*ಯೋಗ - ಕ್ಷೇಮಂ ವಹಾಮ್ಯಹಮ್....
*ಯೋಗ - ಕ್ಷೇಮಂ ವಹಾಮ್ಯಹಮ್*
ಶ್ರೀಕೃಷ್ಣಪರಮಾತ್ಮನ ಒಂದು ನಿಶ್ಚಿತ ತತ್ವ "ನನ್ನ ಭಜಕರ ನನ್ನ ಆರಾಧಕರ ನನ್ನ ಭಕ್ತರ *ಯೋಗ - ಕ್ಷೇಮ* ಗಳ ಹೊರುವ ಜವಬ್ದಾರಿ ಎನ್ನದು" ಎಂದು.
*ಯೋಗ - ಕ್ಷೇಮ* ಗಳು ಎಂದರೆ ಏನು ???
"ನಾವು ಯೋಗಕ್ಷೆಮದಿಂದ ಇದ್ದೇವೆ, ನಿಮ್ಮ ಯೋಗಕ್ಷೇಮಗಳ ಸಮಾಚಾರ ತಿಳಿಸಬೇಕು" ಹೀಗೆ ರೂಢಿಯಲ್ಲಿ ಸಾಮಾನ್ಯ ಪ್ರಯೋಗವಿದೆ...
ಯೋಗ ಎಂದರೆ *ಹಿತವಾದ ಯೋಗ್ಯವಾದ ಪಡೆಯಲು ಸಾಧ್ಯವಾದ ವಸ್ತುವನ್ನು ಪಡೆಯುವದು* ಎಂದರ್ಥ. ಕ್ಷೇಮ ಎಂದರೆ *ಹಿತವಾದದ್ದು ಏನೆಲ್ಲವನ್ನು ಪಡೆದಿದ್ದೆನೆ ಅದನ್ನು ಉಳಿಸಿಕೊಳ್ಳುವದು* ಎಂದರ್ಥ. ಇವೆರಡೂ ದೇವರ ಅಧೀನ. ನಮ್ಮ ಕರ್ಮಾನುಸಾರ, ಭಕ್ತಿಗನುಗುಣ ತಾನೇ ಖುದ್ದಾಗಿ ಕೊಡುತ್ತಾನೆ.
ದುಃಖ, ಚಿಂತೆ, ಸಂತಾಪ, ಅನಾರೋಗ್ಯ, ದಾರಿದ್ರ್ಯ, ಇವುಗಳ ಸುಳಿಯಲ್ಲಿ ಸಿಕ್ಕಾಗ ಧನ ಕನಕ ಅರೋಗ್ಯ ಇತ್ಯಾದಿಗಳು ದೊರೆಯುವದು ಏನಿದೆ ಅದು *ಯೋಗ* ಎಂದು ಕರೆಸಿಕೊಳ್ಳುತ್ತದೆ. ಪಡೆದ ಸುಖಸಾಧನೆಗಳನ್ನು ಹಾಳು ಮಾಡಿಕೊಳ್ಳದೇ ಉಳಿಸಿಕೊಳ್ಳುವದು *ಕ್ಷೇಮ.*
*ನಿನಗೆ ನಿನ್ನ ಸುಖಕ್ಕೆ ಬೇಕಾದ ಎಲ್ಲ ಸಾಧನೆಯಗಳನ್ನು ಗುರುಹಿರಿಯರಿಂದ ಪಡೆದಿದ್ದೀಯಾ.. ?? ಎಂದು ಅಂದಿನ ಹಿರಿಯರು ಕೇಳಿದರೆ, ಖಂಡಿತವಾಗಿಯೂ ಪಡೆದಿದ್ದೇನೆ ಎಂದು ಅಂದಿನ ಕಿರಿಯ ಉತ್ತರಿಸುತ್ತಿದ್ದ. ಆದರೆ ಇಂದು ಮಾತ್ರ hi hello ಇದರಲ್ಲೆ ಕೊನೆಗೊಂಡಿದೆ ....
ಈಗಾಗಲೇ ಯೋಗವನ್ನು ದೇವರೇ ದಯಪಾಲಿಸಿದ್ದಾನೆ. ಕ್ಷೇಮ ಉಳಿಸಿಕೊಳ್ಳವದರತ್ತ ಗಮನ ಹರಿಸದೇ, ಆ ಯೋಗದಿಂದ *ಯೋಗಭ್ರಷ್ಟ* ರಾಗುತ್ತಾ ಸಾಗುತ್ತಿದ್ದೇವೆ.
ಸಾಧನೆಗೆ ಉತ್ತಮ ಸುದೀರ್ಘ ಆಯುಷ್ಯ ಕೊಟ್ಟಿದ್ದಾನೆ ಇದುವೇ ಯೋಗ. ಸಾಧನೆ ಮಾಡಿಕೊಂಡರೆ ಕ್ಷೇಮ. ಅದಾಗದೇ ಭ್ರಷ್ಟತೆಯ ಮಾರ್ಗ ಹಿಡಿದಾಗಿದೆ.
ಸುದೃಢ ಆರೋಗ್ಯ ಕೊಟ್ಟಿದ್ದಾನೆ. ಆರೋಗ್ಯ ಉಳಿಸಿಕೊಳ್ಳದೇ, ಅನಾರೋಗ್ಯಕ್ಕೆ ಈಡಾಗುವ ನಾನಾತರಹದ ಚಟಗಳಲ್ಲಿ ತೊಡಗಿ ಆಗಿದೆ...
ಅಮೂಲ್ಯವಾದ ಸಮಯ ಕೊಟ್ಟಿದ್ದಾನೆ, ಮೋಬೈಲಿನಲ್ಲಿಯೇ ಹಾಳು ಆಗ್ತಿದೆ... ಹೀಗೆ ಕೆಲವು ಉದಾಹರಣೆ ಮಾತ್ರ....
ಜ್ಙಾನ, ತಿಳುವಳಿಕೆ, ಬುದ್ಧಿ, ಮನಸ್ಸು, ಇಂದ್ರಿಯಗಳು, ದೇಹ, ತಂದೆ, ತಾಯಿ, ಗುರು, ಮಿತ್ರ, ಆತ್ಮೀಯರು, ಹಿತೈಶೀ, ದೇವರು, ಧರ್ಮ, ಕರ್ಮ, ಜಪ, ಮಂತ್ರ, ತತ್ವಜ್ಙಾನ, ಹೀಗೆ ನಮ್ಮ ಹಿತಕ್ಕಾಗಿ ಕೊಟ್ಟಿರುವದು ನಮ್ಮನೆ ಯೋಗ ಮಾಡಿಸಿರುವದು ಲೆಕ್ಖವಿಲ್ಲ. ಅವುಗಳ ಸಾರ್ಥಕತೆಯೋ ಅಥವಾ ಉಳಿಸಿಕೊಳ್ಳುವಿಕೆಯೂ ಆಗುತ್ತಿಲ್ಲ. ಅಂತೆಯೇ ಕ್ಷಮದಿಂದ ಇರಲಾಗದವಸ್ಥೆ ನಮ್ಮದು. ಅಂತೆಯೇ ನಾವಿಂದು ಯೋಗಭ್ರಷ್ಟರಾಗಿ ಕ್ಷೇಮವಿಲ್ಲದೆ ಅಲೆದಾಡುವಂತಾಗಿದೆ.
*ಬಂದಿರುವದನ್ನು ಉಳಿಸಿಕೊಳ್ಳಲಾಗುವದಿಲ್ಲವೇಕೆ... ???*
ಕೊಟ್ಟ ದೇವರನ್ನು ನೆನಿಸಿದಾಗ ಮಾತ್ರ ಉಳಿಸುವ ದೇವರು ಉಳಿಸುವ. ಕೊಟ್ಟವನನ್ನೇ ಮರೆತಾಗ, ಉಳಿಸುವವ ಉಳಿಸದೆ, ಕೊಟ್ಟದ್ದಷ್ಟೇ ಖರೆ ಮಾಡಿಸಿ ನಮಗೆ ಉಪಯೋಗಕ್ಕೆ ಬಾರದ ಹಾಗೆ ಮಾಡುತ್ತಾನೆ. ಅಥವಾ ಉಪಯೋಗಕ್ಕೆ ಬಾರದ್ದನ್ನೇ ಕೊಟ್ಟುಬಿಡುತ್ತಾನೆ.
*ಹೀಗಾಗಲು ಕಾರಣ... ???*
ಮೊದಲನೆಯದ್ದು ನಮಗೆ ಕ್ಷೇಮ ಯಾವುದು ಅನ್ನುವದರ ತಿಳುವಳಿಕೆ ಇಲ್ಲದಿರುವದು. ಇನ್ನೊಂದು ಕ್ಷೇಮವಲ್ಲದ್ದನ್ನೇ ಕ್ಷೇಮ ಎಂದು ಭಾವಿಸಿರುವದು. ಈ ದುರವಸ್ಥೆ ಬರಲು *ಯೋಗಕ್ಷೇಮದಿಂದ ಬಾಳಿ* ಎಂಬ ಗುರು ಹಿರಿಯರ ಆಶೀರ್ವಾದ ಪಡೆಯದೇ ಇರುವದು ಮೂಲ ಕಾರಣ.
ಯೋಗ ಪದಾರ್ಥಗಳನ್ನು ನಮಗೆ ಸೃಷ್ಟಿ ಮಾಡಿ ಒದಗಿಸುವವನು ದೇವನೇ. ಸೃಷ್ಟಿಸಿದ ಪದಾರ್ಥಗಳನ್ನು ಕ್ಷೇಮ ಸುಖ ಹಾಗೂ ಸಾಧನೆಗಳಿಗೋಸ್ಕರ ಸಂರಕ್ಷಿಸುವವನೂ ದೇವರೆ. ಪದಾರ್ಥಗಳನ್ನು ವಸ್ತುವನ್ನು ಅಥವಾ ಇನ್ನೇನನ್ನೋ ಪಡೆಯುವವರೆಗೆ ಇರುವ ಪ್ರಾರ್ಥನೆ ಬೇಡಿಕೆ ಹಂಬಲ ಸಮರ್ಪಣಾಭಾವ ಭಕ್ತಿ ತಾದಾತ್ಮ್ಯ ಇದ್ಯಾವದೂ ದೊರೆತಾದ ಮೇಲೆ ಇರುವದೇ ಇಲ್ಲ. ದೊರೆತದ್ದೇ ನಿಜವಾಗುತ್ತೆ, ಅದರಿಂದ ಹಾನಿಯೇ ಹೊರತು, ಕ್ಷೇಮವಂತೂ ಆಗದು.
ಮೂರ್ಲೋಕದ ಒಡೆಯನಾದ ದೇವರೇ ಯೋಗವನ್ನೂ ಕಲ್ಪಿಸುವವ, ಕ್ಷೇಮವನ್ನೂ ಉಳಿಸುವವ. ಅಂತೆಯೇ ದೇವನೇ ಹೇಳುವ *ಯೋಗಕ್ಷೇಮಂ ವಹಾಮ್ಯಹಮ್* ಎಂದು. ಆ ದೇವರನ್ನು ಸರಿಯಾದ ತಿಳುವಳಿಕೆಯಿಂದ ಮೊರೆಹೋಗೋಣ. ಸಾಧನೆಗೆ ಅನುವಾಗುವಂತಹದ್ದೇ ಕೊಡು. ಕೊಟ್ಟಿದ್ದು ಉಳಿಸು. ಅದರಿಂದ ನೀನು, ನಿನ್ನವಳಾದ ಲಕ್ಷ್ಮೀ, ನಿನ್ನವರಾದ ಬ್ರಹ್ಮಾದಿಗಳು ಸಂತುಷ್ಟರಾಗಿ ಇರುವಂತೆ ನೋಡಿಕೊ. ಅಂದಾದಾಗ ಮಾತ್ರ ಯೋಗ ಪಡೆದದ್ದು ಸಾರ್ಥಕವಾಗುತ್ತೆ. ಅದುವೇ *ಕ್ಷೇಮ......* ಅವೆರಡೂ ನಿನ್ನಾಧೀನ.....
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments