*ನಾಡದ್ದು ಬರುವ ಆಪತ್ತುಗಳಿಗೆ ಮೊನ್ನೆಯೇ ಪರಿಹಾರ ಸಿಕ್ಕಿರತ್ತೆ....*


*ನಾಡದ್ದು ಬರುವ ಆಪತ್ತುಗಳಿಗೆ ಮೊನ್ನೆಯೇ ಪರಿಹಾರ ಸಿಕ್ಕಿರತ್ತೆ....*

ಆಪತ್ತುಗಳು ಬರುವದು ಸಹಜ. ಬಂದ ಆಪತ್ತುಗಳನ್ನು ಬಂದಮೇಲೇ ಆಪತ್ಪರಿಹಾರಿ ದೇವರು ಖಂಡಿತವಾಗಿಯೂ ಪರಿಹರಿಸುತ್ತಾನೆ. ಇದು ದೇವರ ದೊಡ್ಡ ಕಾರುಣ್ಯ. ಆದರೆ ಮುಂದೆ ಬರುವ ಆಪತ್ತುಗಳನ್ನು ಗುರುತಿಸಿ, ಮೊನ್ನೆಯೇ ಪರಿಹಾರಮಾಡಿಡುವದೇನಿದೆ ದೇವರ ಅತೀಉತ್ತಮ, ಅತೀಶ್ರೇಷ್ಠ ಕಾರುಣ್ಯ. 

ನಾಡದ್ದು  ಬರುವ ಆಪತ್ತುಗಳಿಗೆ ದೇವರು ಮೊನ್ನೆಯೇ ಪರಿಹಾರ ಮಾಡುವದು ಇದೆಯಾ... ?? ಹಾಗೆ ಪರಿಹಾರ ಮಾಡಿದ ನಿದರ್ಶನಗಳು ಇವೆಯಾ.. ?? ಎಂದು ಪ್ರಶ್ನೆ ಬಂದರೆ ನಮಗೆ ಇತಿಹಾಸದ ಅಧ್ಯಯನ ಮಾಡುವಾಗ ಉತ್ತರ ತಿಳಿದು ಬರುತ್ತದೆ. 

ದೇವರು ಆಪತ್ತುಗಳನ್ನು ಗುರುತಿಸುತ್ತಾನೆ. ಅದಕ್ಕೆ ಪರಿಹಾರವನ್ನೂ ಒದಗಿಸಿಕೊಡುತ್ತಾನೆ. ಆ ಸೌಲಭ್ಯ ಇರುವದು ಕೇವಲ‌ *ಭಕ್ತರಿಗೆ ಮಾತ್ರ.*

ಕುಂತಿ ದೇವಿ ಪರಮ ಧಾರ್ಮಿಕಳು. ಮಹಾ ಭಕ್ತಳು. ಕೃಷ್ಣನ ಸೋದರತ್ತಿಯೂ ಹೌದು. ಕೃಷ್ಣನ ಆರಾಧಕಳೂ ಹೌದು. ಮುಂದೆ ಪಾಂಡು ರಾಜನ ಮದುವೆಯಾದಳು. ಹಸ್ತಿನಾವತಿಯ ಮಹಾರಾಣಿಯಾಗಿ ಮೆರೆದಳು.

ಪಾಂಡು ರಾಜ ಒಂದು ಪ್ರಸಂಗದಲ್ಲಿ  ಬೇಟೆಯಾಡುತ್ತಿರುವಾಗ, ರತಿಕ್ರೀಡೆಯಲ್ಲಿ ತೊಡಗಿರು ಎರಡು ಜಿಂಕೆಗಳು ಕಣ್ಣಿಗೆ ಕಂಡವು.  ಜಿಂಕೆಯ ಮೇಲೆ ಬಾಣ ಹೂಡಿದ. ಹೆಣ್ಣು ಜಿಂಕೆ ಮಡಿದುಹೋಯಿತು. 

ದುರ್ದೈವ..  ಶ್ರೇಷ್ಠ ಋಷಿಗಳಾದ, ಮಹಾ ತಪಸ್ವಿಗಳಾದ  ಕಿಂದಮ ಋಷಿ ದಂಪತಿಗಳೇ ಜಿಂಕೆಯ ವೇಷದಲ್ಲಿ ಇದ್ದರು. ಹೆಂಡತಿಯನ್ನು ಕಳೆದುಕೊಂಡ ಕಿಂದಮರು ಶಾಪವನ್ನು ಕೊಡುತ್ತಾರೆ, "ನಿನ್ನ ಹೆಂಡತಿಯರ ಜೊತೆ ಇರುವಾಗ ನಿನಗೆ ಮರಣ ಬರಲಿ" ಎಂದು. ಹಾಗಾಗಿ ಮಕ್ಕಳು ಆಗುವ ಸಂಭವವೇ ಇರಲಿಲ್ಲ. 

ಪಾಂಡು ಕುಂತಿಯರು ಧಾರ್ಮಿಕರಾಗಿ ಇದ್ದು, ಮಹಾ ವಿಷ್ಣು ಭಕ್ತರು ಆಗಿರುವದರಿಂದ, ಮುಂದೆಂದೋ ಬರುವ ಶಾಪವನ್ನು ಮೊದಲೇ ಊಹಿಸಿ, ಕುಂತಿ ಚಿಕ್ಕವಳು ಇರುವಾಗಲೇ ಮಕ್ಕಳು ಆಗುವ ಸಂತಾನಭಾಗ್ಯ ಒದಗುವ ವರವನ್ನು ದೇವರು ದೂರ್ವಾಸರ ಮುಖಾಂತರ ಒದಗಿಸಿಕೊಟ್ಟಿದ್ದ. 

ವಸುದೇವನ‌ ತಂಗಿಯಾದ ಪೃಥೆಯನ್ನು , ತಂದೆ ಕುಂತಿಭೋಜ ರಾಜನಿಗೆ ದತ್ತವಾಗಿ ಕೊಟ್ಟಿರುತ್ತಾನೆ. ಅಂತೆಯೇ ಪೃಥೆಗೆ ಕುಂತೀ ಏಂದು ಹೆಸರು. 

ಕುಂತಿಭೋಜ ರಾಜನ ಸನಿಹ ಚಾತುರ್ಮಾಸ್ಯವ್ರತಕ್ಕಾಗಿ ದೂರ್ವಾಸರು ಬರುತ್ತಾರೆ. ನಿರಂತರ ದೂರ್ವಾಸರ ಸೇವೆಯನ್ನು ಸ್ವಯಂ ಕುಂತೀದೇವಿ  ನಿರಂತರ ಮಾಡುತ್ತಾಳೆ. ಸಂತೃರಪ್ತರಾದ ದೂರ್ವಾಸರು ವರಕೊಡುತ್ತಾರೆ "ಈ ಮಂತ್ರದಿಂದ ಯಾವ ದೇವತೆಯನ್ನು ನೆನೆಸುತ್ತೀಯೋ ಆ ದೇವತೆಯಿಂದ ನಿನಗೆ ಉತ್ಕೃಷ್ಟ ಸಂತಿಯಾಗುತ್ತದೆ" ಎಂದು. ಈ ಕಥೆಯಿಂದಲೇ ತಿಳಿದು ಬರುತ್ತದೆ *ನಾಳೆ ಬರುವ ಆಪತ್ತುಗಳಿಗೆ ದೇವರು ಮೊನ್ನೇಯೇ ಪರಿಹಾರ ಒದಗಿಸಿರುತ್ತಾನೆ* ಎಂದು. 

ನಾನು ಉಪಭೋಗಿಸುವ ಅನ್ನ ವಸ್ತ್ರ ನೀರು ಘಾಳಿ ಬೆಳಕು ಗೆಳೆಯರು ಎಲ್ಲರೂ ನನ್ನ ಕರ್ಮದಿಂದಲೇ. ನನ್ನ ಕರ್ಮದಿಂದ ಹುಟ್ಟಿದ ಅನ್ನ ನನ್ನ ಮನೆಯಲ್ಲಿ ಇರುವದಿಲ್ಲ. ಅದು ನನಗೆ ತಿಳಿಯದು. ನಾನು ನಾಳೆ ಇಂದ ಐದು ದಿನ ನನ್ನ ಮನೆಯೆಲ್ಲಿ ಇದ್ದರೆ ಉಪವಾಸ ಬೀಳುವದೇ ನಿಶ್ಚಿತ. ಇಂತಹ ಆಪತ್ತನ್ನು ಅರೆತ ದೇವ ಎಲ್ಲಿ ಯಾರಿಗೆ ಹೇಗೆ ಪ್ರೇರಣೆ ಮಾಡುತ್ತಾನೋ ತಿಳಿಯದು ಹಿಂದಿನ ದಿನದ ರಾತ್ರಿಯೇ "ನನ್ನ ಕರ್ಮದಿಂದ ಹುಟ್ಟಿದ ಅನ್ನವಿರುವ ಊರಿಗೆ ನನ್ನನ್ನು ವರ್ಗಾಯಿಸುವಂತೆ ಮಾಡಿರುತ್ತಾನೆ" ಇದು ದೇವರದೊಂದು ಅತ್ಯದ್ಭುತ ಕರುಣೆ. ಈ ತರಹದ ಅನುಭವಗಳನ್ನು ಪ್ರತಿಯೊಬ್ಬರೂ ಪ್ರತಿಹಂತದಲ್ಲಿಯೂ ಅನುಭವಿಸಿರಲೇಬೇಕು. ನಾನಂತೂ ತುಂಬಾ ಅನುಭವಿಸಿದ್ದೇನೆ. ಆ ಕರುಣೆಗೆ ನಮೋ ನಮೋ ನಮೋ....

*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*