*ಕಾಲಕಾಲಕ್ಕೆ ನಮನಗಳು....*
*ಕಾಲಕಾಲಕ್ಕೆ ನಮನಗಳು....*
"ಕಾಲ ಕಾಲಕ್ಕೆ ನಮಸ್ಕಾರಗಳನ್ನು ಹಾಗೂ ಕೃತಜ್ಙತೆಯನ್ನು ಸಲ್ಲಿಸುವದು" ಮಾನವನ ಅನೇಕ ಜವಾಬ್ದಾರಿಗಳಲ್ಲಿ ಇದುವೂ ಒಂದಾಗಿದೆ. ಅದರಲ್ಲಿಯೂ ವಿಶೇಷ ಪಿತೃ- ಗುರು- ದೇವತಾ- ದೇವರಿಂದ ತುಂಬ ಉಪಕಾರವನ್ನು ಪಡೆದವನು ಪಿತೃಗಳಿಗೆ- ಗುರುಗಳಿಗೆ- ದೇವತೆಗಳಿಗೆ ದೇವರಿಗೆ ಕೃತಜ್ಙತೆಯನ್ನು ಸಲ್ಲಿಸದಿರೆ ಕೃತಘ್ನನಾಗುವ.
ಉಸಿರು ಕೊಟ್ಟ ದೇವರು, ಉಸಿರಿರುವವರೆಗೆ ರಕ್ಷಣೆ ಕೊಟ್ಟ, ಅನ್ನ ಕೊಟ್ಟ, ನಿದ್ರೆ ಕೊಟ್ಟ, ಬುದ್ಧಿ ಮನಸ್ಸುಗಳನ್ನು ಕೊಟ್ಟ, ಇಂದ್ರಿಯ ಹಾಗೂ ಇಂದ್ರಿಯಗಳಿಗೆ ಶಕ್ತಿಯನ್ನೂ ಒದಗಿಸಿದ, ಮಾನ ಮರ್ಯಾದೆಗಳನ್ನು ಒದಗಿಸಿದ, ವಸ್ತ್ರಗಳನ್ನು ಕೊಟ್ಟ, ಬಂಧು ಬಾಂಧವರನ್ನು ಕೊಟ್ಟ, ಸ್ನೇಹ ಪ್ರೀತಿ ಮಮತೆ ಅಂತಃಕರಣ ಇವುಗಳನ್ನೂ ಒದಗಿಸಿದ, ನೆನಪಿನ ಶಕ್ತಿ ಕೊಟ್ಟ, ಮನೆ ಹಣ ಧನ ಕನಕ ಮಕ್ಕಳು ಮೊದಲು ಮಾಡಿ ಎಲ್ಲ ಕೊಟ್ಟ, ಹೀಗೆ ಉಸಿರುರುವವರೆಗೆ ಏನು ಬೇಕೋ ಎಲ್ಲವನ್ನೂ ಹೆಚ್ಚುಕಡಿಮೆ ಮಾಡದೆ, ತಡ ಮಾಡದೆ, ಆಲಸ್ಯ ತೋರದೆ, ದಯಪಾಲಿಸಿ ಅನುಗ್ರಹಿಸಿ ಕರುಣೆ ಮಾಡಿದವ ದೇವರು.. *ಆ ದೇವರಿಗೆ ಕಾಲ ಕಾಲಕ್ಕೆ (ಬೆಳಿಗ್ಗೆ ಹಾಗೂ ಸಾಯಂಕಾಲ) "ಸಂಧ್ಯಾವಂದನೆ ಮಾಡಿ, ಒಂದು ಹೊತ್ತು ದೇವರ ಪೂಜೆ ಮಾಡುವದು" ಎಂದರೆ - ದೇವರಿಗೆ ಕೃತಜ್ಙತೆ ಸಲ್ಲಿಸಿದಂತೆ, ಇಲ್ಲವಾದಲ್ಲಿ ಕೃತಘ್ನರಾಗುವದು ನಿಶ್ಚಿತ.* ಹಾಗಾಗಿ ನಿತ್ಯ ಬಿಡದೆ, ಕನಿಷ್ಠ ಎರಡು ಹೊತ್ತಾದರೂ ಐದು ಐದು ನಿಮಿಷವಾದರೂ ಸಂಧ್ಯಾವಂದನೆ ಮಾಡುವದು ಅನಿವಾರ್ಯ.
*ಸಂಧ್ಯಾವಂದನೆ - ದೇವರ ತಪ್ಪಿಸಿದರೆ ಏನಾಗುವದು....*
ಈ ಪ್ರಶ್ನೆ ನಮ್ಮ ಗುರುಗಳಿಗೆ ನಾನು ಕೇಳಿದ್ದೆ. ಆಗ ನಮ್ಮ ಗುರುಗಳು ಒಂದು ಸರಳ ಉತ್ತರ ಕೊಟ್ಟರು. *ದೇವರ ಸರ್ಕಾರದಲ್ಲಿ "ಭ್ರಷ್ಟಾಚಾರಿ" ಎಂದಾಗುವ ಬಯಕೆ ಇದ್ದರೆ ಖಂಡಿತವಾಗಿಯೂ ಸಂಧ್ಯಾವಂದನ ಹಾಗೂ ದೇವರ ಪೂಜೆ ಅವಶ್ಯವಾಗಿ ತಪ್ಪಿಸು* ಎಂದು ಅಂದು ಉತ್ತರಿಸಿದ್ದರು. ಸಂಧ್ಯಾವಂದನ ಹಾಗೂ ದೇವರ ಪೂಜೆ ಬಿಡುವದು ಎಂದರೆ ಅದೊಂದು ಅತೀದೊಡ್ಡ ಭ್ರಷ್ಟಾಚಾರ ಎಂದು ಅಂದು ಹೆಳಿದ್ದರು.....
*ಸಂಧ್ಯಾವಂದನೆ ಮಾಡುವದರಿಂದೇನು ಲಾಭ.....*
೧) ದಿನದಲ್ಲಿ ಐದು ಏಳು ಹದಿನೈದು ನಿಮಿಷವಾದರೂ ನಮ್ಮನ್ನು ಕೆಡಿಸುವ ಪದಾರ್ಥಗಳಿಂದ ದೂರಿರಲು ಸಾಧ್ಯ. ಪೂಜೆಯೂ ಮಾಡುತ್ತಿದ್ದರೆ ಮೂವತ್ತು ನಿಮಿಷವಾದರೂ ದೇವರಡಿಯಲ್ಲಿ ಇರಲು ಸಾಧ್ಯ.
೨) ದಿನದಲ್ಲಿ ದೇಹ ಇಂದ್ರಿಯ ಮನಸ್ಸು ಇವುಗಳಿಂದ ತಿಳಿದು ತಿಳಿಯದೇ ಮಾಡಿದ ಪಾಪ ಸಾಯಂ ಸಂಧೆ ಕತ್ತರಿಸಿ ಹಾಕಿದರೆ, ರಾತ್ರಿ ಮಾಡಿದ ಪಾಪ ಪ್ರಾತಃಸಂಧ್ಯೆ ಕತ್ತರಿಸುತ್ತದೆ. ನೂರು ಸಾವಿರ ಜನ್ಮದ ಪಾಪಗಳನ್ನು ಕತ್ತರಿಸುತ್ತದೆ ಪೂಜೆ ಹಾಗಾಗಿಯೂ ಇವೆರಡು ಅನಿವಾರ್ಯ.
೩) ಇಂದು ನಮಗೆ ಎಲ್ಲವೂ ಪ್ರತಿಕೂಲವೇ ಇದೆ. ಅನುಕೂಲವು ಯಾವದಿಲ್ಲ. ಯಾವದು ಅನುಕೂಲ ಎಂದು ಅ್ವೀಕರಿಸಿದ್ದೇವೆ ಅದು ಪ್ರತಿಕೂಲವಾಗಿದೆ. ಯಾವದು ಪ್ರತಿಕೂಲ ಎಂದು ಬಿಟ್ಟಿದ್ದೇವೆ ಅದು ಅನುಕೂಲವೇ ಆಗಿರುತ್ತದೆ. ಹೀಗಾಗದಿರಲು ಬೇಕು ಸರ್ವಪ್ರೇರಕ ಪ್ರಚೋದಕ ಶ್ರೀಹರಿಯ ದಯೆ.
ಸಕಲ ಪದಾರ್ಥಗಳನ್ನೂ ಅನುಕೂಲವಾಗಿ ಇರುವಂತೆ ಪ್ರಚೋದಿಸುವದು *ಗಾಯತ್ರೀ ಮಂತ್ರ* ದೇವತೆಗಳು, ಗ್ರಹಗಳು, ಪಿತೃಗಳು, ಆಫೀಸಿನ ಜನರು, ಹಿರಿಯರು, ಮಬೆಯವರು, ಕಾಲೇಜಿನ ಮಿತ್ರರು, ಗೆಳೆಯ ಗೆಳತಿಯರು, ತಿನ್ನುವ ಉಣ್ಣುವ ಪದಾರ್ಥ ಗಳು ಹೀಗೆ ಎಲ್ಲವೂ ಅನುಕೂಲವಾಗಿ ಇರುವದು *ಗಾಯತ್ರೀ ಜಪದಿಂದ.*
ಅತೀಘೋರ ಆಪತ್ತಿನಲ್ಲಿ ಕೈ ಹಿಡಿಯುವದು ಒಂದು ಕಾಲಕಾಲಕ್ಕೆ ಆಚರಿಸಿದ ಗಾಯತ್ರೀ ಜಪ ಹಾಗೂ ನಿರಂತರ ಪೂಜಿತನಾದ ದೇವರು. ಇದು ನೂರಕ್ಕೆ ನೂರು ಪ್ರತಿಶತಃ ಸಿದ್ಧ. ಹಾಗಾಗಿ ಎರಡನ್ನೂ ಸಂಧ್ಯಾವಂದನೆ ಹಾಗೂ ದೇವರ ಪೂಜೆ ಈ ಎರಡನ್ನೂ ತಪ್ಪದೆ ನಾವು ಮಾಡೋಣ ಮಕ್ಕಳಿಂದ ಮಾಡಿಸೋಣ. ನಮ್ಮ ಆತ್ಮೀಯರಿಗೂ ಪ್ರಚೋದಿಸೋಣ....
*✍🏽✍🏽✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments