*ಅಮೃತ*
*ಅಮೃತ*
"ಜ್ಙಾನವಿಲ್ಲದೇ ಮೋಕ್ಷವಿಲ್ಲ" ಮೋಕ್ಷವಿದೆ ಅಂತಾದಮೇಲೆ ಮರಣವಿಲ್ಲ. ಮರಣವೇ ಬಾರದಂತಹ ಮೋಕ್ಷಕ್ಕಾಗಿ ಜ್ಙಾನ ಆವಶ್ಯಕ. ಮೊಕ್ಷ ಕೊಡುವವ ದೇವರು ಆದರೆ, ಆ ದೇವರ ಅನುಜ್ಙೆಯಿಂದ "ವಾಯುಶ್ಚ ತದನುಜ್ಙಯಾ" ಮೋಕ್ಷ ಕೊಡುವವರೂ ವಾಯುದೇವರೂ ಆಗಿದ್ದಾರೆ ಆದ್ದರಿಂದ ಅವರ ಅನುಗ್ರಹವೂ ಅತಿ ಆವಶ್ಯಕ.
*ಅಮೃತ*
ಸ್ವಯಂ ನಿತ್ಯ ಜ್ಙಾನ ಸ್ವರೂಪರಾದ ವಾಯುದೇವರು "ಅತಿರೋಹಿತ ವಿಜ್ಙಾನಾತ್ ವಾಯುರಪ್ಯಮೃತಃ ಸ್ಮೃತಃ" ಎಂಬ ಉಪನಿಷದ್ವಾಣಿಯಂತೆ ವಾಯುದೇವರೂ "ಅಮೃತ" ಎಂಬ ಶಬ್ದದಿಂದ ವಾಚ್ಯರಾಗಿದ್ದಾರೆ .
ವಾಯುದೇವರ ಜ್ಙಾನ ಅಪಾರ. ಯಾಕೆಂದರೆ ವಾಯುದೇವರು ದೇವರನ್ನು *ಜ್ಙಾನಪೂರ್ಣ* ಎಂದು ನಿರಂತರ ಚಿಂತಿಸಿದ್ದಾರೆ, ಚಿಂತನೆ ಮಾಡುತ್ತಿದ್ದಾರೆ ಆದ್ದರಿಂದ, ದೇವರ ಪ್ರತಿಬಿಂಬರಾದ ವಾಯುದೇವರಲ್ಲಿ ದೇವರ ಲಕ್ಷ್ಮೀದೇವಿಯ ತರುವಾಯ ಅಪಾರಮಟ್ಟದ ಜ್ಙಾನವಿದೆ. ಒಂದರ್ಥದಲ್ಲಿ ವಾಯುದೇವರನ್ನು ಜ್ಙಾಪೂರ್ಣರು ಎಂದು ಕರಿಯಬಹುದು. ಗರುಡ ರುದ್ರ ಶೇಷ ಇಂದ್ರ ಇವರೇ ಮೊದಲಾದ ಸಮಗ್ರ ದೇವತಗಳಿಗಿಂತಲೂ ಅಪಾರಮಟ್ಟದ ಜ್ಙಾನ ವಾಯುದೇವರಲ್ಲಿ ಇದೆ.
ಅನಂತ ವೇದ, ಶತಕೋಟಿ ರಾಮಾಯಣ, ಶತಕೋಟಿ ಪುರಾಣ, ಮಹಾಭಾರತ, ಪಂಚರಾತ್ರ, ಮುಂತಾದ ಎಲ್ಲ ಪೌರುಷೇಯ ಅಪೌರುಷೇಯ ಗ್ರಂಥಗಳ ನಿರತಿಶಯ ಸ್ಪಷ್ಟ ಜ್ಙಾನ ವಾಯು ದೇವರಿಗೆ ಸರ್ವಥಾ ಸರ್ವಕಾಲದಲ್ಲಿಯೂ ಇದೆ. ಅನಂತ ವಿಜ್ಙಾನ, ಅನಂತಾನಂತ ಜೀವರಾಶಿಗಳ ಅನಂತ ಕರ್ಮಗಳ ಜ್ಙಾನ, ಸಂಪೂರ್ಣ ಬ್ರಹ್ಮಾಂಡದ ಸೃಷ್ಟಿ ಸ್ಥಿತಿಗಳ ಜ್ಙಾನ ಸ್ಪಷ್ಟವಾಗಿದೆ. ವಿಚಿತ್ರವೆಂದರೆ ಈ ಯಾವ ಜ್ಙಾನವೂ ಎಂದೆಂದಿಗೂ ಯಾವಕಾಲಕ್ಕೂ ತಿರೋಹಿತವಾಗುವದಿಲ್ಲ, ಅಂದರೆ ಮರೆತರೂ ಎಂದಾಗುವದೇ ಇಲ್ಲ.
ಪ್ರಲಯ ಜಲಧಿಯಲ್ಕಿ ದೇವರು ಎಲ್ಲ ಜೀವರಾಶಿಗಳನ್ನು ತನ್ನ ಉದರದಲ್ಲಿ ಸೇರಿಸಿಕೊಳ್ಳುತ್ತಾನೆ. ಆ ಪ್ರಸಂಗದಲ್ಲಿಯೂ ವಾಯುದೇವರು ಜೀವರಂತೆ, ದೇವರ ಉದರದಲ್ಲಿ ಇರುತ್ತಾರೆ. ಅನಂತ ಜೀವರು ನಿದ್ರೆಗೆ ಜಾರಿದರೆ, ವಾಯುದೇವರು ಮಾತ್ರ ಜಾಗರಿತರಾಗಿದ್ದು, ಆ ಯಾವ ಜ್ಙಾನದ ತಿರೋಧಾನವಿಲ್ಲದೇ, ನಿರಂತರ ಚಿಂತಿಸುತ್ತಾರೆ ಆದ್ದರಿಂದಲೇ ವಾಯುದೇವರು "ಅಮೃತ" ಎಂದು ಉಪನಿಷತ್ತು ಕರೆಯುತ್ತದೆ.
ನಮಗೆ ಜ್ಙಾನ ಬೇಕು ಎಂದಾಗಿದ್ದರೆ *ಅಧ್ಯಾತ್ಮ ಜ್ಙಾನನೇತಾ* ಎಂದು ಹೇಳಿದಂತೆ ಅಧ್ಯಾತ್ಮ ವಿದ್ಯೆಗೆ ನಿಯಾಮಕರಾದ, ಸ್ವಯಂ ಜ್ಙಾನ ಸ್ವರೂಪರಾದ, ಭಗವಜ್ಜ್ಙಾನದ ಮರೆವು ಎಂದಿಗೂ ಇಲ್ಲದ ಅಂತೆಯೇ *ಅಮೃತ* ನಾಮಕ ವಾಯುದೇವರ ಪ್ರತಿಬಿಂಬರಾಗಿ ಬಾಳಿದಾಗ ಮಾತ್ರ ಜ್ಙಾನ ಅಭಿವೃದ್ಧಿಸುತ್ತದೆ. *ವಾಯುದೇವರನ್ನು ಜ್ಙಾನಪೂರ್ಣರು* ಎಂದು ಚಿಂತಿಸುವದರಿಂದ, ವಾಯುದೇವರ ಪ್ರತಿಬಿಂಬರಾದ ನಾವೂ ಜ್ಙಾನಪೂರ್ಣರು ಆಗಬಹುದು. ಆದ್ದರಿಂದ ಇಂದಿನಿಂದ ಜ್ಙಾನ ಸ್ವರೂಪರಾದ, ಜ್ಙಾನದ ಗಣಿಗಳಂತೆ ಇರುವ, *ಅಮೃತ* ಎಂದೇ ಪ್ರಸಿದ್ಧರಾದ ವಾಯುದೇವರ ಚಿಂತನೆ ಧ್ಯಾನ ಪೂಜೆ ಆರಾಧನೆ ಪಾರಾಯಣ ಪ್ರದಕ್ಷಿಣೆ ನಮಸ್ಜಾರ ಇತ್ಯಾದಿರೂಪ ಸೇವೆಯನ್ನು ಆರಂಭಿಸೋಣ. ಆ ವಾಯುದೇವರ ಅನುಗ್ರಹ ಸಂಪಾದಿಸಿಕೊಳ್ಳೋಣ.
ವಾಯುದೇವರ ಅನುಗ್ರಹದಿಂದಲೇ ಎಂದೂ ಸಾಯದ, ಮರೆಯದ, ಹಾಗೂ ಮೋಕ್ಷಾದಿಗಳನ್ನು ಕೊಡುವ ಪರಿಶುದ್ಧ ಜ್ಙಾನ ಸಂಪಾದಿಸಿಕೊಳ್ಳೋಣ.......
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments