ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ
*ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ*
ದಾಶಶ್ರೇಷ್ಠರಾದ, ಜ್ಙಾನಿಗಳೂ ಆದ, ಪರಮಭಕ್ತರಾದ, ವಿರಕ್ತಶಿಖಾಮಣಿಗಳಾದ ಕನಕದಾಸರು, ಜಗದ್ರಕ್ಷಕ ದೇವರ ಸ್ತುತಿ ರೂಪ ವಾಗಿ *ಹರಿಭಕ್ತಿ ಸಾರ* ಎಂಬ ಸುಂದರ ಗ್ರಂಥವನ್ನು ರಚನೆ ಮಾಡಿ ಕೊಟ್ಟಿದ್ದಾರೆ.
*ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ*
ಹರಿಭಕ್ತಿಸಾರದಲ್ಲಿ ಕನಕದಾಸರು ಹೇಳುವಾಗ ಅನೇಕ ಅತ್ಯುತ್ತಮ ಗುಣಗಳನ್ನು ತಿಳುಹಿಸಿಕೊಡುತ್ತಾರೆ, ಆ ಎಲ್ಲ ಭಗವದ್ಗುಣಗಳೂ, ದುಷ್ಟರ ದಮನದ ಮುಖಾಂತರ ಅಥವಾ ಶಿಷ್ಟರ ರಕ್ಷಣೆಯ ಮುಖಾಂತರ ಒಟ್ಟಾರೆಯಾಗಿ ಸಜ್ಜನರ ಭಕ್ತರ ರಕ್ಷಣೆಗೆ ಸಂಬಂಧಪಟ್ಟದ್ದೇ ಆಗಿರುತ್ತದೆ.
ಹರಿಭಕ್ತಿ ಸಾರದಲ್ಲಿ ಬಂದ ನೂರಾರು ಗುಣಗಳಲ್ಲಿ "ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ" ಎಂಬ ಎರಡು ಗುಣಗಳನ್ನು ಇಂದು ಆರಿಸಿಕೊಂಡೀನಿ.
*ಅಕ್ಷಯಾಶ್ರಿತ* ಸಾಮಾನ್ಯವಾಗಿ ನಾವು ಒಬ್ಬರಿಲ್ಲ ಒಬ್ಬರನ್ನು, ಒಂದಿಲ್ಲ ಮತ್ತೊಂದನ್ನು ಆಶ್ರಯಿಸೇ ಇರುತ್ತೇವೆ. ಆಶ್ರಯದಾತರು ಮಾತ್ರ ತಮ್ಮ ಸ್ವಾರ್ಥಕ್ಕೆ ಕುಂದು ಬರುವವರೆಗೆ ಆಶ್ರಯವನ್ನು ಕೊಟ್ಟಿರುತ್ತಾರೆ, ಆಶ್ರಿತನು ಬದುಕಿರುವಾಗಲೇ ಅವರ ಉಸಿರು ಕೊನೆಗೊಂಡಿರುತ್ತದೆ ಆದರೆ ಈ ದೇವರು ಹಾಗಲ್ಲ "ಆಶ್ರಿತ ಜನರಿಗೆ ಅಕ್ಷಯನಾಗಿದ್ದಾನೆ" ಅನಾದಿಯಿಂದ ಅನಂತದ ವರೆಗೆ ಕ್ಷಣಬಿಡದೆ ಸಂರಕ್ಷಿಸುತ್ತಾನೆ. ಆಶ್ರಯಕೊಟ್ಟ ದೇವರೇ ಇಲ್ಲ ಎಂದಾಗುವದೇ ಇಲ್ಲ. ಆ ಕಾರಣದಿಂದ *ಅಕ್ಷಯಾಶ್ರಿತ* ಎಂದರು ದಾಸರು.
ಅಕ್ಷಯರಾದ ಎಂದೆಂದಿಗೂ ನಾಶವಿಲ್ಲದ, ಅನಾದಿಯಿಂದ ಅನಂತಕಾಲದವರೆಗೆ ಇರುವ, ಮೋಕ್ಷ ತಮಸ್ಸು ಸಂಸಾರ ಇವುಗಳಲ್ಲಿ ಇರುವ ಅನಂತಾನಂತ ಜೀವರಾಶಿಗಳಿಗೆ ಮುಖ್ಯ ಆಶ್ರಯನಾಗಿದ್ದಾನೆ ಶ್ರೀಹರಿ, ಆದ್ದರಿಂದ *ಅಕ್ಷಯಾಶ್ರಿತ* ಎಂದು ಕೊಡಾಡಿದರು ದಾಸರು.
ನಿತರಾಂ ಭಕ್ತಿ ಮಾಡಿ, ಅನಾಥಬಂಧು ಎಂದು ನಂಬಿ, ಪೂರ್ಣ ಭರವಸೆ ಇಟ್ಟಿರುವ ಮುಕ್ತಿಯೋಗ್ಯ ಅನಂತ ಜೀವರಾಶಿಗಳಿಗೆ, ಅಕ್ಷಯ ಫಲದಾತೃವಾಗಿದ್ದಾನೆ. ಮತ್ತು ತಮೋಯೋಗ್ಯರಿಗೆ ಅಕ್ಷಯ ದುಃಖವನ್ನೂ ಕೊಡುವವನಾಗಿದ್ದಾನೆ ಆದ್ದರಿಂದಲೂ ಭಗವಂತ *ಅಕ್ಷಯಾಶ್ರಿತ* ಎಂದೂ ಕೊಂಡಾಡುತ್ತಾರೆ ಕನಕದಾಸರು.
*ಸುಜನಜನಸಂರಕ್ಷಕ*
ಅಕ್ಷಯನಾದ, ಅಕ್ಷಯ ಫಲಕೊಡುವ, ಅಕ್ಷಯ ಜೀವರಾಶಿಗಳಿಗೆ ಸ್ವಯಂ ಆಶ್ರಯನಾದ ಹೇ ಶ್ರೀಹರಿ !! ದೇಹ ಇಂದಿಯ ಮನಸ್ಸು ಆಚೀ ಈಚೇ ಹೋಗದ ಹಾಗೆ ಮಾಡಿ, ನಿನ್ನ ಬಳಿಯೇ ಇರುವಂತೆ ನಾಡಿಸಿಕೊಂಡು, ಎನ್ನನ್ನು ನಿರಂತರ ರಕ್ಷಿಸು, ಸಂರಕ್ಷಿಸು.
ನೀನು ರಕ್ಷಣೆ ಮಾಡಲು ನಾನೇನು ದೊಡ್ಡವನಲ್ಲ, ಪುಣ್ಯವಂತನಲ್ಲ. ಮಹಾ ಪಾಪಿಷ್ಠ. ದುರಾಚಾರಿ. ದುಷ್ಟ. ಛಲಗಾರ. ದುರ್ಗುಣಿ. ಆದರೆ *ಸುಜನ ಜನ* ಸುಜನರು ನಮ್ಮ ತಂದೆ ತಾಯಿ ಮತ್ತು ನಮ್ಮ ಗುರುಗಳು. ಸುಜನರವನು ನಾನು ಆಗಿದ್ದೇನೆ. ಆದ್ದರಿಂದಲಾದರೂ ಎನ್ನನು ರಕ್ಷಿಸಲೇ ಬೇಕು. ಏಕೆಂದರೆ ನೀನು *ಸುಜನಜನ ಸಂರಕ್ಷಕ* ನು ಅಲ್ಲವೆ. ಈ ಬಿರಿದು ನಿನ್ನಬಳಿ ಇರಬೇಕಾದರೆ, ಆ ಬಿರಿದು ಸಾರ್ಥಕವಾಗಬೇಕಾದರೆ ಎನ್ನನು ನೀಸು ರಕ್ಷಿಸು ಸಂರಕ್ಷಿಸು.
*ರಕ್ಷಸೋ ನಮ್ಮನನವರತ ರಕ್ಷಿಸೋ*
ಕ್ಷುದ್ರವಾದ ಪಾಪಗಳಲ್ಲೇ ತೊಡಗುವ ಈ ಮನಸ್ಸು ದೇಹ ಇಂದ್ರಿಯ ಇವುಗಳನ್ನು ನಿನಗೆ ಪ್ರಿಯವಾಗುವ, ನಿನ್ನನ್ನೇ ಪ್ರೀತಿಗೊಳಿಸುವ ಸತ್ಕರ್ಮಗಳಲ್ಲಿ ತೊಡಗಿಸುವದೇ ಮೊಟ್ಟ ಮೊದಲ ದೊಡ್ಡ ರಕ್ಷಣೆ. ನಂತರ ಶುದ್ಧ ಧರ್ಮ, ಪರಿಶುದ್ಧ ಜ್ಙಾನ, ನಿರ್ವ್ಯಾಜ ಭಕ್ತಿ ದಯಪಾಲಿಸಿ ರಕ್ಷಿಸುವದು ಅತ್ಯುತ್ತಮ ರಕ್ಷಣೆ. ಈ ರಕ್ಷಣೆ ದೊರೆತಾಗಲೇ ಅಕ್ಷಯ ಫಲ ಎನಗಿದೆ. ನಾನೂ ಅಕ್ಷಯನಾಗುವೆ.
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments