*ಔಷಧಾಯ ನಮಃ*
*ಔಷಧಾಯ ನಮಃ*
ವಿಷ್ಣುಸಹಸ್ರನಾಮದಲ್ಲಿಯ ಒಂದು ನಾಮ *ಔಷಧ* ಎಂದು. ಔಷಧ ಎಂಬ ಒಂದು ಭಗವದ್ರೂಪವೂ ಇದೆ. ಆ ಭಗವದ್ ರೂಪ ರೋಗಗ್ರಸ್ತವಾದ ನಮ್ಮ ದೇಹ ಇಂದ್ರಿಯ ಮನಸ್ಸುಗಳಿಗೆ ಬೇಕಾದ ಅವಶ್ಯ ಔಷಧಿಗಳನ್ನು ಒದಗಿಸುತ್ತಾ ನಿರಂತರ ರಕ್ಷಿಸುವ ಒಂದದ್ಭುತ ಭಗವದ್ರೂಪ *ಔಷಧ* ಎಂಬ ರೂಪ.
ರುಜಿನಗಳ ತವರು ನಮ್ಮ ಈ ದೇಹ. ಯಾವ ರೋಗ ಯಾವಾಗ ಬರತ್ತೆ ಗೊತ್ತಿಲ್ಲ. ಯಾವಾಗ ನಮ್ಮ ಶರೀರ ಸೇರಿತೋ ತಿಳಿಯದು. ಸೇರಿದ ರೋಗ ಯಾವಾಗ ಅಪ್ಪಳಿಸುತ್ತದೋ ನಿಜವಾಗಿಯೂ ಅರ್ಥವಾಗದು.
ಹಾರ್ಟ ಅಟ್ಯಾಕ್, ಫಿಡ್ಸ, ಹೈ ಶುಗರ್, ಲೋ ಶುಗರ್, ಹೈ ಬೀಪಿ, ಲೋ ಬೀಪಿ, ಮಹಾಮಾರಿ ಕ್ಯಾನ್ಸರ್ ಇವು ಮೊದಲು ಮಾಡಿ ದೇಹದ ರೋಗಗಳು ಒಂದೆಡೆ ಆದರೆ...
ಇಂದ್ರಿಯರೋಗಗಳು ಅಂತು ಭಯಾನಕ. ಕಂಡದ್ದು ತಿನುವದು, ಉಣ್ಣುವದು, ನೋಡುವದು, ಆಸ್ವಾದಿಸುವದು, ಮೊಟ್ಟುವದು ಇತ್ಯಾದಿ ಇತ್ಯಾದಿ....
ಇವುಗಳೆಲ್ಲದರ ಮೇಲೆ ಮಾನಸಿಕ ರೋಗ ಇದು ಅಂತೂ ಅತ್ಯಂತ ಭಾಯಾನಕ. ಈ ಯಾವ ರೋಗವೂ ಯಾವುದೇ ಕ್ಷಣದಲ್ಲಿಯೂ ನಮ್ಮ ಮೇಲೆ ಧಾಳಿ ಮಾಡಬಹುದು. ದೈಹಿಕ ಪ್ರತಿರೋಗವೂ ಪ್ರಾಣಕ್ಕೆ ನೇರ ಸಂಚಕಾರ ತಂದುಕೊಟ್ಟರೆ, ಐಂದ್ರಿಯಿಕ ಹಾಗೂ ಮಾನಸಿಕ ರೋಗಗಳು ಬದುಕಿದ್ದರೂ ಸತ್ತಂತೆ ನೋಡಿಕೊಳ್ಳುತ್ತವೆ ಅಂತೆಯೇ ದೈಹಿಕ ರೋಗಕ್ಕಿಂತಲೂ ಐಂದ್ರಿಯಕ ಮಾನಸಿಕ ರೋಗಗಳು ಗಂಭೀರ ಹಾಗೂ ಅಪಾಯಕಾರಿ.
ರೋಗಗಳನ್ನು ಸೃಷ್ಟಿಸಿದವ ದೇವರು. ಕೊಟ್ಟವನೂ ದೇವರೇ. ಇಂದು ಮುಂದೊಂದು ದಿನ ಪರಿಹರಿಸುವವನೂ ದೇವರೆ. ತುಂಬ ವಿಚಿತ್ರ ರೋಗ ಮುಂದೆಂದೋ ಬರುವದಿದ್ದರೆ ಇಂದೇ ದೇವರು ನಮಗಾಗಿ *ಔಷಧಿ* ಯನ್ನೂ ಸೃಷ್ಟಿ ಮಾಡಿಟ್ಟಿರುತ್ತಾನೆ. ಅಂತೆಯೆ ನಮಗೆ ಔಷಧಿ ಸಿಕ್ಕು ಬರುತ್ತದೆ. ಇದುವೂ ದೇವರ ಒಂದು ಕರುಣೆಯೇ. ಔಷಧಿಯನ್ನೇ ನಿರ್ಮಿಸದಿದ್ದರೆ ಬದುಕು ತುಂಬ ದುರ್ಭರ ವಾಗುತ್ತಿತ್ತು.
ಮೊನ್ನೆ ಕೊಲ್ಹಾಪುರದಲ್ಲಿ ಇರುವಾಗ, ನನ್ನ ಹಿರಿಯರಾದ ಪಂ. ವರದಾಚಾರ್ಯರು ಒಂದು ಕಥೆ ಹೇಳಿದರು. ಆ ತರಹದ ಪ್ರಸಂಗ ನಮ್ಮೆಲ್ಲರಿಗೂ ಒಂದಿಲ್ಲ ಒಂದು ರೀತಿಯಲ್ಲಿ ಅನುಭವಕ್ಕೆ ಬಂದಿರಲೇಬೇಕು.
ರಾಯಚೂರಿನಿಂದ ಬೆಳಗಾಂ ಗೆ ಬಸ್ಸಿನಲ್ಲಿ ಪ್ರಯಾಣ ನಡೀತಾ ಇದೆ. ಆರಂಭದ ಊರೇ ಸಿರವಾರ. ಪಕ್ಕದ ಸೀಟಿನಲ್ಲಿ ತಂದೆ ಮತ್ತು ಪುಟ್ಟ ಮಗಳು ಮಾತ್ರ ಪ್ರಯಾಣಿಸುತ್ತಿದ್ದಾರೆ. ತಂದೆಗೆ ಫಿಡ್ಸ ಬಂದಿದೆ. ಮಗಳು ಘಾಬರಿಯಾಗಿದ್ದಾಳೆ. ಅನೇಕರದ್ದು ಅಲ್ಲಿಯೇ ಇಳಿಸುವ ವಿಚಾರ ಮಾಡ್ತಿದಾರೆ. ಇನ್ನನೇಕರಿಗೆ ಏನು ಮಾಡಬೇಕೋ ತೋಚುತ್ತಿಲ್ಲ. ಆಗ ಕೊನೆಯ ಸೀಟಿನಲ್ಲಿ ಕುಳಿತ ಒಬ್ಬ ವ್ಯಕ್ತಿ ಬಂದು ಆಗಿಂದಾಗಲೇ ಮಾಡಬೇಕಾದ ಉಪಾಯಗಳನ್ನು ಮಾಡಿ, ಔಷಧ ಒದಗಿಸಿ ಆಪತ್ತಿಗೆ ಒದಗಿದ. ಇದು ನಡೆದ ಕಥೆ.
ಇಪ್ಪತ್ತು ವರ್ಷದ ಕೆಳಗೆ, ಪುಟ್ಟ ಹಳ್ಳಿ ಸಿರವಾರ. ರಾತ್ರಿ ಹತ್ತು ಗಂಟೆಗೆ, ಅದೂ ಬಸ್ಸಿನಲ್ಲಿರುವಾಗ, ಕೂಸು ಮಾತ್ರ ಜೊತೆಗಿದೆ, ಈ ದುರ್ಧರ ಪ್ರಸಂಗದಲ್ಲಿ ಈ ತರಹದೆ ಅವಸ್ಥೆ ಬಂದರೆ ಯಾರಪ್ಪ ಕಾಪಾಡಬೇಕು... ??? ನಮ್ಮೆಲ್ಲರ ಅಪ್ಪ ಔಷಧಿ ಆ ಬಸ್ಸಿನಲ್ಲೆ ಒದಗಿಸಿ ಇಟ್ಟಿದ್ದ. ಇದು *ಔಷಧ ನಾಮಕ ಭಗವಂತನ ದಿವ್ಯ ಕರುಣೆಯಲ್ಲದೆ ಇನ್ನೇನು....* ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂತಹ ನೂರು ಕಥೆಗಳು ನಮಗೆ ಸಾವಿರ ಸಾವಿರ ಜನರಿಂದ ಕೇಳಿಬರತ್ತೆ.
ನಮಗೂ ಯಾವಾಗ, ಎಲ್ಲಿ, ಎಂತಹ ದುರ್ಧರ ಪ್ರಸಂಗದಲ್ಲಿ ಏನಾಗತ್ತೋ ಏನು ಬರತ್ತೋ ಗೊತ್ತಿಲ್ಲ. ಆದ್ದರಿಂದ ಕಾಲ ಕಾಲಕ್ಕೆ ನೆನಪು ಆದಾಗಲೆಲ್ಲ *ಅಚ್ಯುತಾಯನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ಅಚ್ಯುತಾನಂತ ಗೋವಿಂದೇಭ್ಯೋ ನಮೋನಮಃ* ಎಂದು ಸ್ಮರಿಸುತ್ತಿರೋಣ. ತ್ರಿವಿಧ ರೋಗನಾಶಕ ದಿವ್ಯ ಮಂತ್ರ ಎಂದು ಶ್ರೀಮದಾಚಾರ್ಯರೇ ಹೇಳುತ್ತಾರೆ.
ನಿತ್ಯ ಪೂಜೆ ಮಾಡುವಾಗ ದೇವರನ್ನು ಪ್ರತಿಮೆಯಲ್ಲಿ ಆವಾಹನ ಮಾಡುತ್ತಿರುವಾಗ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತೇವೆ. ಏಕೆಂದರೆ ಎಲ್ಲ ಸಮಸ್ಯೆಗಳಿಗೂ ಉಪಾಯವಿದೆ ವಿಷ್ಣು ಸಹಸ್ರನಾಮದಲ್ಲಿ. *ಔ಼ಧಾಯನಮಃ* ಎಂದು ಸಕಲ ರೋಗಗಳಿಗೂ ಔಷಧಿರೂಪನಾದ ಭಗವಂತನನ್ನೂ ಆವಾಹನೆ ಮಾಡಿದ ದೇವನಲ್ಲಿ ಈ ಗುಣವನ್ನು ಚಿಂತಿಸುತ್ತಾ ಪೂಜೆ ಮಾಡೋಣ.
ನಾನು, ನನ್ನ ತಂದೆ ತಾಯಿ ಗುರು, ಕುಟುಂಬ, ಮಕ್ಕಳು, ಆತ್ಮೀಯರು, ಗೆಳೆಯರು, ಸಮಾಜ, ಸೈನಿಕರು, ವಿಷ್ಣುಭಕ್ತರು ಯಾರಿಗೂ ಯಾವ ತರಹದ ಆಪತ್ತುಗಳೂ ಬರಬಾರದು. ಯಾವ ರೋಗಗಳೂ ಬರಲೇ ಬಾರದು. ಬಂದರೂ ಅತ್ಯಂತ ಕಡಿಮೆಯ ಉಪದ್ರವ ಕೊಡುವದರಲ್ಲಿಯೇ ಪರಿಹಾರವಾಗಲೇಬೇಕು. ಆದ್ದರಿಂದ ಇಂದಿನಿಂದ ನಿತ್ಯ ಚಿಂತಿಸೋಣ. ಸ್ಮರಿಸೋಣ.
*ಔಷಧಾಯ ನಮಃ*
*ಔಷಧಾಯ ನಮಃ*
*ಔಷಧಾಯ ನಮಃ*
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments