*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು*
*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು*
ಇಂದು ಮಹಾಮಹಿಮೋತರಾದ ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಮಹೋತ್ಸವ. ಶ್ರೀ ವಿಜಯೀಂದ್ರರ ಅನುಗ್ರಹದಿಂದ ನಾವು ಇಂದು ವಿಜಯಿ ಆಗುವ ಲಕ್ಷಣಗಳು ತೋರುತ್ತಿವೆ. ವಿಜಯೀಂದ್ರರಂತಹ ಪ್ರಭುಗಳು ಇರದಿದ್ದರೆ ನಮಗೆ ವಿಜಯ ಕನಸಿನ ಕಮಲವಾಗಬಹುದಾಗಿತ್ತು. ಶ್ರೀ ವಿಜಯೀಂದ್ರರು ಇರುವಾಗಲೂ ನಾವು ವಿಜಯಿಗಳಾಗಿಲ್ಲ ಇದು ನಮ್ಮ ದೌರ್ಭಾಗ್ಯ.
ಶ್ರೀಶ್ರೀ ವಿಜಯೀಂದ್ರ ಗುರುಸಾರ್ವಭೌಮರು ತಾವು ಸ್ವತಹ ವಿಜಯಿಗಳಾಗಿ, ನಂಬಿದ ನಮ್ಮೆಲ್ಲರನ್ನೂ ವಿಜಯಿಗಳನ್ನಾಗಿ ಮಾಡಲು ಅವರಿಗೆಲ್ಲಿಯದು ಶಕ್ತಿ ?? ಎಂದು ಯೋಚಿಸಿದರೆ... ಉತ್ತರವಿಷ್ಟೆ *ಮಾನ್ಯಖೇಟದ ಜಯರಾಯರಲ್ಲಿಯ ನಂಬಿಕೆ, ಜಯರಾಯರ ಅನುಗ್ರಹ.* ಅಂತೆಯೇ ವಿಜಯಿಗಳು ಅಷ್ಟೇ ಅಲ್ಲದೆ *ಜಗನ್ಮಾನ್ಯರೂ ಆದರು.*
*ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು*
ಎಪ್ಪತ್ತೆರಡು ವಿದ್ಯೆಗಳಲ್ಲಿ ಪಾರಂಗತರು ನಮ್ಮ ಇಂದಿನ ಕಥಾನಾಯಕರು ಶ್ರೀವಿಜಯೀಂದ್ರರು. ಎಲ್ಲ ವಿದ್ಯೆಗಳೂ ಒಲೆದು ಬಂದಿರುವದು, ಮತ್ತು ಆ ವಿದ್ಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವದು ಜಯರಾಯರ ಅನುಗ್ರಹದ ಬಲದಿಂದಲೇ.
ಪ್ರಭುಗಳ ಒಂದು ಮಹಿಮೆ ಸುಂದರ ಕಥೆ...
ಸಕಲವಿದ್ಯೆಗಳಲ್ಲಿಯೂ ಜಯ ವಿಜಯೀಂದ್ರರದ್ದು. ಒಂದೊಂದು ವಿದ್ಯೆಯಲ್ಲಿ ಪಾರಂಗತರಾದ ನಾನಾ ವಾದಿವಿದ್ವಾಂಸರುಗಳೆಲ್ಲ ಇವರ ವಿದ್ಯೆಯಮುಂದೆ ತಲೆಬಾಗುವದೊಂದೇ ಫಲವಾಗಿತ್ತು. ಕೊನೆಯ ಅಸ್ತ್ರವಾಗಿ *ಬ್ರಹ್ಮಚರ್ಯದ ಪರೀಕ್ಷೆಗೆ* ಇಳಿದರು ವಾದಿಮಾತಂಗಗಳು.
ವೀಜೀಂದ್ರರು ಬಾಲಸನ್ಯಾಸಿಗಳು. ಅಂತೆಯೇ ಅವರ ಬಳಿ ಅನೇಕ ವೈಶ್ಯ ಸ್ತ್ರೀಯರನ್ನು ಕಳುಹಿಸಿದರು ವಾದಿಗಳು. ಆ ಎಲ್ಲ ಹಾವಭಾವಗಳನ್ನು ಸೂಸುವ ಆ ಸ್ತ್ರೀಯರನ್ನು ನೋಡಿದರೂ, ಅವರೆಲ್ಲರೂ ನಾನಾತರಹದ ವಿಲಾಸಗಳನ್ನು ಅನೇಕ ಗಂಟೆಗಳವರೆಗೆ ಮಾಡಿದರೂ ಕ್ಷಣಕಾಲ ಮನಸ್ಸು ಕದಲದೆ ಇಟ್ಟುಕೊಂಡ ಮಹಾತ್ಮರಿವರು.
ಈ ಸಾಮರ್ಥ್ಯ ಎಲ್ಲಿಂದ ಹರಿದು ಬಂತು ???? ಎಂದು ಯೋಚಿಸಿದರೆ.. ಉತ್ತರ..
"ಯಸ್ಯ ವಾಕ್ ಕಾಮಧೇನುಃ
ನಃ ಕಾಮಿತಾರ್ಥಾನ್ ಪ್ರಯಚ್ಛತಿ.
ಸೇವೇ ತಂ ಜಯಯೋಗೀಂದ್ರಂ
ಕಾಮಬಾಣಚ್ಛಿದಂ ಸದಾ"
ಅರ್ಥ) ಯಾವ ಜಯತೀರ್ಥರ ಒಂದೊಂದು ಗ್ರಂಥದ ಒಂದೊಂದು ವಾಕ್ಯವೂ ಕಾಮಧೇನು ಕಲ್ಪವೃಕ್ಷಕ್ಕೆ ಸಮ. ಭಕ್ತರ ಅಧ್ಯೇತೃಗಳ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುತ್ತವೆ. ಇಷ್ಟು ಅತ್ಯದ್ಭುತ ಗ್ರಂಥಗಳನ್ನು ರಚಿಸಿದ ಶ್ರೀಮಜ್ಜಯತೀರ್ಥರು *ನನ್ನ ಕಾಮಬಾಣವನ್ನು ಕತ್ತರಿಸಿ ಹಾಕಲಿ* ಎಂದು ಧೇನಿಸುತ್ತಾ
ಈ ಶ್ಲೋಕವನ್ನು ರಚಿಸಿ ಪ್ರಾರ್ಥಿಸಿದರು ಬೇಡಿದರು. ಬ್ರಹ್ಮಚರ್ಯದ ಪರೀಕ್ಷೆಯಲ್ಲಿಯೂ ಗೆದ್ದು ಬಂದರಿವರು.
ಜೀವನದಲ್ಲಿ ನಿರಂತರ *ಶ್ರೀಮಜ್ಜಯಾರ್ಯರ ಸುಧಾಮೊದಲಾದ ಗ್ರಂಥಗಳಲ್ಲಿ* ತಲ್ಲೀನರಾಗಿ, ಶ್ರೀಮನ್ಯಾಸುಧಾ ಮೊದಲಮಾಡು ಎಲ್ಲ ಟೀಕಾಗ್ರಂಥಗಳಿಗೂ ವ್ಯಾಖ್ಯಾನ ಮಾಡಿ, ಜೊತೆಗೆ ನೂರಾರು ಗ್ರಂಥಗಳಿಗೆ ವ್ಯಾಖ್ಯಾನವನ್ನೂ ರಚಿಸಿ, ಸ್ವತಂತ್ರಗ್ರಂಥಗಳನ್ನೂ ರಚಿಸಿ ಟೀಕಾರಾಯರ ಸೇವೆ ಮಾಡಿ ಪುಣ್ಯಾತ್ಮರಿವರು.
*ಕಾಮಗೆದ್ದರಾ ಹರಿಗೆ ಪ್ರೇಮ ಪೂರ್ಣರಾ*
ಕಾಮಗೆದ್ದವರೇ ಹರಿಗ ಪ್ರೇಮಪಾತ್ರರು. ಕಾಮಗೆದ್ದವರಲ್ಲಿ ಮೊದಲಿಗರು ಟೀಕಾಕೃತ್ಪಾದರು. ಒಂದು ಬಾರಿ ಕಾಮಗೆದ್ದರೆ ಏನನ್ನಾದರೂ ಸಾಧಿಸಬಹುದು, ಎಪ್ಪತ್ತೆರಡು ವಿದ್ಯೆಗಳನ್ನಲ್ಲ ಎಪ್ಪತ್ತು ಸಾವಿರ ವಿದ್ಯೆಗಳಲ್ಲಿಯೂ ಜಯಶಾಲಿಗಳಾಗಬಹುದು. ಇದಕ್ಕೆ ನಿದರ್ಶನ ಇಂದಿನ ಕಥಾನಾಯಕರಾದ *ಶ್ರೀ ಶ್ರೀ ವಿಜಯೀಂದ್ರತೀರ್ಥರು.* ಈ ಮಹಾತ್ಮರಿಗೆ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತಾ *ನಮ್ಮನ್ನೂ ವಿಜಯಶಾಲಿಗಳನ್ನಾಗಿ ಮಾಡಿ* ಎಂದು ಬೇಡುತ್ತಾ ಮೇಲಿನ ಶ್ಲೋಕವನ್ನಿ ಕನಿಷ್ಠ ನೂರೆಂಟುಬಾರಿಯಾದರೂ ಪಠಿಸೋಣ.
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments