*ಭಕ್ತರಿಗೆ ಆಪತ್ತುಗಳು ಬರುವ ಮುಂಚೆಯೇ, ಪರಿಹಾರದ ಉಪಾಯಗಳನ್ನು ಒದಗಿಸಿರುತ್ತಾನೆ.......*
*ಭಕ್ತರಿಗೆ ಆಪತ್ತುಗಳು ಬರುವ ಮುಂಚೆಯೇ, ಪರಿಹಾರದ ಉಪಾಯಗಳನ್ನು ಒದಗಿಸಿರುತ್ತಾನೆ.......*
ಮಾನವ ಜನುಮದಲ್ಲಿ ಆಪತ್ತುಗಳು ಬಂದೇ ಬರುತ್ತವೆ. ಕೆಲವರಿಗೆ ಆಪತ್ತುಗಳು ಬಂದದ್ದೇ ಗೊತ್ತಾಗಲ್ಲ, ಕೆಲವರಿಗೆ ಆಪತ್ತುಗಳು ತಿಳಿದು ಬರುತ್ತವೆ, ಮತ್ತೆ ಕೆಲವರು ಮಾತ್ರ ಬಂದ ಆಪತ್ತುಗಳಿಂದ ಮುಕ್ತರಾಗುತ್ತಾರೆ, ಆದರೆ ಇನ್ನು *ಕೇವಲ ಕೆಲವೇ ಜನರಿಗೆ ಮಾತ್ರ ಆಪತ್ತುಗಳು ಬರುವ ಪೂರ್ವದಲ್ಲಿಯೇ ಪರಿಹಾರದ ಉಪಾಯಗಳನ್ನು ದೇವ ತಾ ಒದಗಿಸಿಕೊಟ್ಟಿರುತ್ತಾನೆ.*
ಆ ಕೆಲವೇ ಕೆಲವು ಜನರು ಯಾರು... ??
ಆಪತ್ತುಗಳು ಬರುವ ಪೂರ್ವದಲ್ಲಿಯೇ ಆಪತ್ತುಗಳ ಪರಿಹಾರವನ್ನೇ ಮಾಡಿಕೊಂಡಂತಹ ಮಹಾತ್ಮರು ಯಾರು.. ?? ಅಂತಹವರು ಇದ್ದಾರೆಯಾ ?? ಅಂದರೆ ಖಂಡಿತಾ ಇದ್ದಾರೆ ಎಂದು ಶಾಸ್ತ್ರ ಸರಾಗವಾಗಿಯೇ ಹೇಳುತ್ತದೆ.
ನಿರಂತರ ವಿಷ್ಣುವಿನ ಗಾಢವಾದ ಪೂಜೆ ಸಲ್ಲಿಸುತ್ತಾ, ವಿಷ್ಣುವಿನ ಗುಣಗಾನ ಮಾಡುತ್ತಾ, ವೈಷ್ಣವರಲ್ಲಿ ಪ್ರೀತಿಸುತ್ತಾ, ಯಾವ ಮಹಾನ್ ವಿಷ್ಣು ಭಕ್ತರು ಇದ್ದಾರೆಯೋ ಅಂತಹವರಿಗೆ ಆಪತ್ತುಗಳು ಬರುವ ಪೂರ್ವದಲ್ಲಿಯೇ ಆಪತ್ತುಗಳ ಪರಿಹಾರ ದೊರಕಿ ಬಂದೊದಗಿರುತ್ತದೆ.
ಉದಾಹರೆಣೆಗೆ ಒಂದು ಕಥೆ...
ಮಹಾ ಪರಾಕ್ರಮಿ, ಧಾರ್ಮಿಕ, ವಿಷ್ಣು ಭಕ್ತ, ಗುಣವಂತ, ತತ್ವಜ್ಙಾನಿ ವೇದವ್ಯಾಸರ ಪುತ್ರನಾದ ಪಾಂಡುರಾಜ ಕುಂತಿ ಮತ್ತು ಮಾದ್ರಿಯರ ಜೊತೆಗೆ ಅತ್ಯಂತ ವೈಭವದಿಂದ ಯಾಜ್ಯವಾಳುತ್ತಾ ಇರುತ್ತಾನೆ. ಒಂದು ದಿನ ಬೇಟೆಗೆ ತೆರಳಿದಾಗ, ದೈವ ವಶಾತ್ ಒಂದು ಜಿಂಕೆಯನ್ನು ಬೆಟೆಯಾಡುತ್ತಾನೆ.
ಕಿಂದಮ ಋಷಿಗಳು ತಮ್ಮ ಮಡದಿಯೊಂದಿಗೆ ಜಿಂಕೆಯ ರೂಪದಲ್ಲಿ ವಿಹಾರ ಮಾಡುತ್ತಿರುವಾಗ, ತಿಳಿಯದೇ ಜಿಂಕೆಗೆ ಬಾಣ ಹೂಡುತ್ತಾನೆ, ಹೆಣ್ಣು ಜಿಂಕೆ ಕ್ಷಣದಲ್ಲಿಯೇ ಪ್ರಾಣಬಿಡುತ್ತದೆ. ಕ್ರುದ್ಧರಾದ ಕಿಂದಮ ಋಷಿಗಳು ಪಾಂಡುರಾಜನಿಗೆ "ನಿನ್ನ ಪತ್ನಿಯರ ಜೊತೆಗೆ ನೀನಿರುವಾಗಲೇ ನಿನಗೆ ಮರಣ ಬರತ್ತೆ" ಎಂದು ಘೋರವಾದ ಶಾಪವನ್ನೇ ಕೊಡುತ್ತಾರೆ. ಹೀಗಾಗಿ ಪಾಂಡು ರಾಜನಿಗೆ ಮಕ್ಕಳು ಆಗುವ ಪ್ರಸಂಗವೇ ಇರುವದಿಲ್ಲ. ಇದುವೇ ಅತ್ಯಂತ ಘೋರವಾದ ಆಪತ್ತು.
ಭಕ್ತರ ಆಪತ್ಪರಿಹಾರಕ ದೇವ ಯಾವ ರೂಪದಿಂದ ಯಾವಾಗ ಹೇಗೆ ಆಪತ್ತುಗಳನ್ನು ಪರಿಹರಿಸುತ್ತಾನೋ ಗೊತ್ತೇ ಆಗುವದಿಲ್ಲ.
ರಾಜ್ಯ ಭೋಗ ತ್ಯಜಿಸಿ, ವಿರಕ್ತನಾದ ಪಾಂಡುರಾಜ ಕುಂತಿ ಮತ್ತು ಮಾದ್ರಿಯರೊಂದಿಗೆ ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡುತ್ತಾ ಜೀವನ ಸಾಗಿಸುತ್ತಾರುತ್ತಾನೆ. ಒಂದು ದಿನ ಅಲ್ಲಿರುವ ತ್ರಿಕಾಲ ಜ್ಙಾನಿಗಳಾದ ಋಷಿಗಳು ಪಾಂಡುರಾಜನಿಗೆ ತಿಳಿಸುತ್ತಾರೆ ನಿನಗೆ ಸಂತಾನಗಳು ಕೆಲ ದಿನಗಳಲ್ಲಿಯೇ ಆಗಲಿವೆ ಎಂದು. ಕಿಂದಮರ ಶಾಪದಂತೆ ಸಂತಾನ ಆಗುವದಿಲ್ಲವೊ, ಈ ಋಷಿಗಳ ಮಾತಿನಂತೆ ಸಂತಾನವಾಗುತ್ತದೆಯೋ ಎಂಬ ಗೊಂದಲದಲ್ಲಿ ಸಿಕ್ಕು ಬಿದ್ದ ಪಾಂಡುರಾಜ ಸ್ವಲ್ಪ ತಡವರಿಸಿ ಕುಂತಿಯ ಮುಂದೆ ಈ ವಿಷಯವನ್ನು ಉಸುರಿಸಿದ.
ಧಾರ್ಮಿಕೊತ್ತಮಳಾದ, ಶೀಲವಂತಳಾದ, ಪತಿವ್ರತೆಯಾದ ಕುಂತಿ ಒಂದು ಸುಂದರ ಕಥೆ ಹೇಳುತ್ತಾಳೆ. ಹಿಂದೆ ನಾನು ಸಣದಣವಳಿರುವಾಗ ನಮ್ಮಮನೆಗೆ ದೂರ್ವಾಸರು ಚಾತುರ್ಮಾಸ್ಯಕ್ಕಾಗಿ ಬಂದರು. ಅವರ ನಿರಂತರ ಸೇವೆಯ ಪರಿಪೂರ್ಣ ಜವಾಬ್ದಾರಿ ಚಿಕ್ಕವಳಾದ ನನ್ನ ಹೆಗಲಿಗೆ ಇತ್ತು.
ಕೋಪಿಷ್ಠರಾದ, ಜ್ನಮಾನಿಗಳೂ ಆದ, ಮುಂದಿನ ಎಲ್ಲ ಆಗುಹೋಗುಗಳನ್ನು ಸ್ಪಷ್ಟವಾಗಿ ತಿಳಿದ ದೂರ್ವಾಸರ ಸೇವೆಯನ್ನು ಅಚ್ಚುಕಟ್ಟಾಗಿ ನಾನು ನೆರವೇರಿಸಿದೆ. ಸಂತುಷ್ಟರಾದ ದೂರ್ವಾಸರು ನನಗೆ ಒಂದು ಅತ್ಯದ್ಭುತವಾದ *ದೇವತೆಯ ಸ್ಮರಣೆ ಮಾಡಿ, ಮಂತ್ರೋಚ್ಚಾರಣೆ ಮಾಡುದ ಮಾತ್ರಕ್ಕೆ ಉತ್ಕೃಷ್ಟ ಸಂತಾನವಾಗುವ* ಮಂತ್ರವನ್ನು ದಯಪಾಲಿಸಿದ್ದಾರೆ ಎಂದು. ಮುಂದೆ ಆ ಮತ್ರಗಳ ಪ್ರಭಾವದಿಂದಲೇ ಐದು ಜನ ಪಾಂಡವರನ್ನು ಕುಂತಿ ಮತ್ತು ಮಾದ್ರಿಯರು ಪಡೆಯುತ್ತಾರೆ.
ಈ ಕಥೆಯನ್ನು ನಿನ್ನೆಯ ವಾಯು ಮಹಿಮಾ ಉಪನ್ಯಾಸದಲ್ಲಿ ಹೇಳುತ್ತಿರುವಾಗ ಅನಿಸಿತು, ಭಕ್ತರಿಗೆ ಆಪತ್ತುಗಳು ಬರುವದಿದೆ ಎಂದು ತಿಳಿದ ದೇವ ಪಾಮಡು ಚಿಕ್ಕವನಿರುವಾಗಲೇ ಕುಂತಿಗೆ ಆಪತ್ತಿನ ಪರಿಹಾರ ರೂಪವಾದ ಮಂತ್ರೋಪದೇಶ ದೂರ್ವಾಸರಿಂದ ಮಾಡಿಸಿ ಆಪತ್ತು ಪರಿಹರಿಸಿದ್ದ. ಇದುವೇ ಭಕ್ತರ ದಿವ್ಯ ಮಹಿಮೆ.
ಈ ಕಥೆಯನ್ನು ಹೇಳುತ್ತಿರುವಾಗ, ದೇವರ ಕರುಣೆ ನೆನೆದಾಗ ನಾವ್ಯಾಕೆ ದೇವರಲ್ಲಿ ನಿತರಾಂ ಭಕ್ತಿ ಮಾಡಬಾರದು.. ?? ಎಂಬ ಹುಳ ನನ್ನ ಮನಸದಸಿನಲ್ಲಂತೂ ಸುಳಿದಾಡುತ್ತಿದೆ.
ನಮ್ಮೆಲ್ಲರ ಕುಲದ ಹೆದ್ದೈವನಾದ, ತಿರುಪತಿಯ ಶ್ರೀನಿವಾಸನ ದಿವ್ಯ ಸನ್ನಿಧಿಯಲ್ಲಿ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕುತ್ತಿರುವಾಗ ಒಂದು ಹಾಡೂ ಸುಳಿಯಿತಿ *ಇಂದು ನಿನ್ನ ಮೊರೆಯಹೊಕ್ಕೆ ವೇಂಕಟೇಶನೆ..!! ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ...* ಎಂದು. ಭಕ್ತನನ್ನಾಗಿ ಮಾಡಿಕೊ, ಭಕ್ತಿ ಬೆಳೆಯಲೋಸುಗ ಮಹಾಭಾರತ, ಭಾಗವತ ಸರ್ವಮೂಲಗಳ ನಿರಂತರ ಅಧ್ಯಯನ ಪಾಠಪ್ರವಚನ ಮಾಡಿಸು ಎಂದು ಇಂದು ನಿನ್ನ ಮೊರೆಯ ಬಂದೆ,ನೀನು ಎಂದಾದರೂ ಸಲಹು. ಆಪತ್ತುಗಳ ಸುಳಿಗಳಿಂದ ರಕ್ಷಿಸು ಪಾರುಗಾಣಿಸು...
*✍🏽✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments