*ಅಕ್ಷಯಾಶ್ರಿತ ಸುನಜನ ಸಂರಕ್ಷಕ....*
*ಅಕ್ಷಯಾಶ್ರಿತ ಸುನಜನ ಸಂರಕ್ಷಕ....*
ವರ್ಷದ ಮುನ್ಮೂರಾ ಆರವತ್ತು ದಿನಗಳಲ್ಲಿ ಅತ್ಯುತ್ತಮವಾದ ಅನೇಕ ದಿನಗಳಲ್ಲಿ ನಾಳೆಯೂ *ಅಕ್ಷಯ ತೃತೀಯಾ* ಒಂದು ಉತ್ತಮ ದಿನ . ಈ ದಿನ ಭಂಗಾರ ಸ್ವೀಕಾರ ಮಾಡುತ್ತೇವೆ. ಉತ್ತಮ ಅಡುಗೆ ತೊಡುಗೆಗಳನ್ನು ಸ್ವೀಕರಿಸುತ್ತೇವೆ. ಏಕೆಂದರೆ *ಇಂದು ಆರಂಭಿಸಿದ ಸ್ವೀಕರಿಸಿದ ವಸ್ತು ಅಕ್ಷಯವಾಗಿ ಸಿಗತ್ತೆ* ಎಂಬ ವಿಚಾರ ಅಡಿಗಿರತ್ತೆ. ಅಂತೆಯೇ ಇದೊಂದು ಹಬ್ಬದ ದಿನ. ಇದರ ಪೂರ್ಣ ಸದುಪಯೋಗ ಪ್ರತಿ ವರ್ಷ ಸಾಧನೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಾಗ ಆಗುವ ಲಾಭ ತುಂಬ ಇದೆ. ಅಕ್ಷಯವಾಗಿಯೇ ಒದಗಿ ಬರುತ್ತದೆ.
ಸಾಧನೆಯ ಮೊದಲ ಹೆಜ್ಜೆಯಲ್ಲಿ ಇರುವ ನಾವು ಏನನ್ನು ಆರಂಭಿಸಬಹುದು.... ?? ಈ ಪ್ರಶ್ನೆಗೆ ಶ್ರೀಮದಾಚಾರ್ಯರು ಉತ್ತರಿಸುತ್ತಾರೆ....
"ಅಚ್ಯುತಾನಂತ ಗೋವಿಂದ
ನಾಮೋಚ್ಚಾರಣ ಭೇಷಜ |
ನಶ್ಯಂತಿ ಸಕಲಾ ರೋಗಾಃ
ಸತ್ಯಂ ಸತ್ಯಂ ವದಾಮ್ಯಹಮ್" ||
ಕೃಷ್ಣಾಮೃತ ಮಹಾರ್ಣವ.
ನಿತ್ಯ ಅನುದಿನ *ಅಚ್ಯುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ಅಚ್ಯುತಾನಂತಗೋವಿಂದೇಭ್ಯೋ ನಮೋನಮಃ* ಎಂದು ಶುದ್ಧವಾಗಿ, ಶುದ್ಧ ಮಡಿಯುಟ್ಟು, ಮಡಿಯಿಂದ, 1008 1008 ಸಲ ಯಾರು ಪಠಿಸುತ್ತಾರೆಯೋ ಸಾಧನೆಯ ಪ್ರತಿಬಂಧಕ ಎಲ್ಲ ರೋಗಗಳೂ ಉಪದ್ರವಗಳೂ ದೂರಾಗಿ, ಸಂಸಾರ ರೋಗವೇ ಬತ್ತಿ ಹೋಗುತ್ತದೆ. ಸಾಧನೆಯ ಫಲ ಪರಿಪೂರ್ಣವಾಗಿ ದೊರೆಯುತ್ತದೆ. ಹಾಗಾಗಿ ನಿತ್ಯ ಸ್ಮರಿಸಬೇಕು ಎಂದು ತಿಳಿಸುತ್ತಾರೆ.
ನಿತ್ಯ ಸ್ಮರಿಸುವದರಿಂದ ಲಾಭವೇನು.... ?? ಎಷ್ಟು ಎಂದು ಹೇಳಲು ಸಾಸದ್ಯವಿಲ್ಲ.
ಇಂದು ನಮ್ಮನ್ನು ಆಶ್ರಯಿಸಿ ಅನೇಕರು ಇರುತ್ತಾರೆ. ಆ ಎಲ್ಕರನ್ನು ಪ್ರಾಮಾಣಿಕವಾಗಿ ರಕ್ಷಿಸಲು ಆಗುವದಿಲ್ಕ. ಆದರೆ ನಮ್ಮಂತಹ ಅನಂತ ಅನಂತ ಜನರುಗಳು ಶ್ರೀಹರಿಯನ್ನು ಆಶ್ರಯಿಸಿದ್ದಾರೆ. ಅವರೆಲ್ಲರಿಗೂ ರಕ್ಷಣೆ ಒದಗಿಸಬೇಕು ಶ್ರೀಹರಿ.
ನಮ್ಮನ್ನಾಶ್ರಯಿಸಿದವರು ಒಬ್ಬಬ್ಬರೆ ಮಡಿದರೆ ಅಥವಾ ತಮ್ಮ ಕೆಲಸ ತಾವು ಹುಡುಕಿಕೊಂಡರೆ, ಅಥವಾ ನಮ್ಮನ್ನು ಬಿಟ್ಟು ದೂರವೇ ಹೋದರೆ ಆಶ್ರಯದ ಭಾರ ಕಡಿಮೆ ಆದಂತೆ. ಹಾಗೆಯೆ ದೇವರ ಭಾರ ಎಂದಿಗೂ ಕಡಿಮೆ ಆಗುವದಿಲ್ಕ. ಪ್ರತಿ ಕಲ್ಪದಲ್ಲಿ ಅನೇಕರು ಮುಕ್ತಿಯನ್ನು ಅಥವಾ ತಮಸ್ಸನ್ನು ಪಡೆದರೂ ಅನಂತಾನಂತ ಜೀವರಾಶಿಗಳು ರಕ್ಷಣೆಯನ್ನು ಕೋರಿ ಇರುತ್ತಾರೆ. ಅವರೆಲ್ಲರ ರಕ್ಷಣೆ ಇದ್ದೇ ಇರುತ್ತದೆ. ಅಂತೆಯೇ ಶ್ರೀಹರಿಯನ್ನು *ಅಕ್ಷಯಾಶ್ರಿತ* ಎಂದು ಕರಿಯುತ್ತಾರೆ.
ನಾವು ನಾಯಿ, ನರಿ, ಕೋತಿ, ದೈತ್ಯ, ಉರಗ, ಮಾನವ, ವಿಷ್ಣುದ್ವೇಶಿ, ವಿಷ್ಣುಭಕ್ತ, ನಾಸ್ತಿಕ, ಸಿರಿವಂತ, ಬಡವ, ದರಿದ್ರ, ವಿದ್ಯಾವಂತ, ಧಡ್ಡ, ಸ್ವಾಮಿ, ಭೃತ್ಯ ಹೀಗೆ ಏನಾಗಿ ಹುಟ್ಟಿದ್ದರೂ ನಮ್ಮನ್ನು ಉಪವಾಸ ಬೀಳಿಸದೇ, ಅನ್ನ ಕೊಟ್ಟು, ನಿದ್ರೆಕೊಟ್ಟು, ಜೀರ್ಣ ಮಾಡಿ, ಹಸಿವೆ ಒದಗಿಸಿ, ಬಟ್ಟೆಕೊಟ್ಟು, ಆ ಬಟ್ಟೆಯಮೇಲೆ ಪ್ರೀತಿಕೊಟ್ಟು, ಮಾನ ಉಳಿಸಿ, ಬುದ್ಧಿಕೊಟ್ಟು, ವಿಚಾರವಂತಿಕೆ ಬೆಳಿಸಿ, ಸಮಾಜದಲ್ಲಿ ಗೌರವಾನ್ವಿತನನ್ನಾಗಿ ಮಾಡಿ, ಏನುಬೇಕೋ ಅದೆಲ್ಲ ಒದಗಿಸಿ, ಯಾವುದರಿಂದ ಅನರ್ಥವೋ ಅದರಿಂದ ದೂರಿರಿಸಿ, ನಮ್ಮದು ಯಾವುದೋ ಅದರಲ್ಲಿ ಪ್ರೀತಿ ಬೆಳಿಸಿ, ನಮ್ಮದು ಯಾವದಲ್ಲ ಅದರಲ್ಲಿ ದ್ವೇಶಹುಟ್ಟಿಸಿ, ಹೀಗೆ ನೂರಾರು ತರಹದಿಂದ ರಕ್ಷಿಸುವ ಹೊರೆ ಹೊತ್ತ ದೇವರಿಗೆ *ಕೃತಜ್ಙತೆ ಸಲ್ಲಿಸಲೇ ಈ ಅಚ್ಯುತಾದಿಗಳ ನಾಮಸ್ಮರಣೆ.*
ಅರ್ಥವೇನು.... ?? ತಿಳಿದಷ್ಟು ಹೇಳುವೆ.
ದೇವರನ್ನು ಹೇಗೆ ಚಿಂತಿಸುತ್ತೇವೆ ಹಾಗೆ ದೇವರು ನಮಗೊದಗಿ ಬರುತ್ತಾನೆ. ಆ ತರಹದ ಫಲವನ್ನೇ ಕೊಡುತ್ತಾನೆ.
೧) ಅಚ್ಯುತ = ನಮ್ಮ ಶ್ರೀಹರಿ ಪದವಿ, ಗುಣ, ರೂಪ, ಸೌಭಾಗ್ಯ, ಆನಂದ, ಬಲ, ಶಕ್ತಿ, ಔದಾರ್ಯ, ಇತ್ಯಾದಿ ತನ್ನದು ಏನಿದೆ ಅದರಿಂದ ತಾನು ಎಂದಿಗೂ ಚ್ಯುತನಾಗಲಾರ, ಭ್ರಷ್ಟನಾಗಲಾರ ಆದ್ದರಿಂದ *ಶ್ರೀಹರಿ ಅಚ್ಯುತ* ಎಂದು ತಿಳಿಯುವದರಿಂದ ನಮಗೆ ಒದಗಿದ ಯಾವದರಿಂದಲೂ ನಾವು ಚ್ಯುತರಾಗಲಾರೆವು.
೨) ಅನಂತ = ದೇವರ ಬಳಿ ಏನೆಲ್ಲ ಇದೆ ಅದೆಲ್ಲವೂ ಅಲ್ಪ ಸ್ವಲ್ಪ ಇಲ್ಲ. ಅನಂತವಾಗಿಯೇ ಇದೆ. ಸ್ವಯಂ ತಾನು ಅನಂತ. ತನ್ನಲ್ಲಿ ಇರುವದೆಲ್ಲವೂ ಅನಂತ. ಹೀಗೆ ತಿಳಿಯುವದರಿಂದ ನಾವು ಪಡೆದದ್ದು ಯಾವದೂ ಅಂತವತ್ ಆಗಿರುವದಿಲ್ಲ. ಏನು ಪಡೆದಿರ್ತೇವೆ ಅದೆಲ್ಲ ಅನಂತವೇ.
೩) ಗೋವಿಂದ = ಭಕ್ತರಿಂದ ಮಾತ್ರ ಹೊಂದಲ್ಪಡುವವ. *ಭಕ್ತಾಪರಾಧ ಸಹಿಷ್ಣು, ಭಕ್ತ ಹಿತಕಾರಿ, ಭಕ್ತ ದತ್ತಂ ಫಲ್ಗ್ವಪಿ ಉರುಕಾರಿ* ಇತ್ಯಾದಿ ಶ್ರೀಹರಿಗೂ ಭಕ್ತರಿಗೂ ಗಾಢವಾದ ಸಂಬಂಧ ಕಲ್ಪಸುವ ದಿವ್ಯ ಶಬ್ದ. ಹೀಗೆ ಚಿಂತಿಸುವದರಿಂದ ನನಗೂ ಶ್ರೀಹರಿಗೂ ಒಂದು ದಿವ್ಯ ಸಂಬಂಧ ಒದಗಿ ಬರುತ್ತದೆ. *ಮನೋ ರೋಗದಿಂದ ಆರಂಭಿಸಿ ಸಂಸಾರ ರೋಗದವರೆಗೆ ಇರುವ ಎಲ್ಲರೋಗಗಳ ಪರಿಹಾರವೂ ಇದರಲ್ಲಿ ಅಡಗಿದೆ.*
ಈ ಎಲ್ಲ ಕಾರಣಗಳಿಂದಾಗಿ ನಾಳೆಯಿಂದ *ಅಚ್ಯುತಾನಂತ ಗೋವಿಂದ* ನಾಮಸ್ಮರಣೆಯನ್ನು ಕನಿಷ್ಠ ಸಾವಿರದೆಂಟು ಸಲ ಮಾಡಲೇಬೇಕು. ಬಹಳೇ ಬ್ಯುಸಿ ಸಮಯವೇ ಸಿಗದು ಎಂದಾದರೆ ಕನಿಷ್ಠ ಐದುನೂರು ಸಲ, ಅದೂ ಸಮಯವಿಲ್ಲ ಎಂದಾದರೆ ಕನಿಷ್ಠ ನೂರೆಂಟು ಸಲವಾದರೂ ಮಾಡಲೇಬೇಕು ಎಂದು ನಮ್ಮವರಾದ ತಮ್ಮಲ್ಲಿ ಅತ್ಯಂತ ಪ್ರೀತಿಯ ಆಗ್ರಹವನ್ನು ಸಲುಗೆಯಿಂದ ಮಾಡುತ್ತೇನೆ....
ನ್ಯಾಸ...
ಗೋಪಾಲದಾಸ
ವಿಜಯಾಶ್ರಮ, ಸಿರವಾರ
Comments