*ವಾಗಾತ್ಮನೇ ನಮಃ.....
*ವಾಗಾತ್ಮನೇ ನಮಃ*
ವಿಷ್ಣು ಸಹಸ್ರನಾಮದಲ್ಲಿಯ ಅನೇಕ ಶಬ್ದಗಳಲ್ಲಿ *ವಾಗಾತ್ಮಾ* ಎಂಬುವದೂ ಒಂದು ಅದ್ಬುತ, ಅತ್ಯುಪಯುಕ್ತ ನಾಮ.
ಆಡುವ ಮಾತುಗಳನ್ನು ಸೃಷ್ಟಿಸಿದ, ರಕ್ಷಿಸಿದ, ಪೋಶಿಸಿದ, ಮಾತುಗಳ ಪ್ರೇರಕ, ಯೋಗ್ಯ ಮಾತುಗಳನ್ನು ಒದಗಿಸಿ ಸಾರ್ಥಕಗೊಳಿಸುವ, ಸುಸೂತ್ರ ಜೀವನಕ್ಕೆ ಅತ್ಯಂತ ಉಪಯುಕ್ತವಾದವುಗಳು ಮಾತುಗಳು. *ವಾಕ್* ಮಾತುಗಳು, ಆ ಎಲ್ಲ ಮಾತುಗಳಿಗೆ *ಆತ್ಮಾ* ನಿಯಾಮಕನು ಭಗವಂತ ಆದ್ದರಿಂದ *ವಾಗಾತ್ಮಾ* ಶ್ರೀಹರಿ.
ಮನಸ್ಸು ಮನಸ್ಸುಗಳ ಭಾವನೆಯ ಅಭಿವ್ಯಕ್ತಿಗೆ ಮಾತುಗಳೇ ಮೂಲ. ಪರಸ್ಪರರ ಭರವಸೆ, ವಿಶ್ವಾಸ, ಸ್ಪಷ್ಟತೆ ಇವುಗಳಿಗೆ ಮಾತುಗಳು ಸೇತುವೆಯಂತಿವೆ. ಆ ಮಾತುಗಳೇ ದೃಢವಾದ ಸೇತುವೆಯನ್ನೂ ಸೀಳಿ ಹಾಕುವಂತಹದ್ದೂ ಮಾತುಗಳೆ.
ಸಮಯ ಸಾರ್ಥಕಗೊಳಿಸುವ ಮಾತುಗಳು, ಸಮಯ ಹಾಳುಮಾಡುವದಕ್ಕೂ ದಿವ್ಯ ಸಮರ್ಥಗಳು ಮಾತುಗಳು. ದೇವರುಕೊಟ್ಟ ಕೋಟಿ ಕೋಟಿ ಉಚಿತ ಪದಾರ್ಥಗಳಲ್ಲಿ ಘಾಳಿ ಬೆಳಕುಗಳ ತರುವಾಯ ಅತ್ಯಂತ ಹೆಚ್ಚಾಗಿ ಬಳಿಸುವದು ಎಂದರೆ ಮಾತುಗಳೇ...
ಹೆಚ್ಚಾಗಿ ದುರ್ಬಳಿಕೆಗೆ ಬರುವ ಪದಾರ್ಥಗಳಲ್ಲಿ , ಮೊದಲ ಸ್ಥಾನ ಮಾತುಗಳದ್ದೇ. ಆದ್ದರಿಂದ ಆಡುವ ಮಾತುಗಳು ಸಾರ್ಥಕವೂ ಆಗಬೇಕು, ಸದ್ಬಳೆಕೆಗೆ ಅನುವೂ ಆಗಬೇಕು.
ಮಾತುಗಳನ್ನು ಉಪಯೋಗಕ್ಕೆ ತೆಗೆದು ಕೊಂಡವರೇ ಜಗದಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ. ಇದಕ್ಕೆ ಶ್ರೀಮಟ್ಟೀಕಾಕೃತ್ಪಾದರಿಂ ಆರಂಭಿಸಿ ಸಕಲ ಗುರುಗಳೂ ಮಾತುಗಳನ್ನು ಸದುಪಯೋಗ ಪಡಿಸಿಕೊಂಡ ಮಾಹಾತ್ಮರು.
*ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ*
ಇಂದಿನ ಕಥಾನಾಯಕರಾದ ರಾಯರದ್ದೂ ಒಂದು ದಿವ್ಯ ಮಹಿಮೆ, ನಮಗೆ ಕೊಡುವ ಆದರ್ಶ ಎರಡೂ ಮಾತುಗಳಿಗೆ ಸಂಬಂಧಪಟ್ಟದ್ದು ಆಗಿದೆ.
ತಮ್ಮ ಭವ್ಯ ದಿವ್ಯ ಜೀವನದಲ್ಲಿ ಭಗವಂತನ ಪಾದಪದ್ಮಗಳನ್ನು ನಿರಂತರ ಕೊಂಡಾಡುತ್ತಾ ಇದ್ದರು. ನಿರಂತರ ಕೊಂಡಾಡಿ ಕೊಂಡಾಡಿ ರಾಯರ ನಾಲಗೆ ಜಿರ್ಣವಾಗಿತ್ತು, ಸವೆದು ಹೋಗಿತ್ತು ಅಂತೆ. ಹೀಗೆ ರಾಯರು ತಮ್ಮ ನಾಲಗೆಯನ್ನು ಸಾರ್ಥಕ ಮಾಡಿಕೊಂಡಿದ್ದರು. ಅದರ ಫಲವೇ ಪರಿಮಳ ಮೊದಲಾದ ಅನೇಕ ಗ್ರಂಟಿಪ್ಪಣಿ ಗ್ರಂಥಗಳು. ಈ ಕ್ರಮದಲ್ಲಿ ಪ್ರತೀ ಮಾತುಗಳು ಸಾರ್ಥಕ ಮಾಡಿಕೊಳ್ಳಬೇಕು ಎಂದು ನಮಗೂ ತಿಳಿಸಿಕೊಟ್ಟರು ಇದು ರಾಯರ ಮಹಿಮೆಯಾದರೆ...
*ವ್ರತಂ ಸತ್ಯಂ, ವಚಃ ಸತ್ಯಮ್....*
ಶ್ರೀಶ್ರೀಸತ್ಯವ್ರತತೀರ್ಥರ ಶ್ರೀಪಾದಂಗಳವರ ಪ್ರತಿ ಮಾತುಗಳೂ ಸತ್ಯವಾಗುತ್ತಿದ್ದವು. ಸಾರ್ಥಕವಾಗುತ್ತಿದ್ದವು. ಅಂತೆಯೇ ಶ್ರೀಮನ್ಯಾಸುಧಾ ಗ್ರಂಥಕ್ಕೆ ಶ್ರೀವಾದಿರಾಜರ ತರುವಾಯ ಮೊಟ್ಟ ಮೊದಲ *ಸುಧಾವಿವೃತಿ* ಎಂಬ ಟಿಪ್ಪಣಿಯು ಹೊರಬಂದಿತು.
*ಆಡುವ ಮಾತುಗಳು ಸಾರ್ಥಕವಾಗಬೇಕಾದಾರೆ ಏನುಮಾಡಬೇಕು...??*
ಯಾವುದೇ ಪದಾರ್ಥ ಶುದ್ದವಾಗಿ ಇದ್ದು ಸಾರ್ಥಕವಾಗಬೇಕಾದರೆ ಆ ಪದಾರ್ಥ ದೇವರಿಗೆ ಸಮರ್ಪಿತವಾಗಿರಬೇಕು. ದೇವರಿಗೋಸ್ಕರ ಮೀಸಲು ಇರಬೇಕು.
ನಮ್ಮ ಪ್ರತಿ ಮಾತು, ವಾಗಿಂದ್ರಿಯ ದೇವರಿಗೋಸ್ಕರ ಮೀಸಲು ಆಗಿ, ದೇವರಿಗೆ ಸಮರ್ಪಿತವಾಗಿದ್ದರೆ ಆ ಮಾತು ಪರಿಶುದ್ಧ ಹಾಗೂ ಸಾರ್ಥಕವಾಗಿಯೇ ಇರುತ್ತದೆ.
*ದೇಹೇಂದ್ರಿಯಃ ಪ್ರಾಣ ಮನಾಂಸಿ ಚೇತನೈಃ ಸಹೈವ ತಸ್ಮೈ ಅತಿಸೃಜ್ಯ ನೇಮುಃ*
ನಮ್ಮ ದೇಹ ಮಾತು ಮೊದಲಾದ ಇಂದ್ರಿಯ ಪ್ರಾಣನಸ್ಸು ಮೊದಲು ಎಲ್ಲವನ್ನೂ ದೇವರಿಗೆ ಸಮರ್ಪಕವಾಗಿ ಸಮರ್ಪಿಸಿದರು ಪಾಂಡವರು ಎಂದು ಮಹಾಭಾರತದಲ್ಲಿ ಕೇಳುತ್ತೇವೆ, ಹಾಗೆಯೇ ಇಂದೂ ನಾವೂ ಸಹ ನಮ್ಮದೇಹ ಇಂದ್ರಿಯ ಮನಸ್ಸು ಮಾತು ಎಲ್ಲವನ್ನೂ ದೇವರಿಗೆ ಸಮರ್ಪಿಸೋಣ. ಏಕೆಂದರೆ ಅವನೇ ನಮ್ಮಮಾತುಗಳಿಗೆ ಸ್ವಾಮಿ, ಪ್ರೇರಕ, ಉದ್ಬೋಧಕ, ಸೃವಸ್ವ... ಅಂತೆಯೇ ಅವನ ಹೆಸರು *ವಾಗಾತ್ಮಾ.* ಬ್ರಹ್ಮದೇವರೂ ಪ್ರಾರ್ಥಿಸುತ್ತಾರೆ *ಮಾರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ* ಎಂದು. ಹೇ ಭಗವನ್ ನೀನ್ನ ಆಜ್ಙಾಪಾಲನೆಗೆ ನಾನು ಸದಾ ಸಿದ್ಧ. ಆದರೆ ವೇದಗಳ ಪಠಣೆ ಕ್ಷಣಕಾಲ ನಿಂತಿರಬಾರದು ಹಾಗೆ ಅನುಗ್ರಹಿಸಿ ಎಂದು. ಬ್ರಹ್ಮದೇವರೇ ಪ್ರಾರ್ಥಿಸಿದಾಗ ನಾವೇಕೆ ಪ್ರಾರ್ಥಿಸಬಾರದು... ನಾವೂ ಪ್ರಾರ್ಥಿಸೋಣ.
ವಾಗಾತ್ಮ ನಾಮಕ ಶ್ರೀಹರಿಗೆ ಉತ್ತಮ ಮಾತುಗಳನ್ನೇ ಪ್ರೇರಿಸು, ಸ್ನೇಹ, ಭಕ್ತಿ, ಪ್ರೇಮ, ಭರವಸೆ, ವಿಶ್ವಾಸ ಇವುಗಳಿಗೆ ಸೇತುವೆಯಾಗುವಂತಹ ನಿನ್ನನ್ನೇ ಕೊಂಡಾಡುವಂತಹ, ನಿನ್ನ ಸಂತೃಪ್ತಿಗೆ ಕಾರಣವಾದ ಮಾತುಗಳನ್ನೇ ಪ್ರೇರಿಸು, ಆಡಿಸು ಎಂದು ಪರಿಪರಿಯಾಗಿ ಪ್ರಾರ್ಥಿಸೋಣ..... ಇಂದಿನ ಕಥಾನಾಯಕರುಗಳಾದ ಶ್ರೀರಾಘವೇಂದ್ರಪ್ರಭುಗಳಿಗೂ ಹಾಗೂ ಶ್ರೀಸತ್ಯವ್ರತತೀರ್ಥರಿಗೂ ಪರಿಪರಿಯಾಗಿ ಪ್ರಾರ್ಥಿಸೋಣ...
*✍🏽✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments