*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು*

*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು*

ಸಮಾಜದಲ್ಲಿ ಉನ್ನತಸ್ಥಾನವನ್ನು ಪಡೆದದ್ದು ಮಹಿಳೆ. ಇದು ಇಂದಿನದು ಅಲ್ಲ ಇತಿಹಾಸ ಕಾಲದಿಂದಲೂ ನೋಡುತ್ತಿರುವದು. ತಾನು ಉನ್ನತಿಗೆ ಏರಲು ಪಟ್ಟ ಸಾಹಸ ಅಷ್ಟಿಷ್ಟಲ್ಲ. ಉನ್ನತಕ್ಕೆರುವ ಅಥವ ಏರಿಸುವ ಏನೆಲ್ಲ ಗುಣಗಳಿವೆ ಆ ಎಲ್ಲ ಗುಣಗಳು ಸಹಜವಾಗಿಯೇ ಮಹಿಳೆಯಲ್ಲಿ ಹುಟ್ಟಿನಿಂದಲೇ ಅಡಗಿ ಕುಳಿತಿರುತ್ತವೆ. 

*ಸಂಯಮ, ತಾಳ್ಮೆ, ಕ್ಷಮಾ, ಶೀಲ, ಸೌಜನ್ಯ, ತಿಳುವಳಿಕೆ, ಕಷ್ಟ ಸಹಿಷ್ಣುತಾ, ಪರದುಃಖದುಃಖಿತಾ, ಸ್ನೇಹ, ಪ್ರೀತಿ, ಮಮತಾ, ನಿರ್ವ್ಯಾಜ್ಯತಾ, ಪಡೆದದ್ದರಲ್ಲೆ ಸುಖ ಕಾಣುವ ಕಲೆ, ಇರುವದರಲ್ಲಿಯೇ ಹೊಂದಿಸುವ ಸರಿಪಡಿಸುವ ಕೌಶಲ, ನಿರಂತರ ಪರಿಶ್ರಮ, ತನ್ನವರು ಸಮೃದ್ಧವಾಗಿರಲಿ ಎಂಬ ಔದಾರ್ಯ, ಧಾರ್ಮಿಕತಾ, ನಿರಂತರ ನಾಮಸ್ಮರಣೆ, ಕೋಶದ ಆಯವ್ಯದಕಡೆ ಸೂಕ್ಷ್ಮ ಗಮನ, ಮಕ್ಕಳ ಪಾಲನೆ ಪೋಷಣೆ ರಕ್ಷಣೆ, ಮನೆಯನ್ನು ನೋಡಿಕೊಳ್ಳುವ ಕಲೆ, ಮನೆಯ ಪರಿಪೂರ್ಣ ಜವಾಬ್ದಾರಿ, ಅತ್ತೆ ಮಾವ ಪತಿ ಮಕ್ಕಳ, ತಂದೆ, ತಾಯಿ, ಅಣ್ಣ ತಮ್ಮ ನಾದನಿ ಅತ್ತಿಗೆ ಭಾವ ಮೈದುನ ಮೊದಲಾದ ಬಂಧುಗಳ ನಿರ್ವಹಣೆ* ಮೊದಲಾದ ಒಂದೊಂದು ಗುಣವೂ ಮಹೋನ್ನತಿಯನ್ನು ತಂದು ಕೊಡುವಂತಹವುಗಳೆ. 

ಮೇಲೆ ಹೇಳಿದ ಹೇಳದ ನೂರಾರು  ಗುಣಗಳಿಗೂ ಆಶ್ರಯಳಾಗುವ ದೊಡ್ಡ ಗಣಿ ನಮ್ಮ ಭಾರತದ ಮಹಿಳೆ. 

ಅನಂತಾನಂತ ಗುಣವಂತರಾದ ಸತ್ಯಾಭಾಮಾ, ರುಕ್ಮಿಣೀ, ಸೀತೆ. ಅನಂತ ಗುಣವಂತಳಾದ ದ್ರೌಪದಿ. ಕೋಟಿ ಕೋಟಿ ಗುಣವಂತರಾದ ಅಹಲ್ಯೆ, ಅರುಂಧತೀ, ಶಚೀ, ತಾರಾ, ಮಂಡೋದರಿ, ಕುಂತೀ, ದಮಯಂತಿ, ದೇವಕೀ, ಯಶೋದಾ ಇತ್ಯಾದಿಯಾದ ಮಹಿಳಾ ಮಣಿಗಳು ಇಂದಿನ ಮಹಿಳೆಯರಿಗೆ ಆದರ್ಶರು.

ಒಬ್ಬೊಬ್ಬ ಮಹಿಳೆಯರ ಕಥೆಯೂ ಸ್ವಾರಸ್ಯಕರ. ಆದರ್ಶನೀಯ. ಹಿಂದಿನ ಕಾಲದ ಯಾವ ಮಹಿಳೆಯೂ ಹಣ ಧನ ಪದವಿ ಇವುಗಳಿಂದ ಮಾನ್ಯಳು ಎಂದಾಗಲೇ ಇಲ್ಲ, ಅವರೆಲ್ಲರ ಮಾನ್ಯತೆ ಗುಣವಂತಿಕೆಯಲ್ಲಿಯೇ ಅಡಗಿತ್ತು. ಆ ಗುಣವಂತಿಕೆಯಿಂದಲೇ ಸಾಮ್ರಾಜ್ಯವೇ ತಮ್ಮಡಿಯಲ್ಲಿ ಇಟ್ಟುಕೊಂಡಿದ್ದರು. 

ಹಣಘಳಿಸಲು ಮುಂದಾಗಲಿಲ್ಲ. ಆಯವ್ಯಯದ ಎಲ್ಲ ವ್ಯವಸ್ಥೆಯೂ ತಮ್ಮ ಬಳಿ ಇಟ್ಟು ಕೊಂಡಿದ್ದಳು ದ್ರೌಪದಿ, ಸೀತೆ. ಹದಿನಾಲಕು ಹಾಗೂ ಹನ್ನೆರಡು ವರ್ಷದ ಘೋರ ವನವಾಸದಲ್ಲಿಯೂ ಧರ್ಮದ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ, ಪತಿಗೆ ತಿರುಗಿ ಮನಸ್ಸಿನಲ್ಲಿಯೂ ನಿಂದಿಸಲಿಲ್ಲ, ಪತಿಯರಿಗೆ ಆಸರೆಯಾಗಿ ನಿಂತರೂ ಅಂತೆಯೇ ವನದಲ್ಲಿಯೂ ಮಹಾರಾಣಿಯರಂತೆಯೇ ಮರೆದರು ಸೀತೆ ದ್ರೌಪದಿಯರು. 

ಕಷ್ಟಗಳ ಸುರಿಮಳೆ ದಮಯಂತಿ  ಕುಂತಿಯರಿಗೆ ಬೆನ್ನಟ್ಟಿದವು. ಕೊನೆಗೆ ಪ್ರಾರ್ಥಿಸಿದಳು ಕುಂತಿ "ಎನಗೆ ಕಷ್ಟಗಳನ್ನೇ ಕೊಡು" ಎಂದು. ಕಷ್ಟಗಳಿದ್ದಲ್ಲಿ ನಿನ್ನ ನೆನಪು, ನಿನ್ನ ನೆನಪಾದಲ್ಲಿ ನಿನ್ನ ಸಾಕ್ಷಾತ್ಕಾರ. ನಿನ್ನ ಸಾಕ್ಷಾತ್ಕಾರ ಇರುವಲ್ಲಿ ಕಷ್ಟಗಳಲೆ ಇರದು.  ಇದರಮೇಲೆ ಇನ್ನೇನು ಬೇಕು... ಇದು ಕುಂತಿಯ ಮಾರ್ಗದರ್ಶನ. ಸುಖ ಬೇಡ್ತೇವೆ ಇದರರ್ಥ *ದೇವರನ್ನು ಮರೆಯುವ ಉದ್ದೇಶ್ಯವೇ ಇದೆ* ಎಂದರ್ಥ. 

ಅಂತೆಯೇ ನಮ್ಮ ಸಮಾಜದಲ್ಲಿ ಇತಿಹಾಸ ಮಹಾಭಾರತ ಭಾಗವತ ರಾಮಾಯಣ ಮೊದಲಾದ ಪುರಾಣಗಳನ್ನು ಉಪನ್ಯಾಸ ರೂಪದಲ್ಲಿ ಹೇಳುವ ಸಂಪ್ರದಾಯ ಬಂತು. ಈ ಕಥೆಗಳನ್ನು ಕೇಳಿಯೇ ನಮ್ಮ ಮಹಿಳೆಯರ ಪ್ರಗತಿ ಅತ್ಯಂತ ವೇದಗದಿಂದ ಸಾಗಲಿ, ಸ್ಪಷ್ಟಮಾರ್ಗ ದೊರೆತು ಬರಲಿ ಎಂದು.

ಇಪ್ಪತ್ತನೇಯ ಶತಮಾನದಲ್ಲಿ ಅತ್ಯಂತ ಪ್ರಗತಿಪಥದಲ್ಲಿ ಸಾಗುತ್ತಿರುವವರು ಎಂದರೆ ಮಹಿಳೆಯರೇ ಎಂದರೆ ತಪ್ಪಾಗದು. ಮಹಾಭಾರತಾದಿ ಶಾಸ್ತ್ರ ಶ್ರವಣದಲ್ಲಿಯೂ ಒಂದು ಗಂಟೆ ತೊಡಗಿಸಿಕೊಂಡಾದರೆ ಅವರಂತೆಯೇ ಇರುವ  ಗುಣವಂತಿಕೆಯನ್ನು ಅಭಿವ್ಯಕ್ತಗಿಳಿಸಿಕೊಳ್ಳ ಬಹುದು. 

ಗುಣವಂತ ಮಹಿಳೆಯರು ಇರುವ ಅಂದಿನ ಕಾಲಗಳು ವೈಭವದಿಂದ ಕೂಡಿದ್ದವು. ಇಂದೂ ಗುಣವಂತರೇ ಆದವರು ನಮ್ಮ ಹಿಂದು ಮುಂದು ಇರುವದರಿಂದಲೇ ವೈಭವ ಇದೆ. ಈ ಗುಣವಂತಿಕೆ ಇನ್ನೂ ಮುಂದು ಹೋಗಿ ಮಹೋನ್ನತ ವೈಭವ ನಮ್ಮೆಲ್ಲರದಾಗಲಿ. *ನಮ್ಮ ಸುತ್ತಮುತ್ತಲಿರುವ ಎಲ್ಲ ಮಹಿಳೆಯರಲ್ಲಿ ಇರುವ ಗುಣವಂತಿಕೆ ಜಗತ್ತಿಗೇ ಕಾಣುವಂತಾಗಲಿ* 

ಒಂದೇ ಗುಣ, ಒಂದು ಕಡೆ ಮೆಚ್ಚಿದರೂ ಸಾಕು ಗುಣವಂತಿಕೆಯ ಛಾಪು ಎಲ್ಲಡೆ ಮೂಡುವದು ನಿಶ್ಚಿತ. ಗುಣಗಳನ್ನು ಕಂಡು ಮೆಚ್ಚಿದಷ್ಟು ಗುಣಗಳ ಶಕ್ತಿ ಪ್ರಜ್ವಲಿಸುತ್ತದೆ. ಗುಣಗಳು ಪ್ರಜ್ವಲಿಸಿದವೋ ಸಮಾಜದಲ್ಲಿ ಗುಣವಂತಿಕೆ ತಾನಾಗಿಯೇ ಪಸರಿಸುತ್ತದೆ. ಇದು ಜಗತ್ತಿನ ಸಾಮಾನ್ಯ ನಿಯಮ. ಗುಣಗಳನ್ನೇ ಕಾಣುವದು ದೊಡ್ಡ ಸವಾಲು challenge 😊 😊 

ಈ ಲೇಖನ ನನ್ನ ತಾಯಿ, ಗುರುಮಾತೆ, ನನ್ನ  ತಂಗಿ, ಸೊಸೆಯರಾದ ಸನ್ನಿಧಿ ಸಮೃದ್ಧಿ, ಆತ್ಮೀರಾದ ಅಕ್ಕ ತಂಗಿಯರಿಗೆ, ಸ್ನೇಹಿತೆಯರಿಗೆ, ಹಾಗೂ ಆತ್ಮೀಯ ಎಲ್ಲ ಮಹಿಳೆಯರಿಗೆ ಸಮರ್ಪಿಸುತ್ತ ಒಂದು ಶುಭ ಹಾರೈಕೆಗಳನ್ನು ಅರ್ಪಿಸುವೆ. ದ್ವಾರಕಾಧೀಶನಿಗೆ ಒಂದು ನಮಸ್ಕಾರವನ್ನೂ ಸಲ್ಲಿಸುವೆ...

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*