*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ.........
*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ...???*
*ಹುಟ್ಟು ಹಬ್ಬ, ಮದುವೆಯ ದಿನ, ಹೊಸವರ್ಷಾಚರಣೆ, ಹಬ್ಬ ಹರಿದಿನ* ಮೊದಲಾದ ಆಚರಣೆಗಳು ಮಹತ್ವವನ್ನು ಕಳೆದುಕೊಂಡಿವೆಯಾ.....??? ಇದೊಂದು ದೊಡ್ಡ ಪ್ರಶ್ನೆ. ಅನೇಕರಿಗೆ ಕಾಡುವ ಪ್ರಶ್ನೆ.
ಸಣ್ಣ ಸಣ್ಣ ಆಚರಣೆಗಳೂ ಒಂದೊಂದು ಉತ್ತಮ ಫಲಗಳಿಗೋಸ್ಕರವೇ. ಆ ಆಚರಣೆಗಳೆ ಉತ್ತಮ ಉತ್ಕೃಷ್ಟ ಶಾಸ್ತ್ರೋಕ್ತ ರೀತಿಯಲ್ಲಿ ಆಗದಿದ್ದರೆ ಮಹಾ ಅನರ್ಥಕಾರಿಯೂ ಆಗುತ್ತವೆ. ನಿಷ್ಫಲವಂತೂ ಪ್ರತಿಶತಃ ನೂರರಷ್ಟು ನಿಶ್ಚಿತ.
ಹುಟ್ಟು ಹಬ್ಬ, ಮದುವೆಯ ದಿನ, ಉಳಿದ ನಾನಾ ಹಬ್ಬಗಳ ಆಚರಣೆಗಳು ಆಚರಣೆಗಳಾಗಿ ಉಳಿದೆ ಇಲ್ಲ. ಶಾಸ್ತ್ರೋಕ್ತ ರೀತಿಯಲ್ಲೂ ಇರುವದಿಲ್ಲ. ಪಾಶ್ಚಾತ್ಯರ ಅನುಕರಣೆಯೇ ಹೆಚ್ಚಾಗಿರತ್ತೆ. ಈ ಅನುಕರಣೆ ಧಾರ್ಮಿಕರ, ಆಚಾರವಂತರ, ಪಂಡಿತರ, ಮಡಿವಂತರ, ದೊಡ್ಡ ದೊಡ್ಡ ಕುಲವಂತರ ಮನೆಯಲ್ಲಿಯೂ ನಡೆಯುತ್ತವೆ. ತುಂಬ ದುಃಖವಾಗತ್ತೆ, ಬಹಳ ಖೇದವೆನಿಸುತ್ತದೆ. ಪಾಶ್ಚಾತ್ಯರ ಅನುಕರಣೆ ರುಚಿ ಎನಿಸತ್ತೆ, ಈ ಎಲ್ಲರ ಬಲ ಸಿಗತ್ತೆ ಹಾಗಾಗಿ ನಾನೂ ಮುಂದೊರೆಯುತ್ತೇನೆ....
*ಇಂದು ಆಚರಣೆಗಳು ಮಹತ್ವವನ್ನು ಕಳೆದು ಕೊಂಡದ್ದು ಏನಕ್ಕೆ....*
ದೀಪ ಬೆಳಗುವದು ನಮ್ಮ ಸಂಪ್ರದಾಯ. ದೀಪ ಬೆಳಗುವದೇ ನಮ್ಮ ಉಸಿರು. ದೀಪ ಶಾಂತ ಮಾಡುವದು ಬದುಕಿದಾಗ ಇರುವದೇ ಇಲ್ಲ. ಉಸಿರು ನಿಂತ ಮೇಲೆಯೇ ದಿಪ ಆರಿಸುವದು. *ದೀಪ ಶಾಂತ ಮಾಡುವದು ಎಂದರೆ ಸತ್ತನಂತರವೇ. ಅದೂ ಹತ್ತನೇಯ ದಿನ.* ಸತ್ತನಂತರ ಮಾಡುವ ಕಾರ್ಯ ಬದುಕು ಚಿಗುರೊಡೆದು ಹೆಮ್ಮರವಾಗುವ ಅದ್ಭುತ ಪ್ರಸಂಗದಲ್ಲಿ ಆಚರಿಸುವದು ಏನಕ್ಕೆ....... ನಿಜವಾಗಿಯೂ ಇಂದಿಗೂ ಅರ್ಥವಾಗುತ್ತಿಲ್ಲ.
ತಿನ್ನುವ ಎಲ್ಲ ಪದಾರ್ಥಗಳಿಗೂ *ಅನ್ನ* ವೆಂದೆ ಕರೆಯುವದು ಶಾಸ್ತ್ರ. ಅನ್ನ ಕತ್ತರಿಸುವದು ಎಂದರೆ ಯಥಾಪ್ರಕಾರ *ಉಸಿರು ನಿಂತ ಹನ್ನೊಂದನೇಯ ದಿನವೇ.* ಆ ಕ್ರಮವನ್ನೂ ಸಹ ಹುಟ್ಟು ಹಬ್ಬದ ದಿನ ವೈಭವದಿಂದ ಆಚರಿಸುದು. ಹೀಗೆಲ್ಲ *ಶಾಸ್ತ್ರದ ವಿರುದ್ಧ ಸಾಗುವದು ಎಂದರೆ ನಮ್ಮ ಮಕ್ಕಳಭವಿಷ್ಯದ ಚಿಂತನೆ ವಿಚಾರ ಇಲ್ಲದವರೇ.....* ಇದು ಹುಟ್ಟು ಹಬ್ಬದ ದಿನದ ಅವಸ್ಥೆಯಾದರೆ....
*ಮದುವೆ ದಿನ ಮೊದಲಾದ ಉಳಿದ ಆಚರಣೆಗಳ...*
ಹೊಸ ವರ್ಷ, ಮದುವೆಯದಿನ, ಮೊದಲಾದ ಆಚರಣೆಗಳಲ್ಲಿ ಹೊಟೇಲ್ ಗಳಿಗೆ ಹೋಗುವದು, ಹೊರ ಪದಾರ್ಥಗಳನ್ನು ಮನೆಯಲ್ಲಿಯೇ ತರೆಸುವದು ತಿಂದು ಸುಖವನ್ನು ಪರಸ್ಪರ ಹಂಚಿಕೊಳ್ಳುವದು ಇಂದು ನಡದೇ ಇರುತ್ತದೆ. ಆದರೆ.....
*ಅನ್ನ* ದ ಜೊತೆಗೆ ಒಂದೆರಡು ರೂಪಾಯಿ ದಕ್ಷಿಣೆ ಕೊಟ್ಟು ಭೋಜನ ಮಾಡಿಸುವದು ಶಾಸ್ತ್ರ ಸಾರಿದರೆ, ಹಣಕೊಟ್ಟು ಅನ್ನ ತರಿಸಿ ತಿನ್ನುವದೋ, ಹಣ ತೆತ್ತು ಅಲ್ಲಿಯೇ ತಿಂದು ಮೋಜು ಮಜಾ ಮಾಡಿ ಬರುವದೇನಿದೆ ಇದುವೂ ಶಾಸ್ತ್ರ ಸಮ್ಮತವೂ ಅಲ್ಲ, ಶಾಸ್ತ್ರ ವಿರುದ್ದವೂ ಹೌದು. ಹಾಗಾಗಿ ಶಾಸ್ತ್ರವಿರುದ್ಧವಾಗಿ ನಡೆಯುವ ಆಚರಣೆಗಳಿಗೆ ಬೆಲೆ ಇಲ್ಲದಾಗಿದೆ, ಬೆಲೆ ಇಲ್ಲದಂತೆ ನಾವು ಮಾಡಿಬಿಟ್ಟಿದ್ದೇವೆ. ನಮ್ಮಿಂದಲೇ ಶಾಸ್ತ್ರೋಕ್ತ ಆಚರಣೆಗಳಿಗೆ ಬೆಲೆ ಹೋಗುವಂತಾಗಿದೆ..... ಬೆಲೆ ಇಲ್ಕದ ಕಳೆದು ಕೊಂಡ ಆಚರಣೆಗೆ ಫಲ ಶೂನ್ಯ. ವಿಪರೀತವೂ ಆಗಬಹುದು.
ಕದಾಚಿತ್ ವಿಷ್ಣು ವೈಷ್ಣವ ಪ್ರೀತಿ ಅನುಗ್ರಹ ಇವುಗಳಿಗೋಸ್ಕರ ಆಚರಣೆಗಳನ್ನು ಮಾಡದಿದ್ದರೂ ಚಿಂತೆಯಿಲ್ಲ, ಕನಿಷ್ಠ ಮಕ್ಕಳ ಹಾಗೂ ನಮ್ಮ ಭವಿಷ್ಯದ ಸಮೃದ್ಧಿ ಸುಖ ನೆಮ್ಮದಿ ಶಾಂತಿ ಇವುಗಳಿಗೋಸ್ಕರವಾದರೂ (ಸ್ವಾರ್ಥಿಯಾಗಿ ಆದರೂ ಪರವಾಗಿಲ್ಲ) ಶುದ್ಧ ಆಚರಣೆ ಮಾಡಲೇಬೇಕು. ಆ ಆಚರಣೆಗಳ ಮಹತ್ವವನ್ನು ಉಳಿಸಿ, ಪೂರ್ಣ ಫಲ ಪಡೆಯುವಂತಾಗಬೇಕು.
ಧಾರ್ಮಿಕರು, ಹಿರಿಯರು, ವಿದ್ವಾಂಸರು, ಆಚಾರ್ಯರು, ಮಡಿವಂತರು ಮನೆಯ ಮಕ್ಕಳ, ಮೊಮ್ಮಕ್ಕಳ ದಿನಾಚರಣೆಯ ಸಂದರ್ಭಗಳಲ್ಲಿ ಇವುಗಳನ್ನು avoid ಮಾಡಬೇಕು. ತಿರಸ್ಕರಿಸಬೇಕು. ಶುದ್ಧವಿದ್ದರೆ ನಾನು ಬರುವೆ ಎಂದು ಖಡತುಂಡವಾಗಿ ಹೇಳಬೇಕು.
*ಆಚರಣೆಗಳಿಗೆ ಬೆಲೆ ಮಹತ್ವ ಬರುವದು ಹೇಗೆ...???*
ಹುಟ್ಟು ಹಬ್ಬದ ದಿನ ದೀಪ ಆರಿಸುವದು ಬೇಡ. ದೀಪ ಹಚ್ಚೋಣ. ದೇವರ ದೇವಸ್ಥಾನ, ಮನೆಯ ದೇವರ ಮುಂದೆ, ಮಗುವನ್ನು ಕೂಡಿಸಿ, ಸುತ್ತ ದೀಪಗಳನ್ನು ಸಿಂಗರಿಸಿ, ಮುನ್ನೂರಾ ಅರವತ್ತು 360 ದೀಪಗಳನ್ನು ಮಕ್ಕಳಿಂದ ಬೆಳಗಿಸೋಣ. ಈ ವರ್ಷ ಸುಖವಾಗಿ ಇಟ್ಟಿದ್ದಕ್ಕೆ, ಮುಂದಿನ ವರ್ಷ ಸುಖವಾಗಿ ಇಡುವದಕ್ಕೆ ಈ ದೀಪ ದಾನ ಎಂದು ದೇವರ ಮುಂದೆ ಮಕ್ಕಳಿಂದ ಹಚ್ಚಿಸೋಣ, ನಾವೂ ಹಚ್ಚೊಣ. ಇದೊಂದು ಹೊಸ ಹುಮ್ಮಸ್ಸು ತಂದುಕೊಡುವ ಒಂದು ದಿವ್ಯ ವೈಭವವಾಗುತ್ತೆ. ದೀಪ ಬೆಳಗಿಸುವದು ಸಕಾರಾತ್ಮಕ ಮನೋಭಾವನೆಯನ್ನು ಹುಟ್ಟು ಹಾಕುತ್ತದೆ. ದೇವರಿಗೂ ಪ್ರೀತಿ ಎನಿಸುತ್ತದೆ.
ಅನ್ನ ಹಣ ಕೊಟ್ಟು ತರವದು ಬೇಡ, ಹಣ ತೆತ್ತು ತಿನ್ನುವದೂ ಬೇಡ. ಅನ್ನ ಕತ್ತರಿಸುವದಂತೂ ಸರ್ವಥಾ ಬೇಡವೇಬೇಡ. ಹುಟ್ಟು ಹಬ್ಬ, ಹೊಸವರ್ಷ, ಮದುವೆಯ ದಿನ ಈ ದಿನಗಳಲ್ಲಂತೂ ಸರ್ವಥಾ ಬೇಡ.
ಒಬ್ಬ ಯೋಗ್ಯ ಬ್ರಾಹ್ಮಣನಿಗೆ ಅನ್ನದಾನ ಮಾಡೋಣ. ಆ ಬ್ರಾಹ್ಮಣನಲ್ಲಿ ಮುನ್ನೂರಾ ಅರವತ್ತು ದಂಪತಿ ಗಳ ರೂಪದಲ್ಲಿ ಭಗವದ್ರೂಪಗಳೇ ಇವೆ. ದಿನಕೊಬ್ಬ ದಂಪತಿಗಳ ಭೊಜನ ಮಾಡಿಸಿದ ಪುಣ್ಯವಿದೆ. ಎಂದೇ ಭಾವಿಸೋಣ. ಇದರಿಂದ ಪಾಪ ಪರಿಹಾರವಿದೆ, ಉಂಡ ಬ್ರಾಹ್ಮಣ ಸಂತೃಪ್ತನಾಗಿ ಹರಿಸಿದರೆ ಸಕಲ ವೈಭವಗಳೂ ಇವೆ..... ಬ್ರಾಹ್ಮಣನ ನಿಮಿತ್ತ ಮಡಿಯ ಅಡಿಗೆ, ದೇವರ ಪೂಜೆ, ನೈವೇದ್ಯ ಎಲ್ಲ ಆಗತ್ತೆ. ಇಲ್ಲವೊ ದೇವಸ್ಥಾನಗಳಿಗಾದರೂ ಹೋದಂತೆ ಆಗತ್ತೆ.
*ಮೂವತ್ತು ನಿಮಿಷ ವೇದಘೋಷ ಮಾಡಿಸಿ...*
Happye bday 2 u ಅಂತ ಹಾಡುವದಕ್ಕಿಂತಲೂ, ಬ್ರಾಹ್ಮಣರಲ್ಲಿ ಪ್ರಾರ್ಥಿಸಿ ಮಕ್ಕಳ, ನಮ್ಮ ಹಿತಕ್ಕಾಗಿ ಮೂವತ್ತು ನಿಮಿಷ *ವೇದಘೋಷ ಮಾಡಿಸೋಣ* ಅದರ ಪ್ರಭಾವವೇ ಅದ್ಭುತ ವರ್ಣನಾತೀತ. ಅದು ಅನುಭವಿಸಿದವರಿಗೇ ಗೊತ್ತು.
ಒಂದು ದೀಪ, ಒಬ್ಬರಿಗೆ ಅನ್ನದಾನ, ಬ್ರಾಹ್ಮಣರ ವೇದಘೋಷ ನಮ್ಮ ವೈಭವಕ್ಕೆ ನಾಂದಿ. ಪಾಪ ಪರಿಹಾರಕ್ಕೆ ರಹದಾರಿ. ಶುಧ್ಧ ಮನಸ್ಸಿಗೆ ಸಹಾಯಕ. ಈ ತರಹದ ಶಾಸ್ತ್ರೋಕ್ತ ಸಕಾರಾತ್ಮಕ ಆಚರಣೆಗಳನ್ನು ರೂಢಿಸಿಕೊಳ್ಳುವದು ನಮ್ಮ ನಮ್ಮ ಮಕ್ಕಳ ಭವ್ಯ ಜೀವನದ ನಾಂದಿಯಾಗತ್ತೆ. ಸಕಾರಾತ್ಮಕ ವಿಚಾರಗಳೂ ಅಭಿವೃದ್ಧಿಸುತ್ತವೆ. ವಿಷ್ಣು ವೈಷ್ಣವರ ದಿವ್ಯ ಅನುಗ್ರಹವಾಗತ್ತೆ.
ಇವೆರಡು ಕೇವಲ ಉದಾಹರಣೆ ಮಾತ್ರ. ಹೀಗೆ ಎಲ್ಲವನ್ನೂ ಶಾಸ್ತ್ರೋಕ್ತ ರೀತಿಯ ಆಚರಣೆಗಳನ್ನು ಮಾಡುವದರಿಂದ ನಮ್ಮ ಧರ್ಮ ಉಳಿಸಿ ರಕ್ಷಿಸಿದ ಸೌಭಾಗ್ಯದ ವೀರ ಸೈನಿಕರು ನಾವಾಗುತ್ತವೆ. ಮುಂದಿನದು ನಮ್ಮ ವಿಚಾರ...
ಇಂದಿನಿಂದ ಯಾರದೇ ಹುಟ್ಟು ಹಬ್ಬ ಬಂದರೆ *ಮುನ್ನೂರಾ ಆರವತ್ತು ದೀಪಗಳನ್ನು ಬೆಳಗಿಸೋಣ - ಒಬ್ಬ ಬ್ರಾಹ್ಮಣನಿಗಾದರೂ ಉಟಕ್ಕೆ ಹಾಕೋಣ - ಕನಿಷ್ಠ ಮೂವತ್ತು ನಿಮಿಷವಾದರೂ ವೇದೋಕ್ತ ಆಶೀರ್ವಾದಗಳನ್ನು ಮಾಡಿಸೋಣ* ಏನಂತೀರಾ......
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
೯೪೪೯೬೪೪೮೦೮
Comments