*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......*

*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......*

ಜೀವನದಲ್ಲಿ ಹಣವೇ ಮುಖ್ಯವಲ್ಲ ಹಣವೂ ಮುಖ್ಯ ಅಷ್ಟೆ. ಆ ಹಣ ಎಷ್ಟು ಉತ್ತಮ ಪ್ರಾಮಾಣಿಕವೋ ಅಷ್ಟು ಆ ಹಣ ಸಾರ್ಥಕ. ಎಷ್ಟು ಅಪ್ರಾಮಾಣಿಕವೋ ಅಷ್ಟು ನಮಗೆ ಅನುಪಯುಕ್ತ. 

ಹಣ ಹೊಟ್ಟೆ ತುಂಬಿಸಲು. ಪ್ರಾಮಾಣಿಕ ಹಣ ದೇವರಿಗೆ ನಿವೇದಿತ ಪದಾರ್ಥದಿಂದ ಹೊಟ್ಟೆ ತುಂಬಿಸಿದರೆ, ಅಪ್ರಾಮಾಣಿಕ ಹಣ ರೋಡಿನಲ್ಲಿ ಗೋಲಗಪ್ಪಾ ತಿನಿಸಿ ಹೊಟ್ಟೆ ತುಂಬಿಸೀತು. ಪ್ರಾಮಾಣಿಕ ಹಣ ನೆಮ್ಮದಿಯ ಉಸಿರಾಡಿಸಲು ಅನುವಾದರೆ, ಅಪ್ರಾಮಾಣಿಕ ಹಣ ಶಾಂತಿ ಸಮೃದ್ಧಿ ನೆಮ್ಮದಿಯನ್ನೇ ಕೆಡಿಸಿ ಹಾಕುತ್ತದೆ. 

ನಾವು ವಿದ್ಯಾಪೀಠದಲ್ಲಿ ಇರುವಾಗ ಎಲ್ಲಿಯಾದರೂ "ಒಂದುಡ್ಡು ಸಿಕ್ಕರೆ, ಹಿರಿಯರು ಹೆಳುತ್ತಿದ್ದರು ಹುಂಡಿಯಲ್ಲಿ ಹಾಕು" ಎಂದು ಹೇಳಿ ಹಾಕಿಸುತ್ತಿದ್ದರು. ಏಕೇ ಎಂದು ಕೇಳಿದರೆ ಈಗ ಅರ್ಥವಾಗುದಿಲ್ಲ. ಹೇಳಿದ್ದು ಕೇಳಬೇಕು ಎಂದಷ್ಟೆ ಹೇಳುತ್ತಿದ್ದರು. ಆ ಮಾತಿನ ಅರ್ಥ ಮೊನ್ನೆ ನಮ್ಮ ಗೆಳೆಯನ ಜೊತೆಗೆ ಸುಮ್ಮನೆ ಮಾತಾಡುತ್ತಿರುವಾಗ ಸ್ಪಷ್ಟವಾಯಿತು. 

ಒಬ್ಬ ಬಂದದ್ದರಲ್ಲಿ ತಿಂದು ಉಂಡು ಜೀವನ ನಡೆಸುವ ಬಡವ. ಬಹಳ ದುಡ್ಡಿಲ್ಲ. ದಿನದ ಒಪ್ಪತ್ತು ಊಟಕ್ಕೂ ಕಷ್ಟ. ಆದರೆ ಇದ್ದದ್ದರಲ್ಲಿ ಬಂದದ್ದರಲ್ಲಿ ತುಂಬ ಸಮಾಧಾನ. ಕಷ್ಟ ಎಂದು ಎಂದಿಗೂ ಚಿಂತೆ ಮಾಡಿಲ್ಲ. ಎಂದಿಗೂ ಟೆನ್ಶನ್ ಮಾಡಿಕೊಂಡ ಉದಾಹರಣೆಯೇ ಇಲ್ಲ. ಯಾಕೆಂದರೆ ಅವ ಒಬ್ಬ ಸಾಮಾನ್ಯ ಬಡವ. 

ಅವನಿಗೆ ಒಂದು ದಿನ ಬೆಳಗಿನ ಝಾವಾ ಹಾದಿಯಲ್ಲಿ ಹೋಗುತ್ತಿರುವಾಗ ಒಂದು ಹೊಸದಾದ ನೂರು ರೂಪಾಯಿಯ ಒಂದು ನೋಟು ಸಿಕ್ಕಿತು. ಅವನು ಆ ನೋಟು ನೋಡಿ ಖುಶಿಯಿಂದ ಮನೆಗೆ ಒಯ್ದ. 

ಆ ಹೊಸದಾದ ನೋಟು ಕೈ ಸೇರಿದಾಗಿನಿಂದ ಟೆನ್ಶೆನ್ ಆರಂಭವಾಯಿತು ಆ ಬಡವನಿಗೆ. ಈ ದುಡ್ಡಿನಿಂದ ಏನು ಮಾಡಬೇಕು. ಹೇಗೆ ಖರ್ಚು ಮಾಡಲಿ. ಖರ್ಚು ಮಾಡುವಾಗ ಯಜಮಾನನ ಕೈಲಿ ಸಿಕ್ಕುಬಿದ್ದರೆ ಹೇಗೆ. ಕೂಡಿಡಲಾ. ಮಗನಿಗೆ ಯಾವ ಬಟ್ಟೆ ಕೊಡಸಲಿ. ಹೆಂಡತಿಗೆ ಸೀರೆ ಕೊಡಸಿದರಾಯ್ತು. ಅಪ್ಪ ಅಮ್ಮನಿಗೆ ಔಷಧಿ ತಂದರಾಯ್ತು. ಅಥವಾ ನಾನೇ ಒಂದೆರಡು ಪೆಗ್  ಕುಡುದು ಬರಲಿ.  ಹೀಗೆ ನೂರು ವಿಚಾರ ತಲಿಯಲ್ಲಿ ಹೊಕ್ಕಿತು. ಫುಲ್ಲ ಮನಸ್ಸು ಗೊಂದಲ ಗಲಿಬಿಲಿ. ರಾತ್ರಿ ಆಗುವದರೊಳಗೆ ತಲೆಚಿಟ್ಟು ಹಿಡಿದು ಹೋಯ್ತು. 

ಕೊನೆಗೆ ಏನು ಮಾಡಲೂ ತೋಚದೆ "ಪ್ರಾಣದೇವರ ಗುಡಿಗೆ ಹೋಗಿ ಹುಂಡಿಯಲ್ಲಿ ಹಾಕಿ ಬಂದ." ಮನಸ್ಸು ಸಮಾಧಾನವಾಯಿತು. ಮನೆಗೆ ಹೋಗಿ ಊಟ ಮಾಡಿ ಅರಾಮಾಗಿ‌ ಮಲಗಿದ. 

ಆ ಬಡವ ಯೋಚಿಸಿದ "ಹಾದಿಯಲ್ಲಿ ಸಿಕ್ಕ ಒಂದು ನೂರು ರೂಪಾಯಿನೇ ನನಗೆ ಇಷ್ಟು ಟೆನ್ಶನ್ ಮಾಡಿತು, ಚಿಂತಿಗೀಡು ಮಾಡಿತು, ಏನು ಮಾಡಬೇಕು ಏನು ಬಿಡಬೇಕು ಎಂದು ದಿಕ್ಕು ತೋಚದಾಯಿತು, ಇನ್ನು ನಿತ್ಯ ಸಾವಿರ ಎರಡು ಸಾವಿರ ಸಂಪಾದಿಸುವವರ, ತಿಂಗಳು ಲಕ್ಷ ಲಕ್ಷ ಘಳಿಸುವವರ, ಕೋಟಿ ಕೋಟಿ ಮನೆಯಲ್ಲಿ ಇಟ್ಟುಕೊಂಡವರ ಅವಸ್ಥೆ ಇನ್ನೆಷ್ಟು ಇರಬಹುದು... ?? ಅಥವಾ ಅಪ್ರಾಮಾಣಿಕವಾಗಿಯೇ ಸಂಪಾದಿಸಿದ್ದವರ  ಅವಸ್ಥೆ ಇನ್ನೆಷ್ಟು ಇರಬಹುದು...  ಆ ಅಪ್ರಾಣಿಕ ದುಡ್ಡು ಕಳೆದುಕೊಂಡಾಗ ಅವರ ಅವಸ್ಥೆ ಇನ್ನೇನಾಗಬಹುದು ... ದೇವರು ನನ್ನನ್ನು ಎಷ್ಟು ಸಮಾಧಾನದಿಂದ ಇಟ್ಟಿದ್ದಾನೆ ಯೋಚಿಸುತ್ತಾ, ದೇವರ ಕರುಣೆ ಮೆಲಕು ಹಾಕುತ್ತಾ, ನಿತ್ಯದ ಹಾಗೆ ಶಾಂತಚಿತ್ತದಿಂದ ನಿದ್ರೆಗೆ ಜಾರಿದ. 

ವಿದ್ಯಾಪೀಠದಲ್ಲಿ ಇರುವಾಗ ಕೆಲವ ಹಿರಿಯರು ಹೇಳಬೇಕು "ಗೋಪ್ಯಾ !! ಹತ್ತು ಲಕ್ಷ ಕೊಡುತ್ತೇನೆ ಒಂದೇ ದಿನದಲ್ಲಿ ನೀನು ಖರ್ಚು ಮಾಡುಬೇಕು ಎಂದು."  ಆಗ ನಮಗೆ ಹೇಗೆ ಖರ್ಚು ಮಾಡಬೇಕು ಎನ್ನುವದೇ ದೊಡ್ಡ ಸಮಸ್ಯೆ ಆಗ್ತಿತ್ತು. ಆದರೆ ಇಂದು ಈಗಿನ ಹುಡುಗರ ಅವಸ್ಥೆ ಹಾಗಿಲ್ಲ.  ಅಂತೂ ಸಾಮಾನ್ಯನಿಗೆ ಸಿಗುವ ದೊಡ್ಡ ಹಣ ಸಮಾಧಾನವನ್ನೀಯದೆ ಚಿಂತೆಗೆ ಒಳಪಡಿಸುತ್ತದೆ. ಆದ್ದರಿಂದ ಜೀವನದಲ್ಲಿ  ಹಣ ತುಂಬ ಮುಖ್ಯವಲ್ಲವೇ ಅಲ್ಲ. ಹಣವೂ ಒಂದು ಮುಖ್ಯ ಅಷ್ಟೆ. 

ಸುಖ, ನೆಮ್ಮದಿ, ಶಾಂತಿ , ಸಮೃದ್ಧಿ,  ಮನಸ್ಸಮಾಧಾನ, ಶಾಂತವಾದ ನಿದ್ರೆ,  ಯಥೆಚ್ಛವಾದ ಊಟ, ಸಮೃದ್ಧ ಸಂಧ್ಯಾವಂದನೆ, ಮನಃಪೂರ್ವಕ ಪೂಜೆ, ಎಷ್ಟು ಬೇಕು ಅಷ್ಟು ಜಪ  ಇವೆಲ್ಲವುಗಳಿಗೆ ಪುಣ್ಯವೇ ಮುಖ್ಯ. ಪುಣ್ಯ ಸಂಪಾದನೆಗೂ ಜೀವನದ ದಿನದ ಕೆಲಹೊತ್ತು ಮೀಸಲು ಇಡೋಣ. 

*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*