*ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು


*ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು*

ಆಧ್ಯಾತ್ಮ ಮಾರ್ಗದಲ್ಲಿ ವಿಷ್ಣುತೀರ್ಥರು ಅಗ್ರಗಣ್ಯರು. ವಿರಕ್ತ ಶಿಖಾಮಣಿಗಳು. ಮಹಾಜ್ಙಾನಿಗಳು. ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು. ಗುರುಭಕ್ತಿಯ ಪರಾಕಾಷ್ಠೆ ಶ್ರೀವಿಷ್ಣುತೀರ್ಥರಲ್ಲಿ. ಅಂತಹ ಶ್ರೀ ವಿಷ್ಣುತೀರ್ಥರ ಆರಾಧನ ಮಹೋತ್ಸವ. 

ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹದಿಂದ ಜನಿಸಿದ ಕಾರಣಕ್ಕೇ "ಜಯತೀರ್ಥ" ಎಂದು ನಾಮಕರಣ ಮಾಡಿದರು. ಶ್ರೀ ಜಯತೀರ್ಥಾಚಾರ್ಯರನ್ನು ಆಗಿನ ಕಾಲದ ಮಹಾಜ್ಙಾನಿಗಳಾದ *ವೆಂಕಟ ರಾಮಾಚಾರ್ಯ (ಶ್ರೀವ್ಯಾಸತತ್ಚಜ್ಙ ತೀರ್ಥರ)* ಬಳಿ ಅಧ್ಯಯನಕ್ಕಾಗಿ ಕಳುಹಿಸಿದರು. ನಿರಂತರ ಗುರುಶುಶ್ರೂಷೆ, ಅಖಂಡ ಅಧ್ಯಯನ ಇವುಗಳ ಪ್ರಭಾವದಿಂದ ಮಹಾಪಂಡಿತರಾಗಿಯೇ ಹೊರಬಂದರು ಜಯತೀರ್ಥಾಚಾರ್ಯರು. 

*ಗುರ್ವನುಗ್ರಹ....*

ತುಂಗಾ ತೀರ, ವೇಣೀಸೋಂಪೂರು ಕ್ಷೆತ್ರ. ಶ್ರೀವ್ಯಾಸತತ್ವಜ್ಙತೀರ್ಥರ ಪೂರ್ವಾಶ್ರಮದಲ್ಲಿ ವೆಂಕಟರಾಮಾಚಾರ್ಯರು ವಿದ್ಯಾಪೀಠವನ್ನು ನಡೆಸುತ್ತಿರುತ್ತಾರೆ. ಅಲ್ಲಿಯೇ ಶ್ರೀ ಜಯತೀರ್ಥಾಚಾರ್ಯರ ಆಗಮನ. ಒಂದು ಕಾಲದಲ್ಲಿ ಗುರು ಪುತ್ರನಿಗೆ ದೊಡ್ಡ ಕಾಯಿಲೆ, ಕಾಯಿಲೆ ಪ್ರಭಾವ ತೀಕ್ಷ್ಣವಾದಾಗ, ಕೊನೆಯ ಆಸರೆ ದೇವರೇ ಎಂದು ಭಾವಿಸಿದ ಆಚಾರ್ಯರು ಶಿಷ್ಯರಿಗೆ ಹೇಳುತ್ತಾರೆ *ಸರ್ವಸಿದ್ದಿಪ್ರದ, ಸರ್ವಾನಿಷ್ಟ ನಿವಾರಕ "ನರಸಿಂಹ" ಮಂತ್ರವನ್ನು* ಉಪವಾಸವಿದ್ದು ಇಷ್ಟು ಜಪ ಮಾಡಬೇಕು, ಯಾರು ಮಾಡುತ್ತೀರಿ ??? ಎಂದು ಶಿಷ್ಯರಿಗೆ ಕೇಳುತ್ತಾರೆ. 

ಎಲ್ಲ ಶಿಷ್ಯರೂ ಹಿಂದು ಮುಂದು ನೋಡಿದಾಗ *ಶ್ರೀಜಯತೀರ್ಥಾಚಾರ್ಯರು* ತಾವು ಸಿದ್ಧರಾಗಿ ತುಂಗಭದ್ರಾನದಿಯಲ್ಲಿ ಏಳು ದಿನಗಳ ಕಾಲ ಅಖಂಡವಾಗಿ ನರಸಿಂಹ ಮಂತ್ರದ ಜಪವನ್ನು ಮಾಡುತ್ತಾರೆ. (ಜಪದ ಪ್ರಭಾವದಿಂದ ಭಂಡೆ ಸೀಳಿಹೋಗಿತ್ತು ಎಂದು ಹೆಳುತ್ತಾರೆ.) ಇದು ಗುರುಗಳ ಆಜ್ಙಾಪಾಲನೆ. 

*ಸುಧಾಮಂಗಳಗಳು....*

ಶ್ರೀಮಟ್ಟೀ ಕೃತ್ಪಾದರ ಅನುಗ್ರಹದಿಂದ ಜನಿಸಿದ್ದಕ್ಕಾಗಿ, ಅವರ ದಿವ್ಯ ಸೇವಾ ರೂಪವಾಗಿ ಶ್ರೀವ್ಯಾಸತತ್ವಜ್ಙತೀರ್ಥರ ಅನುಗ್ರಹದಿಂದ ನೂರೆಂಟು ಬಾರಿ *ಶ್ರೀಮನ್ಯಾಯಸುಧಾ ಪಾಠವನ್ನು* ಹೇಳಿ ಮ
ಮಂಗಳಗಳನ್ನು ಮಾಡುತ್ತಾರೆ. *ಶ್ರೀಮನ್ಯಾಸುಧ ಗ್ರಂಥಕ್ಕೆ ದಿವ್ಯ ವಾದ ವ್ಯಾಖ್ಯಾನವನ್ನೂ* ರಚಿಸಿ ಸಾಮಾನ್ಯಾರಾದ ನಮಗೆ  ಅನುಗ್ರಹಿಸುತ್ತಾರೆ. 

*ವಿರಕ್ತ ಶಿಖಾಮಣಿಗಳು*

ಸಣ್ಣ ವಯಸ್ಸು, ಮಹಾ ಪಾಂಡಿತ್ಯ, ಅತ್ಯುತ್ತಮ ರೂಪಿ, ಶ್ರೀಮಂತಿಕೆ, ಜೊತೆಗೆ ಅತ್ಯಂತ ಸಾಧ್ವಿ ಗುಣವಂತೆಯಾದ ಮಡದಿ. ಮದುವೆಯಾಗಿ ಕೆಲ ವರ್ಷಗಳು ಉರುಳಿವೆ. ಆ ಪ್ರಸಂಗದಲ್ಲಿ ಒಬ್ವ ಬ್ರಾಹ್ಮಣ ಭಿಕ್ಷುಕ *ಮಂಚ ಬಾರದು  ಮಡದಿ ಬಾರಳು, ಕಂಚು ಕನ್ನಡಿ ಮಾರದು, ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೋ ಧರ್ಮವ* ಎಂಬ ಹಾಡು ಹಾಡುತ್ತಾ ಮನೆಯ ಬಾಗಿಲಗೆ ಬಂದ ಬ್ರಾಹ್ಮಣ. ಆ ಬ್ರಾಹ್ಮಣನ ಹಾಡು ಕೇಳಿದಾಕ್ಷಣ ಈ ಸಂಸಾರ ಅಸಾರ,ಅನಿತ್ಯ ಎಂದು ಭಾವಿಸಿ ವನಪ್ರಸ್ಥಕ್ಕೆ ಸಿದ್ಧರಾಗಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುತ್ತಾರೆ, ಮುಂದೆ ಶ್ರೀ ಸತ್ಯವರತಿರ್ಥರಿಂ ಆಶ್ರಮವನ್ನು ಸ್ವೀಕರಿಸಿ *ಶ್ರೀ ವಿಷಗಣುತೀರ್ಥರು* ಎಂದೇ ಪ್ರಸಿದ್ಧರಾಗುತ್ತಾರೆ. 

*ಸಿದ್ಧಪುರುಷರು....*

ಮಾದಿನೂರು ಪ್ರಾಂತದ ಒಂದು ಊರು. ಆ ಊರಿಗೇ ಕ್ಷಾಮ ಬಂದರೆ. ಲಕ್ಷ್ಮೀದೇವಿಯ ಸ್ತೋತ್ರವನ್ನು ರಚಿಸಿ, ಆ ಮಹಾತಾಯಿಯ ಅನುಗ್ರಹದಿಂ, ನಿತ್ಯ ಸಾಮಾನ್ಯ ನಾಣ್ಯಗಳನ್ನು ಭಂಗಾರದ ನಾಣ್ಯಗಳನ್ನಾಗಿ ಮಾಡಿ ಸಮಗ್ರವಾದ ಊರನ್ನೇ ಆರು ತಿಂಗಳ ವರೆಗೆ ರಕ್ಷಣೆ ಮಾಡುತ್ತಾರೆ, ನೋಡಿಕೊಳ್ಳುತ್ತಾರೆ. 

*ಗ್ರಂಥಕರ್ತೃಗಳಿವರು....*

ಶ್ರೀಮನ್ಯಾಸುಧಾ ವ್ಯಾಖ್ಯಾನ, ಶ್ರೀಮನ್ಯಾಸುಧಾ ಸ್ತೋತ್ರ, ಭಾಗವತ ಸಾರೋದ್ಧಾರ,  ಅಧ್ಯಾತ್ಮ ರಸರಂಜಿನೀ, ಷೋಡಶೀ, ಚತುರ್ದಶೀ, ಮುಂತಾದ ಅನೇಕ ಗ್ರಂಥಗಳನ್ನು ರಚಿಸುತ್ತಾರೆ. ಲಕ್ಷ್ಮೀ ಸ್ತುತಿ ಮೊದಲಾದ ಅನೇಕ ಸ್ತೋತ್ರಗಳನ್ನೂ ರಚಿಸಿಕೊಡುತ್ತಾರೆ. ಸಮಗ್ರ ಜೀವನ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಸೇವೆಗೆ ತಮ್ಮನ್ನು ತಾವು ಸವಿಸಿಕೊಳ್ಳುತ್ತಾರೆ.

ಬ್ರಹ್ಮಚರ್ಯ, ಗಾರ್ಹಸ್ತ್ಯ, ವಾನಪ್ರಸ್ಥ, ಸನ್ಯಾಸ ಹೀಗೆ ಚತುರಾಶ್ರಮವನ್ನೂ ಸ್ವೀಕರಿಸುತ್ತಾರೆ. ಕೌಲಗಿ ಟೊಣಪಿ ಮೊದಲಾದ ಶಿಶ್ಯರಿಗೆ ತಾವು ಪೂಜಿಸಿದ, ಉಪಾಸಿಸಿದ ಅನೇಕ ಮೂರ್ತಗಳನ್ನೂ ಕೊಡುತ್ತಾರೆ. ಅವರ ವಂಶದಲ್ಕಿ ಇಂದಿಗೂ ದಿವ್ಯ ಮೂರ್ತಿಗಳು ಇವೆ. *ಬಿಂಬಾರಾಧನೆಯನ್ನು ಸಾಮಾನ್ಯ ಜನರವರೆಗೆ ತಂದು ಕೊಟ್ಟ ಕೀರ್ತಿ ವಿಷ್ಣುತೀರ್ಥರದ್ದು* ಎಂದು ನಮ್ಮ ಅನೇಕ ಹಿರಿಯರು ಮಾತಾಡಿರುವದನ್ನು ನಾನು ಕೇಳಿದ್ದೇನೆ. ಅಂತಹ ವಿಷ್ಣು ತೀರ್ಥರು ನಮ್ಮ ಆಪತ್ತುಗಳನ್ನಹ ಪರಿಹರಿಸಿ, ತಮ್ಮ ಭವ್ಯ ಜೀವನದಲ್ಲಿ ಅಳವಡಿಸಿಕೊಂಡಂತ ವಿಷಯಗಳಲ್ಲಿ ಸ್ವಲ್ಪವನ್ನಾದರೂ ದಯಪಾಲಿಸಿ *ಮುದ* ಮೋಕ್ಷಾನಂದವನ್ನಜ ದಯಪಾಲಿಸಲಿ.

*ಯಸ್ಯಪ್ರಚಂಡತಪಸಾ ಶೃತಿಗೀತವೃತ್ತಃ
ತುಷ್ಟೋ ಹರೀ ಕಿಲ ವಶಂ ವದತಾಮವಾಪ | 
ಶ್ರೀಮಧ್ವ ಸನ್ಮತಿ ಪಯೋನಿಧಿ ಪೂರ್ಣಚಂದ್ರಃ ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು*  ಕನಿಷ್ಠ ನೂರೆಂಟು ಬಾರಿಯಾದರೂ ಪಠಿಸಿ ಅನುಗ್ರಹಕ್ಜೆ ಪಾತ್ರರಾಗೋಣ.

*✍🏽✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*