*ನಿರ್ಧಾರಗಳು ನಿಧಾನವಾಗಿ ಇರಬೇಕು*
*ನಿರ್ಧಾರಗಳು ನಿಧಾನವಾಗಿ ಇರಬೇಕು*
ನಾವು ವಿದ್ಯಾಪೀಠದಲ್ಲಿ ಇರುವಾಗ ಪೂಜ್ಯ ಗುರುಗಳಲ್ಲಿ ಏನನ್ನೇ ನಿವೇದಿಸಿದರೂ "ನೋಡೋಣ - ವಿಚಾರ ಮಾಡೋಣ - ನಾಳೆ ಬಾ" ಎಂದೇ ಹೇಳಬೇಕು. ಆಗ ಕೆಲವೊಮ್ಮೆ "ಹೀಗ್ಯಾಕೆ ಗುರುಗಳು ಹೇಳುತ್ತಾರೆ - ಸಣ್ಣ ವಿಷಯವನ್ನೂ ಮುಂದೂಡ್ತಾರೆ" ಎಂದು ಆಗಾಗ ಅನಿಸ್ತಾ ಇತ್ತು. ಆದರೆ " ಮುಂದೂಡಿ ಮುಂದೂಡಿದಾಗ, ಯೋಚಿಸಲು ಅವಕಾಶ ಸಿಗತ್ತೆ. ಅವಕಾಶ ಸಿಕ್ಕಾಗ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಬಹುದೆಂದು" ಈಗೀಗ ಅನಿಸತ್ತೆ ಮನವರಿಕೆಯೂ ಆಗತ್ತೆ. ಈ ಪ್ರಸಂಗ ಇಂದು ಅವಶ್ಯಕ ಅದಕ್ಕಾಗಿ ನೆನಪಿಸಿಕೊಂಡೆ.
"ವ್ರತ ಮಾಡಬೇಕೋ ಬೇಡವೋ" "ಏಕಾದಶಿ ಆಚರಿಸಬೇಕೋ ಬೇಡ" ಹೀಗೆ ಒಂದು ಸಣ್ಣ ಸಣ್ಣ ಸಮಸ್ಯೆಗಳು ಎದುರಾಗತ್ತೆ. ಆ ಕ್ಷಣದಲ್ಲಿ ನನ್ನಿಂದ ಅಸಾಧ್ಯ ಎಂದು ಶೀಘ್ರವಾಗಿ ನಿರ್ಧರಿಸಿತು ಎಂದಾದರೆ ವ್ರತ ಮಾಡಲು, ಏಕಾದಶಿ ಉಪವಾಸ ಮಾಡಲು ಈ ಜನುಮದಲ್ಲಿ ಆಗುವದೇ ಇಲ್ಲ. "ನೋಡೋಣ - ಎಷ್ಟಾಗತ್ತೋ ಅಷ್ಟು ಮಾಡೋಣ" ತಿನ್ನುವ ಬಿಡುವ ನಿರ್ಧಾರವನ್ನು ಸ್ವಲ್ಪ ಮುಂದೂಡಿದರೂ ಏಕಾದಶಿ ಉಪವಾಸ ಯಶಸ್ವಿಯಾಗಿ ಆಗಿಬಿಡುತ್ತದೆ.
*ಶೀಘ್ರ ನಿರ್ಧಾರ ಪಶ್ಚಾತ್ತಾಪಕ್ಕೆ ಕಾರಣವಾದೀತು...*
"ನೋಡೋಣ - ವಿಚಾರಿಸೋಣ- ಮಾತಾಡಿ ನಿರ್ಧರಿಸೋಣ" ಎಂಬ ಧಾಟಿ ಸಮಯವನ್ನು ಕೊಂದು ಹಕತ್ತೆ ಎಂದು ಆತುರರಾದ ನಮಗನಿಸಬಹುದು. ಆದರೆ... "ಅಯ್ಯೋ ಇಷ್ಟೇ ಕ್ಷುದ್ರ ಕಾರಣಕ್ಕೆ ಏಕಾದಶಿ ಲೋಪ ಮಾಡಿದೆ" ಎಂಬ ಪಶ್ಚಾತ್ತಾಪ ಮಾತ್ರ ಮುಂದಿನ ಏಕಾದಶಿವರೆಗೂ ಕೊರಗುತ್ತಿರುತ್ತದೆ.
ಸಣ್ಣ ಝಗಳ. ಪುಟ್ಟ ವೈಮನಸ್ಸು. ಇವುಗಳು ಎದುರಾದಗ ನಿರ್ಧಾರವನ್ನು ಮುಂದೂಡಿದರೆ "ಸಂಬಂಧಗಳು ಉಳಿಯಬಹುದು" ಇಲ್ಲವಾದಲ್ಲಿ ಆ ಕ್ಷಣಕ್ಕೆನೇ ಸಂಬಂಧ ಹರಿದು ಹೋಗತ್ತೆ. ಮುಂದೆ ಇಡೀ ಜೀವನ ಪಶ್ಚಾತ್ತಾಪ ಪಟ್ಟರೂ ಆ ಸಂಬಂಧಕ್ಕೆ ತೇಪೆ ಹಚ್ಚಬಹುದೇ ಹೊರತು ಸಂಬಂಧ ಸಂಬಂಧವಾಗಿ ಉಳಿಯಲೇ ಆಗದು.
*ಮನಸ್ಸು ಪ್ರಕ್ಷುಬ್ಧವಾದಾಗ ದೂರದೃಷ್ಟಿ ಕಡಿಮೆಯಾಗತ್ತೆ*
ಮನಸ್ಸು ತುಂಬ ದೂರಗ್ರಾಹಿ. ಅನಂತ ಜನ್ಮಗಳ ಸಾಧನೆಯಿಂದ, ಅನಂತ ಜನ್ಮಗಳ ತರುವಾಯ ಏನು ಪಡೆಯಬೇಕು ಏನು ಪಡೆಯುವದಿದೆ ಅದನ್ನು ಇಂದೇ ನಿರ್ಧರಿಸುವಷ್ಟು ದೂರದೃಷ್ಟಿ ನಮ್ಮ ಮನಸ್ಸಿಗೆ ಇದೆ. ಇದು ಶಾಸ್ತ್ರ ಸಿದ್ಧ. ಅಂತೆಯೇ ಇಂದು ಮೋಕ್ಷಕ್ಕಾಗಿ ಸಾಧನೆ ಮಾಡುತ್ತೇವೆ.
ಆ ಮನಸ್ಸೇ ಪ್ರಕ್ಷುಬ್ಧವಾದಾಗ, ಗಲಿಬಿಲಿಗೊಂಡಾಗ, ಏನು ಮಾಡಬೇಕು - ಏನು ಬೇಡ - ಯಾವದು ಹಿತ ಯಾವದು ಅಹಿತ - ಇದ್ಯಾವುದರ ಕಡೆ ಗಮನ ಕೊಡದೇ ದೂರದೃಷ್ಟಿಯನ್ನು ಕಳೆದುಕೊಂಡಂತಾಗಿ ಬಿಡುತ್ತದೆ. ಆ ಪ್ರಸಂಗದ ಯಾವ ನಿರ್ಣಯವೂ ಯಶಸ್ವಿಯಾಗದು. ಏನೋ ನಿರ್ಣಯವನ್ನು ತೆಗೆದುಕೊಂಡು ಬಿಡುತ್ತದೆ. ಪಶ್ಚಾತ್ತಾಪದಲ್ಲಿ ಎಷ್ಟು ಬೆಂದರೂ ಬದಲಾಗದಷ್ಟು ದೂರ ತಳಿಬಿಟ್ಟಿರುತ್ತದೆ.
*ಕಳೆದ ಚಪ್ಪಲ್ ಹುಡುಕು, ಕಳೆದ ದಿನಗಳ ನೆನಸಬೇಡ*
ಕಳೆದು ಹೋದ ಚಪ್ಪಲ್ ಅವಶ್ಯ ಹುಡುಕೋಣ. ಸಿಗತ್ತೆ. ಸಿಕ್ಕಾಗ ನಾಲ್ಕು ದಿನ ಉಪಯೋಗಿಸಬಹುದು. ಆದರೆ ಕಳೆದ ದಿನಗಳನ್ನು ನೆನೆಸುತ್ತಾ ಕೂರಬೇಡ. ಅದರಿಂದ ಬರುವ ಹೊಸದಿನಗಳೂ ಕಳೆದು ಹೋಗುತ್ತವೆ. ಆದ್ದರಿಂದ ಏನು ಮಾಡಬೇಕು ನಿರ್ಧಾರ ನಮ್ಮ ಕೈಲಿ ಇದೆ.
*ಕಳೆದ ಚಪ್ಪಲ್ ಹುಡುಕಲು ಮುಂದೆ, ಧರ್ಮ ಹುಡುಕಲು ಹಿಂದೆ*
ಚಪ್ಪಲ್ ಕಳೆದದ್ದಕ್ಕೆ ತುಂಬ ಸಂಕಟ ಪಡುತ್ತೇವೆ. ಚೆನ್ನಾಗಿ ಹುಡುಕುತ್ತೇವೆ. ಆದರೆ "ಧರ್ಮ - ಸಂಧ್ಯೆ - ಜಪ - ವ್ರತ - ಉಪವಾಸ - ಮೌನ - ಅಧ್ಯಯನ - ದೇವರು" ಇತ್ಯಾದಿಗಳನ್ನು ಕಳೆದುಕೊಂಡಾಗಿದೆ ಅದನ್ನು ಹುಡುಕುವದಕ್ಕೆ, ಹುಡುಕಿ ಮರಳಿ ಪಡೆಯುವದಕ್ಕೆ ತಡಕಾಡುವದೇ ಇಲ್ಲ. ಧರ್ಮವನ್ನು ಹುಡುಕಲು ಮಾತ್ರ ಹಿಂದೇಟು. ಹೀಗ್ಯಾಕೆ... "ನಮ್ಮ ಗೊಂದಲದ ಗೂಡಾದ ಮನಸ್ಸಿನ ಗಡಿಬಿಡಿಯ ನಿರ್ಧಾರಗಳೆ ನಮ್ಮನ್ನು ಹೀಗೆ ದಾರಿ ತಪ್ಪಸಿ ಬಿಡುತ್ತವೆ" ಆದ್ದರಿಂದ ನಿರ್ಧಾರಗಳನ್ನು ಸ್ವಲ್ಪ ಮುಂದೂಡಿ, ಮನಸ್ಸು ಸ್ಥಿಮಿತಕ್ಕೆ ಬಂದಾದ ಮೇಲೆ ಒಳ್ಳೆಯದಾದ ಹಿತವಾದ ದೂರದೃಷ್ಟಿಯಿಂದ ಕೂಡಿದ, ತೂಗಿ ಅಳಿದು ಯೋಚಿಸಿ ಅತ್ಯುತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ಳುವಂತಾಗಬೇಕು...
*✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments