*ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡಬೇಕು....*





*ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡಬೇಕು....*

ನಮ್ಮನ್ನು ಏನೆಲ್ಲ ತರಹದಿಂದ ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡುತ್ತಾನೆಯೋ ಆ ಎಲ್ಲ ತರಹದಿಂದ ದೇವರು ನಮ್ಮ ರಕ್ಷಣೆಗೆ ಪಣತೊಟ್ಟು ನಿಲ್ಲುತ್ತಾನೆ. 

ಜೀವ ಉಳಿಸಿ ರಕ್ಷಿಸಬೇಕೇ... ಅನ್ನ ಕೊಟ್ಟು ರಕ್ಷಿಸಬೇಕೇ.. ಜ್ಙಾನಕೊಟ್ಟು ರಕ್ಷಿಸಬೇಕೆ..  ಧರ್ಮ ಮಾಡಿಸಿ ರಕ್ಷಿಸಬೇಕೇ..  ಹಣ ಕುಟುಂಬ ತಂದೆ ತಾಯಿ ಗುರು, ಕೀರ್ತಿ ಯಶಸ್ಸು ಮುಂತಾದ ಏನು ಕೊಟ್ಟು ರಕ್ಷಿಸಬೇಕು ಎಂದು ಮನಸ್ಸು ಮಾಡಿರುತ್ತಾನೆ ಅದನ್ನು ಕೊಡಲು ರಕ್ಷಿಸಲು ಪಣ ತೊಡುತ್ತಾನೆ. ಒಂದೇ *ನಾನು ಇವನನ್ನು ಹೀಗೀಗ ರಕ್ಷಿಸಬೇಕು* ಎಂದು ಅವನು ಮನಸ್ಸು ಮಾಡಿರಬೇಕು ಇಷ್ಟೆ. ಅವನು ಮನಸ್ಸು ಮಾಡುವಂತೆ ನಮ್ಮ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಬೇಕು. 

*ರಕ್ಷಣೆ ಯಾರೆಲ್ಲರಿಗೆ....*

ಲಕ್ಷ್ಮೀದೇವಿಯಿಂದಾರಂಭಿಸಿ ನಿಃಶ್ಶೇಷ ಅನಂತಾನಂತ ಜೀವರಾಶಿಗಳಿಗೂ, ಸರ್ವ ರಕ್ಷಕನಾದ ದೇವನ ಸಾಮಾನ್ಯವಾದ ರಕ್ಷಣೆ  ಇದ್ದೇ ಇದೆ. ಭಕ್ತಿ ಜ್ಙಾನ ಗುಣವಂತಿಕೆ ಧರ್ಮ ಇವುಗಳು ಇದ್ದಲ್ಲಿ,ಇವುಗಳು ಬೆಳೆದಂತೆ  ರಕ್ಷಣೆಯಲ್ಲಿ  ವಿಶೇಷತೆ ಇರುತ್ತದೆ, ವ್ಯಾಪಕವಾಗಿ ಬೆಳೆಯುತ್ತದೆಯೂ ಸಹ. 

*ವಿಶೇಷ ರಕ್ಷಣೆ ಯಾರಿಗೆ...*

ಮಹಾ ಭಕ್ತರು, ಸೇವಕರು, ದಾಸರು, ಧರ್ಮವಂತರು, ವಿಶಿಷ್ಟ ಜ್ಙಾನಿಗಳೂ ಆದವರು ಪಾಂಡವರು. ದೇವರನ್ನು ಅತಿಶಯಿತ ಪ್ರೀತಿ ಭಕ್ತಿ ಮಾಡುವವರೂ ಪಾಂಡವರೇ. ಅಂತೆಯೇ ಪಾಂಡವರನ್ನು ನೂರಾರು ತರಹದ ಮಾರಣಾಂತಿಕ ಆಪತ್ತುಗಳ ಸುರಿಮಳೆಗೆರದಾಗಲೂ ರಕ್ಷಣೆ ಮಾಡುದರಲ್ಲಿ ಸ್ವಲ್ಪವೂ ಹಿಂದೆಮುಂದೆ ನೋಡಲಿಲ್ಲ. ರಕ್ಷಿಸಿದ ನೂರಾರು ಕಥೆಗಳನ್ನು ಮಹಭಾರತ ಭಾಗವತಗಳಲ್ಲಿ ಕೇಳುತ್ತೇವೆ. 

*ಭಕ್ತರಿಗಿರುವ ಕೆಲವು ಅನುಕೂಲಗಳು...*

ಕೆಲವೊಮ್ಮೆ   ಕೃಷ್ಣನ್ನು ಮರೆತರೂ, ಅವಮಾನಿಸಿದರೂ, ನಿಂದಿಸಿದರೂ, ದೂರಿದರೂ, ದೇವರೇ ಅಲ್ಲ, ದೇವರಿಲ್ಲ ಎಂದರೂ, ಎಲ್ಲ ನಾನೇ ಮಾಡುದೆ ಎಂದು ಅಹಂಕಾರ ತೋರಿದರೂ ದೇವರ ರಕ್ಷಣೆ ಸಿಗುವದು ಕೇವಲ ಭಕ್ತರಿಗೆ ಮಾತ್ರ. ಇದುವೇ ಭಕ್ತರಿಗಿರುವ ಅನುಕೂಲ. 

ಧರ್ಮರಾಜ ಕೃಷ್ಣ ಪರಮಾತ್ಮನನ್ನು ಮಾನವ ಎಂದು ತಿಳಿದ, ಅರ್ಜುನ ಬ್ರಾಹ್ಮಣನ ಶಿಶು ರಕ್ಷಿಸುವ ಪ್ರಸಂಗದಲ್ಲಿ  "ನಾನೇನು ಗೊಲ್ಲ ಕೃಷ್ಣನಾ" ಎಂದು  ಅವಮಾನ ಮಾಡಿದ, ನಕುಲ ರಾಜಸೂಯದ ಪ್ರಸಂಗದಲ್ಲಿ‌ ಕೃಷ್ಣನ ಬಳಿ  ಕರತರಲು ದೂತರನ್ನು ಕಳುಹಿಸಿದ, ಸಹದೇವ ಉದ್ಧವಾದಮೇಲೆ, ಗೆಲವು ಸಿಕ್ಜಾದ ಮೇಲೆ ಕೊನೆಗೆ ಕುಲ‌ನಾಶವಾದಾಗ ಈ ಕುಲನಾಶಕ್ಕೆ ಕೃಷ್ಣನೇ ಹೊಣೆಗಾರ ಎಂದು ಆಪಾದನೆ ಮಾಡಿದ ಹೀಗಿದ್ದಾಗಲೂ ಈ ಎಲ್ಲರನ್ನೂ ಸಂರಕ್ಷಿಸಿದ. 

ಸ್ವಯಂ ದೇವೇಂದ್ರ ಅನೇಕಬಾರಿ ಅವಮಾನ, ನಿಂದೆ, ಮರೆವು, ಈ ಎಲ್ಲವನ್ನು ಮಾಡಿದಾಗಲೂ ಆ ಇಂದ್ರನ ರಕ್ಷಣೆಗೆ ದೇವರು ಧಾವಿಸಿ ಬಂದ. ಇದು ಭಕ್ತರಿಗಿರುವ ಅನುಕೂಲಗಳು. ಭಕ್ತಿ ಮಾಡುವದು, ಭಕ್ತರಾಗುವದು ನಮಗೆ ಬಿಟ್ಟಿರುವದು. 

*ವತ್ಸೋ ಯಥಾ ತನುಬಲಃ ಸಕೃದೇತ್ಯ ಮಾತರ್ಯೂಧಸ್ಯ ಪಾನಸಮಯೇ ಕುರುತೇ ವಿರೋಧಮ್ |
ತದ್ವದ್ವಯಂ ನಿಜಶೈಶವಮಪ್ರಮೇಯೇ ನಾಥೆ ವಿರುದ್ಧಪಿಶಿನಾಶಿನಿ ದರ್ಶಯಾಮಃ ||

ಕರು ಹಾಲು ಕುಡಿಯುತ್ತುರುವಾಗ ಕೆಚ್ಚಲಗಿಗಳಿಗೆ ಗುದ್ದತ್ತೆ, ಕೆಚ್ಚಲಗಳನ್ನು ಕಚ್ಚತ್ತೆ ಹೀಗೆ ಅನೇಕ ವಿರೋಧ ಮಾಡಿದರೂ ತಾಯಿ ಮಾತ್ರ ಹಾಲುಣಿಸುವದರಲ್ಲಿ ಸ್ವಲ್ಪವೂ ಕಡಿಮೆ ಮಾಡುವದಿಲ್ಲವೋ ಹಾಗೆ ನಾವೂ ಅನೇಕಬಾರಿ ನಾನಾವಿಧಗಳಿಂದ ವಿರೋಧ ಮಾಡಿದರೂ ನಮ್ಮನ್ನು ರಕ್ಷಿಸು. ನಿಜ ಶಿಶುವಿಗೆ ಹಾಲುಣಿಸುವಂತೆ, ನೈಜಭಕ್ತನಾದ ನನ್ನನ್ನು ದಯೆತೋರಿ ರಕ್ಷಿಸು ಎಂದು ಇಂದ್ರ ಪ್ರಾರ್ಥಿಸುತ್ತಾನೆ. ದೇವರೂ ರಕ್ಷಿಸುತ್ತಾನೆ. 

ಹಾಗೆಯೇ ನಾವೂ ಧರ್ಮಮಾಡಿ,  ಜ್ಙಾನ ಬೆಳಿಸಿಕೊಂಡು, ಗುಣವಂತರಾಗಿ, ಭಕ್ತಿ ಮಾಡಿ ಭಕ್ತರಾದರೆ ದೇವರೂ ನಮ್ಮನ್ನು ಸರ್ವವಿಧದಿಂದಲೂ ರಕ್ಷಿಸು ಮನಸ್ಸು ಮಾಡುವ. ಒಮ್ಮೆ ಮನಸ್ಸು ಮಾಡಿದರೆ ಹೇಗಾದರೂ ಮಾಡಿ ರಕ್ಷಿಸಿಯೇ ತೀರುವ. 

*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*