*ಕರ್ದಮ ಪ್ರಜಾಪತಿಗಳು - ದೇವಹೂತಿ*
*ಕರ್ದಮ ಪ್ರಜಾಪತಿಗಳು - ದೇವಹೂತಿ*
ಬ್ರಹ್ಮದೇವರ ಮೊಟ್ಟ ಮೊದಲ ಮಕ್ಕಳುಗಳಲ್ಲಿ ಕರ್ದಮ ಪ್ರಜಾಪತಿಗಳೂ ಒಬ್ಬರು. ಜೊತೆಗೆ ಬ್ರಹ್ಮ ದೇವರ ಮತ್ತೊಬ್ಬ ಮಗ ಸ್ವಾಯಂಭುವ ಮನು, ಆ ಮನುವಿಗೆ ಆಕೂತಿ, ದೇವಹೂತಿ, ಪ್ರಸೂತಿ - ಪ್ರಿಯವ್ರತ ಉತ್ತಾನಪಾದ ಎಂಬುವದಾಗಿ ಐದು ಜನ ಮಕ್ಕಳು.
ಬ್ರಹ್ಮ ದೇವರಿಂದ ಸನಕಾದಿಗಳು ಹುಟ್ಟಿದರು. ಅವರಿಗೆ ಬ್ರಹ್ಮದೇವರು ಆಜ್ಙೆಮಾಡಿದರು ಜಗತ್ತಿನ ಸಂತತಿ ಬೆಳಿಸಿ ಎಂದು. ಆ ಆಜ್ಙೆಯನ್ನು ನಯವಾಗಿ ದೂರಸರಿಸಿ ತಪಸ್ಸಿಗೆ ತೆರಳಿದರು ಸನಕಾದಿಗಳು. ಆಗ ಸಿಟ್ಟಿಗೆ ಬಂದಂತೆ ಹುಬ್ಬು ಗಂಟು ಹಾಕಿದ ಬ್ರಹ್ಮದೇವರ ಹುಬ್ಬನಿಂದಲೇ ಹುಟ್ಟಿ ಬಂದರು "ಸದ್ಯೋಜಾತ" ರುದ್ರದೇವರು. ಸಿಟ್ಟಿನಿಂದ ಹುಟ್ಟಿದ ಆ ರುದ್ರರಿಂದ ಹುಟ್ಟಿದವು ಕ್ರೂರವಾದ ಭೂತಪ್ರೇತಪಿಶಾಚಿ ಮೊದಲಾದವುಗಳು. ಅದನ್ನು ನೋಡಿ ಬೇಸತ್ತ ಬ್ರಹ್ಮದೇವರು ಅವರಿಗೆ ಸೃಷ್ಟಿ ಕಾರ್ಯವನ್ನು ನಿಲ್ಲಿಸು, ಇದರಿಂದ ಜಗತ್ತಿಗೇ ಆಪತ್ತು ಇದೆ ಎಂದು ಹೇಳಿ ನಿಲ್ಲಿಸುತ್ತಾರೆ.
ಆ ಪ್ರಸಂಗದಲ್ಲಿ ಬ್ರಹ್ಮದೇವರು ಹಾಗೂ ಸರಸ್ವತೀ ದೇವಿಯರಿಂದ ಹುಟ್ಟಿದವರು ಸ್ವಾಯಂಭುವ ಮನು. ಆ ಸ್ವಾಯಂಭುವ ಮನು ಹಾಗೂ ಶತರೂಪಾ ದೆವಿಯಿಂದ ಹುಟ್ಟಿ ಬಂದವರೇ ಆಕೂತಿ ದೇವಹೂತಿ ಮೊದಲಾದ ಐದು ಜನರು.
ಆಕೂತಿಯನ್ನು ಋಚಿ ಪ್ರಜಾಪತಿಗಳಿಗೆ ಕೊಟ್ಟು ಮದುವೆ ಮಾಡುತ್ತಾರೆ, ಅವರೀರ್ವರಿಂದ ಹುಟ್ಟಿ ಬಂದವನೇ *ಯಜ್ಙ ಹಾಗೂ ಯಜ್ಙಾ ನಾಮಕ ಶ್ರೀಹರಿ ಹಾಗೂ ಲಕ್ಷ್ಮೀರೂಪಗಳು.*
ದೇವಹೂತಿಯನ್ನು ಯಾರಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಚಿಂತೆ ಸ್ವಾಯಂಭುವ ಮನುವಿನದು ಒಂದೆಡೆ ಆದರೆ, ಆಚೆ ಬ್ರಹ್ಮದೇವರೇ ತಮ್ಮ ಮಗನಾದ *ಕರ್ದಮ ಪ್ರಜಾಪತಿ* ಗಳಿಗೆ ಹೇಳುತ್ತಾರೆ ಪ್ರಜಾ ಸಂತತಿಯನ್ನು ಬೆಳಿಸು ಎಂದು. ಕರ್ದಮ ಪ್ರಜಾಪತಿಗಳೋ ಅತ್ಯುತ್ತಮ ಮಡದಿ ದೊರೆತು ಬರಲಿ, ಅತ್ಯುತ್ಕೃಷ್ಟ ಸಂತಾನವಾಗಲಿ ಎಂಬ ಕಾರಣಕ್ಕೆ ಹತ್ತು ಸಾವಿರ ವರ್ಷ ತಪಸ್ಸು ಮಾಡುತ್ತಾರೆ.
ಬ್ರಹ್ಮದೆವರು ಸ್ವಾಯಂಭುವ ಮನುವಿಗೆ ಹೇಳುತ್ತಾರೆ, ಕರ್ದಮ ಪ್ರಜಾಪತಿಗಳು ತಪಸ್ಸಿಗೆ ಕುಳಿತಿದಾರೆ, ಅವರಿಗೆ ನಿನ್ನ ಮಗಳನ್ನು ಧಾರೆಯೆರೆದು ಕೊಡು ಎಂದು. ಬ್ರಹ್ಮದೇವರ ಆಜ್ಙೆಯನ್ನು ಹೊತ್ತ, ಮನು ಕರ್ದಮ ಪ್ರಜಾಪತಿಗಳಿಗೆ ತನ್ನ ಮಗಳಾದ ದೇವಹೂತಿಯನ್ನು ಕೊಟ್ಟು ಮದುವೆ ಮಾಡುತ್ತಾರೆ.
ಅತ್ಯುತ್ತಮ , ಅತ್ಯುತ್ಕೃಷ್ಟ, ವಿಷ್ಣುಭಕ್ತೆ, ಧಾರ್ಮಿಕ, ಗುಣವಂತೆ, ಶಿಲವಂತೆ, ಸೌಭಾಗ್ಯವಂತೆ, ಆಚಾರವಂತೆಯಾದ, ಜ್ಙಾನೀ, ಮಹಾನ್ ಪತಿಭಕ್ತೆಯಾದ ಅತ್ಯುತ್ತಮ ಸ್ತ್ರೀರತ್ನ ಎನಗೆ ಸಿಗಲಿ ಎಂದು ಹತ್ತು ಸಾವಿರ ವರ್ಷ ತಪಸ್ಸು ಮಾಡಿದಮೇಲೆ ಮದುವೆ ಆಗಿಬಂತು ಕರ್ದಮ ಪ್ರಜಾಪತಿಗಳದು.
ಮದುವೆಯಾದ ಮೆಲೆ ಎಲ್ಲರ ಹಾಗೆ honymoon ಚಿಂತೆ ಇಲ್ಲ. ಉತ್ತಮ ಸಂತತಿಗಳು ಆಗಲಿ ಎಂದು ಮತ್ತೆ ತಪಪಸ್ಸಿಗೆ ಕುಳಿತರು ಕರ್ದಮರು. ಸರಿಯಾಗಿ ಸಾವಿರ ವರ್ಷದ ತಪಸ್ಸು ಆಯಿತು. ಅಷ್ಟು ದಿನದ ವರೆಗೆ ಪತಿಯ ಸೇವೆ ಅತ್ಯಂತ ವೈಭವದಿಂದ ಮಾಡಿದಳು ದೇವಹೂತಿ.
ಎಚ್ಚರವಾಯಿತು, ಕಣ್ತೆರೆದು ನೋಡಿದರು, ಹೆಂಡತಿಯ ನೆನಪೇ ಆಗಲಿಲ್ಲ. ಅವಳು ತಿಳಿ ಹೇಳಿದ ಮೇಲೆ.. ಓಹೋ ನಿನ್ನನ್ನು ನಾನು ಮದುವೆಯಾಗಿದ್ದೇನೆಯಾ... ಆಯ್ತು. ನಡೆ ವಿಹಾರಕ್ಕೆ ಎಂದು ಹೇಳಿ ಅತ್ಯುತ್ತುಮ ರೂಪ ತಾಳಿ, ಸಕಲ ವೈಭವಗಳೂ ಇರುವ ಅತ್ಯಂತ ವೈಭವದ ವಿಮಾನವನ್ನು ನಿರ್ಮಿಸಿ, ಒಂಭತ್ತು ರೂಪಗಳನ್ನು ತಾಳಿ ನೂರು ವರ್ಷ ಸ್ವರ್ಗ,ನಂದನ ವನ,ಮೇರುಪರ್ವತ, ಸಪ್ತದ್ವೀಪ, ಸಪ್ತಸಾಗರ ಮೊದಲು ಮಾಡಿ ಎಲ್ಲೆಡೆ ವಿಹಾರವನ್ನು ಮಾಡಿ, ಒಂಭತ್ತು ಜನ ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ. ಅವರೆಲ್ಲರನ್ನೂ ಉಳಿದ ಋಷಿಗಳಿಗೆ ಧಾರೆಯೆರೆದು ಕೊಡುತ್ತಾರೆ.
ಮದುವೆ ಆಯಿತು, ಸಂತಾನವೂ ಆದವು, ನಾನು ತಪಸ್ಸಿಗೆ ಹೊರಡುವೆ ಎಂದು ದೆವಹೂತಿಗೆ ಹೇಳಿದಾಗ, ದೇವಹೂತಿ ಪ್ರಾರ್ಥಿಸುತ್ತಾಳೆ, *ಅತ್ಯುತ್ತಮ ಸರ್ವೋತ್ತಮ ಗಂಡು ಸಂತಾನವಾಗಬೇಕು* ಎಂದು.
ಸಿದ್ಧಾಶ್ರಮವೆಂದೇ ಪ್ರಸಿದ್ಧವಾದ, ವಿಶ್ವಾಮಿತ್ರ ದಧೀಚಿಋಷಿಗಳ ಆಸ್ರಮ ತಾಣವಾದ, ಭಗವಂತನ ಆನಮದಾಶ್ರುವಿನಿಂದ *ಬಿಂದುಸರೋವರ* ಎಂದೇ ಪ್ರಸಿದ್ಧವಾದ ಕರ್ದಮರ ಆಶ್ರಮದಲ್ಲಿ, ದೇವಹೂತಿದೇವಿಯ ತಪಸ್ಸಿಗೆ, ಪ್ರಾಮಾಣಿಕ ಪ್ರಾರ್ಥನೆಗೆ ಮೆಚ್ಚಿದ ಕರ್ದಮರು ಅತ್ಯುತ್ತಮ ಸಂತಾನವನ್ನೇ ಕರುಣಿಸುತ್ತಾರೆ, ದೇವಹೂತಿದೇವಿಯಿಂದ ಪ್ರಾದುರ್ಭವಿಸಿದ ಆ ಸಂತಾನವೇ ಇಂದು ಜಗದಿ ಪ್ರಸಿದ್ಧನಾದ, ಜ್ಙಾನಪ್ರದ- ಅಭಯಪ್ರದನಾದ *ಕಪಿಲ* ರೂಪಿ ಭಗವಂತ.
ಕಪಿಲ ರೂಪಿ ನಾರಾಯಣ ಪ್ರಾದುರ್ಭಿಸಿದ, ಪ್ರದಿಕ್ಷಿಣೆ ನಮಸ್ಕಾರ ಮಾಡಿ, ತಪಸ್ಸಿಗೆ ತೆರಳಿದರು ಕರ್ದಮರು. ಆ ಮಗನಾದ *ಕಪಿಲ* ರೂಪಿಯಿಂದ ಉಪದೇಶ ಪಡೆದಳು ತಾಯಿಯಾದ *ದೇವಹೂತಿ.* ಆ ಉಪದೇಶವೇ ತೃತೀಯ ಸ್ಕಂಧದಲ್ಲಿ ಬರುವ ಕಪಿಲೋಪದೇಶ.
ಈ ಕಥೆಯಿಂದ ಒಂದು ತಿಳಿಸುತ್ತಾರೆ...... ಅತ್ಯುತ್ತಮ ಸ್ತ್ರೀ ರತ್ನ ಸಿಕ್ಕು ಮದುವೆ ಆಗಬೇಕಾದರೆ ತಪಸ್ಸು ಬೇಕು. ಉತ್ಕೃಷ್ಟರೀತಿಯ ಭೋಗ ಬೇಕಾದರೂ ತಪಸ್ಸು ಬೇಕು. ಸರ್ವೋತ್ತಮ, ಗುಣವಂತ, ಸೌಭಾಗ್ಯ ಸೌಖ್ಯ, ಸಂಪದ್ಭರಿತ, ಸಂತಾನಕ್ಕಾಗಿ ತಪಸ್ಸು ಬೇಕು. *ಕಪಿಲ* ನಂತಹ ಮಗ ಹುಟ್ಟಲೂ ತಪಸ್ಸು ಬೇಕು. ಆ ಮಗನಿಂದ ಉತ್ಕೃಷ್ಟ ಉಪದೇಶ ಪಡೆಯಬೇಕಾದರೂ ತಪಸ್ಸೇ ಬೇಕು. ಒಟ್ಟಾರೆಯಾಗಿ "ತಪಸ್ಸು ಇದ್ದರೆ ಎಲ್ಲ ಇದೆ ತಪಸ್ಸಿನಿಂದಲೇ ಎಲ್ಲವನ್ನೂ ಪಡೆ" ಎಂಬುವದನ್ನು ಸ್ಪಷ್ಟವಾಗಿ ಸಾರುತ್ತದೆ ಈ ಕಥೆ.
ಅಂತೆಯೇ ನಾವೆಲ್ಲರೂ ಇಂದಿನಿಂದ ದಿನಕ್ಕೆ ಹತ್ತು ನಿಮಿಷವಾದರೂ ಸಮಯ ಹೊಂದಿಸಿಕೊಂಡು ತಪಸ್ಸು ಮಾಡಲು ಉದ್ಯುಕ್ತರಾಗೋಣ ಅಲ್ಲವೇ...... ತಪಸ್ಸು ಮಾಡುವ ಸೌಭಾಗ್ಯವನ್ನು ಕರ್ದಮ ಪ್ರಜಾಪತಿಗಳು ಹಾಗೂ ದೇವಹೂತಿದೇವಿರು ಕರುಣಿಸಲಿ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
*✍🏽✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments