*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....*

*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....*

ಜೀವನದ ದಿನದ ಸಾರ್ಥಕ ಕ್ಷಣಗಳು ಕೆಲವಾದರೂ ಇರಬೇಕು ಎಂದರೆ "ಶ್ರೀಕೃಷ್ಣ ಪರಮಾತ್ಮನ ಕ್ಷಣದ ನೋಟ, ಒಂದೇ ಮಾತಿನ ಉಪದೇಶ, ಕೃಷ್ಣ ಎಂಬೆರಡಕ್ಷರದ ಶ್ರವಣ, ಕೆಲಕ್ಷಣದ ಚಿಂತನ, ಒಂದರೆ ಆಜ್ಙಾಪಾಲನ" ಇವುಗಳು ಇದ್ದರೆ  ಸಾಕು. ಯೋಗ್ಯನೇ ಆಗಿದ್ದರೆ ಮಹಾ ಮೋಕ್ಷಾದಿ ಪುರುಷಾರ್ಥರೂಪ ಸಾರ್ಥಕವೇ ಆಗುತ್ತದೆ.  ಇಲ್ಲವೋ ಪಾಪಕಳೆದು ಪುಣ್ಯ ಕೊಟ್ಟು ಸುಖವಾಗಿ ಇರಿಸುತ್ತದೆ, ಅಂತೆಯೇ ಶ್ರೀ ವಾದಿರಾಜರು *ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ* ಎಂದರು.  ಯೋಗ್ಯನಾಗಿರಬೇಕು, ಯೋಗ್ಯತೆ ಇರಬೇಕು ಇದು ನೂರರಷ್ಟು ನಿಜ. 

*ದುರ್ಯೋಧನ - ಅರ್ಜುನ*

ಭೀಷ್ಮ, ದ್ರೋಣ, ವಿದುರ, ಧೃತರಾಷ್ಟ್ರ, ಮೈತ್ರೇಯರು, ಈ ಎಲ್ಲ ಮಹನೀಯರುಗಳು ದುರ್ಯೋಧನನಿಗೆ ಮಾಡಿದಷ್ಟು ಉಪದೇಶ ಇನ್ಯಾರಿಗೂ ಮಾಡಿರಲಿಕ್ಕಿಲ್ಲ. ಮಹಾಭಾರತದಲ್ಲಿಯೂ ಸಿಗುವದಿಲ್ಲ. ಆದರೆ ಈ ಎಲ್ಲ ಉಪದೇಶ ಬೋರ್ಬಂಡೆಯ ಮೇಲೆ ನೀರು ಚೆಲ್ಲಿದಂತಾಯ್ತು. 
ಅದೇ ಶ್ರೀಕೃಷ್ಣ ಪರಮಾತ್ಮ ಹದಿನೆಂಟು ಅಧ್ಯಾಯದ ಗೀತೆಯನ್ನು ಹೇಳಿ  *....ತಸ್ಮಾದ್ಯುಧ್ಯಸ್ವ ಭಾರತ*  ಅರ್ಜುನ..!! ಅರ್ಜುನ ನೀನು ಯುದ್ಧಮಾಡು ಎಂದಿಷ್ಟು ಹೇಳಿದ. ಯುದ್ಧಕ್ಕೆ ಸಿದ್ಧನೇ ಆದ. ಇದು ಕೃಷ್ಣಪರಮಾತ್ಮನ *ಕ್ಷಣದ ಉಪದೇಶದ* ಫಲ. 

*ನಾವು - ಪರೀಕ್ಷಿತ*

ಹುಟ್ಟಿದಾಗಿನಿಂದ ಎಷ್ಟು ಜನ್ಮಗಳಲ್ಲಿ ಭಾಗವತ ಕೇಳಿದ್ದೇವೆಯೋ ಗೊತ್ತಿಲ್ಲ. ಎಷ್ಟು ಹೇಳಿದ್ದೇವೆಯೋ ಅದೂ ತಿಳಿಯದು.  ಆದರೆ ಅದೇ ಭಾಗವತವನ್ನು ಪರೀಕ್ಷಿತ  ಮಹಾರಾಜ ಏಳು ದಿನಗಳು ಮಾತ್ರ ಕೇಳಿದ... ದೇವರು ಎಲ್ಲರಿಗೂ ಮೋಕ್ಷಕೊಡುವ ದಿನಗಳು ತುಂಬ ದೂರ ಇದ್ದರೂ ಈಗಲೇ ಅಮುಕ್ತಸ್ಥಾನಕ್ಕೇ ಹೋಗಿ ಮುಕ್ತನಂತೆಯೇ ಆಗಿಬಿಟ್ಟ. 

ಈ ತರಹದ ದೃಷ್ಟಿಕೋನದಲ್ಲಿ ಕಥೆಗಳನ್ನು ಅನುಕರಿಸ್ತಾ ಹೋದರೂ ಹೆಚ್ಚೆಚ್ಚಿನ ಲಾಭವಂತೂ ಇದೆ.

 "ಕ್ಷಣದ ದರ್ಶನ ದಾಸಿ ಮಗನನ್ನು ನಾರದರನ್ನಾಗಿಸಿತು" "ಸಾಯುವ ದುರವಸ್ಥೆಯಲ್ಲಿರುವ ಪಾಪಿ ಅಜಾಮಿಳನಿಗೆ ನಾರಾಯಣ ಎಂಬ ನಾಮವೇ ಕಾಯಿತು" ಬಲಿಷ್ಠರಾದ ಗಂಡಂದಿರ ಸನ್ಮುಖದಲ್ಲಿ ಅತಿ ಘೋರ ಅವಮಾನವಾಗ್ತಾ ಇರುವಾಗ ಹಾ ಕೃಷ್ಣ ದ್ವಾರಕಾ ವಾಸಿನ್ !! ಎಂಬ ಒಂದೇ ಕೂಗು ಸಂರಕ್ಷಿಸಿತು" ಈ ಕಥೆಗಳನ್ನು ಗಮನಿಸಿದಾಗ ಕ್ಷಣದ ಕೂಗೂ ಯೋಗ್ಯರಿಗೆ  ಸಾರ್ಥಕವಾಗುತ್ತದೆ ಎಂದೆನಿಸುತ್ತದೆ. 

*ನಮ್ಮಲ್ಲಿಯೂ ಯೋಗ್ಯತೆ ಇದೆಯಾ... ನಾವೂ ಯೋಗ್ಯರಾ..*

ಮುಕ್ತಿಗೆ ಯೋಗ್ಯರು ನಾವು ಇದ್ದೇವೆ. ಚಿಂತನೆ ಧ್ಯಾನ ಸ್ಮರಣೆ ಶ್ರವಣ ಇವುಗಳಿಗೆ ಯೋಗ್ಯತೆಯೂ ಇದೆ. ಆದರೆ ಕೃಷ್ಣನ ಆಜ್ಙಾಪಾಲನೆ ಮಾಡದಿರುವದಕ್ಕೆ ಯೋಗ್ಯತೆ ತಾತ್ಕಾಲಿಕವಾಗಿ ಕಡಿಮೆಯಾಗಿರಬಹುದು.

ಆ ಯೋಗ್ಯತೆಯ ಸಂಪಾದನೆಗೆ ದೇವರ ನೂರಾರು ಆಜ್ಙೆಗಳಲ್ಲಿ  ಒಂದೆರಡು ಆದ  *ನಿತ್ಯವೂ ಎರಡೂ ಹೊತ್ತು ಸಂಧ್ಯಾವಂದನೆ/ ಗಾಯತ್ರೀ ಜಪ/ ದೇವರ ಪೂಜೆ* ಇವುಗಳನ್ನು ಪುರುಷರು, *ರಾಮಕೃಷ್ಣ / ಅಚ್ಯುತಾನಂತ ಗೋವಿಂದ* ಈ ಮಂತ್ರಗಳ ಜಪವನ್ನು ಸ್ತ್ರೀಯರುಗಳು  ಪಾಲಿಸಲು ಆರಂಭಿಸಿದರೆ ಆಯ್ತು. ಆ ಯೋಗ್ಯತೆ ತನ್ನಷ್ಟಕ್ಕೆ ತಾನೆಯೇ ಅಭಿವ್ಯಕ್ತವಾಗುತ್ತಾ ಸಾಗುತ್ತದೆ. ಮುಂದೊಂದು ದಿನ *ಕ್ಷಣದ ಸಾಧನೆಯೂ ಮಹಾ ಸುಖಕ್ಕೇ ಕಾರಣವಾಗುತ್ತದೆ* ಅಂತೆಯೇ ಶ್ರೀ ವಾದಿರಾಜರು *ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ* ಎಂದು ಹಾಡಿ ಹೊಗಳಿ ಸ್ತುತಿಸಿದರು. 

*✍🏽ನ್ಯಾ✍🏽ಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Vadi Raj Rao said…
ಕ್ಷಣದ ದರ್ಶನ ದಾಸಿ ಮಗನನ್ನು ನಾರದರನ್ನಾಗಿಸಿತು"

Eee vishaya kelilla. Vistara vadre arthaisikollalu saady.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*