿಷ ನಿದ್ದೆ ಆಗತ್ತೆ ಏನೋ ಆಗಿ ಎಚ್ಚರವಾಗತ್ತೆ - ಪಾಪವಿದೆ.
ಈ ತರಹದಿಂದ ಅನಾಯಾಸೇನ ಫ್ರೀಯಾಗಿ ಮಾಡುವ ನಮ್ಮ ಕಾರ್ಯಗಳಿಗೆ ನೂರಾರು ಪಾಪಗಳಿವೆ. ನಮ್ಮನ್ನು ಕಂಗೆಡಿಸಿಬಿಡುತ್ತವೆ. ಹೀಗಿರುವಾಗ ದೊಡ್ಡ ದೊಡ್ಡ ಸಾಧನೆ ಎಂದು... ?? ಅವುಗಳಿಗೆ ಎಷ್ಟು ಪಾಪಗಳು ಸೇರಿಕೊಂಡಿವೆ... ?? ಅವುಗಳನ್ನು ಪರಿಹರಿಸಿಕೊಂಡು ದೊಡ್ಡ ಸಾಧನೆ ಮಾಡುವದೆಂದು... ??
*ಸರ್ವದಕ್ಕೂ ಜಯರಾಯರೇ ಶರಣು.....*
ಅಧ್ಯಯನ ಜಪ ತಪ ಧರ್ಮ ಪೂಜೆ ಸಂಧ್ಯಾವಂದನೆ ಗಾಯತ್ರೀಪಲಜಪ ಮೊದಲು ಮಾಡಿ ಊಟ ನಿದ್ರೆ ವರೆಗೆ ಇರುವ ಎಲ್ಲದಕ್ಕೂ ಅಡ್ಡಿಗಳಾದ ಪಾಪಗಳ ಪರಿಹಾರ ಆಗೋದು ಜಯರಾಯರಿಗೆ ಶರಣು ಬಂದಾಗ. ಜಯರಾಯರಿಗೆ ಮೊರೆಹೊಕ್ಕಾಗ ಮಾತ್ರ. *ಕಾಕೂಗೊಳಿಸುವ ಅನೇಕ ಪಾಪಂಗಳ ಬೀಕಿ ಬಿಸಾಡುವ* ಕೆಂಗೆಡಿಸುವ ನೂರಾರು ವಿಧದ ನೂರಾರು ಪಾಪಗಳನ್ನೆಲ್ಲ ಗಡಿಪಾರು ದೂರ ಎಸೆಯುವವರು *ಶ್ರೀಮಟ್ಟೀಕಾ ಕೃತ್ಪಾದರು ಮಾತ್ರ.*
*ಸೋಲು - ಅಪಮೃತ್ಯು - ಪಾಪಗಳು ಹಾಗೂ ತಾಪತ್ರಯಗಳು*
"ಸೋಲು - ಅಪಮೃತ್ಯು - ಪಾಪಗಳು" ಇವುಗಳು ನಮ್ಮ ಬೆಂಬಿಡದ ಬೇತಾಲಗಳು. ಎಲ್ಲದರಲ್ಲಿಯೂ ಮೊದಲು ಹಾಗು ಕೊನೆಗೆ ಬರುವದು ಸೋಲೇ. ಯಾವಾಗ ಎಲ್ಲಿ ಹೇಗೆ ಯಾರಿಗೆ ಅಪಮೃತ್ಯು ಬಂದೊದಗತ್ತೋ ಗೊತ್ತಿಲ್ಲ. ನನ್ನಂತಹ ಪಾಪಿಷ್ಠನು ನಾನೇ ಹೊರತು ಇನ್ಯಾರಿಲ್ಲ ಎನ್ನುವದು ಜಗಜ್ಜಾಹಿರ. ಈ ಎಲ್ಲದರ ಮೇಲೆ "ಅಧಿದೈವಿಕ ಆಧಿಭೌತಿಕ ಆಧ್ಯಾತ್ಮಿಕ" ತಾಪಗಳು ಲೆಕ್ಖವಿಲ್ಲ. ಇವುಗಳಿಂದಲೇ ಸೋಲು ಪರಾಭವ.
ಸೋಲು ಪಾಪ ಅಪಮೃತ್ಯು ತಾಪತ್ರಯಗಳು ಇವೆಲ್ಲದರಿಂದ ಗೆದ್ದು ಬಂದಾದ ಮೇಲೆ ಸಾಧನೆ. ಇವುಗಳನ್ನು ಗೆಲ್ಲುವ ಬಗೆ ಹೇಗೆ.. ??
*ಜಯ - ಜಯತೀರ್ಥರದೇ ಮೊನಾಪಲಿ*
ಜಯ ಸಿಗಬೇಕೋ ಜಯತೀರ್ಥರ ಅನುಗ್ರಹವೇ ಆಗಬೇಕು. ಇಲ್ಲವೋ ಯಾವ ಜಯವೂ ಯಾವ ಕ್ಷಣಕ್ಕೂ ಯಾರಿಗೂ ಸಿಗದು. ಜಯಕ್ಕೆ ಸ್ವಾಮಿಯೇ *ಜಯರಾಯರು.*
*ಜ* ಎಂದು ನುಡಿಯಲು ಜಯಶೀಲನಾಗುವ. ಜಯ ಬರುವದು ಎಂದರೆ ಸೋಲನ್ನು ಕೊಲ್ಲುವದು ಎಂದೇ ಅರ್ಥ. ಸೋಲು ದಿಕ್ಕಪಾಲಾಯ್ತು.
*ಯ* ಎಂದು ನುಡಿಯಲು ಯಮನಂಜುವ. ಯಮನನ್ನೇ ಅಂಜಿಸಿ ಮನೆಗೆ ಕಳಿಸ್ತಾನೆ ಎಂದರೆ ಅಪಮೃತ್ಯು ಗೆದ್ದ ಎಂದೇ ಅರ್ಥ.
*ತೀ* ಎಂದು ನುಡಿಯಲು ತಿಮಿರಪಾತಕ ಹಾನಿ. ಎಲ್ಲ ಪಾಪಗಳಿಗೂ ಕೊಳ್ಳೆ ಇಡುವದು ಜಯತೀರ್ಥರ *ತೀ* ಎಂಬ ಶಬ್ದ.
*ಥ* ಎಂದು ನುಡಿಯಲು ತಾಪತ್ರಯ ಪರಿಹಾರ. ಥ ಎಂದು ಚಿಂತಿಸಿದರೆ ಸಾಕು ಎಲ್ಲತರಹದ ತಾಪತ್ರಯಗಳ ನಾಶವೂ ಇದೆ.
*ಗೆಲವು ಬೇಕೇ....*
ಟೀಕಾರಾಯರ ಪಾದಗಳಿಗೆ ತಾಕಿದ ಕೊನೆ ಧೂಳಿ ನಮ್ಮ ತಲೆಗೆ ತಾಕಿಸಿಕೊಂಡಿತೂ ಎಂದಾದರೆ, *ಶ್ರೀಜಯತೀರ್ಥ ಗುರುಭ್ಯೋ ನಮಃ* ಎಂದು ನಿತ್ಯ ಚಿಂತಿಸಿತೂ ಎಂದಾದರೆ ಅವನಿಗೆ ಸೋಲು ಇರದು. ಜಯವೇ ಕಟ್ಟಿಟ್ಟ ಬುತ್ತಿ.
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments