*ಇಂದು....*
*ಇಂದು.....*
ಶತ್ರು - ಮಿತ್ರರುಗಳು ಇರುವ ದಿನಗಳು ಇಂದಿಗೂ ಇವೆ. ಹಿಂದೆಯೂ ಇತ್ತು. ಮುಂದೂ ಇರುವವು. ಶತ್ರು - ಮಿತ್ರರು ಇಂದೂ ಇದ್ದಾರೆ. ಹಿಂದೂ ಇದ್ದರು. ಮುಂದೂ ಇರುವವರೇ. ಆದರೆ ಇಂದಿನ ದುಃಸ್ಥಿತಿ ಅಂತೂ ತುಂಬ ಘೋರ.
ಶತ್ರು ವಿನಾಶನಾಗಬೇಕು ಇದು ಎಲ್ಲರ ಬಯಕೆ. ಮಿತ್ರರ ಪಡೆ ಬೆಳೆಯಬೇಕು ಇದು ಒಂದು ಶ್ರೇಷ್ಠ ವಿಚಾರ. ಆದರೆ *ಇಂದು ಶತ್ರುಗಳು ಯಾರು.. ?? ಮಿತ್ರರು ಯಾರು ..?? ಎಂದು ತಿಳಿಯುವದರಲ್ಲೇ ಅನುತ್ತೀರ್ಣರಾಗುತ್ತಿರುವ ಮಾನವರಿಗೆ ಯಾರ ವಿನಾಶ ಬಯಸಬೇಕು... ಯಾರ ಮಿತ್ರತೆಯನ್ನು ಸಂಪಾದಿಸಿಕೊಳ್ಳಬೇಕು ಎನ್ನುವದೇ ತಿಳಿಯದಾಗಿದೆ.
*ವಿಷಾದ ಸ್ಥಿತಿ*
"ನಮಗೆ ಶತ್ರುಗಳ ವಿನಾಶ ಆಗಬೇಕು ಎನ್ನುವ ಬಗ್ಗೆ ಇರುವ ಆಸೆ ಆಕಾಂಕ್ಷೆ, ನಮ್ಮ ಸ್ನೇಹಿತರ ಅಭ್ಯುದಯ ಆಗಬೇಕು ಎನ್ನುವ ಬಗೆಗೆ ಇಲ್ಲವೇ ಇಲ್ಲ" ಇದು ಅತ್ಯಂತ ವಿಷಾದನೀಯ ಸ್ಥಿತಿ ಇಂದು ಒದಗಿದೆ. ದ್ವೇಶಮಾಡಲೇ ಬೇಕಾದ ಶತ್ರುಗಳ ಮೇಲಿನ ದ್ವೇಶಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಮಿತ್ರರನ್ನು ದ್ವೇಶಿಸುತ್ತಾನೆ ಇದು ಅಂತೂ ತುಂಬ ಘೋರ. ಆ ಮಿತ್ರರನ್ನು ದ್ವೇಶಿಸಲೇ ತನ್ನ ಬುದ್ಧಿ, ಸಂಪತ್ತು, ಶಕ್ತಿಗಳನ್ನು ಉಪಯೋಗಿಸುತ್ತಾನೆ.
ಶತ್ರುಗಳ ಮಾತುಗಳನ್ನು ನಂಬುತ್ತಾನೆಯೊ ಇಲ್ಲವೋ, ಕದಾಚಿತ್ ನಂಬಲೂ ಬಹುದು. ಆದರೆ ಮಿತ್ರರ ಮಾತನ್ನು ಎಂದಿಗೂ ನಂಬಲಾರ. ಮಿತ್ರರ ಉನ್ನತಿಯನ್ನು ಸಹಿಸಲಾರ. *ಮಿತ್ರರನ್ನು ತುಳಿದು, ಶತ್ರುವನ್ನು ಬೆಳಿಸುವ ಹುನ್ನಾರ ಗೊತ್ತಿಲ್ಲದೇ ಜರುಗಿ ಹೋಗಿರುತ್ತದೆ* ಅಂತೆಯೇ ಇಂದು ಯಾರಿಗೂ ಯಾವ ಮಿತ್ರನೂ ಸ್ಥಿರನಾಗಿ ಉಳಿಯಲಾಗದ ಸ್ಥಿತಿ ಬಂದೊದಗಿದೆ.
*ಇದಕ್ಕೆನು ಕಾರಣ....*
ಈ ತರಹದ ದುಃಸ್ಥಿತಿ ಬರಲು ನೂರು ಕಾರಣಗಳಿವೆ. ಅದರಲ್ಲಿ ಒಂದು ಸುಂದರ ಕಾರಣ *ಅತಿ ಬೆಲೆ ಬಾಳುವ ದಯೆ, ಕರುಣೆ, ಆತ್ಮಸಂಯಮ, ನಿಃಸ್ವಾರ್ಥತೆ, ನಿಸ್ಪೃಹತೆ, ಪರೋಪಕಾರ ಈ ತರಹದ ಬುದ್ಧಿಯನ್ನು ಬೆಳಿಸಿಕೊಳ್ಳದೇ, ಸ್ವಾರ್ಥ ಪರರಾಗಿರುವದು ಒಂದಾದರೆ, ಜಗತ್ತಿನಲ್ಲಿ ಒಂದು ಕಾಸಿನ ಬೆಲೆಯೂ ಇಲ್ಲದ ಅಹಂಕಾರವನ್ನು ಲಾಲಿಸಿ ಸಾಕಿ ಸಲುಹಿರುವದೂ ಒಂದು ಮೂಲ ಎಂದೆನಿಸುತ್ತದೆ.*
ಸ್ವಾರ್ಥ ತನ್ನ ಹಿತ ಬಯಸುತ್ತದೆ. ಅಹಂಕಾರ ಪರರನ್ನಿ ತುಳಿಯ ಬಯಸುತ್ತದೆ. ಶತ್ರುವನ್ನು ತುಳಿಯಲಾಗದು. ಶತ್ರುವನ್ನು ಎದುರಿಸುವ ಧೈರ್ಯವೂ ಇರದು. ಎಲ್ಲಿ ಸೋತು ಹೋಗುತ್ತೆನೆಯೋ ಎಂಬ ಹೆದುರೆಕೆಯೂ ಕಾಡುತ್ತಿರುತ್ತದೆ. ಹಾಗಾಗಿ ಶತ್ರುವನ್ನು ತುಳಿದು ಸ್ವಾರ್ಥ ಸಿದ್ಧಿಸಿಕೊಳ್ಳುವದು ತುಂಬ ಕಠಿಣ..... ಆದರೆ...
ಸ್ವಾರ್ಥ ಸಿದ್ದಿಗಾಗಿ ನಂಬಿದ ಮಿತ್ರನನ್ನು ಸಂಶಯಿಸುವದು, ನಿಂದಿಸುವದು, ಬಯ್ಯುವದು, ಏಳಿಗೆ ಸಹಿಸದೆ ತುಳಿಯುವದು, ಎಲ್ಲವೂ ಸಹಜವಾಗುತ್ತದೆ. ಅಂತೆಯೇ ಆ ಮಾರ್ಗ ಸಹಜವಾಗಿ ಪಡೆಯಬಹುದೆಂದು ಯೋಚನೆ..... *ಇದುವೇ ಇಂದಿನ ಅತಿದೊಡ್ಡ ರಾಜಕಾರಣ* ಎಂದರೆ ತಪ್ಪಾಗಲಿಕ್ಕಿಲ್ಲ ಏನೋ. ಸ್ವಲ್ಪ ಹಿಂತುರುಗಿ ಯೋಚಿಸಿದರೆ, ಮಿತ್ರರ ಮೇಲಿನ ದೌರ್ಜನ್ಯವೇ ಹೆಚ್ಚು ಕಾಣುತ್ತದೆ. ಜೊತೆಗೆ ಶತ್ರುಗಳನ್ನು ಅಪ್ಪಿಕೊಳ್ಳುವದೂ ಒಂದು...
ನಮ್ಮನ್ನು ತುಳಿಯುವ ಪದಾರ್ಥಗಳಾದ ಮೊಬೈಲ್, ಟೀವಿ, ಧಾರವಾಹಿ, ಫಿಲ್ಮ, ಕ್ರಿಕೆಟ್ ಇಂತಹ ನಾನಾ ಪದಾರ್ಥಗಳನ್ನು ಎಷ್ಟು ಪ್ರೀತಿಸುತ್ತೇವೆ ಅಷ್ಟು ನಮ್ಮ ಹಿತೈಷಿಗಳಾದ ದೇವರು ಧರ್ಮ ಕರ್ಮ ಜ್ಙಾನ ಭಕ್ತಿ ಸ್ನೇಹಿತ ಇವರುಗಳನ್ನು ಪ್ರೀತಿಸುವದಿಲ್ಲ. ಪ್ರೀತಿಸದೇ ಇದ್ದರೆ ಅನರ್ಥವೇನಿರಲಿಲ್ಲ. ಆದರೆ ತುಂಬ ದ್ವೇಶಿಸುತ್ತೇನೆ. ಈ ತರಹದ ದಿನಗಳು ಕಳೆದು ಮಿತ್ರರನ್ನೇ ಪ್ರೀತಿಸುವ ದಿನಗಳು ಇಂದು ಬರಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ...... *ಇದುವೇ ಇದಿನ ಸ್ಥಿತಿ...*
ಮಿತ್ರನಿಗೆ ಎಷ್ಟು ಸಹಜವಾಗಿ ಬಟ್ಟು ತೋರಿಸಬಹುದೋ ಅಷ್ಟು ಅನಾಯಾಸೇನ ಶತ್ರುವಿಗೆ ತೋರಿಸಲಾಗಲ್ಲ. ಅಂತೆಯೇ ಶತ್ರುಗಳ ತಂಟೆಗೆ ಹೋಗದೆ ಮಿತ್ರರುಗಳ ಮೆಲೇಯೇ ರುಬಾಬು ಮಾಡವಂತಹ ಸ್ಥಿತಿ ಇಂದು ಕಳೆಯಬೇಕಾಗಿದೆ....
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments